ದಾವಣಗೆರೆ: ಪ್ರತ್ಯೇಕ ಮತಗಟ್ಟೆಗೆ ಒತ್ತಾಯಿಸಿ ಗ್ರಾಮಸ್ಥರಿಂದ ಧರಣಿ

Update: 2018-03-29 17:39 GMT

ದಾವಣಗೆರೆ.ಮಾ.29: ನಮಗೆ ಪ್ರತ್ಯೇಕ ಮತಗಟ್ಟೆ ಒದಗಿಸದಿದ್ದರೆ ಚುನಾವಣೆಯೇ ಬೇಡ ಎಂದು ತಾಲೂಕಿನ ಕರಿಲಕ್ಕೇನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಗ್ರಾಮಕ್ಕೆ ಪ್ರವೇಶ ಮಾಡುವ ರಸ್ತೆಗೆ ಮುಳ್ಳಿನ ಬೇಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಚುನಾವಣೆ ಬಂದಾಗಲೂ ಪಕ್ಕದೂರಿಗೆ ತೆರಳಿ ಮತ ಚಲಾಯಿಸುವುದನ್ನು ತಪ್ಪಿಸಬೇಕು. ನಮಗೂ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಿ ಮತ ಹಾಕಲು ಅನುವು ಮಾಡಿಕೊಟ್ಟರೆ ಮಾತ್ರ ಚುನಾವಣೆಗೆ ಸಮ್ಮತಿ ಸೂಚಿಸುತ್ತೇವೆ. ಇಲ್ಲದಿದ್ದರೆ ಚುನಾವಣೆ ಬೇಕಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಕರಿಲಕ್ಕೇನಹಳ್ಳಿ ಗ್ರಾಮದಲ್ಲಿ ಸುಮಾರು ಐನೂರಕ್ಕು ಹೆಚ್ಚು ಮತದಾರರಿದ್ದಾರೆ. ಇದು ಹೊನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದೆ. ಪ್ರತಿ ಚುನಾವಣೆಯಲ್ಲಿ ಪಕ್ಕದ ಗ್ರಾಮದ ಮತಗಟ್ಟೆಗೆ ಹೋಗಿ ಮತದಾನ ಮಾಡಬೇಕು. ಇದು ದೂರ ಆಗುವುದರಿಂದ ಮಹಿಳೆಯರು, ವೃದ್ಧರು, ಗರ್ಭಿಣಿಯರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.

ನಮ್ಮ ಗ್ರಾಮಕ್ಕೆ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಿಕೊಡುವಂತೆ ಪ್ರತಿ ಚುನಾವಣೆಯಲ್ಲಿಯೂ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಫಲಪ್ರದವಾಗಿಲ್ಲ. ಆದ್ದರಿಂದ ಬೇಸತ್ತು ಈ ಬಾರಿ ಚುನಾವಣೆ ಬಹಿಷ್ಕರಿಸಿದ್ದು, ಯಾವುದೇ ಜನಪ್ರತಿನಿಧಿಗಳು ಊರಿಗೆ ಮತಯಾಚನೆಗೆ ಬಾರದಂತೆ ರಸ್ತೆಗೆ ಮುಳ್ಳಿನ ಬೇಲಿ ಹಾಕಿದ್ದೇವೆ ಎಂದು ಗ್ರಾಮಸ್ಥರು ನುಡಿದರು.

ಮತದಾನದಂದು ಗ್ರಾಮದಲ್ಲಿಯೇ ಮತಗಟ್ಟೆ ಇದ್ದರೆ ಮತ ಚಲಾಯಿಸಿ ಬೇರೆ ಕಾರ್ಯಗಳಿಗೆ ತೆರಳಬಹುದು. ಆದರೆ, ಬೇರೊಂದು ಊರಿಗೆ ಹೋಗಿ ಮತ ಚಲಾಯಿಸಿ ಬರಲು ದಿನಪೂರ್ತಿ ಬೇಕಾಗುತ್ತದೆ. ಇದರಿಂದ ಅಂದಿನ ದುಡಿಮೆಗೂ ಕಲ್ಲು ಬಿದ್ದಂತಾಗುತ್ತದೆ ಎನ್ನುತ್ತಾರೆ ಗ್ರಾಮದ ಕೂಲಿಕಾರ್ಮಿಕರು.

ಈ ಕುರಿತಂತೆ ಹಿಂದಿನ ಚುನಾವಣೆಗಳಲ್ಲಿ ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರ್ ಹಾಗೂ ಚುನಾವಣಾ ಅಧಿಕಾರಿಗಳಿಗೆ ಗ್ರಾಮಸ್ಥರು ಮತಗಟ್ಟೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಆದರೆ, ಮನವಿಗೆ ಸ್ಪಂದಿಸುವುದಾಗಿ ಹೇಳಿದ ಯಾವ ಅಧಿಕಾರಿಗಳು ತಿರುಗಿಯೂ ನೋಡಿಲ್ಲ. ಅಧಿಕಾರಿಗಳ ಈ ಕ್ರಮಕ್ಕೆ ಗ್ರಾಮಸ್ಥರು ಬೇಸರಗೊಂಡಿದ್ದು, ಆಕ್ರೋಶ ವ್ಯಕ್ತಪಡಿಸಿ ಗ್ರಾಮದ ಮುಖ್ಯ ರಸ್ತೆಗೆ ಅಡ್ಡಲಾಗಿ ಮುಳ್ಳು ಹಾಕಿ ಅಧಿಕಾರಿಗಳು ಬಾರದಂತೆ ಬಹಿಷ್ಕಾರ ಹಾಕಿದ್ದಾರೆ. ಪ್ರತ್ಯೇಕ ಮತಗಟ್ಟೆಗೆ ವ್ಯವಸ್ಥೆ ಮಾಡದಿದ್ದರೆ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News