ವೇಶ್ಯಾವಾಟಿಕೆ ದಂಧೆ ಪ್ರಕರಣದಲ್ಲಿ ನಾನು ನಿರಪರಾಧಿ: ತುಮಕೂರು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ

Update: 2018-04-10 11:31 GMT

ತುಮಕೂರು,ಎ.10: ಹಿತಶತ್ರುಗಳ ಪಿತೂರಿಗೆ ಒಳಗಾಗಿ ವೇಶ್ಯಾವಾಟಿಕೆ ಪ್ರಕರಣವೊಂದರಲ್ಲಿ ನಾಲ್ಕನೇ ಆರೋಪಿಯಾಗಿದ್ದ ನನ್ನನ್ನು ಪೊಲೀಸ್ ವಿಚಾರಣೆ ವೇಳೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲವೆಂದು ತೀರ್ಮಾನಿಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸುವಾಗ ನನ್ನನ್ನು ಕೈಬಿಡಲಾಗಿದೆ ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬೆಂಗಳೂರಿನ ಪಿಣ್ಯಾ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ 2018ರ ಫೆಬ್ರವರಿ 10 ರಂದು ನಡೆದ ವೇಶ್ಯಾವಾಟಿಕೆ ಪ್ರಕರಣವೊಂದರಲ್ಲಿ ಅಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿದ್ದ ನನ್ನನ್ನು ವಿನಾಕಾರಣ ಸಿಲುಕಿಸಿ, ತೇಜೋವಧೆಗೆ ಪ್ರಯತ್ನಿಸಿದ್ದು, ಪೊಲೀಸರು ನಡೆಸಿದ ವಿಚಾರಣೆ ವೇಳೆ ನಾನು ತಪಿತಸ್ಥನಲ್ಲ ಎಂಬುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸುವಾಗ ನನ್ನ ಹೆಸರನ್ನು ಕೈಬಿಡಲಾಗಿದೆ. ಇದು ನನ್ನಲ್ಲಿರುವ ಪ್ರಾಮಾಣಿಕತೆ ಮತ್ತು ಸತ್ಯಕ್ಕೆ ದೊರೆತ ಜಯ ಎಂದು ರಾಮಕೃಷ್ಣ ನುಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ,ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ಅವರ ಅನುಯಾಯಿಯಾಗಿ ಕೊರಟಗೆರೆ ಕ್ಷೇತ್ರದಲ್ಲಿ ಅವರ ಗೆಲುವಿಗೆ ನಿರಂತರ ಪ್ರಯತ್ನ ನಡಸಿದ್ದಲ್ಲದೆ, ಶತಾಯಗತಾಯ ಅವರು ಮುಖ್ಯಮಂತ್ರಿಯಾಗಲೇಬೇಕೆಂಬುದು ನಮ್ಮ ಅಭಿಲಾಷೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರ ಸಂಘಟನೆಯಲ್ಲಿ ತೊಡಗಿದ್ದೆ. ಇದನ್ನು ಸಹಿಸದ ಕೆಲವರು ನನ್ನ ಹೆಸರಿಗೆ ಮಸಿ ಬಳಿಯುವ ಮೂಲಕ ತಳಸಮುದಾಯವನ್ನು ಅಧಿಕಾರದಿಂದ ದೂರವಿಡುವ ಕೆಲಸ ಮಾಡಿದ್ದರು ಎಂಬ ಅನುಮಾನವಿದ್ದು, ಮುಂದಿನ ದಿನಗಳಲ್ಲಿ ಇದರ ಹಿಂದಿನ ಹುನ್ನಾರವನ್ನು ಬಹಿರಂಗ ಪಡಿಸುವುದಾಗಿ ನುಡಿದರು..

ಸಾಲದ ಹಣ ಪಡೆಯಲು ಹೋಗಿದ್ದ ನನ್ನನ್ನು ಏಕಾಎಕಿ ಬಂಧಿಸಿ, ಯಾರನ್ನೂ ಸಂಪರ್ಕಿಸದಂತೆ ನಿರ್ಬಂಧ ಹೇರಿ, ಅಪಾದಿತನ ಸ್ಥಾನದಲ್ಲಿ ಸಿಸಿಬಿ ಪೊಲೀಸರು ಕೂರಿಸಿದ್ದರು. ಆದರೆ ಆ ನಂತರ ಪಿಣ್ಯ ಪೊಲೀಸರು ನಡೆಸಿ ವಿಚಾರಣೆ ವೇಳೆ ಈ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಎಂಬುದು ಅವರಿಗೆ ಮನವರಿಕೆಯಾದ ಹಿನ್ನೆಲೆಯಲ್ಲಿ ನನ್ನನು ಚಾರ್ಜ್‍ಸೀಟ್‍ನಿಂದ ಕೈಬಿಡಲಾಗಿದೆ. ನನ್ನ ಮೇಲೆ ವೆಶ್ಯಾವಾಟಿಕೆ ದಂಧೆಯಲ್ಲಿ ಪಾಲ್ಗೊಂಡ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ನನ್ನನ್ನು ಅಮಾನತ್ತು ಪಡಿಸಲಾಗಿತ್ತು. ನಾನು ನಿರಪರಾಧಿ ಎಂದು ಸಾಭೀತಾಗಿರುವ ಹಿನ್ನೆಲೆಯಲ್ಲಿ ಪಕ್ಷ ನನ್ನ ಮೇಲಿನ ಅಮಾನತ್ತು ರದ್ದು ಪಡಿಸಿ, ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕೆಂಬುದು ನನ್ನ ಕೋರಿಕೆಯಾಗಿದೆ. ಈ ಸಂಬಂಧ ಸದ್ಯದಲ್ಲಿಯೇ ಕೆ.ಪಿ.ಸಿ.ಸಿ.ಅದ್ಯಕ್ಷರನ್ನು ಭೇಟಿಯಾಗಿ ಮನವಿ ಮಾಡಲಿದ್ದೇನೆ ಎಂದರು.

ಪ್ರಕರಣಕ್ಕೂ, ಪ್ರಕರಣದ ಉಳಿದ ಆರೋಪಿಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಗುತ್ತಿಗೆದಾರನಾಗಿರುವ ನನ್ನಿಂದ ಪಡೆದ ಹಣವನ್ನು ವಾಪಸ್ಸು ಪಡೆಯಲಷ್ಟೇ ನಾನು ಅಲ್ಲಿಗೆ ತೆರಳಿದ್ದು, ಈ ವೇಳೆ ನನ್ನನ್ನು ವೆಶ್ಯಾವಾಟಿಕೆ ದಂಧೆಯಲ್ಲಿ ಸಿಲುಕಿಸಲಾಗಿತ್ತು. ನನಗೆ ಇದೊಂದು ಆಗ್ನಿಪರೀಕ್ಷೆಯಾಗಿತ್ತು ಎಂದು ಆರ್.ರಾಮಕೃಷ್ಣ ನುಡಿದರು.

ಈ ವೇಳೆ ತುಮಕೂರು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಹಾಗೂ ಇನ್ನಿತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News