ಶಿವಮೊಗ್ಗ ವಿಧಾನಸಭಾ ಕ್ಷೇತ್ರ: ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳಿಗೆ 'ಬಗಲ್ ಮೇ ದುಷ್ಮನ್'ಗಳ 'ಒಳ ಹೊಡೆತ'ದ ಭೀತಿ
ಶಿವಮೊಗ್ಗ, ಎ. 17: ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್- ಜೆಡಿಎಸ್‍ನಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಹೆಸರು ಖಚಿತವಾಗುತ್ತಿದ್ದಂತೆ, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ಬಿಸಿಯೇರ ತೊಡಗಿದೆ. ಅಭ್ಯರ್ಥಿಗಳ ಮತಯಾಚನೆ ಕೂಡ ಬಿರುಸುಗೊಳ್ಳಲಾರಂಭಿಸಿದೆ.
ಆದರೆ ವಿಶೇಷವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ, 'ಬಗಲ್ ಮೇ ದುಷ್ಮನ್'ಗಳ ಸಂಖ್ಯೆ ಹೆಚ್ಚಾಗಿದೆ. ಇವರು ಕೊಡಬಹುದಾದದ 'ಒಳ ಹೊಡೆತ'ದ ಬಗ್ಗೆ ಸ್ಥಳೀಯ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಯಾವ ಪಕ್ಷದಲ್ಲಿ ಯಾರ್ಯಾರು ಅವರದೇ ಪಕ್ಷದ ಅಭ್ಯರ್ಥಿಗಳಿಗೆ 'ಎಡರುತೊಡರಾಗಬಹುದು?' ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಸಾಕಷ್ಟು ಕುತೂಹಲ ಕೆರಳುವಂತೆಯೂ ಮಾಡಿದೆ.
'ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳು ಅಪಾಯಕಾರಿ' ಎಂಬ ಮಾತಿನ ಮರ್ಮ ಅರಿತಿರುವ ಎರಡೂ ಪಕ್ಷಗಳ ಅಭ್ಯರ್ಥಿಗಳೀಗ, ಪಕ್ಷದೊಳಗೆ 'ಗುಪ್ತಗಾಮಿನಿ'ಯಂತಿರುವ 'ಭಿನ್ನ'ರ ಓಲೈಕೆಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಶಾಂತಿ ಮಂತ್ರ ಪಠಿಸಲಾರಂಭಿಸಿದ್ದಾರೆ. ಮಾತುಕತೆಯ ಮೂಲಕ ವೈಮನಸ್ಸು ಪರಿಹಸಿಕೊಳ್ಳಲು ಮುಂದಾಗಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.
ಸಂಕಷ್ಟ: ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಕೆ.ಎಸ್.ಈಶ್ವರಪ್ಪ ಹಾಗೂ ಕಾಂಗ್ರೆಸ್‍ನಿಂದ ಕಣಕ್ಕಿಳಿಯುತ್ತಿರುವ ಕೆ.ಬಿ.ಪ್ರಸನ್ನಕುಮಾರ್ ಗೆ ನಾನಾ ಕಾರಣಗಳಿಂದ ಅವರ ಪಕ್ಷಗಳಲ್ಲಿಯೇ ಸಾಕಷ್ಟು ಸಂಖ್ಯೆಯ ಎದುರಾಳಿಗಳು ಸೃಷ್ಟಿಯಾಗಿರುವುದು ಸುಳ್ಳಲ್ಲ. ಒಳ ಬೇಗುದಿ ಇದೇ ರೀತಿ ಮುಂದುವರಿದರೆ ಚುನಾವಣೆಯಲ್ಲಿ 'ಭಿನ್ನ'ರು ಕೊಡಬಹುದಾದ ಒಳ ಹೊಡೆತ ಘಾತಕ ಪರಿಣಾಮ ಉಂಟು ಮಾಡುವುದರಲ್ಲಿ ಅನುಮಾನವೇ ಇಲ್ಲವಾಗಿದೆ. ಒಳ ಬೇಗುದಿ ಶಮನಗೊಳಿಸುವ ನಿಟ್ಟಿನಲ್ಲಿ ಕೆ.ಎಸ್.ಈ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು, ಪ್ರಸನ್ನಕುಮಾರ್ ಇನ್ನಷ್ಟೆ ಇತ್ತ ಚಿತ್ತ ಹರಿಸಬೇಕಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಇದಕ್ಕೆ ಸಾಕ್ಷಿ ಎಂಬಂತೆ ಭಿನ್ನಾಭಿಪ್ರಾಯ ಹೊಂದಿರುವ ಬಿಜೆಪಿ ಹಾಗೂ ಕಾಂಗ್ರೆಸ್‍ನ ಹಲವು ನಾಯಕರು ಇಂದಿಗೂ ಅಭ್ಯರ್ಥಿಗಳ ಜೊತೆ ನೇರವಾಗಿ ಗುರುತಿಸಿಕೊಂಡಿಲ್ಲ. ಆ ಪಕ್ಷಗಳ ಮುಂಚೂಣಿಯಲ್ಲೆಲ್ಲೂ ಕಂಡುಬರುತ್ತಿಲ್ಲ. ಒಂದೆಡೆ ಮತದಾರರ ಮನವೊಲಿಸುವ ಕಾರ್ಯದಲ್ಲಿ ಸಂಪೂರ್ಣ ತಲ್ಲೀನವಾಗಿರುವ ಅಭ್ಯರ್ಥಿಗಳಿಗೆ, ಪಕ್ಷದೊಳಗಿನ ಭಿನ್ನರನ್ನು ಪತ್ತೆ ಹಚ್ಚಿ ಅವರನ್ನು ಮನವೊಲಿಸುವುದು ದೊಡ್ಡ ಹರಸಾಹಸವಾಗಿ ಪರಿಣಮಿಸುವಂತೆ ಮಾಡಿದೆ.
ಲೆಕ್ಕಾಚಾರ ಬಿರುಸು: ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರಗಳು ಬಿರುಸಿನಿಂದ ನಡೆಯಲಾರಂಭಿಸಿವೆ. ಇದುವರೆಗಿನ ವಿಧಾನಸಭೆ ಚುನಾವಣೆಗಳಲ್ಲಿ ನಡೆಯದಷ್ಟು ಜಾತಿ ಲೆಕ್ಕಾಚಾರದ ಚರ್ಚೆ ಈ ಚುನಾವಣೆಯಲ್ಲಿ ನಡೆಯುತ್ತಿರುವುದು ಕ್ಷೇತ್ರದ ಮತ್ತೊಂದು ಪ್ರಮುಖ ರಾಜಕೀಯ ವಿದ್ಯಮಾನವಾಗಿದೆ. ಪ್ರಮುಖ ಪಕ್ಷಗಳಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳಿಗೆ ಯಾವ್ಯಾವ ಸಮುದಾಯದವರು ಕೈ ಹಿಡಿಯಬಹುದು? ಇಲ್ಲವೇ ಅವರ ವಿರುದ್ದ ನಿಲ್ಲಬಹುದು? ಇದಕ್ಕೆ ಕಾರಣವೇನು? ಪ್ರಬಲ ಕೋಮುಗಳ ನಡೆಯೇನು? ಎಂಬಿತ್ಯಾದಿ ಚರ್ಚೆಗಳು ಕೂಡ ಸ್ಥಳೀಯ ರಾಜಕೀಯ ವಲಯದಲ್ಲಿ ಅತ್ಯಂತ ಬಿರುಸಿನಿಂದ ನಡೆಯಲಾರಂಭಿಸಿದೆ.
ಕುತೂಹಲ: ಇಷ್ಟು ದಿನ ಪ್ರಮುಖ ಪಕ್ಷಗಳಿಂದ ಯಾರು ಅಭ್ಯರ್ಥಿಯಾಗಲಿದ್ದಾರೆಂಬ ಸಾಮಾನ್ಯ ಪ್ರಶ್ನೆ ರಾಜಕೀಯ ಕುತೂಹಲಿಗರಲ್ಲಿ ಕಂಡುಬರುತ್ತಿತ್ತು. ಕಣಕ್ಕಿಳಿಯುವ ಅಭ್ಯರ್ಥಿಗಳ ಹೆಸರು ನಿಶ್ಚಯವಾಗುತ್ತಿದ್ದಂತೆ, ಇದೀಗ ಯಾರು ಗೆಲ್ಲಲಿದ್ದಾರೆಂಬ? ಪ್ರಶ್ನೆ ಎದುರಾಗುತ್ತಿರುವುದು ಸರ್ವೇ ಸಾಮಾನ್ಯವಾಗಿ ಕಂಡುಬರುತ್ತಿದೆ.
ಜೆಡಿಎಸ್‍ನಲ್ಲಿ ಬಗೆಹರಿಯದ ಗೊಂದಲ..!
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಲ್ಲಿ ಮನೆ ಮಾಡಿರುವ ಗೊಂದಲ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಗೋಚರವಾಗುತ್ತಿಲ್ಲ. ಪಕ್ಷದ ಅಭ್ಯರ್ಥಿ ನಿರಂಜನ್‍ರವರ ಬಗ್ಗೆ ಕೆಲ ನಾಯಕರು ಅಸಮಾಧಾನಗೊಂಡಿದ್ದಾರೆ. ಈ ಕಾರಣದಿಂದಲೇ ಹಲವು ನಾಯಕರು ಅಭ್ಯರ್ಥಿ ಪರವಾಗಿ ಇಲ್ಲಿಯವರೆಗೂ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಈ ರೀತಿ ಅಸಮಾಧಾನಗೊಂಡ ನಾಯಕರನ್ನು ಸಮಾಧಾನಗೊಳಿಸುವ ಪ್ರಯತ್ನಗಳು ಕೂಡ ನಡೆಯುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.