ಚಿಕ್ಕಮಗಳೂರು: ಅಕಾಲಿಕ ಮಳೆಗೆ ಸ್ಫೋಟಗೊಂಡ ಟ್ರಾನ್ಸ್ ಫಾರ್ಮರ್; ಕೂದಲೆಳೆ ಅಂತರದಲ್ಲಿ ವ್ಯಕ್ತಿ ಪಾರು

Update: 2018-03-30 15:08 GMT

ಚಿಕ್ಕಮಗಳೂರು, ಮಾ.30: ವಾಯುಬಾರ ಕುಸಿತದ ಪರಿಣಾಮ ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆ ಸುರಿದಿದ್ದು, ಮಧ್ಯಾಹ್ನದ ವೇಳೆ ಸುರಿದ ಮಳೆಯಿಂದಾಗಿ ನಗರದಲ್ಲಿ ಟ್ರಾನ್ಸ್ ಪಾರ್ಮರೊಂದು ಸಿಡಿದು ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಮೊಬೈಲ್ ಒಂದರಲ್ಲಿ ಸೆರೆಯಾಗಿದ್ದು, ಜಿಲ್ಲೆಯಾದ್ಯಂತ ವೈರಲ್ ಆಗಿದೆ.

ಶುಕ್ರವಾರ ಬೆಳಗಿನಿಂದ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವಣವಿತ್ತು. ಮಧ್ಯಾಹ್ನವಾಗುತ್ತಿದ್ದಂತೆ ನಗರ ಸೇರಿದಂತೆ ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ಈ ವೇಳೆ ನಗರದಮಲ್ಲಂದೂರು ರಸ್ತೆ ಬದಿಯಲ್ಲಿದ್ದ ಟ್ರಾನ್ಸ್ ಪಾರ್ಮರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಾರ್ವಜನಿಕರು ನೋಡ ನೋಡುತ್ತಿದ್ದಂತೆ ದಿಢೀರನೆ ಸ್ಪೋಟಗೊಂಡಿದೆ. ಇದೇ ವೇಳೆ ಟ್ರಾನ್ಸ್ ಫಾರ್ಮರ್ ಎದುರೇ ನಿಲ್ಲಿಸಿದ್ದ ಗೂಡ್ಸ್ ಆಟೊವೊಂದರಲ್ಲಿ ವ್ಯಕ್ತಿಯೊಬ್ಬರು ಕುಳಿತಿದ್ದರು. ಟ್ರಾನ್ಸ್‍ಫಾರ್ಮರ್ ಮೂರು ಬಾರಿ ಧಟ್ಟ ಬೆಂಕಿಯೊಂದಿಗೆ ಸ್ಪೋಟಗೊಂಡಿದೆ. ಸ್ಪೋಟದಿಂದ ಆಟೊ ಮುಂಭಾಗ ಜಖಂಗೊಂಡಿದೆ. ಆದರೆ ಆಶ್ಚರ್ಯಕರ ರೀತಿಯಲ್ಲಿ ಆಟೊದ ಒಳಗೆ ಕುಳಿತಿದ್ದ ವ್ಯಕ್ತಿಗೆ ಯಾವುದೇ ಗಾಯವಾಗದೆ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಕೆಲ ಸಾರ್ವಜನಿಕರು ಮಳೆ ಬರುತ್ತಿದ್ದ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದ ವೇಳೆ ಟ್ರಾನ್ಸ್ ಫಾರ್ಮರ್ ಸ್ಪೋಟಗೊಂಡ ದೃಶ್ಯ ಮೊಬೈಲ್ ಒಂದಕ್ಕೆ ಸೆರೆ ಸಿಕ್ಕಿದ್ದು, ಸ್ಪೋಟದ ಬಳಿಕ ವ್ಯಕ್ತಿ ಆಟೊದಿಂದ ಇಳಿದು ಓಡಿದ ದೃಶ್ಯವೂ ಸೆರೆಯಾಗಿದೆ. ಸದ್ಯ ಈ ವೀಡಿಯೋ ಜಿಲ್ಲೆಯಾದ್ಯಂತ ವೈರಲ್ ಆಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News