ತಿಥಿ, ಹುಟ್ಟುಹಬ್ಬದ ಊಟಕ್ಕೂ ‘ಕಂಟ್ರೋಲ್ ರೂಂ'ಗೆ ಬರುತ್ತದೆ ದೂರು!
ಶಿವಮೊಗ್ಗ, ಎ. 20: ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿಯೂ, ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರ ತೊಡಗಿದೆ. ರಾಜಕೀಯ ಪಕ್ಷಗಳ ಚಟುವಟಿಕೆ ಬಿರುಸುಗೊಂಡಿದೆ. ಮತ್ತೊಂದೆಡೆ ಚುನಾವಣಾ ಅಕ್ರಮ ಪತ್ತೆ ಹಾಗೂ ಮಾದರಿ ನೀತಿ-ಸಂಹಿತೆ ಉಲ್ಲಂಘನೆ ತಡೆಗೆ ಜಿಲ್ಲಾಡಳಿತ ವ್ಯಾಪಕ ಕ್ರಮ ಕೈಗೊಂಡಿದೆ.
ಇದಕ್ಕಾಗಿ ಫ್ಲೈಯಿಂಗ್ ಸ್ಕ್ವಾಡ್, ಮಾದರಿ ನೀತಿ ಸಂಹಿತೆ ತಂಡ ಸೇರಿದಂತೆ ತಾಲೂಕು ಹಂತಗಳಲ್ಲಿ ಹಾಗೂ ಜಿಲ್ಲಾ ಕೇಂದ್ರದಲ್ಲಿ ವಿಶೇಷ 'ಕಂಟ್ರೋಲ್ ರೂಂ' (ನಿಯಂತ್ರಣ ಕೊಠಡಿ) ಗಳನ್ನು ತೆರೆದಿದೆ. ಸ್ಥಿರ ದೂರವಾಣಿ ಮಾತ್ರವಲ್ಲದೆ, 'ವ್ಯಾಟ್ಸಾಪ್' ಮೂಲಕವೂ ದೂರು ನೀಡಲು ಅವಕಾಶ ಕಲ್ಪಿಸಿದೆ. ಜೊತೆಗೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ವ್ಯವಸ್ಥೆ ಮಾಡಿದೆ. ಆದರೆ 'ಕಂಟ್ರೋಲ್ ರೂಂ'ಗೆ ಆಗಮಿಸುವ ಕೆಲ ದೂರುಗಳು ಮಾತ್ರ ಚಿತ್ರ-ವಿಚಿತ್ರವಾಗಿದ್ದು, ಅಧಿಕಾರಿಗಳನ್ನೇ ತಬ್ಬಿಬ್ಬಾಗುವಂತೆ ಮಾಡಿದೆ. ತಿಥಿ, ಹುಟ್ಟುಹುಬ್ಬದ ನಿಮಿತ್ತವಾಗಿ ಮನೆಗಳಲ್ಲಿ ಆಯೋಜಿಸುವ ಭೋಜನ ಕಾರ್ಯಕ್ರಮಗಳಿಗೂ ಚುನಾವಣಾ ರಾಜಕೀಯದ ನಂಟು ಕಲ್ಪಿಸಿ 'ಕಂಟ್ರೋಲ್ ರೂಂ'ಗೆ ದೂರು ಬರುತ್ತಿವೆ.
ಈಗಾಗಲೇ ಈ ರೀತಿಯ ಹಲವು ದೂರುಗಳು, ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತೆರೆದಿರುವ ಜಿಲ್ಲಾ ಕಂಟ್ರೋಲ್ ರೂಂಗೆ ಬಂದಿವೆ. ಈ ದೂರುಗಳ ಆಧಾರದ ಮೇಲೆ ಅಧಿಕಾರಿ ತಂಡಗಳು ಸ್ಥಳಗಳಿಗೆ ತೆರಳಿ ಪರಿಶೀಲಿಸಿದಾಗ, ಚುನಾವಣೆಗಳಿಗೂ ಮನೆಗಳಲ್ಲಿ ಆಯೋಜಿತವಾಗಿದ್ದ ಊಟದ ಕಾರ್ಯಕ್ರಮಕ್ಕೂ ಸಂಬಂಧವಿಲ್ಲದಿರುವುದು ಕಂಡುಬಂದಿದೆ.
ಜಮಾಯಿಸಿದರೆ ದೂರು!: ಇತ್ತೀಚೆಗೆ ಮನೆಯೊಂದರಲ್ಲಿ ಸಾಕಷ್ಟು ಜನ ಸೇರಿದ್ದರು. ಈ ಕುರಿತಂತೆ ಜಿಲ್ಲಾ ಕಂಟ್ರೋಲ್ ರೂಂಗೆ ವ್ಯಕ್ತಿಯೋರ್ವರು ಕರೆ ಮಾಡಿ ಮಾಹಿತಿ ನೀಡಿದ್ದರು. 'ರಾಜಕೀಯಕ್ಕೆ ಸಂಬಂಧಿಸಿದ ಅನಧಿಕೃತ ಸಭೆ ಇಂತಹ ಏರಿಯಾದ ಮನೆಯೊಂದರಲ್ಲಿ ನಡೆಯುತ್ತಿದೆ. ಸಾಕಷ್ಟು ಜನ ಸೇರಿದ್ದಾರೆ' ಎಂದು ದೂರಿದ್ದರು. 'ಈ ದೂರಿನ ಆಧಾರದ ಮೇಲೆ ತಕ್ಷಣವೇ ಕಾರ್ಯಪ್ರವೃತ್ತರಾದ ಕಂಟ್ರೋಲ್ ರೂಂ ಅಧಿಕಾರಿಗಳು ಸಂಬಂಧಿಸಿದ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ, ಫ್ಲೈಯಿಂಗ್ ಸ್ಕ್ವಾಡ್, ಎಂಸಿಸಿ ತಂಡಗಳಿಗೆ ಮಾಹಿತಿ ರವಾನಿಸಿದ್ದರು. ಈ ತಂಡಗಳು ಮನೆಗೆ ಭೇಟಿಯಿತ್ತು ಪರಿಶೀಲಿಸಿದಾಗ, ಆ ಮನೆಯ ವ್ಯಕ್ತಿಯೋರ್ವರು ಅಪಘಾತದಲ್ಲಿ ಗಾಯಗೊಂಡಿದ್ದರು. ಇವರನ್ನು ಮಾತನಾಡಿಸಲು ಮನೆಗೆ ಜನ ಆಗಮಿಸಿದ್ದ ವಿಷಯ ತಿಳಿದುಬಂದಿತ್ತು. ವಾಸ್ತವಾಂಶ ಅರಿತ ಅಧಿಕಾರಿ ತಂಡಗಳು ಬೆಸ್ತು ಬೀಳುವಂತಾಗಿತ್ತು' ಎಂದು ಕಂಟ್ರೋಲ್ ರೂಂನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಯೋರ್ವರು ಮಾಹಿತಿ ನೀಡುತ್ತಾರೆ.
ಕ್ರಮ: 'ಕಂಟ್ರೋಲ್ ರೂಂಗೆ ಕರೆ ಮಾಡುವವರ ಹಾಗೂ ವ್ಯಾಟ್ಸಾಪ್‍ಗೆ ಮೆಸೇಜ್ ಕಳುಹಿಸುವವರ ವಿವರವನ್ನು ನಮೂದಿಸಿಕೊಳ್ಳುತ್ತೇವೆ. ಅವರು ನೀಡುವ ದೂರಿನ ಆಧಾರದ ಮೇಲೆ ಕೈಗೊಂಡ ಕ್ರಮದ ಬಗ್ಗೆಯೂ ದೂರುದಾರರಿಗೆ ಮಾಹಿತಿ ನೀಡುತ್ತೇವೆ. ಒಂದು ವೇಳೆ ದೂರುದಾರರು ದುರುದ್ದೇಶಪೂರ್ವಕವಾಗಿ ಮಾಹಿತಿ ನೀಡಿದ್ದು ಕಂಡುಬಂದರೆ ಅಂತಹವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು' ಎಂದು ಜಿಲ್ಲಾ ಕಂಟ್ರೋಲ್ ರೂಂನ ಉಸ್ತುವಾರಿ ನೋಡಿಕೊಳ್ಳುವ ಹಿರಿಯ ಅಧಿಕಾರಿ ಶ್ರೀಕಂಠಸ್ವಾಮಿಯವರು ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ ಕಂಟ್ರೋಲ್ ರೂಂಗೆ ಸಾರ್ವಜನಿಕ ಹಾಗೂ ರಾಜಕೀಯ ವ್ಯಕ್ತಿಗಳ ಕಡೆಯಿಂದ ಬರುವ ದೂರುಗಳು ಮಾದರಿ ನೀತಿ - ಸಂಹಿತೆ ಪತ್ತೆ ಹಚ್ಚಲು ಸಹಕಾರಿಯಾಗುವುದರಲ್ಲಿ ಎರಡು ಮಾತಿಲ್ಲ. ಆದರೆ ಕೆಲ ದೂರುಗಳು ಮಾತ್ರ ಇಕ್ಕಟ್ಟಿಗೆ ಸಿಲುಕಿಸುವಂತದ್ದಾಗಿವೆ. ಸಂಬಂಧಿಸಿದ ಅಧಿಕಾರಿಗಳನ್ನೇ ಬೆಸ್ತು ಬೀಳಿಸುವಂತೆ ಮಾಡುತ್ತಿರುವುದಂತೂ ಸತ್ಯವಾಗಿದೆ.
45 ದೂರು ಸ್ವೀಕಾರ: ಮೇಲುಸ್ತುವಾರಿ ಅಧಿಕಾರಿ ಶ್ರೀಕಂಠಸ್ವಾಮಿ
'ಜಿಲ್ಲಾ ಕಂಟ್ರೋಲ್ ರೂಂಗೆ ಇಲ್ಲಿಯವರೆಗೂ ದೂರವಾಣಿ ಹಾಗೂ ವ್ಯಾಟ್ಸಾಪ್ ಮೂಲಕ 45 ದೂರುಗಳು ಬಂದಿವೆ. ಈ ದೂರುಗಳ ಆಧಾರದ ಮೇಲೆ ಸಂಬಂಧಿಸಿದವರಿಗೆ ಮಾಹಿತಿ ರವಾನಿಸಿ ಪರಿಶೀಲನೆ ನಡೆಸಲಾಗಿದೆ. ವರದಿ ತರಿಸಿಕೊಳ್ಳಲಾಗಿದೆ' ಎಂದು ಜಿಲ್ಲಾ ಕಂಟ್ರೋಲ್ ರೂಂನ ಮೇಲುಸ್ತುವಾರಿ ಅಧಿಕಾರಿ ಶ್ರೀಕಂಠಸ್ವಾಮಿಯವರು ತಿಳಿಸುತ್ತಾರೆ.
ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದ್ದಾರೆ. ದಿನದ 24 ಗಂಟೆಯೂ ಕಂಟ್ರೋಲ್ ರೂಂ ಕಾರ್ಯನಿರ್ವಹಣೆ ಮಾಡುತ್ತದೆ. ಮೂರು ಹಂತಗಳಲ್ಲಿ ಅಧಿಕಾರಿ-ಸಿಬ್ಬಂದಿಗಳು ಕರ್ತವ್ಯ ನಿರ್ವಹಣೆ ಮಾಡುತ್ತಾರೆ. ದೂರುಗಳು ಬರುತ್ತಿದ್ದಂತೆ ಸಂಬಂಧಿಸಿದ ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್, ಎಂಸಿಸಿ, ಚುನಾವಣಾಧಿಕಾರಿಗಳಿಗೆ ಮಾಹಿತಿ ರವಾನಿಸುತ್ತೇವೆ. ಹಾಗೆಯೇ ದೂರುದಾರರಿಗೂ ಕೈಗೊಂಡ ಕ್ರಮದ ಬಗ್ಗೆ ವಿವರ ನೀಡುತ್ತೇವೆ ಎಂದು ಹೇಳುತ್ತಾರೆ.
ದೂರವಾಣಿ ಸಂಖ್ಯೆ: 08182-272244, 08182-272286 ಗೆ ಕರೆ ಮಾಡಿ ಅಥವಾ ಮೊಬೈಲ್ ವ್ಯಾಟ್ಸಾಪ್ ಸಂಖ್ಯೆ: 9686563863 ಗೆ ವ್ಯಾಟ್ಸಾಪ್ ಮೆಸೇಜ್ ಕಳುಹಿಸುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಕುರಿತಂತೆ ಯಾರು ಬೇಕಾದರೂ ಮಾಹಿತಿ ನೀಡಬಹುದಾಗಿದೆ. ಒಂದು ವೇಳೆ ದುರುದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ನೀಡಿದ್ದು ಕಂಡುಬಂದರೆ ಸಂಬಂಧಿಸಿದವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ಎಚ್ಚರಿಕೆ ನೀಡಿದ್ದಾರೆ.