ಕಾವೇರಿ ನೀರು ಹಂಚಿಕೆ ವಿವಾದ ಸೌಹಾರ್ದಯುತವಾಗಿ ಬಗೆಹರಿಸಿ: ಹೆಚ್.ಡಿ. ದೇವೇಗೌಡ ಮನವಿ

Update: 2018-03-29 16:58 GMT

ಹಾಸನ,ಮಾ.29: ಕಾವೇರಿ ನೀರು ಹಂಚಿಕೆ ವಿವಾದವನ್ನು ತಾಳ್ಮೆಯಿಂದ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮನವಿ ಮಾಡಿದ್ದಾರೆ.

ನಗರದ ಮಾಜಿ ಪ್ರಧಾನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಲೋಕಸಭೆಯಲ್ಲಿ ತಮಿಳುನಾಡು ಹೋರಾಟಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಕನ್ನಡಿಗರು ಉದ್ರೇಕಕ್ಕೆ ಒಳಗಾಗಬಾರದು. ಸುಪ್ರೀಂ ಆದೇಶ ಜಾರಿ ಕಷ್ಟ ಎಂದು ಕೇಂದ್ರ ಹೇಳಿದೆ. ಆದರೂ ತಮಿಳುನಾಡಿನ ಮಿತ್ರರು ಉಗ್ರ ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಕೋರ್ಟ್ ನಿರ್ವಹಣಾ ಮಂಡಳಿ ಜಾರಿ ಕಷ್ಟ ಎಂದು ಈಗಾಗಲೇ ಕೇಂದ್ರ ಸರ್ಕಾರ ಕೂಡ ಹೇಳಿದೆ. ಒಂದು ರಾಜ್ಯ ಹೀಗೆ ಹಠ ಹಿಡಿಯುವುದು ಸರಿಯಲ್ಲ. ಎಲ್ಲವನ್ನು ಸೌಹಾರ್ದಯುತವಾಗಿ ಬಗೆ ಹರಿಸಿಕೊಳ್ಳಬೇಕು. ಕೇಂದ್ರದವರು ಮತ್ತೆ ಸುಪ್ರೀಂ ಅಭಿಪ್ರಾಯ ಕೇಳುವುದಾಗಿ ಹೇಳಿದ್ದಾರೆ ಎಂದರು.

ಮೊದಲು ಕೇಂದ್ರ ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿ 4 ರಾಜ್ಯಗಳ ಸಿಎಂ ಒಳಗೊಂಡ ಕಮಿಟಿ ಮಾಡಲಿ. ಅಲ್ಲಿ ನೀರಿನ ಸ್ಥಿತಿಗತಿ ಅಧ್ಯಯನ ಮಾಡುವ ತಜ್ಞರೂ ಇರಲಿ. ಅದರ 5 ವರ್ಷಗಳ ಚಟುವಟಿಕೆ ನೋಡೋಣ. ನಂತರ ಸಾಧಕ ಬಾಧಕ ನೋಡಿ ನಂತರ ಮುಂದಿನ ನಿರ್ಧಾರಕ್ಕೆ ಬರಲಿ. ಅದಕ್ಕೂ ಮುನ್ನ ಸಾಯುವ ಹೇಳಿಕೆಯನ್ನು ಸಂಸದರು ನೀಡಬಾರದು ಎಂದು ಸಲಹೆ ನೀಡಿದರು.

ಕಾವೇರಿ ವಿಚಾರವಾಗಿ ಕೇಂದ್ರ ಜಲಸಂಪನ್ಮೂಲ ಸಚಿವರ ಜೊತೆ ಮಾತಾಡುವೆ. ದೇಶದಲ್ಲಿ ಜಾತ್ಯಾತೀತ ಶಕ್ತಿಗಳು ಒಂದಾಗುವ ವಿಚಾರ, ಅನೇಕ ನಾಯಕರು ಈ ಬಗ್ಗೆ ಮಾತನಾಡಿದ್ದಾರೆ. ನನ್ನದು ಅಸಹಕಾರ ಅಲ್ಲ. ಸದ್ಯಕ್ಕೆ ನಾನು ಒಕ್ಕೂಟ ಸೇರಲ್ಲ. ಕರ್ನಾಟಕ ಚುನಾವಣೆ ಮುಗಿಯುವರೆಗೆ ನಾನು ಈ ಬಗ್ಗೆ ಮಾತನಾಡಲ್ಲ. ನನ್ನ ರಾಜ್ಯಕ್ಕೆ 2 ರಾಷ್ಟ್ರೀಯ ಪಕ್ಷಗಳಿಂದ ಪೆಟ್ಟು ಬಿದ್ದಿದೆ. ಇವರಿಬ್ಬರ ವಿರುದ್ಧ ನಾನು ಹೋರಾಟ ಮಾಡಬೇಕಾಗಿದೆ ಎಂದರು. ಚುನಾವಣೆ ಬಂದಾಗ ಅಡಿಕೆ ಸಮಸ್ಯೆ ಮಾತನಾಡುವವರು ಇಲ್ಲಿಯ ವರೆಗೆ ಏನು ಮಾಡುತ್ತಿದ್ದರು. ಜನ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

ಮಾಯಾವತಿ ರಾಜ್ಯದ 3 ಕಡೆ ಚುನಾವಣಾ ಪ್ರಚಾರಕ್ಕೆ ಬರುತ್ತಾರೆ. ಬಾಂಬೆ, ಹೈದ್ರಾಬಾದ್ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದಲ್ಲಿ ಸಮಾವೇಶ ನಡೆಯಲಿವೆ. ಎಪ್ರಿಲ್ 2 ರಂದು ಹಾಸನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಒಂದು ಲಕ್ಷಕ್ಕೂ ಅಧಿಕ ಜನ ಸೇರಲಿದ್ದಾರೆ ಎಂದರು. ಸಂದೇಶ್ ನಾಗರಾಜ್ ಜೊತೆ ಮಾತನಾಡಿದ್ದೇನೆ ಎಂದ ಅವರು ಜೆಡಿಎಸ್ ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿರುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News