ಯುವ ಜನಾಂಗದ ಚಿತ್ತ ಕಾಂಗ್ರೆಸ್‍ನತ್ತ: ವಿಧಾನ ಪರಿಷತ್ ಸದಸ್ಯೆ ಮೋಟಮ್ಮ

Update: 2018-04-09 12:03 GMT

ಮೂಡಿಗೆರೆ, ಎ.9: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಭ್ರಷ್ಟಾಚಾರ ರಹಿತವಾಗಿ ಉತ್ತಮ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದೆ. ಸರಕಾರ ಹಿಂದೆಂದೂ ಕಂಡರಿಯದಂತಹ ಜನಪರವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಕ್ಷೇತ್ರದ ಹಾಲಿ ಶಾಸಕರು ಅಭಿವೃದ್ಧಿ ಮರೆತಿದ್ದಾರೆ. ಈ ಕಾರಣಕ್ಕೆ ಬಿಜೆಪಿ ಮತ್ತು ಜೆಡಿಎಸ್‍ನಲ್ಲಿರುವ ಯುವ ಕಾರ್ಯಕರ್ತರು ಸ್ವಇಚ್ಚೆಯಿಂದ ಕಾಂಗ್ರೆಸ್‍ಗೆ ಸೇರ್ಪಡೆಯಾಗುತ್ತಿದ್ದಾರೆ. ಇದರಿಂದಾಗಿ ಕ್ಷೇತ್ರದಾದ್ಯಂತ ಕಾಂಗ್ರೆಸ್‍ಗೆ ಮತ್ತಷ್ಟು ಶಕ್ತಿ ಬರುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ತಿಳಿಸಿದ್ದಾರೆ.

ತಾಲೂಕಿನ ಗೋಣಿಬೀಡು ಸೂಪರ್ ಕನ್ವೆನ್‍ಷನ್ ಹಾಲ್‍ನಲ್ಲಿ ಸೋಮವಾರ ಏರ್ಪಡಿಸಿದ್ದ ಚುನಾವಣೆ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ನೋಟು ಅಮಾನ್ಯ, ಜಿಎಸ್‍ಟಿ, ಪೆಟ್ರೋಲ್, ಡೀಜಲ್ ಬೆಲೆ ದುಬಾರಿ, ಪರಿಣಾಮ ಜನರು ತತ್ತರಿಸಿ ಹೋಗಿದ್ದಾರೆ. ಆದರೆ ಸಿದ್ದರಾಮಯ್ಯ ಸರಕಾರದ ಪ್ರಣಾಳಿಕೆಯಲ್ಲಿ ತಿಳಿಸಿದ 165 ಯೋಜನೆಯನ್ನು ಜಾರಿಗೊಳಿಸಿ ದಲಿತರು, ಕೂಲಿ ಕಾರ್ಮಿಕರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದ ಬಡಜನರ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಬೇರೆ ಪಕ್ಷಕ್ಕೆ ಅಧಿಕಾರ ನೀಡಿದರೆ ಮತ್ತೆ ಬಡಜನರ ಅಭಿವೃದ್ಧಿ ಸಾಧ್ಯವಿಲ್ಲ. ನುಡಿದಂತೆ ನಡೆಯುವ ಕಾಂಗ್ರೆಸ್ ಸರಕಾರದ ಆಡಳಿತವನ್ನು ಇಡೀ ರಾಜ್ಯದ ಜನತೆ ಒಪ್ಪಿದ್ದಾರೆ. ಹಾಗಾಗಿ ಬೇರೆ ಪಕ್ಷದಿಂದ ಯುವ ಪೀಳಿಗೆಯ ದಂಡು ಕಾಂಗ್ರೆಸ್‍ಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯುವುದರಲ್ಲಿ ಸಂಶಯವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಚಾರ ಸಮಿತಿ ಅಧ್ಯಕ್ಷ ಪ್ರಭಾಕರ್ ಮಾತನಾಡಿ, ಸ್ವಾತಂತ್ರ್ಯ ಬಂದ ನಂತರ ದೇವರಾಜು ಅರಸು ಕೊಟ್ಟಂತಹ ಕಾರ್ಯಕ್ರಮವನ್ನು ಸಿದ್ದರಾಮಯ್ಯ ಅವರು ಕೊಟ್ಟಿದ್ದಾರೆಂಬುದು ಜನತೆಗೆ ತಿಳಿದಿದೆ. ಆದರೂ ಸಹ ಬೂತ್ ಮಟ್ಟದ ಕಾರ್ಯಕರ್ತರು ಸುಮ್ಮನೆ ಕೂರದೇ ಮತದಾರರನ್ನು ಕಾಂಗ್ರೆಸ್ ಮತವನ್ನಾಗಿ ಪರಿವರ್ತನೆ ಮಾಡಬೇಕು. ಯಾವುದೇ ಭಿನ್ನಾಭಿಪ್ರಾಯನ ಪ್ರದರ್ಶನ ಮಾಡದೇ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಮನವಿ ಮಾಡಿದರು.

ಹಿರಿಯ ಮುಖಂಡ ಬಿಎಸ್.ಜಯರಾಂ ಮಾತನಾಡಿ, ಮೋಟಮ್ಮ ಅವರು ಸಚಿವರಾಗಿದ್ದಾಗ ಮಹಿಳೆಯರ ಅಭಿವೃದ್ಧಿಗಾಗಿ ಸ್ತ್ರೀಶಕ್ತಿ ಸಂಘವನ್ನು ಹುಟ್ಟು ಹಾಕಿ ದೇಶಾದ್ಯಂತ ಮನೆಮಾತನಾಗಿದ್ದರು. ಅಲ್ಲದೆ ಹೇಮಾವತಿ ನದಿಯಿಂದ ಕುಡಿಯುವ ನೀರಿನ ಯೋಜನೆ, ಎಲ್ಲಾ ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಾಣ ಸೇರಿದಂತೆ ಅನೇಕ ಜನಪರ ಕೆಲಸ ಮಾಡಿದ್ದಾರೆ. ಅಲ್ಲದೆ ಎಂಎಸ್‍ಸಿ ಆದಾಗಿನಿಂದಲೂ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಪಡಿಸಿದ್ದಾರೆ. ಹಾಗಾಗಿ ಈ ಬಾರಿ ಮೋಟಮ್ಮ ಅವರನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಕೈಬಲಪಡಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದ ಅವರು, ಮೋಟಮ್ಮ ಅವರು ಏ.20 ಅಥವಾ 21ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅಂದು 3 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. 

ಈ ವೇಳೆ 200ಕ್ಕೂ ಅಧಿಕ ಸಂಖ್ಯೆಯಲ್ಲಿ ವಿವಿಧ ಪಕ್ಷದಿಂದ ಕಾಂಗ್ರೆಸ್‍ಗೆ ಮೋಟಮ್ಮ ಅವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು. ವಿಶೇಷವಾಗಿ ಚುನಾವಣೆ ಪೂರ್ವಭಾವಿ ಸಭೆಯನ್ನು ವಿವಿಧ ಪಕ್ಷದಿಂದ ಸೇರ್ಪಡೆಗೊಂಡ ಮನು ಮರೆಬೈಲ್, ಪ್ರಹ್ಲಾದ್, ನರೇಂದ್ರ, ಜಮ್‍ಶೀದ್, ಪಾಪಣ್ಣ, ಸತೀಶ್, ಸುಧೀರ್, ಬೋಬಣ್ಣ ಅವರ ತಂಡ ಆಯೋಜಿಸಿದ್ದರು. 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಶೇಖರ್, ಗೋಣಿಬೀಡು ಹೋಬಳಿ ಅಧ್ಯಕ್ಷ ಮಹೇಶ್, ಗೋಣಿಬೀಡು ಗ್ರಾ.ಪಂ. ಅಧ್ಯಕ್ಷೆ ಭಾರತೀ ಪ್ರಕಾಶ್, ಮುಖಂಡರಾದ ಎಂ.ಪಿ.ಮನು, ವರದೇಗೌಡ, ಬಿ.ಕೆ.ಚಂದ್ರೇಗೌಡ, ರಘು, ಜಕಾವುಲ್ಲಾ, ದೀಕ್ಷಿತ್ ಕಣಚೂರು, ಎಂ.ಸಿ.ನಾಗೇಶ್, ವೆಂಕಟರಾಮ್, ಸಂಪತ್ತು, ನಾರಾಯಣಗೌಡ, ಕೆ.ಟಿ.ಜಗದೀಶ್‍ಗೌಡ, ಸುಬ್ರಾಯಗೌಡ ಮತ್ತಿತರರು ಉಪಸ್ಥಿತರಿದ್ದರು. 

ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಸುಳ್ಳು ಮಾತುಗಳನ್ನು ಕೇಳಿ ಕೇಳಿ ಸಾಕಾಗಿ ಹೋಗಿದೆ. ನೇರವಾಗಿ ನುಡಿಯುವ ಮೋಟಮ್ಮ ಅವರ ಬಗ್ಗೆ ಇದ್ದ ತಪ್ಪು ಭಾವನೆಯಿಂದ ಕ್ಷೇತ್ರ ಅಭಿವೃದ್ಧಿ ಕಾಣದೆ ಬಡವಾಗಿದೆ. ಕಾಂಗ್ರೆಸ್‍ನ ಐದು ವರ್ಷಗಳ ಜನಪರ ಆಡಳಿತದಿಂದ ಎಲ್ಲೆಡೆ ಮತದಾರರು ಕಾಂಗ್ರೆಸ್‍ನತ್ತ ಒಲವು ತೋರುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಮತ್ತೆ ಸಿಎಂ ಸ್ಥಾನದಲ್ಲಿ ನೋಡಲು ಜನತೆ ಕಾತುರರಾಗಿದ್ದಾರೆ. ಹಾಗಾಗಿ ಈ ಬಾರಿ ಮೋಟಮ್ಮ ಅವರನ್ನು ಗೆಲ್ಲಿಸಲು ಯುವ ಜನಾಂಗ ಪಟ್ಟು ಹಿಡಿದಿದ್ದಾರೆ.
- ಮನು ಮರೆಬೈಲ್
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News