ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮುಠ್ಠಾಳ: ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಬಿ.ಪಿ.ಮಂಜುನಾಥ್

Update: 2018-04-11 15:25 GMT

ಮೈಸೂರು,ಎ.11: ಸಂವಿಧಾನ ಬದಲಾಯಿಸುತ್ತೇವೆ ಎಂದಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮುಠ್ಠಾಳ, ಅವರ ಹೇಳಿಕೆ ಅವಿವೇಕತನದಿಂದ ಕೂಡಿದೆ. ಅವರ ವಿರುದ್ಧ ಕ್ರಮ ಜರುಗಿಸಲು ಬಿಜೆಪಿ ಸ್ಕ್ರೀನಿಂಗ್ ಕಮಿಟಿ ತೀರ್ಮಾನಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಬಿ.ಪಿ.ಮಂಜುನಾಥ್ ತಿಳಿಸಿದರು.

ಸಾರ್ವತ್ರಿಕ ವಿಧಾನಸಭಾ ಚುನಾವಣೆ ಘೋಷಣೆ ಹಿನ್ನಲೆಯಲ್ಲಿ ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಜೊತೆಗಿನ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿರುವ ಮಾತು ದಲಿತರಿಗಷ್ಟೇ ಅಲ್ಲ ಎಲ್ಲರಿಗೂ ನೋವು ಉಂಟು ಮಾಡಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ಈಗಾಗಲೇ ಇವರ ಹೇಳಿಕೆಯಿಂದ ಪಕ್ಷ ಸಂಕಷ್ಟಕ್ಕೆ ಸಿಲುಕಿದೆ. ಇವರ ಮೇಲೆ ಕ್ರಮ ಜರುಗಿಸಲು ರಾಷ್ಟ್ರೀಯ ಕಾರ್ಯಕಾರಿಣಿ ಸೇರಿದಂತೆ ಸ್ಕ್ರೀನಿಂಗ್ ಕಮಿಟಿಯಲ್ಲಿ ಚರ್ಚಿಸಲಾಗಿದೆ. ಇನ್ನು ಮುಂದೆ ಇಂತಹ ಹೇಳಿಕೆಗಳು ಪುನರಾವರ್ತನೆಯಾಗುವುದಿಲ್ಲ ಎಂದು ಹೇಳಿದರು.

ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾವು ಟಿಪ್ಪು ಜಯಂತಿ ವಿರೋಧಿಗಳಲ್ಲ. ಎಲ್ಲಾ ಮಹನೀಯರ ಜಯಂತಿ ಆಚರಿಸುವಂತೆ ಟಿಪ್ಪು ಜಯಂತಿಯನ್ನು ಆಚರಣೆ ಮಾಡುವಂತೆ ಕೇಂದ್ರದ ನಾಯಕರನ್ನು ಒತ್ತಾಯಿಸುವುದಾಗಿ ಹೇಳಿದರು. ದಲಿತ ದೌರ್ಜನ್ಯ ಕಾಯ್ದೆ ದುರ್ಬಲಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ದೇಶದ ವಿವಿಧೆಡೆ ಒಂಬತ್ತು ಮಂದಿ ಮೃತಪಟ್ಟರು. ಪ್ರಧಾನಿ ಒಂದೇ ಒಂದು ಹೇಳಿಕೆಯನ್ನು ನೀಡಲಿಲ್ಲ ಯಾಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಪ್ರಧಾನಿಗಳು ಏಕೆ ಮಾತನಾಡಲಿಲ್ಲ ಎಂಬುದು ನನಗೆ ಗೊತ್ತಿಲ್ಲ. ದೇಶದ ಪ್ರಧಾನಿಯಾದವರು ಎಲ್ಲರ ಕಷ್ಟ ಸುಖಗಳಿಗೂ ಸ್ಪಂದಿಸಬೇಕು' ಎಂದು ಹೇಳಿದರು.

ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದುವರೆಗೆ ಕೈಗೊಂಡ ಜನಪರ ಕಾರ್ಯಕ್ರಮ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ. ಕೇಂದ್ರದ ಬಿಜೆಪಿ ಸರಕಾರದ ವೈಫಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಈ ಬಾರಿ ಮತ ಕೇಳುವುದಾಗಿ ವಿವರಿಸಿದರು. ಈ ಭಾಗದ ಮೂವರು ಶಾಸಕರು ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸ, ಸಿಎಂ ಸಿದ್ದರಾಮಯ್ಯ ಸರ್ಕಾರದ ಸಾಧನೆ, ಜನಪರ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ನಾವು ಮತ ಕೇಳಲಿದ್ದು, ಕಾಂಗ್ರೆಸ್ ಪರ ಜನಪರ ಒಲವು ವ್ಯಕ್ತವಾಗಿದೆ. ಹೀಗಾಗಿ ನಗರದಲ್ಲಿ ಮಾತ್ರವಲ್ಲ, ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಥಾನ ಕಾಂಗ್ರೆಸ್‍ಗೆ ದೊರಕಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಮುಖಂಡ ಚಲುವೇಗೌಡ ಮಾತನಾಡಿ, ಈ ಎರಡೂ ಪಕ್ಷಗಳವರು ಪರಸ್ಪರ ಕಿತ್ತಾಡುವುದನ್ನು ಎನ್‍ಕ್ಯಾಶ್ ಮಾಡಿಕೊಂಡು ನಾವು ಅಧಿಕಾರಕ್ಕೆ ಬರುತ್ತೇವೆ. ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರ ಸಾಧನೆ, ಕಾರ್ಯಸೂಚಿ ವಿವರಣೆ ರಾಜ್ಯದ ಮತದಾರರನ್ನು ಪಕ್ಷದತ್ತ ಸೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್‍ನವರು ಲಿಂಗಾಯತರನ್ನು ಒಡೆದು, ದಲಿತರನ್ನು ಒಡೆದರು, ಬಿಜೆಪಿಯವರೂ ಅದೇ ಕೆಲಸ ಮಾಡುತ್ತಿದ್ದು, ಇಂತಹವರು ನಮಗೆ ಬೇಕಾ ಎಂಬ ಪ್ರಶ್ನೆ ರಾಜ್ಯದ ಜನತೆಯದಾಗಿದೆ ಎಂದು ತಿಳಿಸಿ, ಈ ಎಲ್ಲ ಅಂಶಗಳು ತಮ್ಮ ಪಕ್ಷಕ್ಕೆ ಮತ ತಂದು ಕೊಡುತ್ತದೆ ಎಂದರು.

ಬಳಿಕ ಮಾತನಾಡಿದ ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಕೋಮುವಾದಿ ಪಕ್ಷವನ್ನು ಸೋಲಿಸುವುದೇ ತಮ್ಮ ಪಕ್ಷದ ಗುರಿಯಾಗಿದ್ದು, ಎಲ್ಲೆಲ್ಲಿ ತಮ್ಮ ಅಭ್ಯರ್ಥಿಗಳಿರುವುದಿಲ್ಲವೋ ಅಲ್ಲೆಲ್ಲಾ ಕೋಮುವಾದಿ ಪಕ್ಷದ ವಿರುದ್ಧ ನಿಂತ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಸ್ಪಷ್ಟ ಪಡಿಸಿದರು.

ಜೊತೆಗೆ, ಎನ್.ಆರ್. ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಇದುವರೆಗೂ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಕೆಲಸ ಮಾಡಿಲ್ಲ. ಹೀಗಾಗಿ ಅವರು ಕ್ಷೇತ್ರಕ್ಕೆ ಅಗತ್ಯವಿಲ್ಲ ಎಂದರಲ್ಲದೆ, ಒಂದು ವೇಳೆ ತಾವು ಚುನಾಯಿತರಾದರೆ ಪ್ರತಿ ಮೂರು ತಿಂಗಳಿಗೊಮ್ಮೆ ವಾರ್ಡ್‍ನಲ್ಲಿ ಜನತಾ ದರ್ಶನ ನಡೆಸಿ, ಶಾಸಕರು, ವಾರ್ಡ್ ಸದಸ್ಯರು, ಅಧಿಕಾರಿಗಳನ್ನು ಕರೆಸಿ, ಸಾರ್ವಜನಿಕರ ಅಹವಾಲುಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥ ಪಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡುವುದಾಗಿ ತಿಳಿಸಿದರು. ಜೊತೆಗೆ, ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಂವಾದದಲ್ಲಿ ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಕಾರ್ಯದರ್ಶಿ ಕೆ.ಜೆ. ಲೋಕೇಶ್‍ಬಾಬು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News