ಈಶ್ವರಪ್ಪ ಜೊತೆ ಬೇಳೂರು ಗೋಪಾಲಕೃಷ್ಣ ಗೌಪ್ಯ ಮಾತುಕತೆ: ಹೈಕಮಾಂಡ್‍ಗೆ ಭಿನ್ನರ ಡೆಡ್‍ಲೈನ್

Update: 2018-04-18 13:28 GMT

ಶಿವಮೊಗ್ಗ, ಎ.18: ಬಿಜೆಪಿ ಪಕ್ಷದ 2 ನೇ ಹಂತದ ಪಟ್ಟಿ ಬಿಡುಗಡೆ ಬೆನ್ನಲ್ಲೆ, ಜಿಲ್ಲೆಯ ಸಾಗರ ಹಾಗೂ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಭುಗಿಲೆದ್ದಿರುವ ಟಿಕೆಟ್ ವಂಚಿತರ ಮುನಿಸು ಮುಂದುವರಿದಿದೆ. ಮತ್ತೊಂದೆಡೆ ಭಿನ್ನಮತೀಯರ ಕೋಪತಾಪ ಶಮನಕ್ಕೆ ಬಿಜೆಪಿ ವರಿಷ್ಠರು ಕಾರ್ಯೋನ್ಮುಖರಾಗಿದ್ದು, ಸಂಧಾನ ಮಾತುಕತೆ ನಡೆಸಲಾರಂಭಿಸಿದ್ದಾರೆ. 

ಸಾಗರ ಕ್ಷೇತ್ರದ ಟಿಕೆಟ್‍ಗೆ ಪಟ್ಟು ಹಿಡಿದಿರುವ ಬೇಳೂರು ಗೋಪಾಲಕೃಷ್ಣ, ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವ ಹರತಾಳು ಹಾಲಪ್ಪ ಪರವಾಗಿ ಯಾವುದೇ ಕಾರಣಕ್ಕೂ ಕೆಲಸ ಮಾಡುವುದಿಲ್ಲ. ತಮಗೆ ಟಿಕೆಟ್ ನೀಡಬೇಕೆಂದು ಹಿಡಿದಿರುವ ಪಟ್ಟು ಮುಂದುವರಿಸಿದ್ದಾರೆ. ಈ ಕುರಿತಂತೆ ಮಂಗಳವಾರ ರಾತ್ರಿ ಶಿವಮೊಗ್ಗ ನಗರದಲ್ಲಿ ಕೆ.ಎಸ್.ಈಶ್ವರಪ್ಪರನ್ನು ಭೇಟಿಯಾಗಿ ಗೌಪ್ಯ ಮಾತುಕತೆ ಕೂಡ ನಡೆಸಿದ್ದಾರೆ. 

ಇನ್ನೊಂದೆಡೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ವಂಚಿತವಾಗಿರುವ ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಧೀರರಾಜ್ ಹಾಗೂ ನಾರಾಯಣಸ್ವಾಮಿಯವರು ಜೊತೆಗೂಡಿ ಆರಂಭಿಸಿರುವ ಬಂಡಾಯ ಚಟುವಟಿಕೆ ಮುಂದುವರಿಸಿದ್ದಾರೆ. ಬುಧವಾರ ನಗರದ ಖಾಸಗಿ ಸಭಾಭವನದಲ್ಲಿ ಬೆಂಬಲಿಗರ ಸಭೆ ನಡೆಸಿದ್ದಾರೆ. 

'ನಮ್ಮ ಮೂವರಲ್ಲಿ ಓರ್ವರಿಗೆ ಟಿಕೆಟ್ ಘೋಷಿಸಬೇಕು. ಈ ಕುರಿತಂತೆ ಮೂರು ದಿನದಲ್ಲಿ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳಬೇಕು' ಎಂದು ಡೆಡ್‍ಲೈನ್ ವಿಧಿಸಿರುವ ಬಂಡಾಯಗಾರರು, 'ಟಿಕೆಟ್ ಘೋಷಿಸದಿದ್ದರೆ ಪಕ್ಷೇತರವಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು' ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. 

ನಡೆ ನಿಗೂಢ: ಕೆ.ಎಸ್.ಈಶ್ವರಪ್ಪ ಭೇಟಿಯ ನಂತರ ಸುದ್ದಿಗಾರರೊಂದಿಗೆ ಬೇಳೂರು ಗೋಪಾಲಕೃಷ್ಣ ಮಾತನಾಡಿ, 'ತನಗೆ ಟಿಕೆಟ್ ನೀಡುವ ಕುರಿತಂತೆ ಕೆ.ಎಸ್.ಈಶ್ವರಪ್ಪರ ಜೊತೆ ಚರ್ಚೆ ನಡೆಸಿದ್ದೇನೆ. ಹಾಗೆಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಯಡಿಯೂರಪ್ಪ ಇತರೆ ನಾಯಕರ ಜೊತೆ ಸಮಾಲೋಚನೆ ನಡೆಸುತ್ತೇನೆ' ಎಂದು ಹೇಳಿದ್ದಾರೆ. 

ಇದೇ ವೇಳೆ ಹರತಾಳು ಹಾಲಪ್ಪ ವಿರುದ್ದ ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ. ಬೇಳೂರು ಜೊತೆ ಮಾತುಕತೆ ನಡೆಸುವುದಾಗಿ ಹಾಲಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, 'ಅವರೊಂದಿಗೆ ಚರ್ಚೆ ನಡೆಸುವುದಿಲ್ಲ. ಪಕ್ಷದ ಪ್ರಮುಖರೊಂದಿಗಷ್ಟೆ ತಾವು ಚರ್ಚೆ ನಡೆಸುತ್ತೇನೆ' ಎಂದು ತಿರುಗೇಟು ನೀಡಿದ್ದಾರೆ.

ಮತ್ತೊಂದೆಡೆ ಬಂಡಾಯವೆದ್ದಿರುವ ಬೇಳೂರು ಸಮಾಧಾನಕ್ಕೆ ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ವೇಳೆ ವಿಧಾನ ಪರಿಷತ್‍ಗೆ ಆಯ್ಕೆ ಮಾಡುವುದರ ಜೊತೆಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆ ನೀಡಿದ್ದಾರೆ. ಆದರೆ ಬೇಳೂರುರವರು ತಮ್ಮ ಬಿಗಿ ಪಟ್ಟು ಮುಂದುವರಿಸಿದ್ದಾರೆ. ಟಿಕೆಟ್ ನೀಡದಿದ್ದರೆ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತ ಎಂದು ಹೇಳುತ್ತಿರುವುದು, ಸಂಧಾನ ಮಾತುಕತೆ ಕಗ್ಗಂಟಾಗಿ ಪರಿಣಮಿಸುವಂತೆ ಮಾಡಿದೆ ಎನ್ನಲಾಗಿದೆ. 

ಬಂಡಾಯ ಬಿರುಸು: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೆ.ಬಿ.ಅಶೋಕ್‍ನಾಯ್ಕ್ ವಿರುದ್ದ ಟಿಕೆಟ್ ವಂಚಿತ ಕೆ.ಜಿ.ಕುಮಾರಸ್ವಾಮಿ, ಧೀರರಾಜ್ ಹೊನ್ನವಿಲೆ ಹಾಗೂ ನಾರಾಯಣಸ್ವಾಮಿಯವರು ನಡೆಸುತ್ತಿರುವ ಭಿನ್ನಮತೀಯ ಚಟುವಟಿಕೆ ಮುಂದುವರಿದಿದೆ. ದಿನದಿಂದ ದಿನಕ್ಕೆ ವಿಭಿನ್ನ ತಿರುವು ಪಡೆದುಕೊಳ್ಳಲಾರಂಭಿಸಿದೆ. ತಮ್ಮ ಮೂವರಲ್ಲಿ ಓರ್ವರಿಗೆ ಟಿಕೆಟ್ ನೀಡದಿದ್ದರೆ ಪಕ್ಷೇತರವಾಗಿ ಓರ್ವರನ್ನು ಕಣಕ್ಕಿಳಿಸಿ ಚುನಾವಣೆ ಎದುರಿಸುವುದಾಗಿ ಪಕ್ಷದ ವರಿಷ್ಠರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಮತ್ತೊಂದೆಡೆ ಪಕ್ಷದ ವರಿಷ್ಠರು ಈ ನಾಯಕರ ಜೊತೆ ಚರ್ಚೆ ನಡೆಸಿ, ಗೊಂದಲ ಪರಿಹರಿಸಲು ಮುಂದಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ಇನ್ನಷ್ಟೆ ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಾಗಿದೆ.  

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News