ನಾವು ಮಾಡಿರುವ ಅಭಿವೃದ್ಧಿ, ಜನರೊಂದಿಗಿನ ಒಡನಾಟ ಗೆಲುವಿಗೆ ಸಹಕಾರಿಯಾಗಲಿದೆ: ಯತೀಂದ್ರ ಸಿದ್ದರಾಮಯ್ಯ

Update: 2018-04-09 17:40 GMT

ಮೈಸೂರು,ಎ.9: ಕಳೆದ ಐದು ವರ್ಷದಲ್ಲಿ ನಾವು ಮಾಡಿರುವ ಅಭಿವೃದ್ಧಿ, ಜನರೊಂದಿಗಿನ ಒಡನಾಟ, ಬಾಂಧವ್ಯ, ನಂಬಿಕೆ ನನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಿಸಿದರು.

ವರುಣಾ ವಿಧಾಸಭಾ ಕ್ಷೇತ್ರದ ರಾಂಪುರ ಗ್ರಾಮದಿಂದ ಸೋಮವಾರ ಚುನಾವಣಾ ಪ್ರಚಾರ  ಆರಂಭಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ರಾಂಪುರ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ. ನನ್ನ ತಂದೆ ಕೂಡ ಮೊದಲು ಇಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದರು. ಅದರಂತೆ ನಾನು ಕೂಡ ಇಲ್ಲಿಂದಲೇ ಪ್ರಚಾರ ಆರಂಭಿಸಿದ್ದೇನೆ ಎಂದು ತಿಳಿಸಿದರು.

ಕಳೆದ ಒಂದೂವರೆ ವರ್ಷದಿಂದ ಕ್ಷೇತ್ರದ ಜನರ ಜೊತೆ ಒಡನಾಟ ಇಟ್ಟುಕೊಂಡಿದ್ದೇನೆ. ಇಲ್ಲಿನ ಯಾವುದೇ ಸಮಸ್ಯೆಯನ್ನು ತಂದೆಯವರ ಗಮನಕ್ಕೆ ತಂದು ಬಗೆಹರಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಲಾಗಿದೆ. ನಮ್ಮ ತಂದೆಯವರು 5 ವರ್ಷ ದಕ್ಷ, ಪ್ರಾಮಾಣಿಕ ಆರೋಪ ಮುಕ್ತ ಆಡಳಿತವನ್ನು ನೀಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರಣವಾಗಲಿದೆ ಎಂದರು.

ನಿಮ್ಮ ವಿರುದ್ಧ ವಿಜಯೇಂದ್ರ ಸ್ಪರ್ಧೆ ಮಾಡುತ್ತಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತೀಂದ್ರ, 'ನಮ್ಮ ಪ್ರತಿ ಸ್ಪರ್ಧಿ ಯಾರೇ ಆದರು ನಾವು ಮಾಡು ಕೆಲಸವನ್ನ ಮಾಡಲೇ ಬೇಕು. ಯಾರನ್ನು ಗೆಲ್ಲಿಸ ಬೇಕು ಎಂಬುದು ಜನರಿಗೆ ಬಿಟ್ಟಿದ್ದು. ಜನರ ಕಷ್ಟ ಸುಖಗಳಿಗೆ ಯಾರು ಸ್ಪಂದಿಸುತ್ತಾರೆ ಜೊತೆಗೆ ಕ್ಷೇತ್ರದ ಅಭಿವೃದ್ಧಿಯನ್ನು ಯಾರು ಮಾಡುತ್ತಾರೆ ಎಂಬ ನಂಬಿಕೆ ಜನರಿಗೆ ಬರುತ್ತದೊ ಅವರನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.

ನಾನು ಗೆಲುವು ಸಾಧಿಸಿದರೆ ಮೂಲಭೂತ ಸೌಕರ್ಯ ಎಲ್ಲರಿಗೂ ತಲುಪುವಂತೆ ಮಾಡುತ್ತೇನೆ. ನಮ್ಮ ಕ್ಷೇತ್ರದಲ್ಲಿ ಸಾಕ್ಷರತೆಯ ಕೊರತೆ ಇದೆ ಅದಕ್ಕೆ ಗಮನ ನೀಡುತ್ತೇನೆ. ಹಾಗೆಯೇ ನಿರುದ್ಯೋಗ ಸಮಸ್ಯೆ ಹೆಚ್ಚಿದ್ದು ಅದನ್ನು ಬಗೆಹರಿಸಲು ಕ್ರಮ ವಹಿಸುತ್ತೇನೆ. ಜೊತೆಗೆ ಎಲ್ಲಿ ನೀರಾವರಿ ಯೋಜನೆಗಳ ಕೊರತೆ ಇದೆ ಅಂತಹ ಕಡೆ ನೀರಾವರಿ ಯೋಜನೆಗಳನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಯತೀಂದ್ರ ಸಿದ್ಧರಾಮಯ್ಯ ಹೇಳಿದರು.

ನಂತರ ರಾಂಪುರ, ಗೌಡರ ಹುಂಡಿ, ಅಹಲ್ಯ ಕೆಂಬಾಲು, ಬಿದರಗೂಡು, ಹಳ್ಳಿಕೆರೆ ಹುಂಡಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.

ಇದಕ್ಕೂ ಮೊದಲು ನಿವೃತ್ತ ಪೊಲೀಸ್ ಆಧಿಕಾರಿ ಹಾಗೂ ಕಾಂಗ್ರೆಸ್ ಮುಖಂಡ ಎಲ್.ರೇವಣ್ಣ ಸಿದ್ದಯ್ಯ ಅವರ ಮೈಸೂರಿನ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿದರು. ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಯಾವುದೇ ಕಾರಣಕ್ಕೂ ಪಕ್ಷ ತೊರೆಯದಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಗುರುಪಾದಸ್ವಾಮಿ, ನಂಜನಗೂಡು ತಾ.ಪಂ.ಉಪಾಧ್ಯಕ್ಷ ಗೋವಿಂದರಾಜನ್ ಸೇರಿದಂತೆ ಹಲವರು ಜೊತೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News