ಶಿವಮೊಗ್ಗ ಜಿಲ್ಲೆಯಲ್ಲಿ 'ಮರ ಪಟ್ಟಾ' ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸಾಮಾಜಿಕ ಅರಣ್ಯ ವಿಭಾಗದಿಂದ ಕ್ರಮ

Update: 2018-04-08 18:34 GMT

ಶಿವಮೊಗ್ಗ, ಏ. 8: ವಿವಿಧ ಯೋಜನೆಗಳಡಿ ರಸ್ತೆ ಬದಿ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಬೆಳೆಸಿರುವ ಮರ -ಗಿಡಗಳ ಮಾಲೀಕತ್ವವನ್ನು ಸಾರ್ವಜನಿಕರಿಗೆ ನೀಡುವ ವಿನೂತನ 'ಮರ ಪಟ್ಟಾ' ಯೋಜನೆಯನ್ನು ಪ್ರಸಕ್ತ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ ಪರಿಣಾಮಕಾರಿ ಅನುಷ್ಠಾನಕ್ಕೆ ಸಾಮಾಜಿಕ ಅರಣ್ಯ ವಿಭಾಗವು ಮುಂದಾಗಿದ್ದು, ಈ ಕುರಿತಂತೆ ಪೂರ್ವಭಾವಿ ಸಿದ್ದತೆಗಳನ್ನು ಮಾಡಿಕೊಳ್ಳಲಾರಂಭಿಸಿದೆ. 

ಮುಂಬರುವ ಮಳೆಗಾಲ ಆರಂಭಕ್ಕೂ ಮುನ್ನವೇ 'ಮರ ಪಟ್ಟಾ' ಯೋಜನೆಯಡಿ, ಭಾರೀ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಮರಗಳ ಮಾಲೀಕತ್ವ ನೀಡಲು ಸಾಮಾಜಿಕ ಅರಣ್ಯ ವಿಭಾಗ ರೂಪುರೇಷೆ ಸಿದ್ದಪಡಿಸಲಾರಂಭಿಸಿದೆ. 'ಮರ ಪಟ್ಟಾ' ನೀಡಲು ಪ್ರತ್ಯೇಕ ಅರ್ಜಿಯನ್ನು ಕೂಡ ಸಿದಪಡಿಸುತ್ತಿದೆ. ಜೊತೆಗೆ ಪರಿಸರಾಸಕ್ತರು, ಸಾರ್ವಜನಿಕರ ಅಭಿಪ್ರಾಯ ಆಲಿಸಿ ಯೋಜನೆ ಅನುಷ್ಠಾನಕ್ಕೆ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. 

'ಸರ್ಕಾರದ ಆದೇಶದಂತೆ ಮರ ಪಟ್ಟಾ ಯೋಜನೆಯಡಿ ಮರಗಳ ಮಾಲೀಕತ್ವವನ್ನು ಆಸಕ್ತ ಸಾರ್ವಜನಿಕರಿಗೆ ನೀಡಲಾಗುತ್ತದೆ. ಈ ಯೋಜನೆಯಡಿ ಅರಣ್ಯ ಇಲಾಖೆ ಬೆಳೆಸಿದ ರಸ್ತೆ ಬದಿ, ನಾಲಾ ದಂಡೆ, ನಗರ ಹಸಿರೀಕರಣ ಯೋಜನೆಯಡಿ ವಿವಿಧ ಬಡಾವಣೆಗಳಲ್ಲಿ ಬೆಳೆಸಿದ ಮರಗಳಿಗೆ ಮರ ಪಟ್ಟಾ  ನೀಡಲಾಗುತ್ತದೆ' ಎಂದು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಐ.ಎಂ.ನಾಗರಾಜ್‍ರವರು ಮಾಹಿತಿ ನೀಡುತ್ತಾರೆ. 

ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಈ ಯೋಜನೆಯ ವಿವರ ನೀಡಿದ್ದಾರೆ. 'ಮರ ಪಟ್ಟಾ' ಹೊಂದಲು ಇಚ್ಚಿಸುವ ಫಲಾನುಭವಿಯು ಒಂದು ಮರ/ಗಿಡಕ್ಕೆ 10 ರೂ. ಶುಲ್ಕ ಪಾವತಿಸಬೇಕು. ಹಾಗೆಯೇ ಅರಣ್ಯ ಇಲಾಖೆ ನೀಡುವ ಅರ್ಜಿಯನ್ನು ಭರ್ತಿ ಮಾಡಿ ವಲಯ ಕಚೇರಿಗೆ ಸಲ್ಲಿಸಬೇಕು' ಎಂದು ತಿಳಿಸಿದ್ದಾರೆ. 
ಸರ್ಕಾರಿ ಪ್ರದೇಶದ ರಸ್ತೆ ಬದಿ, ನಾಲಾ ಬದಿ, ನಾಲೆಗಳ ದಂಡೆ ಹಾಗೂ ನಗರ ಬಡಾವಣೆ ರಸ್ತೆ ಬದಿಯಿರುವ ಪ್ರದೇಶಗಳ ಮರಗಳಿಗೆ ಮಾತ್ರ ಮರ ಪಟ್ಟಾ ನೀಡಲಾಗುತ್ತದೆ. ಆದರೆ ಸರ್ಕಾರಿ ಜಮೀನಿನ ಮೇಲೆ ಹಕ್ಕು ಇರುವುದಿಲ್ಲ. ಈ ಮಾಹಿತಿಯನ್ನು ಸ್ಪಷ್ಟವಾಗಿ ಪಟ್ಟಾದಾರರಿಗೆ ನೀಡಲಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ. 

ಜವಾಬ್ದಾರಿ: ನೆಟ್ಟ ಗಿಡ - ಸಸಿ ಹಾಗೂ ಮರಗಳ ಸಂಪೂರ್ಣ ಆರೈಕೆ ಮತ್ತು ರಕ್ಷಣೆ ಸಂಬಂಧಿಸಿದ ಪಟ್ಟಾದಾರರದ್ದಾಗಿರುತ್ತದೆ. ಮರ ಪಟ್ಟಾ ಪಡೆದುಕೊಂಡ ಮರದಲ್ಲಿ ಬಿಡುವ ಹಣ್ಣು-ಹಂಪಲು ಇತ್ಯಾದಿಗಳನ್ನು ಸಂಗ್ರಹಿಸುವ ಸಂಪೂರ್ಣ ಹಕ್ಕನ್ನು ಪಟ್ಟಾದಾರರು ಹೊಂದಿರುತ್ತಾರೆ. ಹಾಗೆಯೇ ಮರಗಳು ಬಿದ್ದಾಗ, ಒಣಗಿದಾಗ, ಕಟಾವು ಮಾಡಿದ ಸಂದರ್ಭದಲ್ಲಿ ಬರುವ ಉತ್ಪನ್ನದ ಶೇ. 75 ರಷ್ಟನ್ನು ಪಟ್ಟಾದಾರರು ಹಾಗೂ ಉಳಿದ ಶೇ. 25 ರಷ್ಟುನ್ನು ಸರ್ಕಾರಕ್ಕೆ ಹಂಚಿಕೆ ಮಾಡಲಾಗುತ್ತದೆ. ಮರಗಳನ್ನು ಕಡಿಯುವ ಸಂದರ್ಭದಲ್ಲಿ ಅನ್ವಯಿಸುವ ಸರ್ಕಾರಿ ನಿಯಮಗಳನ್ನು ಈ ಯೋಜನೆಯಡಿಯೂ ಅನುಸರಿಸಬಹುದಾಗಿದೆ ಎಂದು ತಿಳಿಸಿದ್ದಾರೆ. 

ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಅಥವಾ ಯಾವುದೇ ರೀತಿಯ ಅರಣ್ಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ ಮರ ಪಟ್ಟಾವನ್ನು ರದ್ದುಪಡಿಸುವ ಅಧಿಕಾರ ಅರಣ್ಯ ಇಲಾಖೆಗಿದೆ. ಹಾಗಿಯೇ ಪಟ್ಟಾದ ಯಾವುದೇ ನಿಯಮಗಳನ್ನು ಕಾಲಕಾಲಕ್ಕೆ ಮಾರ್ಪಡಿಸುವ ಅಧಿಕಾರ ಕೂಡ ಇಲಾಖೆ ಹೊಂದಿದೆ ಎಂದು ವಿವರ ನೀಡಿದ್ದಾರೆ. 

ಮರಪಟ್ಟಾ ಯೋಜನೆಯನ್ನು ಮಂಜೂರು ಮಾಡುವುದು ಅಥವಾ ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದ ಎಲ್ಲ ವಿವಾದಗಳನ್ನು ಸಂಬಂಧಪಟ್ಟ ವಿಭಾಗದ ಡಿಸಿಎಫ್‍ರವರು ಕೈಗೊಳ್ಳುವ ನಿರ್ಧಾರವೇ ಅಂತಿಮವಾದುದಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಆಸಕ್ತರು ಸಾಮಾಜಿಕ ಅರಣ್ಯ ವಿಭಾಗದ ಕಚೇರಿಗೆ ಭೇಟಿಯಿತ್ತು ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಇದೇ ಸಂದರ್ಭದಲ್ಲಿ ಐ.ಎಂ.ನಾಗರಾಜ್‍ರವರು ತಿಳಿಸಿದ್ದಾರೆ. 

'ವ್ಯಾಪಕ ಜನಜಾಗೃತಿ' : ಉಪ ಅರಣ್ಯ ಸಂರಕ್ಷಣಾಧಿಕಾರಿ ಐ.ಎಂ.ನಾಗರಾಜ್
 'ಗಿಡ - ಮರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಮರ ಪಟ್ಟಾ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಪಡೆದುಕೊಳ್ಳುವ ಮಹತ್ತರ ಉದ್ದೇಶ ಈ ಯೋಜನೆಯದ್ದಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ವ್ಯಾಪಕ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಸಂಘಗಳಿಗೂ ಅವಕಾಶ ಮಾಡಿಕೊಡಲಾಗುವುದು. ಈ ಕುರಿತಂತೆ ಸಾರ್ವಜನಿಕರ ಸಲಹೆ, ಅಭಿಪ್ರಾಯಗಳನ್ನು ಕೂಡ ಪಡೆಯಲಾಗುವುದು. ಅತ್ಯಂತ ಪರಿಣಾಮಕಾರಿಯಾಗಿ, ವ್ಯವಸ್ಥಿತವಾಗಿ ಯೋಜನೆ ಅನುಷ್ಠಾನಗೊಳಿಸಲಾಗುವುದು' ಎಂದು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಐ.ಎಂ.ನಾಗರಾಜ್‍ರವರು ತಿಳಿಸಿದ್ದಾರೆ. 

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News