ವಿಚ್ಛೇದನ ದೂರಿನಲ್ಲಿ ಎರಡನೆ ಪತ್ನಿ ಪ್ರತಿವಾದಿಯಾಗುವ ಅವಶ್ಯಕತೆಯಿಲ್ಲ : ಹೈಕೋರ್ಟ್

Update: 2018-04-08 12:24 GMT

ಬೆಂಗಳೂರು, ಎ.8: ಕ್ರೌರ್ಯ ಆಧಾರದಲ್ಲಿ ಸಲ್ಲಿಕೆಯಾಗುವ ವಿಚ್ಛೇದನ ಪ್ರಕರಣಗಳಲ್ಲಿ 2ನೆ ಪತ್ನಿಯನ್ನು ಪ್ರತಿವಾದಿಯನ್ನಾಗಿಸಲು ಬರುವುದಿಲ್ಲವೆಂದಿರುವ ಹೈಕೋರ್ಟ್, ಮೊದಲ ಪತ್ನಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ.

ಚನ್ನರಾಯಪಟ್ಟಣ ಮೂಲದ ವ್ಯಕ್ತಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಆತನ 2ನೆ ಪತ್ನಿ ಹಾಗೂ ಮಗನನ್ನೂ ಪ್ರತಿವಾದಿಯನ್ನಾಗಿಸುವಂತೆ ಕೋರಿ ಮೊದಲ ಪತ್ನಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹಾಸನ ಪ್ರಧಾನ ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿದ್ದ ಮಹಿಳೆ, ಪತಿಯ ಎರಡನೆ ಪತ್ನಿ ಹಾಗೂ ಮಗನನ್ನೂ ವಿಚಾರಣೆ ನಡೆಸುವ ಅಗತ್ಯವಿದೆ. ಈ ಕುರಿತು ಅಧಿನ ನ್ಯಾಯಾಲಯಕ್ಕೆ ನಿರ್ದೇಶನ ನೀಡುವಂತೆ ಕೊರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣವೇನು: ಚನ್ನರಾಯಪಟ್ಟಣದ ಖಾಸಗಿ ಕಂಪೆನಿ ಉದ್ಯೊಗಿಯೊಬ್ಬರು ತಮ್ಮಿಂದ ದೂರ ಉಳಿದ ಆರೊಪದಲ್ಲಿ ಪತ್ನಿಯಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ನೋಟಿಸ್ ಜಾರಿಗೊಳಿಸಲಾಗಿತ್ತಾದರೂ ಪತ್ನಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡಲು ಹಾಜರಾಗಿರಲಿಲ್ಲ. ಇದರಿಂದಾಗಿ ಅಧಿನ ನ್ಯಾಯಾಲಯ ಪತಿ ಪರ ಏಕಪಕ್ಷೀಯ ಆದೇಶ ನೀಡಿತ್ತು.

ಬಳಿಕ ಆ ಆದೇಶ ರದ್ದುಪಡಿಸಿದ್ದ ಹೈಕೋರ್ಟ್, ಪ್ರಕರಣವನ್ನು ಮತ್ತೆ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಈ ಮಧ್ಯೆ ವಿಚ್ಛೇದನ ಪ್ರಕರಣದಲ್ಲಿ ತಮ್ಮ ಪತಿಯ 2ನೆ ಪತ್ನಿ ಹಾಗೂ ಮಗನನ್ನೂ ಪ್ರತಿವಾದಿಯನ್ನಾಗಿಸಬೇಕೆಂದು ಕೋರಿ ಮಹಿಳೆ ಅಧಿನ ನ್ಯಾಯಾಲಯ್ಕಕೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಜಾಗೊಳಿಸಿದ್ದ ನ್ಯಾಯಾಲಯ, ಯಾವುದೇ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯ ವಿಚಾರಣೆ ಅಗತ್ಯವೆನಿಸಿದಲ್ಲಿ ಮಾತ್ರ ಪ್ರತಿವಾದಿ ಆಗಿಸಬಹುದು. ಅರ್ಜಿದಾರರು ಉದ್ದೇಶಿತ ಪ್ರತಿವಾದಿಗಳಿಂದ ಯಾವುದೇ ಪರಿಹಾರ ಕೋರಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ಕ್ರೌರ್ಯದ ಆಧಾರದ ಮೇಲೆ ದಾಖಲಾಗುವ ವಿಚ್ಛೇದನ ಪ್ರಕರಣಗಳಲ್ಲಿ ವ್ಯಭಿಚಾರ ಆಧಾರದಲ್ಲಿ ಪತಿಯ ಎರಡನೆ ಪತ್ನಿಯನ್ನು ಪ್ರತಿವಾದಿಯನ್ನಾಗಿಸಲು ಅವಕಾಶವಿಲ್ಲ. ಪತ್ನಿಯು ತನ್ನ ಪತಿಯ ದ್ವಿಪತ್ನಿತ್ವ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಜೊತೆಗೆ ಎರಡನೆ ಮದುವೆಯನ್ನು ಅನೂರ್ಜಿತಗೊಳಿಸುವಂತೆ ಸಿವಿಲ್ ಮೊಕದ್ದಮೆ ದಾಖಲಿಸಲು ಮಾತ್ರ ಅವಕಾಶವಿದೆ ಎಂದು ಕೌಟುಂಬಿಕ ನ್ಯಾಯಾಲಯದ ವಕೀಲೆ ರಾಜರಾಜೇಶ್ವರಿ ಅವರು ಹೇಳಿದ್ದಾರೆ.

ಪತಿ ಅಥವಾ ಪತ್ನಿ ಬೇರೊಂದು ಸಂಬಂಧ ಹೊಂದಿದ್ದ ಸಂದರ್ಭದಲ್ಲಿ ಸಲ್ಲಿಸಲಾಗುವ ವಿಚ್ಛೆದನ ಪ್ರಕರಣಗಳಲ್ಲಿ ಯಾವ ವ್ಯಕ್ತಿಯ ಜತೆ ಸಂಬಂಧವಿರುತ್ತದೊ ಅವರನ್ನೂ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿಸಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ಎರಡು ಪ್ರತ್ಯೆಕ ಪ್ರಕರಣಗಳಲ್ಲಿ ತೀರ್ಪು ನೀಡಿದೆ. ಹೀಗಿದ್ದರೂ ಅಧಿನ ನ್ಯಾಯಾಲಯ, ನನ್ನ ಅರ್ಜಿ ವಜಾಗೊಳಿಸಿದೆ ಎಂದು ಮಹಿಳೆ ಆರೊಪಿಸಿದ್ದರು.

ಪತಿ ಪರ ವಾದಿಸಿದ ವಕೀಲರು, ಹೈಕೋರ್ಟ್ ವಿಭಾಗೀಯ ಪೀಠದ ಆದೇಶಗಳು, ಈ ಪ್ರಕರಣಕ್ಕೆ ಅನ್ವಯವಾಗುವುದಿಲ್ಲ. ಅರ್ಜಿದಾರ ಮಹಿಳೆ ಆರೊಪಿಸಿರುವಂತೆ ಪತಿಯು ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾರೆಂಬ ಕಾರಣಕ್ಕೆ ಈ ವಿಚ್ಛೇದನ ಅರ್ಜಿ ಸಲ್ಲಿಸಲಾಗಿಲ್ಲ. ಕ್ರೌರ್ಯದ ಆಧಾರದಲ್ಲಿ ಸಲ್ಲಿಸುವ ವಿಚ್ಛೇದನ ಅರ್ಜಿಯಲ್ಲಿ ಎರಡನೆ ಪತ್ನಿಯನ್ನು ಪ್ರತಿವಾದಿಯನ್ನಾಗಿಸಲು ಅವಕಾಶವಿಲ್ಲವೆಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News