ಮೇಲುಕೋಟೆ ಫಲಿತಾಂಶ ಈಗಾಗಲೇ ಡಿಕ್ಲೇರ್ ಆಗಿದೆ ಎನಿಸುತ್ತಿದೆ: ಸಾಹಿತಿ ದೇವನೂರ ಮಹಾದೇವ

Update: 2018-04-05 18:01 GMT

ಮಂಡ್ಯ, ಎ.5: ದರ್ಶನ್ ಪುಟ್ಟಣ್ಣಯ್ಯ ಪರವಾದ ಜನರ ಅಲೆಯನ್ನು ಗಮನಿಸಿದರೆ ನನಗನ್ನಿಸುತ್ತದೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಈಗಾಗಲೇ ಡಿಕ್ಲೇರ್ ಆಗಿದೆ ಎಂದು ಸಾಹಿತಿ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ನಾಯಕ ದೇವನೂರ ಮಹಾದೇವ ಅಭಿಪ್ರಾಯಪಟ್ಟಿದ್ದಾರೆ. 

ನಗರದಲ್ಲಿ ಗುರುವಾರ ನಡೆದ ಪುಟ್ಟಣ್ಣಯ್ಯ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರ ಒಲವು ಪಕ್ಷಾತೀತವಾಗಿ ಪ್ರವಾಹೋಪಾಯದಲ್ಲಿ ನೀರಿನ ಚಿಲುಮೆಯಂತೆ ದರ್ಶನ್ ಪುಟ್ಟಣ್ಣಯ್ಯ ಪರವಾಗಿ ಚಿಮ್ಮುತ್ತಿದೆ ಎಂದರು. ಬೀದಿಬದಿಯ ಅಂಗಡಿಯಲ್ಲಿ ತಿಂಡಿ ತಿನ್ನುವ ದರ್ಶನ್ ಸರಳತೆ ಗಮನಿಸಿದರೆ ಈ ಹೊಸ ಕಾಲಕ್ಕೆ ಹೊಸ ನಾಯಕ ಹುಟ್ಟಿದ ಅನಿಸಿದೆ. ಆ ಕಾರಣಕ್ಕೇ ಇರಬೇಕು ಜನರ ಮತ್ತು ಯುವಪಡೆಯ ಒಲವು ದರ್ಶನ್ ಕಡೆಗೆ ಹರಿದಿದೆ ಎಂದು ಅವರು ಹೇಳಿದರು.

ಮೇಲುಕೋಟೆ ಕ್ಷೇತ್ರದಲ್ಲಿ ಆದಂತೆಯೇ ಯುವ ಜನತೆಯ ಅಲೆ ರಾಜ್ಯಾದ್ಯಂತ ಹಬ್ಬುವಂತಾಗಲು ದರ್ಶನ್ ವೇಗ ವರ್ಧಕ ವಾಗಬೇಕಾಗಿದೆ. ರಾಜ್ಯ ಯುವ ನಾಯಕತ್ವಕ್ಕಾಗಿ ಕಾಯುತ್ತಿದೆ. ಅದು ನಿಜವಾಗುವ ನಂಬಿಕೆ ನನಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ದರ್ಶನ್ ಜತೆಗೆ ‘ಸಂಪತ್ತಿಗೆ’ ಸವಾಲು ಹಾಕಿ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಲಿಂಗೇಗೌಡ ಅವರನ್ನೂ ಗೆಲ್ಲಿಸುವ ಮೂಲಕ ರಾಜ್ಯಕ್ಕೆ ಯುವ ನಾಯಕತ್ವದ ದಿಕ್ಸೂಚಿಯಾಗಬೇಕು ಎಂದು ಅವರು ಮತದಾರರಿಗೆ ಸಲಹೆ ನೀಡಿದರು.

ಮೇಲುಕೋಟೆ ಕ್ಷೇತ್ರಕ್ಕೆ ಪುಟ್ಟಣ್ಣಯ್ಯ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿದ್ದರು. ಇದುವರೆಗೂ ಪುಟ್ಟಣ್ಣಯ್ಯ ಅವರಿಗೆ ಓಟು ಹಾಕಿಲ್ಲ. ದರ್ಶನ್‍ಗೆ ಓಟು ಹಾಕಿ ಅವರ ಋಣ ತೀರಿಸಬೇಕೆಂದುಕೊಂಡಿದ್ದೇವೆಂದು ಕ್ಷೇತ್ರದ ಹಲವು ಜನರು ತೀರ್ಮಾನಿಸಿದ್ದಾರೆ ಎಂದು ದೇವನೂರು ಪ್ರಸ್ತಾಪಿಸಿದರು.

ಪುಟ್ಟಣ್ಣಯ್ಯ ಅವರ ಚುನಾವಣೆ ಪ್ರಚಾರಕ್ಕೆ ನಾನೊಬ್ಬ ಬರುತ್ತಿದ್ದೆ. ದರ್ಶನ್ ಪರ ಪ್ರಚಾರಕ್ಕೆ ನನ್ನ ಹೆಂಡತಿ ಸುಮಿತ್ರ, ಮಕ್ಕಳಾದ ಉಜ್ವಲ, ಡಾ.ಮಿತಾ, ಮೊಮ್ಮಗಳು ಬರುತ್ತಿದ್ದಾರೆ. ಈ ವಿದ್ಯಮಾನ ನಮ್ಮ ಮನೆಯಲ್ಲಿ ಮಾತ್ರವಲ್ಲ; ಇಡೀ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮನೆ-ಮನಗಳಲ್ಲಿ ನೈಜವಾಗಿ, ಪಕ್ಷಾತೀತವಾಗಿ ಸಂಭವಿಸಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News