ಮುಗಿಯದ ಕಥೆಯಂತಾದ ಸಾಗರ ಟಿಕೆಟ್ ರಾಜಕಾರಣ: ಹಾಲಪ್ಪ ಆಯ್ತು, ಇದೀಗ ಬೇಳೂರು ಸರದಿ

Update: 2018-04-05 14:24 GMT

ಶಿವಮೊಗ್ಗ, ಏ. 4: ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‍ಗೆ ಸಂಬಂಧಿಸಿದಂತೆ ಮಾಜಿ ಸಚಿವ ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನಡುವೆ ತಲೆದೋರಿರುವ ಗೊಂದಲ ಸದ್ಯಕ್ಕೆ ಪರಿಹಾರವಾಗುವ ಲಕ್ಷಣಗಳು ಗೋಚರವಾಗುತ್ತಿಲ್ಲ. ಹಾಲಪ್ಪರ ಮುನಿಸು ಕಡಿಮೆಯಾಗುತ್ತಿದ್ದಂತೆ, ಇದೀಗ ಬೇಳೂರು ಬಂಡೇಳುವ ಲಕ್ಷಣಗಳು ಕಂಡು ಬರಲಾರಂಭಿಸಿದೆ.

ಬದಲಾದ ರಾಜಕೀಯ ಬೆಳವಣಿಗೆಯಲ್ಲಿ, ಹಾಲಪ್ಪಗೆ ಸಾಗರ ಟಿಕೆಟ್ ಸಿಗುವ ಸಾಧ್ಯತೆಗಳು ದಟ್ಟವಾಗುತ್ತಿವೆ. ಇದು ಟಿಕೆಟ್ ಸಿಕ್ಕೇ ಸಿಗುವ ನಿರೀಕ್ಷೆಯಲ್ಲಿದ್ದ ಬೇಳೂರಲ್ಲಿ ತಳಮಳ ಸೃಷ್ಟಿಸಿದೆ. ಈ ಕಾರಣದಿಂದಲೇ ಅವರು ಸಾಗರದಿಂದ ಬೆಂಗಳೂರಿಗೆ ದೌಡಾಯಿಸಿದ್ದಾರೆ. ಪಕ್ಷದ ವರಿಷ್ಠರನ್ನು ಭೇಟಿಯಾಗಿ ಚರ್ಚೆ ನಡೆಸಲು ಮುಂದಾಗಿರುವ ಮಾಹಿತಿ ಲಭ್ಯವಾಗಿದೆ. ಇನ್ನೊಂದೆಡೆ ಟಿಕೆಟ್ ಕೈ ತಪ್ಪುವ ಕಾರಣದಿಂದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದ ಹಾಲಪ್ಪರವರು, ಪಕ್ಷದ ವರಿಷ್ಠರ ಭರವಸೆಯ ಹಿನ್ನೆಲೆಯಲ್ಲಿ ಮತ್ತೆ ಸಾಗರದತ್ತ ಮುಖ ಮಾಡಿದ್ದಾರೆ. 'ಇನ್ನೆರೆಡು ದಿನಗಳಲ್ಲಿ ಅವರು ಕ್ಷೇತ್ರಕ್ಕೆ ಆಗಮಿಸಲಿದ್ದು, ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ' ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡುತ್ತವೆ.

ಸಾಗರ ಕ್ಷೇತ್ರದ ಬಿಜೆಪಿ ಟಿಕೆಟ್ ರಾಜಕಾರಣವು ದಿನಕ್ಕೊಂದು ತಿರುವು ಪಡೆದುಕೊಳ್ಳಲಾರಂಭಿಸಿದೆ. ಹಾಲಪ್ಪ - ಬೇಳೂರಲ್ಲಿ ಯಾರು ಅಭ್ಯರ್ಥಿಯಾಗಲಿದ್ದಾರೆಂಬ ಕುತೂಹಲ ಮನೆ ಮಾಡುವಂತಾಗಿದೆ. ಟಿಕೆಟ್ ರೇಸ್‍ನಲ್ಲಿ ಒಮ್ಮೆ ಹಾಲಪ್ಪ, ಮತ್ತೊಮ್ಮೆ ಬೇಳೂರು ಹೆಸರು ಕೇಳಿಬರುತ್ತಿದೆ. ಪಕ್ಷದ ವರಿಷ್ಠರಿಲ್ಲಿಯೂ ಒಮ್ಮತದ ಅಭಿಪ್ರಾಯ ವ್ಯಕ್ತವಾಗುತ್ತಿಲ್ಲ. ಇದರಿಂದ ಅಭ್ಯರ್ಥಿ ಆಯ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುವಂತೆ ಮಾಡಿದೆ.

ಬಂಡಾಯದ ಕಹಳೆ: ಕುಮಾರ್ ಬಂಗಾರಪ್ಪಗೆ ಸೊರಬದಿಂದ ಟಿಕೆಟ್ ನೀಡಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದರು. ಆ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಲಪ್ಪರನ್ನು ಸಾಗರ ಕ್ಷೇತ್ರದಿಂದ ಕಣಕ್ಕಿಳಿಸುವ ಹಾಗೂ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಬೇಳೂರಿಗೆ ವಿಧಾನ ಪರಿಷತ್‍ಗೆ ಆಯ್ಕೆ ಮಾಡಲು ತೀರ್ಮಾನಿಸಿದ್ದರು. ಪಕ್ಷದ ಸೂಚನೆಯಂತೆ ಹಾಲಪ್ಪರವರು ಕಳೆದ ಹಲವು ತಿಂಗಳಿನಿಂದ ಸಾಗರ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದಾರೆ.

ಇನ್ನೊಂದೆಡೆ ಟಿಕೆಟ್ ಆಕಾಂಕ್ಷಿಯಾಗಿದ್ದ ಬೇಳೂರು ಶತಾಯಗತಾಯ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನ ಮುಂದುವರಿಸಿದ್ದರು. ಟಿಕೆಟ್ ಪೈಪೋಟಿ ಗಮನಿಸಿದ ವರಿಷ್ಠರು ಸರ್ವೇ ಮೂಲಕ ಅಭ್ಯರ್ಥಿ ಆಯ್ಕೆ ನಡೆಸುವುದಾಗಿ ಸ್ಪಷ್ಟಪಡಿಸಿದ್ದರು. ಬಹುತೇಕ ಹಾಲಪ್ಪರವರೇ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗಿದ್ದವು. ಆದರೆ ಕಾದು ನೋಡಲು ನಿರ್ಧರಿಸಿದ್ದ ಬೇಳೂರು, ಪಕ್ಷದ ವರಿಷ್ಠರ ಅಂತಿಮ ಸೂಚನೆಗಾಗಿ ಕಾದು ಕುಳಿತುಕೊಂಡಿದ್ದರು. ಬಿಜೆಪಿಯಿಂದ ಏನಾದರೂ ಟಿಕೆಟ್ ಸಿಗದಿದ್ದರೆ ಕಳೆದ ಚುನಾವಣೆ ರೀತಿಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಬೇಳೂರು ಕಣಕ್ಕಿಳಿಯಲಿದ್ದಾರೆಂಬ ಮಾತುಗಳು ಸ್ಥಳೀಯ ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು. ಈ ನಡುವೆ ಬಿಜೆಪಿಯಲ್ಲಿ ನಡೆಯುತ್ತಿದ್ದ ಟಿಕೆಟ್ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಜೆಡಿಎಸ್ ಪಕ್ಷವು, ಸಾಗರ ಹೊರತುಪಡಿಸಿ ಜಿಲ್ಲೆಯ ಇತರೆ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಅದಿಕೃತವಾಗಿ ಘೋಷಿಸಿತ್ತು.

ಟಿಕೆಟ್ ಸಿಗದಿದ್ದರೆ ಬೇಳೂರು ಬಂಡಾಯವೇಳುವ ಸಾಧ್ಯತೆ ಗಮನಿಸಿದ ಬಿಜೆಪಿ ವರಿಷ್ಠರು, ಅವರಿಗೆ ವಿಧಾನಪರಿಷತ್‍ಗೆ ಆಯ್ಕೆ ಮಾಡುವ ಭರವಸೆ ನೀಡಿದ್ದರು. ಆದರೆ ಇದಕ್ಕೆ ಬೇಳೂರು ಸಹಮತ ವ್ಯಕ್ತಪಡಿಸಿರಲಿಲ್ಲ. ಈ ಕಾರಣದಿಂದ ಬೇಳೂರಿಗೆ ಟಿಕೆಟ್ ನೀಡಿ, ಹಾಲಪ್ಪರನ್ನು ಎಂಎಲ್‍ಸಿಯಾಗಿಸುವ ನಿರ್ಧಾರವನ್ನು ಬಿಜೆಪಿ ಮಾಡಿತ್ತು.  ಇದಕ್ಕೆ ಹಾಲಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸಾಗರ ಕ್ಷೇತ್ರದ ಟಿಕೆಟ್ ಕೈ ತಪ್ಪಿದರೆ ಮುಂದಿನ ದಾರಿ ನೋಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಮತ್ತೊಂದೆಡೆ ಕಾಂಗ್ರೆಸ್ ಪಕ್ಷವು ಸೊರಬ ಕ್ಷೇತ್ರದ ಟಿಕೆಟ್ ಆಫರ್ ನೀಡಿತ್ತು. ಹಾಲಪ್ಪರೇನಾದರೂ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾದರೆ ಸಾಗರ, ಸೊರಬ, ತೀರ್ಥಹಳ್ಳಿ ಕ್ಷೇತ್ರಗಳಲ್ಲಿ ಪಕ್ಷದ ಮತಗಳಿಕೆಯ ಮೇಲೆ ಪರಿಣಾಮ ಬೀರುವುದನ್ನರಿತ ಬಿಜೆಪಿ ನಾಯಕರು, ಅವರ ಜೊತೆ ಸಮಾಲೋಚನೆ ನಡೆಸಿ ಟಿಕೆಟ್ ನೀಡುವ ಭರವಸೆ ನೀಡಿದ್ದರು.

ಇದು ಬೇಳೂರು ಕಣ್ಣು ಕೆಂಪಾಗುವಂತೆ ಮಾಡಿದೆ. ತಮಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ನಿಟ್ಟಿನಲ್ಲಿ ಆ ಪಕ್ಷದ ನಾಯಕರ ಬಳಿ ಮತ್ತೆ ತಮ್ಮ ದಾಳ ಉರುಳಿಸಲಾರಂಭಿಸಿದ್ದಾರೆ. ಆ ಪಕ್ಷದ ನಾಯಕರು ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.

ಕಾಗೋಡು ತಿಮ್ಮಪ್ಪ ಸ್ಪರ್ಧೆ ಅನುಮಾನ?

ಇನ್ನೊಂದೆಡೆ ಸಾಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದ ಸಚಿವ ಕಾಗೋಡು ತಿಮ್ಮಪ್ಪರ ಸ್ಪರ್ಧೆ ಸಾಧ್ಯತೆ ಅನುಮಾನ ಎಂಬ ಮಾತುಗಳು ಕಳೆದ ಕೆಲ ದಿನಗಳಿಂದ ಕೇಳಿಬರಲಾರಂಭಿಸಿವೆ. ವಯಸ್ಸು ಹಾಗೂ ಅನಾರೋಗ್ಯದ ಕಾರಣದಿಂದ ಅವರು ಚುನಾವಣಾ ಕಣಕ್ಕಿಳಿಯುವ ಬಗ್ಗೆ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲವೆಂದು ಹೇಳಲಾಗುತ್ತಿದೆ. ಒಂದು ವೇಳೆ ಕಾಗೋಡು ಕಣಕ್ಕಿಳಿಯದಿದ್ದರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವವರ್ಯಾರು? ಎಂಬ ಚರ್ಚೆಗಳು ನಡೆಯಲಾರಂಭಿಸಿವೆ. ಅವರ ಪುತ್ರಿ ಡಾ. ರಾಜ ನಂದಿನಿ ಸೇರಿದಂತೆ ಹಲವರು ಹೆಸರು ಮುಂಚೂಣಿಯಲ್ಲಿ ಕೇಳಿಬರಲಾರಂಭಿಸಿದೆ. ಕಾಗೋಡು ಸ್ಪರ್ಧಿಸುತ್ತಾರಾ? ಇಲ್ಲವೇ? ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.

ಜೆಡಿಎಸ್ ಅಭ್ಯರ್ಥಿ ಕುತೂಹಲ?

ಇನ್ನೊಂದೆಡೆ ಸಾಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ಕೂಡ ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ. ಸುಮಾರು ಒಂದು ತಿಂಗಳ ಹಿಂದೆಯೇ ಜಿಲ್ಲೆಯ ಆರು ಕ್ಷೇತ್ರಗಳಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಹೆಸರನ್ನು ಅದಿಕೃತವಾಗಿ ಪ್ರಕಟಿಸಿರುವ ಜೆಡಿಎಸ್ ಪಕ್ಷವು, ಸಾಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಮಾಡಿಲ್ಲ. ಬಿಜೆಪಿಯಲ್ಲಿ ನಡೆಯುತ್ತಿರುವ ಟಿಕೆಟ್ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಆ ಪಕ್ಷವು, ಬಿಜೆಪಿ ಅಭ್ಯರ್ಥಿ ಘೋಷಿಸಿದ ನಂತರ ತನ್ನ ಅಭ್ಯರ್ಥಿ ಹೆಸರು ಪ್ರಕಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವವರ್ಯಾರು? ಎಂಬುವುದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News