ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಜನತೆ ಉತ್ಸುಕರಾಗಿದ್ದಾರೆ : ಮಾಜಿ ಸಚಿವ ಎಸ್.ಎ. ರವೀಂದ್ರನಾಥ್

Update: 2018-04-08 18:28 GMT

ದಾವಣಗೆರೆ,ಎ.8:ಕಾಂಗ್ರೆಸ್ಸಿನ ದುರಾಡಳಿತ, ಜನ ವಿರೋಧಿ ನೀತಿಗಳಿಂದಾಗಿ ಭ್ರಮನಿರಸನಗೊಂಡ ರಾಜ್ಯದ ಜನತೆ ಬಿಜೆಪಿಯತ್ತ ಒಲವು ತೋರುತ್ತಿದ್ದು, ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಉತ್ಸುಕರಾಗಿರುವುದು ಕಂಡು ಬರುತ್ತಿದೆ ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ತಿಳಿಸಿದರು. 

ಇಲ್ಲಿನ ವಿನೋಬ ನಗರದ 1ನೇ ಮುಖ್ಯರಸ್ತೆಯ ಶ್ರೀ ಚೌಡೇಶ್ವರಿ ದೇವಸ್ಥಾನದ ಬಳಿ ರವಿವಾರ ಬಿಜೆಪಿ ಹಮ್ಮಿಕೊಂಡಿದ್ದ ಮುಷ್ಟಿ ಅಕ್ಕಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದಾವಣಗೆರೆ ನಗರ, ಜಿಲ್ಲೆಯಲ್ಲಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ ಜನತೆ ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ ಎಂದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಆಳ್ವಿಕೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಹಿಂದು ಸಂಘಟನೆ, ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದ ಪ್ರಕರಣಗಳ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ, ಮೆದುಧೋರಣೆ ತೋರಿದ ಕಾಂಗ್ರೆಸ್ಸಿಗರಿಗೆ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಸತತ ಬರದಿಂದ ಕಂಗೆಟ್ಟ ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ದಾವಣಗೆರೆಯಲ್ಲೇ ಮುಷ್ಟಿ ಅಕ್ಕಿ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಮೊನ್ನೆಯಷ್ಟೇ ದೊಡ್ಡಬಾತಿಯಲ್ಲಿ ಮುಷ್ಟಿ ಅಕ್ಕಿ ಅಭಿಯಾನ ಕೈಗೊಳ್ಳಲಾಗಿತ್ತು ಎಂದರು. 

ದಾವಣಗೆರೆ ಉತ್ತರ, ದಕ್ಷಿಣ ಸೇರಿದಂತೆ ಜಿಲ್ಲೆಯ ಎಂಟೂ ಕ್ಷೇತ್ರದಲ್ಲೂ ಬಿಜೆಪಿ ಜಯ ಸಾಧಿಸುವ ಮೂಲಕ ಹಳೆಯ ಲಯಕ್ಕೆ ಮರಳಲಿದೆ. ಸಂಸದ ಸಿದ್ದೇಶ್ವರ್, ತಾವು ಸೇರಿದಂತೆ ಹಿರಿಯ ನಾಯಕರು, ಮಾಜಿ ಶಾಸಕರು, ಮಾಜಿ ಸಚಿವರು, ಅಭ್ಯರ್ಥಿಗಳು, ಜಿಲ್ಲಾ, ತಾಲೂಕು ಸೇರಿದಂತೆ ಎಲ್ಲಾ ಮೋರ್ಚಾ ಪದಾಧಿಕಾರಿಗಳೂ ಬಿಜೆಪಿ ಗೆಲುವಿಗೆ ಕಂಕಣಬದ್ಧರಾಗಿ ದುಡಿಯಲಿದ್ದಾರೆ ಎಂದರು. 

ಪಾಲಿಕೆ ಮಾಜಿ ಸದಸ್ಯ ಡಿ.ಎಂ. ಕಾಂತರಾಜ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೆಬಾಳ್, ಉತ್ತರ ಅಧ್ಯಕ್ಷ ಮುಕುಂದಪ್ಪ, ಓಬಿಸಿ ಜಿಲ್ಲಾ ಕಾರ್ಯದರ್ಶಿ ಎಂ.ಮನು, ಉತ್ತರ ಕಾರ್ಯದರ್ಶಿ ಸವಿತಾ ರವಿಕುಮಾರ, ಶಿವರಾಜ ಪಾಟೀಲ, ವಾರ್ಡ್ ಅಧ್ಯಕ್ಷ ಎಸ್.ಮಂಜುನಾಥ, ವೃಷಭೇಂದ್ರ ಗೌಡ, ಆರ್.ಎಂ. ವೀರಯ್ಯ, ರಾಜಶೇಖರ ಸ್ವಾಮಿ, ಕೋಗುಂಡಿ ಮಂಜಣ್ಣ, ಸುರೇಶ, ಡಿ.ಎಸ್. ರವಿ, ಗೌರಮ್ಮ ಪಾಟೀಲ, ಎಸ್.ಆರ್.ವೀಣಾ, ಮಮತಾ, ಗಾಯತ್ರಮ್ಮ, ಪುಷ್ಪಾ ವೀರೇಶ, ಮಾಲಾ ಹನುಮಂತಪ್ಪ ಇತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News