ಕಾಗಿನೆಲೆ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಊಟ ಹಾಕಲು ಅನುಮತಿ ನೀಡದಿದ್ದರೆ ಪ್ರತಿಭಟನೆ: ಕೆ.ಎಸ್.ಈಶ್ವರಪ್ಪ

Update: 2018-04-01 15:07 GMT

ಶಿವಮೊಗ್ಗ, ಏ. 1: 'ಕಾಗಿನೆಲೆಯಲ್ಲಿ ಎ. 3 ರಂದು ಆಯೋಜಿಸಲಾಗಿರುವ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಆಗಮಿಸಲಿರುವ ಪಕ್ಷದ ಕಾರ್ಯಕರ್ತರಿಗೆ ಊಟ ಹಾಕಿಸಲು ಅವಕಾಶ ನೀಡದಿರುವ ಹಾವೇರಿ ಜಿಲ್ಲೆಯ ಚುನಾವಣಾಧಿಕಾರಿಗಳ ಕ್ರಮ ಸರಿಯಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. 'ಎ. 2 ರ 11 ಗಂಟೆಯವರೆಗೆ ಕಾಯುತ್ತೇವೆ. ಒಂದು ವೇಳೆ ಊಟ ಹಾಕಲು ಅವಕಾಶ ನೀಡದಿದ್ದರೆ ಹಾವೇರಿ ಚುನಾವಣಾಧಿಕಾರಿ ಕಚೇರಿ ಎದುರು ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು' ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ. 

ಭಾಗಿ: ಕಾಗಿನೆಲೆಯಲ್ಲಿ ಆಯೋಜಿಸಿರುವ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಭಾರೀ ಸಂಖ್ಯೆಯ ಪಕ್ಷದ ಕಾರ್ಯಕರ್ತರು ಆಗಮಿಸುತ್ತಿದ್ದಾರೆ. ದೂರದೂರುಗಳಿಂದ ಆಗಮಿಸುವ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿತ್ತು. ಈ ಕುರಿತಂತೆ ಹಾವೇರಿ ಚುನಾವಣಾ ಆಯೋಗದ ಅನುಮತಿ ಕೂಡ ಕೇಳಲಾಗಿತ್ತು. ಆದರೆ ಊಟ ಹಾಕಲು ಅನುಮತಿ ನೀಡಿಲ್ಲ. ಸಮಾರಂಭಕ್ಕೆ ಆಗಮಿಸುವವರಿಗೆ ಮಜ್ಜಿಗೆ, ನೀರು ವಿತರಣೆ ಮಾಡಲು ಅಡ್ಡಿಯಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ರವರ ಜೊತೆ ಚರ್ಚೆ ನಡೆಸಲಾಗಿದೆ. ಅವರು ಸ್ಥಳೀಯ ಚುನಾವಣಾಧಿಕಾರಿಗಳು ಅವಕಾಶ ಮಾಡಿಕೊಡಬಹುದಾಗಿದೆ ಎಂದು ಹೇಳಿದ್ದಾರೆ ಎಂದರು. 

ಚುನಾವಣಾ ಕಣಕ್ಕಿಳಿಯುವ ಅಭ್ಯರ್ಥಿಗಳಿಗೆ ಇಂತಿಷ್ಟು ಪ್ರಮಾಣದ ಹಣ ಖರ್ಚು ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಈ ನೀತಿಯೊಳಗೆ ಪಕ್ಷದ ಕಾರ್ಯಕರ್ತರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗುವುದು. ಊಟೋಪಚಾರದ ಖರ್ಚುವೆಚ್ಚವನ್ನು ಪಕ್ಷದ ಅಭ್ಯರ್ಥಿಯ ಖಾತೆಗೆ ಹೊಂದಾಣಿಕೆ ಮಾಡಬಹುದಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News