ಚಿಕ್ಕಮಗಳೂರು: ಒಕ್ಕಲೇಳಲು ಹೊಸಪುರ ಗ್ರಾಮಸ್ಥರಿಗೆ ತಹಶೀಲ್ದಾರ್ ನೋಟಿಸ್

Update: 2018-03-30 11:04 GMT

ಚಿಕ್ಕಮಗಳೂರು, ಮಾ.29: ಕಂದಾಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಬ್ದಾರಿತನದಿಂದಾಗಿ ಹತ್ತಾರು ದಶಕಗಳಿಂದ ಬದುಕುತ್ತಿದ್ದ ಭೂಮಿಯನ್ನು ತೆರವು ಮಾಡುವಂತೆ ತಾಲೂಕು ಆಡಳಿತ ನೋಟೀಸ್ ಜಾರಿಮಾಡಿ ಭೀತಿ ಮೂಡಿಸಿದೆ ಎಂದು ಮೂಡಿಗೆರೆ ತಾಲೂಕಿನ ಹೊಸಪುರ ಗ್ರಾಮಸ್ಥರು ದೂರಿದ್ದಾರೆ.

ತಾಲೂಕಿನ ಗೋಣಿಬೀಡುಹೋಬಳಿಯ ಹೊಸಪುರ ಗ್ರಾಮದ ಸುಮಾರು ಹದಿನೈದಕ್ಕೂ ಹೆಚ್ಚು ಕುಟುಂಬಗಳಿಗೆ ಭೂಮಿ ತೆರವುಗೊಳಿಸ ಬೇಕೆಂದು ತಹಶೀಲ್ದಾರ್ ನೋಟೀಸ್ ಜಾರಿಗೊಳಿಸಿದ್ದಾರೆ. ಇದರಿಂದ ಗ್ರಾಮ ಸ್ಥರು ಕಂಗಾಲಾಗಿದ್ದಾರೆ. ಈ ಹಿಂದೆಯೂ ಒಮ್ಮೆ ತಮ್ಮ ಭೂಮಿ ತೆರವುಗೊಳಿಸುವಂತೆ ತಮಗೆ ತಾಲೂಕು ಆಡಳಿತ ಸೂಚಿಸಿದ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ಸತ್ಯವತಿ ಅವರನ್ನು ತಾವುಗಳು ನಿಯೋಗದಲ್ಲಿ ತೆರಳಿ ಭೇಟಿಯಾಗಿ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದೆವು. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ತಮ್ಮ ಮೂಡಿಗೆರೆ ಕಂದಾಯ ಇಲಾಖಾಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದೆ ತಾವುಗಳು ವಾಸಿಸುವ ಭೂಮಿ ಈ ಹಿಂದೆ ಪರಿಶಿಷ್ಟ ಸಮುದಾಯಗಳಿಗೆ ಮಂಜೂರಾಗಿದ್ದು, ಅವರ ಮನವಿಯಂತೆ ಆ ಭೂಮಿಯನ್ನು ತೆರವು ಮಾಡಬೇಕೆಂದು ವರದಿ ನೀಡಿದ್ದಾರೆ. ಈ ವರದಿಯಿಂದಾಗಿ ತಮಗೆ ಸಂಕಷ್ಟ ಎದುರಾಗಿದೆ ಎಂದು ಸ್ಥಳೀಯರು ವಾರ್ತಾಭಾರತಿಗೆ ತಿಳಿಸಿದ್ದಾರೆ.

ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸರ್ವೆಯ ಮೂಲಕ ಜಾಗ ಗುರುತಿಸದೆ ಕಚೇರಿಯಲ್ಲಿ ಕುಳಿತು ನೋಟೀಸ್ ಜಾರಿ ಮಾಡಿದ್ದಾರೆ. ತಮ್ಮ ಸಮಸ್ಯೆಯನ್ನು ಹಿಂದಿನ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಈಗಿನ ಜಿಲ್ಲಾಧಿಕಾರಿಗಳು ಕೂಡ ವಾಸ್ತವಿಕತೆಯನ್ನು ತಿಳಿಯಲು ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಭೂಮಿಯ ಪರಿಶೀಲನೆ ನಡೆಸಬೇಕೆಂಬುದು ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಇದು ನಮ್ಮ ಅಜ್ಜ ಅಜ್ಜಿಯಂದಿರ ಕಾಲದಿಂದಲೂ ಸಾಗುವಳಿ ಮಾಡಿದ ಭೂಮಿಯಾಗಿದೆ. ಇದಕ್ಕೆ ನಮ್ಮ ಬಳಿ ಸಾಗುವಳಿ ಪತ್ರಗಳಿವೆ. ಆದರೆ ಸದ್ಯ ಈ ಜಾಗ ಸುಮಾರು 15 ಪರಿಶಿಷ್ಟ ಸಮುದಾಯದ ಕುಟುಂಬಗಳಿಗೆ ಈ ಹಿಂದೆಯೇ ಮಂಜೂರಾಗಿದ್ದು, ತೆರವುಗೊಳಿಸಲು ನೋಟೀಸ್ ಜಾರಿಯಾಗಿದೆ. ನಮಗೂ ಹಕ್ಕುಪತ್ರಗಳಿವೆ. ಕಂದಾಯ ಕಟ್ಟುತ್ತಿದ್ದೇವೆ. ಆದರೆ ತಮಗೆ ಮಂಜೂರಾದ ಜಾಗ ಸರ್ವೆ ಸಂಖ್ಯೆ 128ರಲ್ಲಿದೆ, ತಾವಿರುವ ಭೂಮಿ ಸರ್ವೆ ಸಂಖ್ಯೆ 131. ಈ ಜಾಗ ದಲಿತರಿಗೆ ಮಂಜೂರಾಗಿರುವುದು ಎಂಬುದು ಅಧಿಕಾರಿಗಳ ವಾದವಾಗಿದೆ.

- ಅಭಿಷೇಕ್, ಹೊಸಪುರ ನಿವಾಸಿ

ಗೋಣಿಬೀಡು ಹೋಬಳಿ ವ್ಯಾಪ್ತಿಯ ಸರ್ವೇ ನಂಬರ್ 131ರಲ್ಲಿ 1982ರಲ್ಲಿ ದಲಿತರಿಗೆ ಭೂಮಿ ಮಂಜೂರಾಗಿದೆ. ಈ ಜಾಗವನ್ನು ಬೇರೆಯವರು ಅತಿಕ್ರಮಿಸಿಕೊಂಡು ಸಾಗುವಳಿ ಮಾಡುತ್ತಿದ್ದಾರೆ. ಈ ಜಾಗವನ್ನು ಖುಲ್ಲಾ ಮಾಡಿಸಿ ತಮ್ಮ ವಶಕ್ಕೆ ನೀಡಬೇಕೆಂದು ಪರಿಶಷ್ಟ ಜಾತಿಯ ಫಲಾನುಭವಿಗಳು ಅರ್ಜಿ ನೀಡಿದ್ದರು. ಇದನ್ನು ಈ ಹಿಂದೆ ಪರಿಶೀಲಿಸಿದಾg ದಲಿತರ ಭೂಮಿಯಲ್ಲಿ ಬೇರೆ ಸಮುದಾಯದವರು ಇರುವುದು ಬೆಳಕಿಗೆ ಬಂದಿದೆ. ಈ ಕಾರಣಕ್ಕೆ ಈ ಹಿಂದಿನ ತಹಶೀಲ್ದಾರ್ ನಂದಕುಮಾರ್ ಜಾಗ ಖುಲ್ಲಾ ಮಾಡಲು ಹೊಸಪುರ ಗ್ರಾಮದ ಸರ್ವೇ ನಂಬರ್ 231ರ ನಿವಾಸಿಗಳಿಗೆ ನೋಟಿಸ್ ನೀಡಿದ್ದಾರೆ.
- ಕುಮಾರ್, ಕಂದಾಯಾಧಿಕಾರಿ, ಗೋಣಿಬೀಡು ಹೋಬಳಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News