ಚುನಾವಣಾ ರಾಯಭಾರಿಯಾಗಿ 1 ನೇ ತರಗತಿ ಬಾಲಕ: ಶಿವಮೊಗ್ಗ ಜಿಲ್ಲಾಡಳಿತದ ವಿಭಿನ್ನ ಪ್ರಯೋಗ

Update: 2018-04-10 16:24 GMT

ಶಿವಮೊಗ್ಗ, ಎ. 10: ವಿಧಾನಸಭೆ- ಲೋಕಸಭೆ ಸಾರ್ವತ್ರಿಕ ಚುನಾವಣೆಗಳ ವೇಳೆ ಮತದಾನದ ಪ್ರಚಾರ ಕಾರ್ಯಕ್ಕಾಗಿ ಸಿನಿಮಾ ನಟ-ನಟಿಯರು, ಪ್ರಸಿದ್ದ ಕ್ರೀಡಾಪಟುಗಳು, ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರನ್ನು ಚುನಾವಣಾ ಆಯೋಗ ರಾಯಭಾರಿಗಳನ್ನಾಗಿ ನೇಮಕ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ ಸಂಗತಿ. ಇತ್ತೀಚೆಗಷ್ಟೆ ರಾಜ್ಯ ಚುನಾವಣಾ ಆಯೋಗವು ಪ್ರಖ್ಯಾತ ಕ್ರಿಕೆಟ್ ಪಟು ರಾಹುಲ್ ದ್ರಾವಿಡ್ ರನ್ನು ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯ ಮತದಾನ ಜಾಗೃತಿ ರಾಯಭಾರಿಯಾಗಿ ನೇಮಕ ಮಾಡಿತ್ತು. ಈ ನಡುವೆ ಶಿವಮೊಗ್ಗ ಜಿಲ್ಲಾಡಳಿತವು 6 ವರ್ಷ ಪ್ರಾಯದ, 1 ನೇ ತರಗತಿ ಅಭ್ಯಾಸ ಮಾಡುತ್ತಿರುವ, ಅಪರೂಪದ ಬುದ್ದಿಮತ್ತೆ ಹೊಂದಿರುವ ಬಾಲಕನನ್ನು 'ಶಿವಮೊಗ್ಗ ಜಿಲ್ಲೆಯ ಚುನಾವಣಾ ರಾಯಭಾರಿಯಾಗಿ' ನೇಮಕ ಮಾಡಿಕೊಂಡು ಗಮನ ಸೆಳೆದಿದೆ.

ಈ ಪುಟಾಣಿ ಪೋರನ ಮೂಲಕ ಜಿಲ್ಲೆಯಲ್ಲಿ ಮತದಾನದ ಮಹತ್ವದ ಕುರಿತಂತೆ ಜಾಗೃತಿ ಮೂಡಿಸಲು ಜಿಲ್ಲಾ ಚುನಾವಣಾ ಆಯೋಗ ಮುಂದಾಗಿದೆ. ಈಗಾಗಲೇ ಈ ಬಾಲಕನನ್ನು ಬಳಸಿಕೊಂಡು ಪ್ರಮೋಷನಲ್ ವೀಡಿಯೋವೊಂದನ್ನು ಕೂಡ ತಯಾರಿಸಲಾಗಿದ್ದು, ಇದನ್ನು ಸಾಮಾಜಿಕ ಸಂಪರ್ಕ ಜಾಲತಾಣಗಳ ಮೂಲಕ ಪ್ರಚುರ ಪಡಿಸಲು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾ ಚುನಾವಣಾ ಆಯೋಗದ ಈ ವಿಭಿನ್ನ ಪ್ರಯೋಗವು ಸಾರ್ವಜನಿಕ ವಲಯದ ಗಮನ ಸೆಳೆದಿದೆ. ವ್ಯಾಪಕ ಮೆಚ್ಚುಗೆಗೂ ಪಾತ್ರವಾಗಿದೆ.

ಯಾರೀ ಪುಟಾಣಿ?: ಶಿವಮೊಗ್ಗ ನಗರದ ವಿನೋಬನಗರ ಬಡಾವಣೆಯ ಕಲ್ಲಳ್ಳಿ ಏರಿಯಾದ ನಿವಾಸಿ ಇಂದ್ರಜಿತ್ ಹಾಗೂ ಆಶಾ ದಂಪತಿಯ ಪುತ್ರ ಇಂದ್ರಜಿತ್ (6) ಚುನಾವಣಾ ರಾಯಭಾರಿಯಾಗಿ ನೇಮಕಗೊಂಡ ಬಾಲಕನಾಗಿದ್ದಾನೆ. ಪ್ರಸ್ತುತ ಈ ಬಾಲಕ ವಿನೋಬನಗರದ ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಯಲ್ಲಿ 1 ನೇ ತರಗತಿ ಅಭ್ಯಾಸ ಮಾಡುತ್ತಿದ್ದಾನೆ.

ವಿಶೇಷವೇನು?: ಪ್ರಸ್ತುತ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 12 ರಂದು ಚುನಾವಣೆ ನಡೆಯುತ್ತಿದೆ. ಈ ಎಲ್ಲ ಕ್ಷೇತ್ರಗಳ ಹೆಸರು ನೆನಪಿಟ್ಟುಕೊಂಡು ಒಂದೇ ಉಸಿರಿನಲ್ಲಿ ಹೇಳುವುದು ರಾಜಕಾರಣಿಗಳಿಗಿರಲಿ, ನಾಗರೀಕರಿಗೂ ಕಷ್ಟ ಸಾಧ್ಯವಾಗಿದೆ. ನಮ್ಮ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಹೆಸರು ಹೇಳುವಾಗಲೇ ಕೆಲವೊಮ್ಮೆ ತಡಬಡಾಯಿಸುವಂತಾಗುತ್ತದೆ. ಆದರೆ ಬಾಲಕ ಇಂದ್ರಜಿತ್ ಗೆ ಇದು ನೀರು ಕುಡಿದಷ್ಟೆ ಸುಲಭವಾಗಿದೆ. ಇದೇ ಆತನ ಬುದ್ದಿಮತ್ತೆಯ ವಿಶೇಷವಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಹೆಸರು ಈ ಆರರ ಹರೆಯದ ಪೋರ ಎರಡೇ ನಿಮಿಷಗಳಲ್ಲಿ ಪಟಪಟನೇ ಹೇಳಿ ಮುಗಿಸುತ್ತಾನೆ. ಎಲ್ಲರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತಾನೆ.

ಮತದಾನಕ್ಕೆ ಕರೆ: ವಿಧಾನಸಭಾ ಕ್ಷೇತ್ರ ಸಂಖ್ಯೆ ಒಂದು ನಿಪ್ಪಾಣಿಯಿಂದ ಆರಂಭಿಸಿ, 224 ನೇ ಕ್ಷೇತ್ರವಾದ ಗುಂಡ್ಲುಪೇಟೆವರೆಗೆ ಯಾವುದೇ ತಪ್ಪಿಲ್ಲದಂತೆ ಹೇಳುತ್ತಾನೆ ಈ ಬಾಲಕ. ಅದರೊಂದಿಗೆ ಎಲ್ಲರೂ ಮೇ 12 ರಂದು ನಡೆಯುವ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸುವಂತೆ ಮನವಿಯನ್ನೂ ಕೂಡ ಮಾಡುತ್ತಾನೆ.

ಐಕಾನ್: ಜಿಲ್ಲಾಧಿಕಾರಿ ಡಾ ಎಂ.ಲೋಕೇಶ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ರವರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಜಿಲ್ಲೆಯ ಚುನಾವಣಾ ಜಾಗೃತಿ ಅಭಿಯಾನದ ಐಕಾನ್ ಆಗಿ ಈ ಪುಟ್ಟ ಪೋರ ಇಂದ್ರಜಿತ್‍ನನ್ನು ನೇಮಕ ಮಾಡಿಕೊಂಡಿರುವ ವಿಷಯವನ್ನು ತಿಳಿಸಿದರು. 'ಎಲ್ಲಾ ವಿಧಾನಸಭಾ ಕ್ಷೇತ್ರಗಳ ಹೆಸರನ್ನು ನೆನಪಿಟ್ಟುಕೊಂಡು ತಪ್ಪಿಲ್ಲದಂತೆ ಹೇಳುವ ಈ ಪುಟ್ಟ ಬಾಲಕ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾನೆ. ಮತದಾರರ ಜಾಗೃತಿ ಐಕಾನ್ ಆಗಿ ಈ ಬಾಲಕನನ್ನು ಆಯ್ಕೆ ಮಾಡಲಾಗಿದ್ದು, ಪ್ರತಿಯೊಬ್ಬರೂ ಮತಗಟ್ಟೆಗೆ ಬಂದು ತಪ್ಪದೇ ಮತ ಚಲಾಯಿಸಲು ಈ ಬಾಲಕ ಸ್ಪೂರ್ತಿಯಾಗಲಿ' ಎಂದು ತಿಳಿಸಿದರು. 

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News