ಪ್ರಮೋದ್ ಮುತಾಲಿಕ್ ಪ್ರಶ್ನೆಗಳಿಗೆ ಸಿ.ಟಿ.ರವಿ ಉತ್ತರಿಸುವರೇ: ಎಐಸಿಸಿ ಸದಸ್ಯ ಬಿ.ಎಂ.ಸಂದೀಪ್

Update: 2018-04-06 15:54 GMT

ಚಿಕ್ಕಮಗಳೂರು, ಎ.6: ಕಳೆದ 14 ವರ್ಷಗಳಿಂದ ಚಿಕ್ಕಮಗಳೂರು ಕ್ಷೇತ್ರದ ಶಾಸಕರಾಗಿ, ಮಂತ್ರಿಯಾಗಿ, ರಾಜ್ಯ ರಾಜಕಾರಣದಲ್ಲಿ ಹೆಸರು ಮಾಡಲು ಹೊರಟಿರುವ ಸಿ.ಟಿ.ರವಿಯವರು ಅವರ ಪೂರ್ವಾಶ್ರಮದ ಮಿತ್ರ ಪ್ರಮೋದ್ ಮುತಾಲಿಕ್ ರವರ ಪ್ರಶ್ನೆಗೆ ಉತ್ತರಿಸುವರೇ ಎಂದು ಎಐಸಿಸಿ ಸದಸ್ಯ ಬಿ.ಎಂ ಸಂದೀಪ್ ಪ್ರಶ್ನಿಸಿದ್ದಾರೆ. 

ಅವರು ಶುಕ್ರವಾರ ನಗರದ ಶಂಕರ ಪುರ ಬಡಾವಣೆಯಲ್ಲಿ ನಡೆದ ವಾರ್ಡ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಪ್ರಮೋದ್ ಮುತಾಲಿಕ್ ರವರು ಸಿ.ಟಿ ರವಿಯವರ ಧಿಡೀರ್ ಅಭಿವೃದ್ಧಿಯ ಬಗ್ಗೆ ಮಾಧ್ಯಮಗಳಲ್ಲಿ ಪ್ರಶ್ನಿಸಿದ್ದಾರೆ. ಸಾಮಾನ್ಯ ಕುಟುಂಬದ ಸಿ.ಟಿ ರವಿ ಇಂದು ಹಲವು ಕೋಟಿಗಳ ಮನೆ, ಕೋಟ್ಯಾಂತರ ರೂಪಾಯಿಗಳ ಕಾರು ಆಸ್ತಿ, ಪಾಸ್ತಿ ಎಲ್ಲಾ ಎಲ್ಲಿಂದ ಬಂತು ಎಂಬುದು ಮುತಾಲಿಕ್ ರವರ ಪ್ರಶ್ನೆ. ಇಂತಹ ಪ್ರಶ್ನೆ ಮುತಾಲಿಕ್‍ರವರಿಗೆ ಅಷ್ಟೇ ಅಲ್ಲ. ಬಹುತೇಕರ ಮುಂದೆ ಇವೆ. ಆದರೆ ರವಿ ಮಾತ್ರ ಇದ್ಯಾವುದನ್ನೂ ಕೇಳಿಸಿಕೊಳ್ಳದವರಂತೆ ರಾಜಕಾರಣ ಮಾಡುತ್ತಿದ್ದಾರೆ. ಅವರು ಉತ್ತರಿಸದಿದ್ದರೂ ಪರವಾಗಿಲ್ಲ. ಈ ಕ್ಷೇತ್ರದ ಜನತೆ ಈ ಬಾರಿ ಮತಗಳ ಮೂಲಕ ಅವರನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಕೆಲಸ ಮಾಡಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು. 

ರಾಜ್ಯದ ಬಹುತೇಕ ನಗರಸಭೆ ಹಾಗೂ ಪುರಸಭೆಗಳ ಕಾರ್ಮಿಕರುರಾಜ್ಯಸರ್ಕಾರದ ಅವಕಾಶದಡಿ ವಿದೇಶಗಳಿಗೆ ಹೋಗಿ ಆ ದೇಶಗಳ ಸ್ವಚ್ಛತೆ ಬಗ್ಗೆ ಅಧ್ಯಯನ ನಡೆಸಿ ಬಂದರು. ಆದರೆ ಚಿಕ್ಕಮಗಳೂರು ನಗರಸಭೆಯ ಕಾರ್ಮಿಕರಿಗೆ ಈ ಭಾಗ್ಯ ಯಾಕಿಲ್ಲ? ಇದಕ್ಕೆ ಶಾಸಕರು ಉತ್ತರಿಸಬೇಕು. ಜಿಲ್ಲೆಯ ಕಡೂರು, ತರೀಕೆರೆ ಮುಂತಾದ ಸ್ಥಳಿಯ ಸಂಸ್ಥೆಗಳಲ್ಲಿ ರಾಜ್ಯ ಸರ್ಕಾರ ನಿಗಧಿಗೊಳಿಸಿರುವ ವೇತನವನ್ನು ಕಾರ್ಮಿಕರಿಗೆ ನೀಡುತ್ತಿದ್ದರೆ ಚಿಕ್ಕಮಗಳೂರು ನಗರಸಭೆಯಲ್ಲಿ ನೀಡದಿರುವುದಕ್ಕೆ ಕಾರಣಗಳೇನು? ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಸಿ.ಟಿ ರವಿ ಉತ್ತರಿಸದೆ ದತ್ತ ಪೀಠ ಹೆಸರಿನಲ್ಲಿ ಭಾವನಾತ್ಮಕ ವಿಷಯಗಳನ್ನು ಹರಿಬಿಟ್ಟು ಚುನಾವಣಾ ರಾಜಕೀಯ ಮಾಡುವ ಅವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಬಿ.ಎಲ್.ಶಂಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್‍ಕುಮಾರ್, ಶಿವಕುಮಾರ್, ಶಿವಾನಂದ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News