ತುಮಕೂರು: ಎಪ್ರಿಲ್ 4 ರಂದು ಜಿಲ್ಲೆಗೆ ಆಗಮಿಸಲಿರುವ ರಾಹುಲ್ ಗಾಂಧಿ

Update: 2018-03-30 17:44 GMT

ತುಮಕೂರು.ಮಾ.30: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೂರನೇ ಹಂತದ ಜನಾರ್ಶೀವಾದ ಕಾರ್ಯಕ್ರಮಕ್ಕೆ ಎಪ್ರಿಲ್ 3-4 ರಂದು ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಎಪ್ರಿಲ್ 4 ರಂದು ತುಮಕೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಎಐಸಿಸಿ ಕರ್ನಾಟಕ ಉಸ್ತುವಾರಿ ಮಧು ಯಾಸಿನ್‍ಗೌಡ ತಿಳಿಸಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಎಪ್ರಿಲ್ ಮೂರರಂದು ಬೆಂಗಳೂರು ವಿಭಾಗ ಮಟ್ಟದ ಜನಾರ್ಶೀವಾದ ಯಾತ್ರೆ ಆರಂಭವಾಗಲಿದ್ದು, ಮೊದಲಿಗೆ ಶಿವಮೊಗ್ಗಕ್ಕೆ ಆಗಮಿಸುವ ರಾಹುಲ್‍ಗಾಂಧಿ ರೋಡ್ ಶೋ ನಡೆಸಲಿದ್ದಾರೆ. ನಂತರ ಹೊನ್ನಾಳಿ, ಹರಿಹರದ ಮೂಲಕ ದಾವಣಗೆರೆಗೆ ತೆರಳುವ ಅವರು, ದಾವಣಗೆರೆಯಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾತ್ರಿ ದಾವಣಗೆರೆಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಎಪ್ರಿಲ್ 4 ರಂದು ಬೆಳಗ್ಗೆ ಹೊಳಲ್ಕರೆಯಲ್ಲಿ ಸಾರ್ವಜನಿಕ ಸಭೆ ಮುಗಿಸಿ, ಮಧ್ಯಾಹ್ನ 2.30ಕ್ಕೆ ತುಮಕೂರಿಗೆ ಆಗಮಿಸುವ ರಾಹುಲ್‍ಗಾಂಧಿ ರೋಡ್ ಶೋ ನಡೆಸುವರು. ನಂತರ ಸಿದ್ದಗಂಗಾ ಮಠಕ್ಕೆ ತೆರಳಿ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆಯುವವರು. ತದನಂತರ ತುಮಕೂರು ಗ್ರಾಮಾಂತರ, ಕುಣಿಗಲ್ ಮೂಲಕ ಮಾಗಡಿ ತೆರಳಿ, ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುವರು ಎಂದು ಮಧುಯಾಸಿನ್ ಗೌಡ ತಿಳಿಸಿದರು.

ಕರ್ನಾಟಕದಲ್ಲಿ ಚುನಾವಣೆ ಘೋಷಣೆಯಾದ ನಂತರ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಎಐಸಿಸಿ ಅಧ್ಯಕ್ಷರಾದ ರಾಹುಲ್‍ಗಾಂಧಿ ಆಗಮಿಸುತ್ತಿದ್ದು, ಈ ಹಿಂದಿನ ಜನಾರ್ಶೀವಾದ ಯಾತ್ರೆಗಳಲ್ಲಿ ಜನರು ನಮ್ಮ ಕರ್ನಾಟಕ, ನಮ್ಮ ರಾಹುಲ್ ಎಂಬಂತೆ ಸ್ವೀಕರಿಸಿದ್ದಾರೆ. ಈಗಾಗಲೇ ಚುನಾವಣೆಯಲ್ಲಿ ಸೋಲೊಪ್ಪಿಕೊಂಡಿರುವ ಬಿಜೆಪಿ ನೆಪಮಾತ್ರಕ್ಕೆ ಚುನಾವಣಾ ಕಣದಲ್ಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಸತ್ಯ ಹೇಳುವ ಮೂಲಕ ಬಿಜೆಪಿ ಸರಕಾರ ಅತ್ಯಂತ ಭ್ರಷ್ಟ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ ಎಂದರು.

ಚುನಾವಣೆ ಹತ್ತಿರವಾದಂತೆ ಮತ್ತೊಮ್ಮೆ ಎಪ್ರಿಲ್ 7 ಮತ್ತು 8 ರಂದು ಕರ್ನಾಟಕಕ್ಕೆ ಆಗಮಿಸಲಿದ್ದು, 7 ರಂದು ಚಿಕ್ಕಬಳ್ಳಾಪುರ ಮತ್ತು ಕೋಲಾರ, ಎಪ್ರಿಲ್ 8 ರಂದು ಬೆಂಗಳೂರಿನಲ್ಲಿ ಬೃಹತ್ ಸಭೆಯನ್ನು ನಡೆಸಲಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ತುಂಬಲಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಸಚಿವ ಟಿ.ಬಿ.ಜಯಚಂದ್ರ, ರಾಜ್ಯಸಭಾ ಸದಸ್ಯ ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆಂಚಮಾರಯ್ಯ, ಸಿ.ಎಂ.ಚಂದ್ರು, ಕೊಂಡವಾಡಿ ಚಂದ್ರಶೇಖರ್, ಎಸ್.ಷಪಿ ಅಹಮದ್, ಶಾಸಕರಾದ ಡಾ.ರಫೀಕ್ ಅಹಮದ್, ಕೆ.ಷಡಕ್ಷರಿ, ಮಾಜಿ ಶಾಸಕ ಹೆಚ್.ನಿಂಗಪ್ಪ, ರಾಯಸಚಿದ್ರ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News