ನಾನು ರಾಹುಲ್ ಗಾಂಧಿಯ ಗುಲಾಮನಲ್ಲ: ಕುಮಾರಸ್ವಾಮಿ

Update: 2018-04-07 14:48 GMT

ಯಾದಗಿರಿ, ಎ. 7: ನಾನು ರಾಜ್ಯದ ಆರು ಕೋಟಿ ಜನರ ಗುಲಾಮ. ಜನತೆ ಪ್ರಶ್ನಿಸಿದರೆ ಅದಕ್ಕೆ ಉತ್ತರ ನೀಡಲು ಸದಾ ಸಿದ್ಧ ಎಂದಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೇಳಿದ್ದಕ್ಕೆಲ್ಲ ಉತ್ತರ ನೀಡಲು ನಾನೇನು ಅವರ ಗುಲಾಮನಲ್ಲ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ಗೆ ಯಾವುದೇ ಸ್ಪಷ್ಟ ನಿಲುವು ಇಲ್ಲ ಎಂಬ ರಾಹುಲ್ ಗಾಂಧಿ ಟೀಕೆಗೆ, ನನ್ನ ಪಕ್ಷವನ್ನು ಟೀಕಿಸಲು ಅವರಿಗೇನು ಅಧಿಕಾರವಿದೆ. ಅವರು ಯಾರು ಎಂದು ಖಾರವಾಗಿ ಪ್ರಶ್ನಿಸಿದರು.

ಕಾಂಗ್ರೆಸ್ ನಿಲುವೇನು ಎಂಬುವುದೆ ರಾಹುಲ್ ಗಾಂಧಿಗೆ ಗೊತ್ತಿಲ್ಲ. ಇನ್ನೂ ಜೆಡಿಎಸ್ ನಿಲುವು ಕಟ್ಟಿಕೊಂಡು ಅವರಿಗೇನಾಗಬೇಕು ಎಂದ ಕುಮಾರಸ್ವಾಮಿ, ಐದು ವರ್ಷದ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಏನು ಸಾಧಿಸಿದೆ ಎಂಬುದನ್ನು ತೋರಿಸಲಿ ಎಂದು ಸವಾಲು ಹಾಕಿದರು.

ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳ ಸರ್ವನಾಶಕ್ಕೆ ನಿಂತಿದೆ. ಪ್ರಸಕ್ತ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷದ ಶಕ್ತಿಯ ಪ್ರದರ್ಶನವಾಗಲಿದೆ ಎಂದ ಅವರು, ಹೈ.ಕ.ಭಾಗದ ಆರು ಮಂದಿ ಶಾಸಕರು ಪಕ್ಷ ತೊರೆದಿದ್ದು, ಅವರನ್ನು ಉಳಿಸಿಕೊಳ್ಳಲು ನನ್ನ ಬಳಿ ಹಣ-ಅಧಿಕಾರ ಎರಡೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನನ್ನನ್ನು ಸೋಲಿಸಲು ಸಿಎಂ ಸಿದ್ದರಾಮಯ್ಯ ಒಂದು ದಿನವಲ್ಲ, ರಾಮನಗರಕ್ಕೆ ಬಂದು ಒಂದು ವಾರ ಬರಲಿ, ಅವರಿಗೆ ಆಹ್ವಾನ ನೀಡುವೆ ಎಂದ ಎಚ್‌ಡಿಕೆ, ಸಿದ್ದರಾಮಯ್ಯನವರಿಗೆ ಹಣದ ಮದ ಮತ್ತು ಅಧಿಕಾರದ ದರ್ಪ. ಹೀಗಾಗಿ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News