ಸಾಗರ ವಿಧಾನಸಭಾ ಕ್ಷೇತ್ರ: ಕುತೂಹಲ ಮೂಡಿಸಿದ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿಯ ಹೆಸರು ಶಿಫಾರಸ್ಸು
ಶಿವಮೊಗ್ಗ, ಏ. 4: ಸಾಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಚಿವ ಕಾಗೋಡು ತಿಮ್ಮಪ್ಪ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಆದರೆ ಇತ್ತೀಚೆಗೆ ಕೆಪಿಸಿಸಿಯು ಎಐಸಿಸಿಗೆ ಶಿಫಾರಸ್ಸು ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ, ಸಾಗರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಗೋಡು ಜೊತೆಯಲ್ಲಿ ಅವರ ಪುತ್ರಿ ಡಾ. ರಾಜನಂದಿನಿ ಹೆಸರು ಶಿಫಾರಸ್ಸು ಮಾಡಿದೆ ಎಂಬ ವಿಚಾರವು ಸ್ಥಳೀಯ ಕಾಂಗ್ರೆಸ್ ಪಾಳಯದಲ್ಲಿ ಬಿಸಿ ಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಕಾಗೋಡು ಕಣಕ್ಕಿಳಿಯುವುದು ಖಚಿತವೇ ಅಥವಾ ಅಂತಿಮ ಕ್ಷಣದಲ್ಲಿ ಪುತ್ರಿ ಡಾ. ರಾಜನಂದಿನಿಗೆ ಪಟ್ಟ ಕಟ್ಟಿ ಚುನಾವಣಾ ಕಣದಿಂದ ದೂರ ಉಳಿಯಲಿದ್ದಾರಾ ? ಈ ಕಾರಣದಿಂದ ತಮ್ಮ ಹೆಸರಿನೊಂದಿಗೆ ಪುತ್ರಿಯ ಹೆಸರನ್ನೂ ಕೂಡ ಎಐಸಿಸಿಗೆ ರವಾನೆಯಾಗಿರುವ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವಂತೆ ಮಾಡಿದ್ದಾರಾ? ಎಂಬಿತ್ಯಾದಿ ಮಾತುಗಳು ಕಾಂಗ್ರೆಸ್ ವಲಯದಿಂದ ಕೇಳಿ ಬರಲಾರಂಭಿಸಿದೆ.
ಕಳೆದ ಕೆಲ ವರ್ಷಗಳ ಹಿಂದೆ ಮುಂದಿನ ವಿಧಾನಸಭಾ ಚುನಾವಣಾ ಕಣಕ್ಕಿಳಿಯುವುದಿಲ್ಲ ಎಂದು ಕಾಗೋಡು ತಿಮ್ಮಪ್ಪ ಹೇಳಿದ್ದರು. ವಯಸ್ಸು, ಅನಾರೋಗ್ಯ ಮತ್ತಿತರ ಕಾರಣಗಳಿಂದ ಕಾಗೋಡುರವರು ಚುನಾವಣಾ ಕಣದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆಂಬ ಮಾತುಗಳು ಅವರ ಆಪ್ತ ಮೂಲಗಳಿಂದ ಕೇಳಿಬಂದಿತ್ತು.
ಕೆಲ ತಿಂಗಳುಗಳ ಹಿಂದೆ ಕಾಗೋಡು ಚುನಾವಣಾ ಕಣಕ್ಕಿಳಿಯದಿರುವುದು ನಿಶ್ಚಿತವಾದರೆ, ಸಾಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆಂಬ ಚರ್ಚೆಗಳು ಸ್ಥಳೀಯ ರಾಜಕೀಯ ವಲಯದಲ್ಲಿ ನಡೆಯಲಾರಂಭಿಸಿದ್ದವು. ದಿಢೀರ್ ಆಗಿ ಅವರ ಪುತ್ರಿ, ಡಾ. ರಾಜನಂದಿನಿಯವರ ಹೆಸರು ಕೇಳಿಬಂದಿತ್ತು. ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಚರ್ಚೆಯ ಬೆನ್ನಲ್ಲೆ ಡಾ. ರಾಜನಂದಿನಿಯವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಯಾಗಿಯೂ ನೇಮಿಸಲಾಗಿತ್ತು. ಈ ಬೆಳವಣಿಗೆಯಿಂದ ಕಾಗೋಡು ಪುತ್ರಿ ಅಭ್ಯರ್ಥಿಯಾಗಲಿದ್ದಾರೆಂಬ ವದಂತಿಗೆ ಮತ್ತಷ್ಟು ರೆಕ್ಕೆಪುಕ್ಕ ಬರುವಂತಾಗಿತ್ತು. ಇನ್ನೊಂದೆಡೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಸಾಗರ ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆಯವರು ಕೂಡ ಟಿಕೆಟ್ ಆಕಾಂಕ್ಷಿಗಳಾಗಿ ಹೊರಹೊಮ್ಮಿದ್ದರು.
ಇದೆಲ್ಲದರ ನಡುವೆಯೇ ಕಾಗೋಡುರವರು ಸ್ಪಷ್ಟನೆ ನೀಡಿ, 'ಪುತ್ರಿಯನ್ನು ಚುನಾವಣಾ ಕಣಕ್ಕಿಳಿಸುವ ಯಾವುದೇ ಚಿಂತನೆಯನ್ನು ತಾನು ನಡೆಸಿಲ್ಲ. ಪಕ್ಷ ಟಿಕೆಟ್ ನೀಡಿದರೆ ಮತ್ತೆ ತಾನೇ ಸಾಗರ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ. ಟಿಕೆಟ್‍ಗಾಗಿ ತಾನು ಲಾಬಿ ನಡೆಸಲು ಹೋಗುವುದಿಲ್ಲ' ಎಂದು ತಿಳಿಸಿದ್ದರು. ಮತ್ತೊಂದೆಡೆ ಸಾಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ಕೂಡ, 'ಸಾಗರದಲ್ಲಿ ಕಾಗೋಡು ಕಣಕ್ಕಿಳಿಯುವುದಾದರೆ ಅವರಿಗೆ ಟಿಕೆಟ್ ನೀಡುವುದಾಗಿ' ತಿಳಿಸಿದ್ದರು.
ಇದರಿಂದ ಕಾಗೋಡು ಚುನಾವಣಾ ಕಣಕ್ಕಿಳಿಯುವುದು ಖಚಿತವಾಗಿತ್ತು. ಮತ್ತೊಂದೆಡೆ ಎಐಸಿಸಿಯು ವಯಸ್ಸಾದ, ಅನಾರೋಗ್ಯದಿಂದ ಬಳಲುತ್ತಿರುವ ಹಾಲಿ ಶಾಸಕರಿಗೆ ಟಿಕೆಟ್ ನೀಡದಿರಲು ಹಾಗೂ ಅವರು ಸೂಚಿಸುವವರಿಗೆ ಟಿಕೆಟ್ ನೀಡುವ ನಿರ್ಧಾರ ಕೈಗೊಂಡಿದೆ. ಎಐಸಿಸಿ ಸಿದ್ದಪಡಿಸಿದ್ದ ಪಟ್ಟಿಯಲ್ಲಿ ಕಾಗೋಡುರವರ ಹೆಸರು ಕೂಡ ಇದೆ ಎಂಬ ಮಾತು ಕಾಂಗ್ರೆಸ್ ಪಾಳಯದಿಂದ ಕೇಳಿಬಂದಿತ್ತು.
ಈ ಎಲ್ಲ ಅಂತೆಕಂತೆಗಳ ನಡುವೆಯೇ ಕಾಗೋಡು ಚುನಾವಣಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿತ್ತು. ಅವರು ಕೂಡ ಕ್ಷೇತ್ರದಾದ್ಯಂತ ಬಿರುಸಿನ ಓಡಾಟ ನಡೆಸುತ್ತಿದ್ದರು. ಈ ನಡುವೆ ಕೆಪಿಸಿಸಿಯು ಎಐಸಿಸಿಗೆ ಶಿಫಾರಸ್ಸು ಮಾಡಲಾಗಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ, ಸಾಗರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಗೋಡು ಹೆಸರಿನ ಜೊತೆಗೆ ಅವರ ಪುತ್ರಿಯ ಹೆಸರು ಕೂಡ ಶಿಫಾರಸ್ಸು ಮಾಡಿದೆ ಎಂಬ ಮಾತು ಕೇಳಬರತೊಡಗಿದೆ.
ಇದು ಜಿಲ್ಲೆಯ ಕಾಂಗ್ರೆಸ್ ಪಾಳಯದಲ್ಲಿ ನಾನಾ ರೀತಿಯ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ವಯಸ್ಸು ಹಾಗೂ ಅನಾರೋಗ್ಯದಿಂದ ಎಐಸಿಸಿ ಏನಾದರೂ ಟಿಕೆಟ್ ನಿರಾಕರಿಸಿದರೆ, ಅವರ ಪುತ್ರಿಗೆ ಟಿಕೆಟ್ ನೀಡುವ ಉದ್ದೇಶ ಇದರ ಹಿಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಮಾತು ನಿಜವೇ ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
'ಆಕಾಂಕ್ಷಿಗಳಾಗಿದ್ದವರೂ ಅರ್ಜಿ ಸಲ್ಲಿಸಿರಲಿಲ್ಲ'
ಕಳೆದ ತಿಂಗಳು ಕೆಪಿಸಿಸಿಯು ಸ್ಪರ್ಧಾಕಾಂಕ್ಷಿಗಳಿಂದ ಅಧಿಕೃತವಾಗಿ ಅರ್ಜಿ ಅಹ್ವಾನಿಸಿತ್ತು. ಚುನಾವಣಾ ಕಣಕ್ಕಿಳಿಯಲು ಇಚ್ಚಿಸುವವರು ನಿಗಿದಿತ ಮೊತ್ತ ಪಾವತಿಸಿ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಜಿಲ್ಲೆಯ ಪಕ್ಷದ ಶಾಸಕರು ಹಾಗೂ ವಿವಿಧ ಕ್ಷೇತ್ರಗಳ ಸ್ಪರ್ಧಾಕಾಂಕ್ಷಿಗಳು ಬೆಂಗಳೂರಿಗೆ ತೆರಳಿ ಅರ್ಜಿ ಸಲ್ಲಿಸಿ ಬಂದಿದ್ದರು. ಸಾಗರ ಕ್ಷೇತ್ರದಲ್ಲಿಯೂ ಕಾಗೋಡು ಜೊತೆಗೆ ಹಲವು ಮುಖಂಡರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಸಾಗರ ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮೊದಲಾದವರು ಟಿಕೆಟ್ ರೇಸ್‍ನಲ್ಲಿದ್ದರು. ಕಾಗೋಡು ಕಣಕ್ಕಿಳಿಯುವುದಾದರೆ ತಾವು ಟಿಕೆಟ್‍ಗೆ ಲಾಬಿ ನಡೆಸುವುದಿಲ್ಲ ಎಂದು ಈ ಸ್ಪರ್ಧಾಕಾಂಕ್ಷಿಗಳು ಸ್ಪಷ್ಟಪಡಿಸಿದ್ದರು. ಕಾಗೋಡುರವರು ಸಾಗರ ಕ್ಷೇತ್ರದಿಂದ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದರಿಂದ, ಉಳಿದ ಸ್ಪರ್ಧಾಕಾಂಕ್ಷಿಗಳ್ಯಾರು ಕೂಡಾ ಅರ್ಜಿ ಸಲ್ಲಿಸಲು ಮುಂದಾಗಿರಲಿಲ್ಲ. ಹಾಗೆಯೇ ಕಾಗೋಡು ಪುತ್ರಿ ಡಾ. ರಾಜನಂದಿನಿಯವರು ಕೂಡ ಅರ್ಜಿ ಸಲ್ಲಿಸಿರಲಿಲ್ಲ. ಆದರೆ ಅದೇಗೆ ಅವರ ಹೆಸರು ಎಐಸಿಸಿಗೆ ರವಾನೆಯಾದ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ ಎಂದು ಸ್ಥಳೀಯ ಕೆಲ ಕಾಂಗ್ರೆಸ್ ನಾಯಕರು ಪ್ರಶ್ನಿಸುತ್ತಿದ್ದಾರೆ.