ಬೆಂಗಳೂರು: ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಚಿನ್ನಾಭರಣ ವಶ

Update: 2018-03-30 15:11 GMT

ಬೆಂಗಳೂರು, ಮಾ. 30: ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕಿವಿಯೊಲೆ, ಉಂಗುರ, ಮೂಗುತಿ ಸೇರಿ 2 ಕೆಜಿಯಷ್ಟು ಚಿನ್ನಾಭರಣ ಹಾಗೂ ನಗದನ್ನು ಇಲ್ಲಿನ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚನ್ನರಾಪಟ್ಟಣ ಹೋಬಳಿ ಬಾಲೇಪುರ ಗ್ರಾಮದ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಮೂಲಕ ಫಾರಾಸ್ ಜೈನ್ ಎಂಬವರು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸೂಲಿಬೆಲೆ ಕಡೆಯಿಂದ ದೇವನಹಳ್ಳಿಗೆ ತೆರಳುತ್ತಿದ್ದ ಕೆಎ 04 ಎಂಡಿ 2844 ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ತಪಾಸಣೆ ನಡೆಸಿದ್ದು,ಚಿನ್ನಾಭರಣ, ನಗದು ಪತ್ತೆಯಾಗಿದೆ ಎಂದು ಗೊತ್ತಾಗಿದೆ.

ಮೊದಲಿಗೆ ಫಾರಸ್ ಜೈನ್ ಪ್ರಯಾಣಿಸುತ್ತಿದ್ದ ಕಾರಿನಲ್ಲಿ 500 ಗ್ರಾಮ್ ಚಿನ್ನಾಭರಣ ಪತ್ತೆಯಾಗಿದ್ದು, ಆ ಬಳಿಕ ಆತನ ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಮತ್ತಷ್ಟು ಚಿನ್ನಾಭರಣ ಪತ್ತೆ ಮಾಡಲಾಗಿದೆ. ಒಂದೇ ರೀತಿಯ ಉಂಗುರ, ಮೂಗುತಿ, ಕಿವಿಯೊಲೆ, ಲಕ್ಷ್ಮಿ ಕಾಸು, ಮಾಂಗಲ್ಯ ಆಭರಣಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ಚೆಕ್‌ಪೋಸ್ಟ್‌ನಲ್ಲಿ ಆಂಧ್ರ ಮೂಲಕ ವ್ಯಕ್ತಿಯೊಬ್ಬ ಹಾಗೂ ದೊಡ್ಡಬಳ್ಳಾಪುರದ ವ್ಯಕ್ತಿಯೊಬ್ಬ ಅನಧಿಕೃತವಾಗಿ ಸಾಗಿಸುತ್ತಿದ್ದ 80ಕ್ಕೂ ಹೆಚ್ಚು ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News