ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ: ಕೊನೆಗೂ ಟಿಕೆಟ್ ಗಿಟ್ಟಿಸಿಕೊಂಡ ಹರತಾಳು ಹಾಲಪ್ಪ
ಶಿವಮೊಗ್ಗ, ಏ. 4: ಬಹು ನಿರೀಕ್ಷಿತ ಬಿಜೆಪಿ ಪಕ್ಷದ ಎರಡನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡಿದ್ದು, ಇದರಲ್ಲಿ ಶಿವಮೊಗ್ಗ ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಇದು ಜಿಲ್ಲಾ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದ್ದು, ಚುನಾವಣಾ ಕಣ ಮತ್ತಷ್ಟು ರಂಗೇರುವಂತೆ ಮಾಡಿದೆ.
ಬಿಜೆಪಿ ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಶಿಕಾರಿಪುರದಿಂದ ಬಿ.ಎಸ್.ಯಡಿಯೂರಪ್ಪಗೆ ಹಾಗೂ ಶಿವಮೊಗ್ಗ ನಗರ ಕ್ಷೇತ್ರದಿಂದ ಕೆ.ಎಸ್.ಈಶ್ವರಪ್ಪಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಇದೀಗ ನಾಲ್ಕು ಕ್ಷೇತ್ರಗಳ ಅಭ್ಯರ್ಥಿ ಹೆಸರು ಪ್ರಕಟಿಸಲಾಗಿದೆ. ಇದರಿಂದ ಜಿಲ್ಲೆಯ ಏಳರ ಪೈಕಿ ಆರು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಧಿಕೃತಗೊಂಡಂತಾಗಿದೆ. ಉಳಿದಂತೆ ಭದ್ರಾವತಿ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆ ಮಾತ್ರ ಬಾಕಿಯಿದೆ.
ಮೇಲುಗೈ: ಭಾರೀ ಕುತೂಹಲ ಕೆರಳಿಸಿದ್ದ ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕೊನೆಗೂ ಮಾಜಿ ಸಚಿವ ಹರತಾಳು ಹಾಲಪ್ಪ ಕಣಕ್ಕಿಳಿಯುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ಅಂತಿಮ ಕ್ಷಣದಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಟಿಕೆಟ್ ವಂಚಿತವಾಗುವಂತಾಗಿದೆ.
ವರಿಷ್ಠರ ಸೂಚನೆಯಂತೆ ಸೊರಬ ಕ್ಷೇತ್ರ ತ್ಯಾಗ ಮಾಡಿದ್ದ ಹರತಾಳು ಹಾಲಪ್ಪಗೆ ಸಾಗರದಿಂದ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು. ಆದರೆ ಬೇಳೂರು ಗೋಪಾಲಕೃಷ್ಣ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇವರಿಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇತ್ತೀಚೆಗೆ ಬೇಳೂರಿಗೆ ಟಿಕೆಟ್ ಖಚಿತವಾಗಿತ್ತು. ಇದರಿಂದ ಆಕ್ರೋಶಗೊಂಡ ಹಾಲಪ್ಪ, ಪಕ್ಷ ತೊರೆಯುವ ಗಂಭೀರ ಚಿಂತನೆ ಕೂಡ ನಡೆಸಿದ್ದರು.
ಈ ನಡುವೆ ಮಧ್ಯ ಪ್ರವೇಶಿಸಿದ್ದ ಬಿಜೆಪಿ ವರಿಷ್ಠರು ಹಾಲಪ್ಪರನ್ನು ಸಮಾಧಾನಗೊಳಿಸಿ, ಟಿಕೆಟ್ ಭರವಸೆಯಿತ್ತಿದ್ದರು. ಅದರಂತೆ ಹಾಲಪ್ಪಗೆ ಟಿಕೆಟ್ ಖಚಿತವಾಗಿದೆ. ಟಿಕೆಟ್ ವಂಚಿತವಾಗಿರುವ ಬೇಳೂರು ಮುಂದಿನ ನಡೆ ಏನೆಂಬುವುದು ನಿಗೂಢವಾಗಿ ಪರಿಣಮಿಸಿದ್ದು, ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.
ಸಾಲುಸಾಲು ಆಕಾಂಕ್ಷಿಗಳು: ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದಲ್ಲಿ, ಬಿಜೆಪಿ ಟಿಕೆಟ್‍ಗೆ ಉಳಿದೆಲ್ಲ ಕ್ಷೇತ್ರಗಳಿಗಿಂತ ಅತೀ ಹೆಚ್ಚು ಸ್ಪರ್ಧಾಕಾಂಕ್ಷಿಗಳಿದ್ದರು. ಇದರಿಂದ ಒಮ್ಮತದ ಅಭ್ಯರ್ಥಿ ಆಯ್ಕೆಯು ವರಿಷ್ಠರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಮತ್ತೊಂದೆಡೆ ಬಿ.ಎಸ್.ಯಡಿಯೂರಪ್ಪ ಶಿಫಾರಸ್ಸು ಮಾಡುವವರಿಗೆ ಟಿಕೆಟ್ ಖಚಿತ ಎಂಬ ಮಾತುಗಳು ಕೂಡ ಕೇಳಿಬಂದಿದ್ದವು. ಈ ಕಾರಣದಿಂದ ಟಿಕೆಟ್ ರೇಸ್‍ನಲ್ಲಿದ್ದ ಕೆಲವರು ಟಿಕೆಟ್‍ಗೆ ಭಾರೀ ಲಾಬಿ ನಡೆಸಿದ್ದರು. ಆದರೆ ನಿರೀಕ್ಷಿಸಿದಂತೆ ಟಿಕೆಟ್ ರೇಸ್‍ನಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ, ಬಿ.ಎಸ್.ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದ ಕೆ.ಬಿ.ಅಶೋಕ್‍ನಾಯ್ಕ್ ಗೆ ಟಿಕೆಟ್ ಖಚಿತವಾಗಿದೆ. ಮುಂದೇನಾಗಲಿದೆ ಎಂಬುವುದು ಕಾದು ನೋಡಬೇಕಾಗಿದೆ.
ನಿರೀಕ್ಷಿತ: ಉಳಿದಂತೆ ತೀರ್ಥಹಳ್ಳಿ ಕ್ಷೇತ್ರದಿಂದ ಟಿಕೆಟ್ ಗಿಟ್ಟಿಸಿಕೊಂಡಿರುವ ಮಾಜಿ ಶಾಸಕ ಆರಗ ಜ್ಞಾನೇಂದ್ರ ಹಾಗೂ ಸೊರಬದಿಂದ ಕಣಕ್ಕಿಳಿಯುತ್ತಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಆಯ್ಕೆಯು ಕಳೆದ ಹಲವು ತಿಂಗಳುಗಳ ಹಿಂದೆಯೇ ನಿರೀಕ್ಷಿಸಲಾಗಿತ್ತು. ಅಧಿಕೃತ ಘೋಷಣೆಯಷ್ಟೆ ಬಾಕಿ ಉಳಿದಿತ್ತು.
ತೀರ್ಥಹಳ್ಳಿಯಲ್ಲಿ ಟಿಕೆಟ್ ಖಚಿತವಿದ್ದ ಕಾರಣದಿಂದಲೇ ಕಳೆದ ಹಲವು ತಿಂಗಳುಗಳ ಹಿಂದಿನಿಂದಲೂ ಆರಗ ಜ್ಞಾನೇಂದ್ರರವರು, ಕ್ಷೇತ್ರದಾದ್ಯಂತ ಬಿರುಸಿನ ಓಡಾಟ ನಡೆಸುತ್ತಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಕೆಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದರೂ ಪ್ರಬಲ ಪೈಪೋಟಿ ನಡೆಸಿರಲಿಲ್ಲ. ಇದರಿಂದ ಆರಗ ಜ್ಞಾನೇಂದ್ರರಿಗೆ ಸುಲಭವಾಗಿ ಟಿಕೆಟ್ ಸಿಗುವಂತಾಗಿದೆ.
ಉಳಿದಂತೆ ಹರತಾಳು ಹಾಲಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ನಡುವಿನ ಟಿಕೆಟ್ ಪೈಪೋಟಿಯ ಕಾರಣದಿಂದ ಸೊರಬದ ಅಭ್ಯರ್ಥಿ ಆಯ್ಕೆಯು ಕುತೂಹಲ ಮೂಡಿಸಿತ್ತು. ಹಾಲಪ್ಪಗೆ ಸೊರಬದಿಂದ ಟಿಕೆಟ್ ನೀಡಿ, ಬೇಳೂರಿಗೆ ಸಾಗರದಿಂದ ಕಣಕ್ಕಿಳಿಸುವ ಸಾಧ್ಯತೆಯಿದ್ದು, ಕುಮಾರ್ ಬಂಗಾರಪ್ಪರನ್ನು ವಿಧಾನ ಪರಿಷತ್‍ಗೆ ಆಯ್ಕೆ ಮಾಡುವ ಅಥವಾ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸುವ ಚಿಂತನೆ ಬಿಜೆಪಿ ವರಿಷ್ಠರದ್ದಾಗಿದೆ ಎಂಬ ವದಂತಿಗಳು ಹಬ್ಬಿದ್ದವು.
ಇದೀಗ ನಿರೀಕ್ಷಿಸಿದಂತೆ ಕುಮಾರ್ ಬಂಗಾರಪ್ಪ ಸೊರಬ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಜೆಡಿಎಸ್‍ನಿಂದ ಅವರ ಸಹೋದರ, ಶಾಸಕ ಮಧು ಬಂಗಾರಪ್ಪ ಅಭ್ಯರ್ಥಿಯಾಗುತ್ತಿದ್ದಾರೆ. ಈ ಕಾರಣದಿಂದ ಸೊರಬ ಕ್ಷೇತ್ರ ಮತ್ತೆ ಸಹೋದರ ಸವಾಲ್‍ಗೆ ಸಾಕ್ಷಿಯಾಗಲಿದೆ.
ಭದ್ರಾವತಿ ಕ್ಷೇತ್ರ ನಿಗೂಢತೆ!
ಜಿಲ್ಲೆಯ ಏಳರ ಪೈಕಿ ಆರು ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ. ಆದರೆ ಭದ್ರಾವತಿ ಕ್ಷೇತ್ರಕ್ಕೆ ಇಲ್ಲಿಯವರೆಗೂ ಅಭ್ಯರ್ಥಿ ಘೋಷಣೆ ಮಾಡದಿರುವುದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ. ಕಣಕ್ಕಿಳಿಯುವವರ್ಯಾರು ಎಂಬ ಚರ್ಚೆ ಮುಂದುವರಿದಿದೆ. ಇತ್ತೀಚೆಗೆ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ, ಸಾಧು ಲಿಂಗಾಯತ ಸಮುದಾಯಕ್ಕೆ ಸೇರಿದ ಪ್ರವೀಣ್ ಪಟೇಲ್‍ರವರು ದಿಢೀರ್ ಆಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಬಿ.ಎಸ್.ಯಡಿಯೂರಪ್ಪ ನಿರ್ಧಾರ ಮಾಡಿದ್ದಾರೆಂಬ ಮಾತುಗಳು ಕೇಳಿಬಂದಿದ್ದವು. ಆದರೆ 2 ನೇ ಪಟ್ಟಿಯಲ್ಲಿಯೂ ಆ ಕ್ಷೇತ್ರದ ಅಭ್ಯರ್ಥಿ ಹೆಸರು ಇಲ್ಲದಿರುವುದು ಹಲವು ರೀತಿಯ ಚರ್ಚೆಗಳಿಗೆ ಆಸ್ಪದವಾಗುವಂತೆ ಮಾಡಿದೆ.
ಬೇಳೂರು ಮುಂದಿನ ನಡೆಯೇನು?
ಸಾಗರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ವಂಚಿತವಾಗಿರುವ ಪ್ರಬಲ ಸ್ಪರ್ಧಾಕಾಂಕ್ಷಿ ಬೇಳೂರು ಗೋಪಾಲಕೃಷ್ಣರವರ ಮುಂದಿನ ನಡೆಯೇನೆಂಬುವುದು ನಿಗೂಢವಾಗಿ ಪರಿಣಮಿಸಿದೆ. 'ತಾವು ಚುನಾವಣಾ ಕಣಕ್ಕಿಳಿಯುವುದು ಖಚಿತ' ಎಂದು ಈಗಾಗಲೇ ಬೇಳೂರು ಸ್ಪಷ್ಟಪಡಿಸಿದ್ದಾರೆ. ಇದೀಗ ಅವರಿಗೆ ಟಿಕೆಟ್ ಸಿಗದಿರುವ ಕಾರಣದಿಂದ, ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯುತ್ತಾರಾ? ಅಥವಾ ಕಳೆದ ಬಾರಿಯಂತೆ ಜೆಡಿಎಸ್‍ಗೆ ಪಕ್ಷಾಂತರಗೊಂಡು, ಆ ಪಕ್ಷದ ಅಭ್ಯರ್ಥಿಯಾಗಲಿದ್ದಾರಾ? ಇಲ್ಲವೇ, ಈಗಾಗಲೇ ಬಿಜೆಪಿ ವರಿಷ್ಠರು ನೀಡಿರುವ ಭರವಸೆಯಂತೆ ಬಿಜೆಪಿಯಲ್ಲಿಯೇ ಮುಂದುವರಿಯಲಿದ್ದಾರಾ? ಎಂಬುವುದು ಕಾದು ನೋಡಬೇಕಾಗಿದೆ.
ಬಿಜೆಪಿ ಪ್ರಚಾರ ವಾಹನಕ್ಕೆ ಕಲ್ಲೇಟು!
ಸಾಗರ ಕ್ಷೇತ್ರದಿಂದ ಹರತಾಳು ಹಾಲಪ್ಪಗೆ ಟಿಕೆಟ್ ಸಿಗುವುದು ಖಚಿತವಾಗುತ್ತಿದ್ದಂತೆ ಇತ್ತ ಸಾಗರ ಪಟ್ಟಣದ ಟಿಪ್‍ಟಾಪ್ ಹೋಟೆಲ್ ಮುಂಭಾಗದಲ್ಲಿ ಕೆಲವರು ಬಿಜೆಪಿ ಪ್ರಚಾರದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದರು. ಕಲ್ಲು ತೂರಾಟದಲ್ಲಿ ವಾಹನದ ಗಾಜುಗಳು ಪುಡಿಯಾಗಿವೆ. ಬಿಜೆಪಿ ಪ್ರಚಾರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದವರು ಯಾರೆಂಬ ವಿಷಯ ಸ್ಪಷ್ಟವಾಗಿಲ್ಲ.