ಶಿಕಾರಿಪುರದಿಂದ ಯಡಿಯೂರಪ್ಪ, ಶಿವಮೊಗ್ಗದಿಂದ ಈಶ್ವರಪ್ಪಗೆ ಟಿಕೆಟ್ ಘೋಷಣೆ: ನಿಗೂಢವಾದ ಎಸ್.ರುದ್ರೇಗೌಡ ನಡೆ
ಶಿವಮೊಗ್ಗ, ಏ. 9: ವಿಧಾನಸಭೆ ಚುನಾವಣೆ - 2018 ಕ್ಕೆ ಬಿಜೆಪಿ ಪಕ್ಷ ಪ್ರಕಟಿಸಿರುವ ಪ್ರಥಮ ಹಂತದ ಅಭ್ಯರ್ಥಿಗಳ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಶಿಕಾರಿಪುರ ಹಾಗೂ ಶಿವಮೊಗ್ಗ ನಗರ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ.
ನಿರೀಕ್ಷಿಸಿದಂತೆ ಶಿಕಾರಿಪುರ ಕ್ಷೇತ್ರದಿಂದ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಟಿಕೆಟ್ ಲಭ್ಯವಾಗಿದೆ. ಉಳಿದಂತೆ ತೀವ್ರ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ನಗರ ಕ್ಷೇತ್ರದಿಂದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪರವರು, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡರನ್ನು ಹಿಂದಿಕ್ಕಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ತೀರ್ಥಹಳ್ಳಿ, ಸಾಗರ ಹಾಗೂ ಸೊರಬ ಕ್ಷೇತ್ರಗಳಿಗೆ ಇನ್ನಷ್ಟೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗಬೇಕಾಗಿದೆ. ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿಯಲ್ಲಿ ಈ ಐದು ಕ್ಷೇತ್ರಗಳಿಗೆ ಕಣಕ್ಕಿಳಿಯಲಿರುವ ಅಧಿಕೃತ ಹುರಿಯಾಳುಗಳ ಹೆಸರು ಪ್ರಕಟವಾಗುವ ನಿರೀಕ್ಷೆಗಳಿವೆ ಎಂದು ಹೇಳಲಾಗುತ್ತಿದೆ.
ಯಾರಾಗಬಹುದು?: ಲಭ್ಯ ಮಾಹಿತಿಯ ಪ್ರಕಾರ ತೀರ್ಥಹಳ್ಳಿಯಿಂದ ಮಾಜಿ ಶಾಸಕ ಆರಗ ಜ್ಞಾನೇಂದ್ರ, ಸೊರಬದಿಂದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹಾಗೂ ಭದ್ರಾವತಿ ಕ್ಷೇತ್ರದಿಂದ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಜಿ.ಆರ್.ಪ್ರವೀಣ್‍ಪಾಟೀಲ್‍ರವರು ಕಣಕ್ಕಿಳಿಯುವ ಸಾಧ್ಯತೆಗಳು ನಿಶ್ಚಿತವೆಂಬ ಮಾತುಗಳು ಕೇಳಿಬರುತ್ತಿವೆ.
ಹಾಗೆಯೇ ಟಿಕೆಟ್‍ಗೆ ತೀವ್ರ ಪೈಪೋಟಿ ಕಂಡುಬಂದಿದ್ದ ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದಿಂದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಬಿ.ಅಶೋಕ್‍ನಾಯ್ಕ್‍ಗೆ ಟಿಕೆಟ್ ಲಭ್ಯವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಪಕ್ಷದ ವರಿಷ್ಠರು ಅಖೈರುಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಉಳಿದಂತೆ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಯಾರು ಕಣಕ್ಕಿಳಿಯುತ್ತಾರೆಂಬುವುದು ಸ್ಪಷ್ಟವಾಗುತ್ತಿಲ್ಲ. ಮಾಜಿ ಸಚಿವ ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನಡುವೆ ಟಿಕೆಟ್‍ಗೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಯಾರಿಗೆ ಟಿಕೆಟ್ ತಪ್ಪಿದರೂ ಬಂಡಾಯ ಭುಗಿಲೇಳುವ ಲಕ್ಷಣಗಳು ಕಂಡುಬರುತ್ತಿವೆ. ಈ ಕಾರಣದಿಂದ ಈ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರವು ಕೇಂದ್ರ ವರಿಷ್ಠರಿಗೂ ತಲೆನೋವಾಗಿ ಪರಿಣಮಿಸಿದ್ದು, ಹಾಲಪ್ಪ ಹಾಗೂ ಬೇಳೂರು ಜೊತೆ ಸಮಾಲೋಚನೆ ನಡೆಸಿದ ನಂತರ ಈ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಿಸಲು ಕೇಂದ್ರ ವರಿಷ್ಠರು ನಿರ್ಧರಿಸಿದ್ದಾರೆಂಬ ಮಾತುಗಳು ಕೇಳಿಬಂದಿವೆ.
ನಡೆ ನಿಗೂಢ: ಶಿವಮೊಗ್ಗ ನಗರ ಕ್ಷೇತ್ರದಿಂದ ಕೆ.ಎಸ್.ಈಶ್ವರಪ್ಪಗೆ ಟಿಕೆಟ್ ಖಚಿತವಾಗಿರುವುದರಿಂದ ಟಿಕೆಟ್ ಸಿಕ್ಕೇ ಸಿಗುವ ನಿರೀಕ್ಷೆಯಲ್ಲಿದ್ದ ಪಕ್ಷದ ಜಿಲ್ಲಾಧ್ಯಕ್ಷ, ಬಿ.ಎಸ್.ಯಡಿಯೂರಪ್ಪ ಭಂಟ ಎಸ್.ರುದ್ರೇಗೌಡಗೆ ತೀವ್ರ ಬೇಸರ ಉಂಟು ಮಾಡಿದೆ ಎಂಬ ಮಾತುಗಳು ಅವರ ಆಪ್ತ ಮೂಲಗಳು ತಿಳಿಸಿವೆ. ಇದರಿಂದ ಎಸ್.ರುದ್ರೇಗೌಡರವರ ಮುಂದಿನ ನಡೆ ಏನೆಂಬುವುದು ನಿಗೂಢವಾಗಿ ಪರಿಣಮಿಸಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.
ಟಿಕೆಟ್ ಖಚಿತಗೊಂಡ ವಿಷಯ ಹಾಗೂ ನಾಮಪತ್ರ ಸಲ್ಲಿಕೆಯ ವಿವರ ತಿಳಿಸುವ ಉದ್ದೇಶದಿಂದ ಸೋಮವಾರ ಶಿವಮೊಗ್ಗ ನಗರದ ಪಕ್ಷದ ಕಚೇರಿಯಲ್ಲಿ ಕೆ.ಎಸ್.ಈಶ್ವರಪ್ಪ ನಡೆಸಿದ ಸುದ್ದಿಗೋಷ್ಠಿಯಿಂದಲೂ ಎಸ್.ರುದ್ರೇಗೌಡ ದೂರ ಉಳಿದಿದ್ದರು. ಟಿಕೆಟ್ ಕೈ ತಪ್ಪಿದ ಬೇಸರದಿಂದಲೇ ಅವರು ಕೆ.ಎಸ್.ಈಶ್ವರಪ್ಪ ಏರ್ಪಡಿಸಿದ್ದ ಸುದ್ದಿಗೋಷ್ಠಿಗೆ ಆಗಮಿಸಲಿಲ್ಲ ಎಂಬ ಮಾತುಗಳು ಕೇಳಿಬರಲಾರಂಭಿಸಿವೆ.
ಕಳೆದ ಕೆಲ ದಿನಗಳ ಹಿಂದೆ ಎಸ್.ರುದ್ರೇಗೌಡರವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ, ಅವರು ಒಪ್ಪಿದರೆ ಜೆಡಿಎಸ್ ಪಕ್ಷವು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಿದೆ ಎಂಬಿತ್ಯಾದಿ ಹಲವು ಅಂತೆಕಂತೆ ವದಂತಿಗಳು ಹಬ್ಬಿದ್ದವು. ಹಾಗೆಯೇ ತಮಗೆ ಟಿಕೆಟ್ ನೀಡಬೇಕೆಂಬ ಒತ್ತಾಯವನ್ನು ಎಸ್.ರುದ್ರೇಗೌಡ ಮಾಡಿದ್ದರು.
ಆದರೆ ನಂತರ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಎಸ್.ರುದ್ರೇಗೌಡರನ್ನು ಸಂಪರ್ಕಿಸಿ ಅವರನ್ನು ಸಮಾಧಾನಗೊಳಿಸುವ ಕೆಲಸ ಮಾಡಿದ್ದರು. ಜೊತೆಗೆ ವಿಧಾನ ಪರಿಷತ್‍ಗೆ ಆಯ್ಕೆ ಮಾಡುವ ಭರವಸೆ ನೀಡಿದ್ದರು. ಒಲ್ಲದ ಮನಸ್ಸಿನಿಂದಲೇ ಎಸ್.ರುದ್ರೇಗೌಡರವರು ವರಿಷ್ಠರ ಮಾತಿಗೆ ಸಹಮತಿ ವ್ಯಕ್ತಪಡಿಸಿದ್ದ ಮಾತುಗಳು ಕೇಳಿಬಂದಿದ್ದವು. ಸದ್ಯ ಅವರ ನಡೆ ನಿಗೂಢವಾಗಿದ್ದು, ಮುಂದಿನ ಅವರ ನಡೆ ಏನಾಗಿರಲಿದೆ ಎಂಬುವುದು ಇನ್ನಷ್ಟೆ ಗೊತ್ತಾಗಬೇಕಾಗಿದೆ.
ಎ. 19 ರಂದು ಕೆ.ಎಸ್.ಈಶ್ವರಪ್ಪ ನಾಮಪತ್ರ ಸಲ್ಲಿಕೆ
ಎ.19 ರಂದು ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತಾವು ನಾಮಪತ್ಪ ಸಲ್ಲಿಸುತ್ತಿದ್ದೆನೆ' ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪರವರು ಸೋಮವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಎ.19 ರ ಬೆಳಿಗ್ಗೆ 10 ಗಂಟೆಗೆ ರಾಮಣ್ಣಶ್ರೇಷ್ಠಿ ಪಾರ್ಕ್‍ನಿಂದ ಮೆರವಣಿಗೆ ಹೊರಟು ಬೆಳಿಗ್ಗೆ 11.30 ಕ್ಕೆ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸುತ್ತೆನೆ. ಎ.17 ಹಾಗೂ 18 ರಂದು ಕ್ಷೇತ್ರ ವ್ಯಾಪ್ತಿಗೆ ಸೇರ್ಪಡೆಯಾಗುವ 33 ವಾರ್ಡ್‍ಗಳಲ್ಲಿ ತಲಾ ಒಂದೊಂದು ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಮಾಡಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗ ನಗರ ಕ್ಷೇತ್ರದಲ್ಲಿ ತಾವು ಗೆದ್ದು ಯಡಿಯೂರಪ್ಪರನ್ನು ಮುಖ್ಯಮಂತ್ರಿಯಾಗಿ ಮಾಡುವುದೇ ನನ್ನ ಉದ್ದೇಶವಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಎಂದು ಎರಡು ಭಾಗವಾಗಿ ಮತಗಳು ವಿಭಜನೆಯಾಗಿದ್ದವು. ಈ ಬಾರಿ ಪಕ್ಷದ ಮತಗಳಿಕೆಯ ಪ್ರಮಾಣ ಸಹಜವಾಗಿಯೇ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.