ಮೌನ ಮುರಿದ ಸಿಬಿಎಸ್‌ಇ ಮುಖ್ಯಸ್ಥೆ

Update: 2018-03-29 16:43 GMT

ಹೊಸದಿಲ್ಲಿ, ಮಾ. 29: ಎರಡು ವಿಷಯಗಳಲ್ಲಿ ಮರು ಪರೀಕ್ಷೆ ನಡೆಸಲಾಗುವುದು ಎಂದು ಸಿಬಿಎಸ್‌ಇ ಘೋಷಿಸಿದ ಎರಡು ದಿನಗಳ ಬಳಿಕ ಸಿಬಿಎಸ್‌ಇಯ ಮುಖ್ಯಸ್ಥೆ ಅನಿತಾ ಕರ್ವಾಲ್, ಮಕ್ಕಳ ಪರವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ. 10ನೇ ತರಗತಿಯ ಗಣಿತ ಪರೀಕ್ಷೆ ಹಾಗೂ 12ನೇ ತರಗತಿಯ ಅರ್ಥಶಾಸ್ತ್ರ ಪರೀಕ್ಷೆಯ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ.

 ಪರೀಕ್ಷೆ ನಡೆಯುವ ಎರಡು ದಿನ ಮೊದಲು ಪ್ರಶ್ನೆಪತ್ರಿಕೆ ಸೋರಿಕೆ ಆಗುವ ಬಗ್ಗೆ ಮಂಡಳಿ ಹಾಗೂ ಪೊಲೀಸರಿಗೆ ಅರಿವಿತ್ತು ಎಂದು ಪೊಲೀಸರು ದಾಖಲಿಸಿದ ಪ್ರಥಮ ಮಾಹಿತಿ ವರದಿಯಲ್ಲಿ ಹೇಳಲಾಗಿದೆ. ಎಲ್ಲ ವಿಷಯಗಳಲ್ಲಿ ಮರು ಪರೀಕ್ಷೆ ನಡೆಸುವಂತೆ ಆಗ್ರಹಿಸಿ ದಿಲ್ಲಿ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದ್ದಾರೆ. ಗಣಿತ ಹಾಗೂ ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆ ಅಲ್ಲದೆ ಇತರ ವಿಷಯಗಳ ಪ್ರಶ್ನೆಪತ್ರಿಕೆ ಕೂಡ ಸೋರಿಕೆ ಆಗಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಸರಕಾರ ಒಪ್ಪಿಕೊಂಡ ಬಳಿಕ ಮೊದಲ ಬಾರಿಗೆ ಮೌನ ಮುರಿದಿರುವ ಸಿಬಿಎಸ್‌ಇ ಮುಖ್ಯಸ್ಥೆ ಅನಿತಾ ಕರ್ವಾಲ್, ‘‘ನಾವು ಮಕ್ಕಳಿಗಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಪರೀಕ್ಷೆಯ ದಿನಾಂಕವನ್ನು ನಾವು ಶೀಘ್ರದಲ್ಲಿ ಪ್ರಕಟಿಸಲಿದ್ದೇವೆ. ಯಾರೊಬ್ಬರು ಚಿಂತಿಸುವ ಅಗತ್ಯತೆ ಇಲ್ಲ. ನಾವು ಮಕ್ಕಳ ಪರವಾಗಿ ನಿರ್ಧಾರ ತೆಗೆದುಕೊಂಡಿದ್ದೇವೆ.’’ ಎಂದಿದ್ದಾರೆ. ಮರು ಪರೀಕ್ಷೆಯ ದಿನಾಂಕವನ್ನು ಸೋಮವಾರ ಅಥವಾ ಮಂಗಳವಾರ ಪ್ರಕಟಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ‘‘ನನಗೆ ಕೂಡ ನಿದ್ರಿಸಲು ಸಾಧ್ಯವಾಗುತ್ತಿಲ್ಲ. ನಾನು ಕೂಡ ಪೋಷಕನೆ’’ ಎಂದು ಅವರು ಹೇಳಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಳಿಕ ಮಂಡಳಿ ದೂರುಗಳನ್ನು ಎದುರಿಸುತ್ತಿದೆ. ಅರ್ಥಶಾಸ್ತ್ರ ಪರೀಕ್ಷೆಯ ಎರಡು ದಿನಕ್ಕಿಂತ ಮುನ್ನ ಮಾರ್ಚ್ 23ರಂದು ಮಂಡಳಿ ಫ್ಯಾಕ್ಸ್ ಮೂಲಕ ಮಾಹಿತಿ ಸ್ವೀಕರಿಸಿತ್ತು ಎಂದು ಪ್ರಥಮ ಮಾಹಿತಿ ವರದಿಯಲ್ಲಿ ಹೇಳಲಾಗಿದೆ. ಮಾರನೆ ದಿನ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಆದರೆ ಪರೀಕ್ಷೆಯನ್ನು ಹಿಂದೆಗೆದುಕೊಳ್ಳಲಿಲ್ಲ. ಪರೀಕ್ಷೆ ನಡೆದ ಒಂದು ದಿನದ ಬಳಿಕ ಮಾಚ್ 27ರಂದು ಪ್ರಕರಣ ದಾಖಲಿಸಲಾಯಿತು. ಈ ಪ್ರಕರಣದಲ್ಲಿ ಪಶ್ಚಿಮ ದಿಲ್ಲಿಯ ರಾಜಿಂದರ್ ನಗರದ ತರಬೇತಿ ಕೇಂದ್ರದ ಮುಖ್ಯಸ್ಥನ ಹೆಸರು ಕೇಳಿ ಬಂದಿದೆ. ಆತನಿಂದ ವ್ಯಾಟ್ಸ್ ಆ್ಯಪ್ ಮೂಲಕ ಪ್ರಸರಣಗೊಂಡ ಕೈಬರೆಹದ ಉತ್ತರ ಪತ್ರಿಕೆಯ ಸ್ನಾಪ್ ಶಾಟ್ ಪತ್ತೆಯಾಗಿದೆ. ಈ ವ್ಯಾಟ್ಸ್ ಆ್ಯಪ್ ಸಂದೇಶದ ಮೂಲವನ್ನು ಶೋಧಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

 ಪೊಲೀಸರು 18 ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದ್ದಾರೆ. ಇದರಲ್ಲಿ ದಿಲ್ಲಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಪ್ರಥಮ ವರ್ಷದ ಕಾಲೇಜಿನ 7 ವಿದ್ಯಾರ್ಥಿಗಳು ಇದ್ದಾರೆ. ಇದುವರೆಗೆ ಒಟ್ಟಾಗಿ 25 ಜನರ ವಿಚಾರಣೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ ತನಿಖೆಯನ್ನು ಸಿಬಿಎಸ್‌ಇ ಅಧಿಕಾರಿಗಳು, ಪರಿವೀಕ್ಷಕರು, ಶಾಲೆಯ ಸಿಬ್ಬಂದಿ, ತರಬೇತಿ ಕೇಂದ್ರಗಳು ಹಾಗೂ ಮುದ್ರಣಕಾರರನ್ನು ಕೇಂದ್ರೀಕರಿಸಿ ನಡೆಸಲಾಗುತ್ತಿದೆ. ಆದರೆ, ಸಿಬಿಎಸ್‌ಇ ಅಥವಾ ಪರೀಕ್ಷಾ ಕೇಂದ್ರ ವ್ಯಕ್ತಿಗಳನ್ನು ಇನ್ನಷ್ಟೆ ವಿಚಾರಣೆ ನಡೆಸಬೇಕು ಎಂದು ಪ್ರಕರಣದ ತನಿಖಾಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News