ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಲ್ಲಿ ಸ್ಪರ್ಧೆ: ಎಚ್.ಡಿ ಕುಮಾರಸ್ವಾಮಿ

Update: 2018-04-04 14:27 GMT

ಮೈಸೂರು,ಎ.4: ಕಾರ್ಯಕರ್ತರ ಒತ್ತಡದಿಂದ ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಒತ್ತಡದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಅಲ್ಲದೆ ಕುಟುಂಬದಿಂದ ಇಬ್ಬರೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ ಎಂಬ ಹೇಳಿಕೆಗೆ ಅನಿವಾರ್ಯವಾಗಿ ತಲೆ ಬಾಗಿದ್ದೇನೆ ಎಂದು ತಿಳಿಸಿದರು.

ರಾಮನಗರ ರಾಜಕೀಯ ಜೀವನದ ಕರ್ಮಭೂಮಿಯಾಗಿದ್ದು, ಪಕ್ಕದ ಚನ್ನಪಟ್ಟಣ ಕ್ಷೇತ್ರದಿಂದಲೂ ಸ್ಪರ್ಧಿಸುವಂತೆ ಒತ್ತಡವಿದೆ. ಆದ್ದರಿಂದ ಅನಿವಾರ್ಯವಾಗಿ ಎರಡು ಕ್ಷೇತ್ರಗಳಲ್ಲಿ ನಿಲ್ಲುವಂತಾಗಿದೆ ಎಂದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಗಾಗಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ. ಅವರ ಮಗನಿಗೆ ಕ್ಷೇತ ಬಿಟ್ಟುಕೊಡಲು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದಿದ್ದಾರೆ. ಸಿದ್ಧರಾಮಯ್ಯ ಅವರು ರಾಜಕೀಯ ಜೀವನ ಆರಂಭವಾದ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಅವರ ರಾಜಕೀಯ ಜೀವನ ಅಂತ್ಯವಾಗಲಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರನ್ನು ನಾನಾಗಲಿ ಜಿ.ಟಿ.ದೇವೇಗೌಡರಾಗಲಿ ಸೋಲಿಸುತ್ತೇವೆ ಎಂದು ಹೇಳುವುದಿಲ್ಲ. ಈ ಕ್ಷೇತ್ರದ ಜನರೇ ಸೋಲಿಸಬೇಕೆಂದು ನಿರ್ಧರಿಸಿದ್ದಾರೆ. ಚಾಮುಂಡೇಶ್ವರಿ, ವರುಣಾ ಕ್ಷೇತ್ರಗಳಲ್ಲಿ ಮತದಾರರು ಸಿದ್ದರಾಮಯ್ಯ ಹಾಗೂ ಅವರ ಮಗ ಯತೀಂದ್ರ ಅವರನ್ನು ಮನೆಗೆ ಕಳುಹಿಸಲಿದ್ದಾರೆ ಎಂದು ಹೇಳಿದರು.

ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಪೊಲಿಟಿಕಲ್ ಸ್ಟ್ಯಾಟರ್ಜಿಯಿಂದ ಅಭ್ಯರ್ಥಿ ಹಾಕಿಲ್ಲ ಅಷ್ಟೇ. ಉಪ ಚುನಾವಣೆ ಗೆದ್ದಿದ್ದು ಸಿದ್ದರಾಮಯ್ಯ ಸರ್ಕಾರದ ಅಭಿವೃದ್ಧಿಯಿಂದ ಅಲ್ಲ. ವಾಮ ಮಾರ್ಗದ ಮೂಲಕ ಚುನಾವಣೆ ಗೆಲ್ಲಲಾಗಿದೆ ಎಂದು ಅವರ ಸಚಿವರೇ ನನ್ನ ಬಳಿ ಹೇಳಿದ್ದಾರೆ ಎಂದು ಆರೋಪಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಶರವಣ, ಜೆಡಿಎಸ್ ಮುಖಂಡ ಕೆ.ವಿ.ಮಲ್ಲೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News