ಚಾಮುಂಡೇಶ್ವರಿ ಕ್ಷೇತ್ರದಲ್ಲೇ ನನ್ನ ಸ್ಪರ್ಧೆ: ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು

Update: 2018-03-29 14:45 GMT

ಮೈಸೂರು,ಮಾ.29: ಕುಮಾರಸ್ವಾಮಿಯನ್ನು ಕೇಳಿಕೊಂಡು ನಾನು ರಾಜಕಾರಣ ಮಾಡಬೇಕಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲೇ ನನ್ನ ಸ್ಪರ್ಧೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

ತಮ್ಮ ಕ್ಷೇತ್ರದ ಮತದಾರರನ್ನು ಭೇಟಿ ಮಾಡುವ ಸಲುವಾಗಿ ಗುರುವಾರ ಮೈಸೂರಿಗೆ ಆಗಮಿಸಿದ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಎಷ್ಟು ಸಲ ನಿಂತಿದ್ದೀನೆ ಎಂದು ಕುಮಾರಸ್ವಾಮಿಗೆ ಗೊತ್ತೇ ಎಂದು ಪ್ರಶ್ನಿಸಿದ ಅವರು, ನಾನು ಚಾಮುಂಡೇಶ್ವರಿಯಲ್ಲಿ 7 ಬಾರಿ ಸ್ಪರ್ಧಿಸಿದ್ದೇನೆ.  5 ಬಾರಿ ಗೆದ್ದಿದ್ದೇನೆ, 2 ಬಾರಿ ಸೋತಿದ್ದೇನೆ. ಚಾಮುಂಡೇಶ್ವರಿ ಕ್ಷೇತ್ರದಲ್ಲೇ ನನ್ನ ಸ್ಪರ್ಧೆ. ಯಾವುದೇ ಅನುಮಾನ ಬೇಡ. ಇಲ್ಲಿಯೇ ನಿಲ್ಲುತ್ತೇನೆ. ಚಾಮುಂಡೇಶ್ವರಿ ಕ್ಷೇತ್ರದ ಜನತೆಯ ಮೇಲೆ ನನಗೆ ನಂಬಿಕೆ ಇದೆ. ನಾನು ಮತ್ತೆ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ಕಂಡರೆ ಅಮಿತ್ ಶಾಗೆ ಭಯ. ಹಾಗಾಗಿ ನಾನು ಹೋದಲೆಲ್ಲ ಅಮಿತ್ ಶಾ ಹಿಂಬಾಲಿಸುತ್ತಿದ್ದಾರೆ. ಅವರು ಎಲ್ಲಿಗೆ ಬೇಕಾದರೂ ಹೋಗಲಿ. ಅದು ಅವರ ವೈಯಕ್ತಿಕ ವಿಚಾರ. ಆ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಅಮಿತ್ ಶಾ ನನ್ನನ್ನು ಅಹಿಂದು ಎಂದು ಹೇಳ್ತಾರೆ. ಅವರು ಆ-ಹಿಂದುನಾ ಅಥವಾ ಜೈನನಾ ? ಸ್ಪಷ್ಟಪಡಿಸಲಿ ಎಂದರು.

ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಕುಮಾರಸ್ವಾಮಿ, ಯಡಿಯೂರಪ್ಪ ಸೇರಿದಂತೆ ಎಲ್ಲರೂ ನನ್ನ ವಿರುದ್ಧ ಪ್ರಚಾರ ಮಾಡಿದ್ದರು. ಆಗಲೇ ಏನೂ ಮಾಡಲು ಆಗಲಿಲ್ಲ, ಗೆದ್ದಿದ್ದು ಯಾರು ಎಂದು ಇಡೀ ರಾಜ್ಯದ ಜನರಿಗೆ ಗೊತ್ತಿದೆ ಎಂದರು. ಯಡಿಯೂರಪ್ಪರವರ ಸಿದ್ದರಾಮಯ್ಯ ಭ್ರಷ್ಟ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ 'ಜೈಲಿಗೆ ಹೋಗಿ ಬಂದವರೆಲ್ಲ ನನಗೆ ಪಾಠ ಹೇಳಿ ಕೊಡ್ತಾರೆ' ಎಂದು ಬಿಎಸ್‍ವೈ ವಿರುದ್ಧ ಕಿಡಿಕಾರಿದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ 'ನಾನು ಸರ್ವ ಪಕ್ಷ ಸಭೆ ಕರೆದಿದ್ದೆ. ಆದರೆ ಸಭೆಗೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ, ಕುಮಾರಸ್ವಾಮಿ, ದೇವೆಗೌಡ ಯಾರೂ ಸಹ ಬರಲಿಲ್ಲ. ಅನಂತಕುಮಾರ್ ಮತ್ತು ಸದಾನಂದ ಗೌಡ ಮಾತ್ರ ಸಭೆಗೆ ಬಂದಿದ್ದರು. ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ಕೇಂದ್ರದಲ್ಲಿ ನಿಮ್ಮ ಸರ್ಕಾರವಿದೆ. ಸುಪ್ರೀಂಕೋರ್ಟ್ ಹೇಳಿದ್ದನ್ನು ಮಾತ್ರ ಮಾಡಬೇಕು. ಅದರ ಹೊರತಾಗಿ ಹೆಚ್ಚು ಕಡಿಮೆಯಾದರೆ ನೀವೇ ಹೊಣೆ. ಸುಪ್ರೀಂಕೋರ್ಟ್ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಲು ಹೇಳಿಲ್ಲ, ಸ್ಕೀಂ ಮಾಡಲು ಹೇಳಿದೆ ಎಂದರು.

ನಾನು ನಾಲ್ಕು ದಿನ ಮೈಸೂರು ಪ್ರವಾಸ ಮಾಡುತ್ತೇನೆ. ನಾಳೆ ಒಂದು ದಿನ ರೆಸ್ಟ್ ಮಾಡುತ್ತೇನೆ. ಅದಕ್ಕಾಗಿ ನಾಳೆ ಬಂಡೀಪುರ ರೆಸಾರ್ಟ್‍ಗೆ ಹೋಗುತ್ತಿದ್ದೇನೆ ಎಂದರು. ರೆಸಾರ್ಟ್ ನಲ್ಲಿ ಒಬ್ಬನೆ ಇರಲು ಸಾಧ್ಯನಾ? ನನ್ನ ಸ್ನೇಹಿತರು ಬರುತ್ತಾರೆ. ಹರಟೆ ಹೊಡೆಯುವುದಕ್ಕಾದರೂ ಒಂದಷ್ಟು ಜನ ಬೇಕು ಎಂದು ನಾಳೆ ಬಂಡೀಪುರದ ರೆಸಾರ್ಟ್ ನಲ್ಲಿ ವಾಸ್ತವ್ಯ ಮಾಡುವ ಬಗ್ಗೆ ತಿಳಿಸಿದರು. ನಾನು ಇಂದು ಚುನಾವಣಾ ಪ್ರಚಾರ ಮಾಡಲು ಬಂದಿಲ್ಲ. ಕೇವಲ ಹಳ್ಳಿಗಳಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News