ಮಂಡ್ಯ: ರೈತ ಸಂಘ-ಕಾಂಗ್ರೆಸ್ ಜಂಟಿ ಪ್ರಚಾರ; ಸಾವಿರಾರು ಕಾರ್ಯಕರ್ತರು ಭಾಗಿ

Update: 2018-04-13 17:37 GMT

ಮಂಡ್ಯ, ಎ.13: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಗ್ರಾಮದಲ್ಲಿ ಶುಕ್ರವಾರ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಪರವಾಗಿ ಕಾಂಗ್ರೆಸ್ ಹಾಗೂ ರೈತಸಂಘದ ಕಾರ್ಯಕರ್ತರು ಬಿರುಸಿನ ಪ್ರಚಾರ ನಡೆಸಿದರು.

ಗ್ರಾಮದ ಚೌಡೇಶ್ವರಿ, ಲಕ್ಷ್ಮೀನರಸಿಂಹಸ್ವಾಮಿ ಹಾಗೂ ವೀರಭದ್ರಸ್ವಾಮಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ದರ್ಶನ್ ಪುಟ್ಟಣ್ಣಯ್ಯ, ಈ ಚುನಾವಣೆಯಲ್ಲಿ ನನ್ನ ಗೆಲುವು ರೈತಪರ ಹೋರಾಟದ ಗೆಲುವಾಗಲಿದೆ. ರೈತಪರ ಹೋರಾಟ ಉಳಿಸಿಕೊಳ್ಳಲು ನನ್ನ ಗೆಲುವು ಮುಖ್ಯ. ನನ್ನೊಬ್ಬನಿಂದ ಇದು ಸಾಧ್ಯವಿಲ್ಲ. ಎಲ್ಲರೂ ಸೇರಿ ಒಗ್ಗಟ್ಟಿನಿಂದ ನನ್ನ ಸಹಕರಿಸಬೇಕು ಎಂದು ಮನವಿ ಮಾಡಿದರು. 

ಹುಡುಗಾಟಿಕೆಗೆ ನಾನು ದೂರದ ಅಮೆರಿಕಾದಿಂದ ಕೆಲಸ ಬಿಟ್ಟು ಬಂದಿಲ್ಲ. ಗುರಿ ಇಟ್ಟುಕೊಂಡು ಬಂದಿದ್ದೇನೆ. ಅತ್ಯಂತ ಜವಾಬ್ಧಾರಿ ಇದೆ. ನಾನು ಹೋದ ಕಡೆಯೆಲ್ಲೆಲ್ಲಾ ತಂದೆಯ ಒಡನಾಟ ಇಟ್ಟುಕೊಂಡಿದ್ದವರೆಲ್ಲಾ ಗೌರವ ಕೊಡುತ್ತಿದ್ದಾರೆ. ಹೊಸ ಆಲೋಚನೆ ಇದೆ. ಜನರ ಸುಧಾರಣೆಯಾಗುವ ರೀತಿ ನಾನು ನಿಷ್ಠೆಯಿಂದ ಕೆಲಸ ಮಾಡುತ್ತೇನೆ. ತಂದೆಯವರ ದಾರಿಯಲ್ಲಿ ನಡೆಯುತ್ತೇನೆ ಎಂದು ಅವರು ಅವರು ಭರವಸೆ ನೀಡಿದರು.

ಈ ಕ್ಷೇತ್ರದ ಜನ ಆಸೆ, ಆಮಿಷಗಳಿಗೆ ಬಲಿಯಾಗಬೇಡಿ, ಸ್ವಾಭಿಮಾನಿಗಳು ನಾವು. ಈ ಕ್ಷೇತ್ರವನ್ನು ಇಡೀ ರಾಜ್ಯವೇ ತಿರುಗಿ ನೋಡುತ್ತಿದೆ. ರೈತ ಪರ ಹೋರಾಟ ಇರುವ ಈ ಕ್ಷೇತ್ರವನ್ನು ರೈತರು ಉಳಿಸಿಕೊಳ್ಳುತ್ತಾರೋ ಎಂದು ರಾಜ್ಯದ ಜನವೇ ನೋಡುತ್ತಿದೆ. ಈ ಕ್ಷೇತ್ರವನ್ನು ಉಳಿಸಿಕೊಡುವುದು ಎಲ್ಲರ ಜವಾಬ್ಧಾರಿಯಾಗಿದ್ದು, ಅದನ್ನು ಉಳಿಸುವುದು ಅತ್ಯಗತ್ಯ ಎಂದರು. 

ಎ.20ರಂದು ಮೇಲುಕೋಟೆ ವಿಧಾನಸಭಾದ ಸ್ವರಾಜ್ ಇಂಡಿಯಾ ಹಾಗೂ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ರೈತಸಂಘ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಾಂಡವಪುರ ಕ್ರೀಡಾಂಗಣಕ್ಕೆ ಆಗಮಿಸಿ ಮೆರವಣಿಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು. 

ಸ್ವಾಭಿಮಾನದ ಚುನಾವಣೆ
ಪ್ರಚಾರದ ನೇತೃತ್ವವಹಿಸಿ ಮಾತನಾಡಿದ ಮಾಜಿ ಶಾಸಕ ಎಚ್.ಬಿ.ರಾಮು, 2018ರ ಚುನಾವಣೆ ಆತ್ಮಾಭಿಮಾನ ಮತ್ತು ಸ್ವಾಭಿಮಾನದ ಚುನಾವಣೆಯಾಗಿದೆ. 1957ರ ನಂತರ ಬೊಮ್ಮೇಗೌಡರು, ಚೌಡಯ್ಯನವರು, ಜಿ.ಬಿ.ಶಿವಕುಮಾರ್ ಮತ್ತು ನಾನು ಎಚ್.ಬಿ.ರಾಮು ಪ್ರತಿನಿಧಿಸಿದ್ದ ಕೆರಗೋಡು ಕ್ಷೇತ್ರದ ಈ ಪ್ರದೇಶಗಳು 2004 ರಿಂದೀಚೆಗೆ ಮೇಲುಕೋಟೆಗೆ ಸೇರಿದೆ ಎಂದರು. 

ರೈತಸಂಘದ ಸುಂದರೇಶ್, ನಂಜುಂಡಸ್ವಾಮಿರವರ ಹೋರಾಟದ ನಂತರ ಕೆ.ಎಸ್.ಪುಟ್ಟಣ್ಣಯ್ಯ ಅವರು ಛಾಪು ಮೂಡಿಸಿದ್ದರು. ನಂತರ ಮೇಲುಕೋಟೆ ಕ್ಷೇತ್ರದಿಂದ ಪುಟ್ಟಣ್ಣಯ್ಯ ಅವರು ಶಾಸಕರಾಗಿದ್ದರು. ಶಾಸಕರ ಅವಧಿ ಮುಗಿಯುವ ವೇಳೆಗೆ ಅಕಾಲಿಕ ನಿಧನರಾದರು. ಈ ಕ್ಷೇತ್ರದಲ್ಲಿ ಅವರ ಪುತ್ರ ಅಭ್ಯರ್ಥಿಯಾಗಿದ್ದಾರೆ ಎಂದು ಅವರು ತಿಳಿಸಿದರು. 

ಈ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ರೈತಸಂಘ-ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಪೈಪೋಟಿ ಇದೆ. ಈ ಪೈಪೋಟಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ದರ್ಶನ್ ಅವರನ್ನು ಗೆಲ್ಲಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ದರ್ಶನ್ ಅವರಿಗೆ ಬೆಂಬಲ ನೀಡಿರುವುದೇ ಒಂದು ವಿಶೇಷ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಬೆಂಬಲ ನೀಡಿದ್ದಾರೆ. ನಾವೂ ಸಹ ಒಕ್ಕೂರಲಿನಿಂದ ದರ್ಶನ್ ಗೆಲುವುಗೆ ಸಹಕಾರಿಗಳಾಗಬೇಕು ಎಂದು ಅವರು ಮನವಿ ಮಾಡಿದರು. 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಳ್ಳಿ ಪ್ರಕಾಶ್, ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಕೆ.ನಾಗರಾಜು, ಸಿಂಗ್ರೀಗೌಡ, ಚಂದ್ರಶೇಖರ್, ಜಿಪಂ ಮಾಜಿ ಸದಸ್ಯೆ ಪುಷ್ಪಲತಾ ಆನಂದ್, ತಾಪಂ ಸದಸ್ಯ ಬೋರೇಗೌಡ, ಮುಖಂಡರಾದ ಕೆಬ್ಬಳ್ಳಿ ಆನಂದ್, ಚಂದ್ರು ಬೋಜೇಗೌಡ, ಬೀರಗೌಡನಹಳ್ಳಿ ಹರ್ಷ, ಶ್ಯಾಮ್, ರೈತಸಂಘದ ಶಂಭೂನಹಳ್ಳಿ ಸುರೇಶ್, ಸುನೀತಾ ಪುಟ್ಟಣ್ಣಯ್ಯ ಇತರ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News