ಎ.ಟಿ.ರಾಮಸ್ವಾಮಿ ಎಂಬ ರಾಜಕಾರಣಿ

Update: 2018-04-21 18:57 GMT

‘‘ಜೆಡಿಎಸ್, ಕಾಂಗ್ರೆಸ್, ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ನಾವು ಮೂವರೂ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದೇವೆ. ನಾಮ ಪತ್ರವನ್ನು ಸಲ್ಲಿಸಿದ ಬಳಿಕ, ಚುನಾವಣೆ ಮುಗಿಯುವವರೆಗೂ ನಾವು ನಮ್ಮ ಕುಟುಂಬದವರ ಜೊತೆ ರಾಜ್ಯವನ್ನು ತೊರೆಯುವ ಮೂಲಕ ನಿರ್ಭೀತಿ, ಒತ್ತಡ ಮುಕ್ತ ವಾತಾವರಣ ಸೃಷ್ಟಿಸೋಣ. ಅಭ್ಯರ್ಥಿಗಳು ಕ್ಷೇತ್ರದಲ್ಲಿ ಇದ್ದರೆ ಸಮಸ್ಯೆ. ತಮಗೆ ಬೇಕಾದ ಶಾಸಕರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಮತದಾರರಿಗೆ ಬಿಟ್ಟುಕೊಟ್ಟು, ನಾವು ಹೊರಗೆ ಹೋಗೋಣ. ಏನಂತೀರಾ?’’ -ಕಳೆದವಾರ ಅರಕಲಗೂಡು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳಿಗೆ ಸಾರ್ವಜನಿಕವಾಗಿ ಸವಾಲು ಹಾಕಿದ್ದರು. ಸದ್ಯದ ರಾಜಕಾರಣದಲ್ಲಿ, ಆಸೆ-ಆಮಿಷಗಳನ್ನೊಡ್ಡು ವವರು, ಅಂಗೈಯಲ್ಲಿ ಅರಮನೆ ತೋರಿಸುವವರು, ಸ್ವರ್ಗವನ್ನು ಧರೆಗಿಳಿಸುವವರೇ ಹೆಚ್ಚು. ಅವರ ನಡುವೆ ಕೊಂಚ ಭಿನ್ನವಾಗಿ, ಪ್ರಜಾಪ್ರಭುತ್ವದ ರೀತಿ-ನೀತಿಗಳನ್ನು ಪಾಲಿಸುವ, ಅನಿಸಿದ್ದನ್ನು ಆಡುವ ರಾಮಸ್ವಾಮಿಯಂಥ ಸರಳರು ವಿರಳ. ಇಂತಹವರು ಇವತ್ತಿನ ರಾಜಕಾರಣಕ್ಕೆ ಸಲ್ಲುವರೆ ಎಂಬುದೇ ಪ್ರಶ್ನೆ.

ಎಂ.ಎಸ್ಸಿ(ಎಜಿ) ಓದಿ, ಕೃಷಿ ಕೆಲಸ ಮಾಡಿಕೊಂಡಿರುವ ರಾಮಸ್ವಾಮಿಯವರಿಗಿನ್ನೂ 67ವರ್ಷ. ಮೂರು ಸಲ ಶಾಸಕರಾಗಿ ಮೂರು ದಶಕಗಳನ್ನೂ ಪೂರೈಸಿಲ್ಲ. ಆಗಲೇ ರಾಜಕಾರಣದ ಬಗ್ಗೆ ಭ್ರಮನಿರಸನ, ವೈರಾಗ್ಯ ಉಂಟಾಗಿದೆ. ಸಂತನಂತೆ ಮಾತನಾಡಲಾರಂಭಿಸಿದ್ದಾರೆ. ಅಷ್ಟರಮಟ್ಟಿಗೆ ಈ ರಾಜಕಾರಣ ಅವರನ್ನು ಸುಸ್ತು ಮಾಡಿದೆ. ಸೂಕ್ಷ್ಮ ಸಂವೇದನೆ ಯುಳ್ಳ ರಾಜಕಾರಣಿಯೊಬ್ಬನ ಈ ಸ್ಥಿತಿಯನ್ನು ನಾಡಿನ ಜನತೆ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಜೊತೆಗೆ ಸದ್ಯದ ರಾಜಕಾರಣ ಮುಟ್ಟುತ್ತಿರುವ ಮಟ್ಟವನ್ನು ಅರಿಯುವ ಅನಿವಾರ್ಯತೆಯೂ ಇದೆ. ಹಾಗೆ ನೋಡಿದರೆ, 2008 ರಲ್ಲಿಯೇ ‘‘ರಾಜಕಾರಣ ಅಸಹ್ಯ ಹುಟ್ಟಿಸಿದೆ, ಚುನಾವಣೆಗೆ ಸ್ಪರ್ಧಿಸುವುದಿಲ್ಲ, ನಿವೃತ್ತನಾಗುತ್ತೇನೆ’’ ಎಂದಿದ್ದರು. ಆಗ ಬಸವಣ್ಣ ಎಂಬ ಕಾರ್ಯಕರ್ತ ಆತ್ಮಹತ್ಯೆಗೆ ಮುಂದಾದಾಗ, ಒಲ್ಲದ ಮನಸ್ಸಿನಿಂದಲೇ ಸ್ಪರ್ಧಿಸಿದ್ದರು. ಅಂದು ರಾಮಸ್ವಾಮಿ ಆ ರೀತಿ ದಿಢೀರ್ ನಿರ್ಧಾರ ತೆಗೆದುಕೊಳ್ಳಲು ಬಲವಾದ ಕಾರಣವೂ ಇತ್ತು. ಸ್ವಲ್ಪಹಿಂದಕ್ಕೆ ಹೋಗಿ, ಕರ್ನಾಟಕದ ರಾಜಕಾರಣದಲ್ಲಾದ ಘಟನಾವಳಿಗಳನ್ನು ಮೆಲುಕು ಹಾಕಿದರೆ, ರಾಮಸ್ವಾಮಿಯವರ ನಿರ್ಧಾರದ ಹಿಂದಿನ ಸತ್ಯ ಸ್ಪಷ್ಟವಾಗುತ್ತದೆ. 90ರ ದಶಕದಲ್ಲಿ ಹಾಸನ ಜಿಲ್ಲೆ ದೇವೇಗೌಡ ಮತ್ತು ಜಿ.ಪುಟ್ಟಸ್ವಾಮಿಗೌಡರ ನಡುವಿನ ಜಿದ್ದಾಜಿದ್ದಿನ ರಾಜಕಾರಣದ ಅಖಾಡವಾಗಿತ್ತು. ಇವರಿಬ್ಬರ ಸ್ವಾರ್ಥಕ್ಕೆ ಹಲವರ ಬದುಕು ಮೂರಾಬಟ್ಟೆಯಾಗಿತ್ತು. ಅದೇ ಸಂದರ್ಭದಲ್ಲಿ, 1999ರಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ, ಬಿಜೆಪಿ ಅಭ್ಯರ್ಥಿ ಎ.ಮಂಜು ಗೆದ್ದು ಶಾಸಕರಾದರೆ, ಕಾಂಗ್ರೆಸ್‌ನ ಎ.ಟಿ.ರಾಮ ಸ್ವಾಮಿ ಸೋತಿದ್ದರು. ಗೆದ್ದ ಮಂಜುರನ್ನು ಪುಟ್ಟಸ್ವಾಮಿಗೌಡರು ಕಾಂಗ್ರೆಸ್‌ಗೆ ಕರೆತಂದು ಬಲ ಹೆಚ್ಚಿಸಿಕೊಂಡರು. ಆಗಿನ ಸಿಎಂ ಎಸ್.ಎಂ. ಕೃಷ್ಣ ಕೂಡ ಕೈ ಜೋಡಿಸಿದರು. ಸೋತಿದ್ದ ರಾಮಸ್ವಾಮಿಗೆ ಶಾಕ್ ಆಗಿ, ವಿಧಿ ಇಲ್ಲದೆ ದೇವೇಗೌಡರ ಜೆಡಿಎಸ್ ಸೇರಿದರು. ಗೌಡಿಕೆ ಗತ್ತಿನ ದೇವೇಗೌಡರು ಹೊಳೆನರಸೀಪುರ ಕ್ಷೇತ್ರದಲ್ಲಿದ್ದ ಹಳ್ಳಿಮೈಸೂರು ಹೋಬಳಿಯನ್ನು ಕಿತ್ತು ಅರಕಲಗೂಡಿಗೆ ಸೇರಿಸಿದರು. ಆ ಭಾಗದಲ್ಲಿ ಕುರುಬರ ಸಂಖ್ಯೆ ಹೆಚ್ಚಾಗಿತ್ತು. ಅದು ಪುಟ್ಟಸ್ವಾಮಿಗೌಡರ ಗೆಲುವಿಗೆ ತೊಡರುಗಾಲು ಕೊಡುವ ಕಾರಣವೂ ಅದರಲ್ಲಡಗಿತ್ತು. ದುರದೃಷ್ಟಕ್ಕೆ 2002ರಲ್ಲಿ ಪುಟ್ಟಸ್ವಾಮಿಗೌಡರು ಸತ್ತು ಸ್ವರ್ಗ ಸೇರಿಕೊಂಡರು. ಆದರೆ ಮಳೆ ನಿಂತರೂ, ಮರದನಿ ನಿಲ್ಲಲಿಲ್ಲ.
 
2004ರ ಚುನಾವಣೆಯಲ್ಲಿ, ರಾಮಸ್ವಾಮಿ ಜೆಡಿಎಸ್‌ನಿಂದ ಗೆದ್ದುಬಂದರು. ಆಗ ಯಾವ ಪಕ್ಷಕ್ಕೂ ಬಹುಮತ ಬರದೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಾಗಿ, ಧರಂಸಿಂಗ್ ಮುಖ್ಯಮಂತ್ರಿಯಾದರು, ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾದರು. ಆದರೆ ಸರಕಾರದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದ ಎಚ್.ಡಿ.ಕುಮಾರಸ್ವಾಮಿ, ಚಾಣಾಕ್ಷ ದೇವೇಗೌಡರೇ ಬೆಚ್ಚಿ ಬೀಳುವಂತೆ, ಅವರ ಅಪಾರ ಅನುಭವವನ್ನೂ ನಾಚಿಸುವಂತೆ, ಸರಕಾರ ಬೀಳಿಸಿ, ರಾತ್ರೋರಾತ್ರಿ ಬಿಜೆಪಿಯೊಂದಿಗೆ ಕೂಡಾವಳಿ ಮಾಡಿಕೊಂಡು ಮುಖ್ಯಮಂತ್ರಿಯಾಗಿದ್ದರು. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕುಮಾರಸ್ವಾಮಿ, ಸಿಎಂ ಕುರ್ಚಿಯಲ್ಲಿ ಕೂತು ರಾಜಕಾರಣಕ್ಕೆ ಹೊಸ ವ್ಯಾಖ್ಯಾನ ಬರೆದಿದ್ದರು. 20 ತಿಂಗಳ ನಂತರ, ಅಪ್ಪ-ಮಕ್ಕಳು ಒಂದಾದರು. ಯಡಿಯೂರಪ್ಪಗೆ ಅಧಿಕಾರ ಹಸ್ತಾಂತರ ಮಾಡುವ ಸಮಯದಲ್ಲಿ ಕೊಟ್ಟ ಮಾತು ತಪ್ಪಿದರು. ವಚನಭ್ರಷ್ಟರೆಂದು ಇತಿಹಾಸದ ಪುಟ ಸೇರಿದರು. ಇದೆಲ್ಲವನ್ನು ಬಹಳ ಹತ್ತಿರದಿಂದ ಕಂಡಿದ್ದ ಶಾಸಕ ಎ.ಟಿ.ರಾಮಸ್ವಾಮಿಗೆ ಅಪ್ಪ-ಮಕ್ಕಳ ರಾಜಕಾರಣ ಅಸಹ್ಯ ಹುಟ್ಟಿಸಿ ದಿಗ್ಭ್ರಮೆಗೊಳಿಸಿತ್ತು. ಕೊಂಚ ಮಾನ ಮರ್ಯಾದೆಗೆ ಅಂಜುವ, ಅಳುಕುವ ಎಟಿಆರ್, 2008ರಲ್ಲಿ ‘ರಾಜಕಾರಣ ನಮ್ಮಂತಹವರಿಗಲ್ಲ’ ಎಂದು ಹಿಂದೆ ಸರಿಯಲು ಇದೂ ಒಂದು ಕಾರಣವಾಗಿತ್ತು. ಮತ್ತೊಂದು ಮುಖ್ಯ ಕಾರಣ, 2006ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರ ಅಸ್ತಿತ್ವದಲ್ಲಿದ್ದಾಗ ಬೆಂಗಳೂರು ಸುತ್ತಮುತ್ತ ಸರಕಾರಿ ಭೂ ಒತ್ತುವರಿ ಪ್ರಕರಣಗಳನ್ನು ಪತ್ತೆಹಚ್ಚಲು ಶಾಸಕ ಎ.ಟಿ.ರಾಮಸ್ವಾಮಿ ಅಧ್ಯಕ್ಷತೆಯಲ್ಲಿ ಜಂಟಿ ಸದನ ಸಮಿತಿಯೊಂದನ್ನು ರಚಿಸಿತ್ತು. ಈ ಜಂಟಿ ಸದನ ಸಮಿತಿಗೆ 14 ಎಂಎಲ್‌ಎಗಳು, 6 ಎಂಎಲ್ಸಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ರಾಮಸ್ವಾಮಿಯವರು ಪ್ರಾಮಾಣಿಕತೆ, ದಕ್ಷತೆ, ನಿಷ್ಠುರತೆಯಿಂದ ಶ್ರಮವಹಿಸಿ ವರದಿ ತಯಾರಿಸಿದ್ದರು. 2007ರಲ್ಲಿ ಸರಕಾರಕ್ಕೆ ವರದಿ ಸಲ್ಲಿಸಿ, ಬೆಂಗಳೂರು ಸುತ್ತಮುತ್ತ ಸುಮಾರು 40 ಸಾವಿರ ಕೋಟಿ ರೂ. ಮೌಲ್ಯದ 27 ಸಾವಿರ ಎಕರೆ ಕಂದಾಯ, ಅರಣ್ಯ, ಪಶು ಸಂಗೋಪನಾ ಇಲಾಖೆ ಸೇರಿದಂತೆ ಬಿಡಿಎ, ಬಿಬಿಎಂಪಿ ಹಾಗೂ ಕೆಎಚ್‌ಬಿಗೆ ಸಂಬಂಧಿಸಿದ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಎಲ್ಲಾ ಪಕ್ಷಗಳ ಪ್ರಭಾವಿ ರಾಜಕೀಯ ಮುಖಂಡರು ಭಾಗಿಯಾಗಿದ್ದಾರೆಂದು ವರದಿ ನೀಡಿ, ಭೂ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಜಕಾರಣಿಗಳ ಜತೆ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಿ ಜೈಲಿಗೆ ಹಾಕಿಸಬೇಕು. ಸಾವಿರಾರು ಕೋಟಿ ರೂ. ಬೆಲೆಬಾಳುವ ಸಾರ್ವಜನಿಕರ ಸ್ವತ್ತಾದ ಸರಕಾರಿ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಬೆಂಗಳೂರು ಸುತ್ತಮುತ್ತ ಭೂಮಿ ಬೆಲೆ ಊಹೆಗೂ ನಿಲು ಕದ್ದು. ಅಂತಹ ಆಸ್ತಿಯನ್ನು ರಾಮಸ್ವಾಮಿಯವರು ದಕ್ಷತೆಯಿಂದ ಅಗೆದು ತೆಗೆದು, ಅಂಕಿ-ಅಂಶಗಳ ಸಮೇತ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮುಂದಿಟ್ಟಿದ್ದರು. ಅವರ ಕೆಲಸ ಹೊಗಳಿದ ಕುಮಾರಸ್ವಾಮಿ, ವೀರಾವೇಷದಿಂದ 8 ಸಾವಿರ ಎಕರೆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡರು. ಸುದ್ದಿಯಾಯಿತು, ಅಷ್ಟೆ. ಆದರೆ ರಾಜಕಾರಣಿಗಳು, ಅಧಿಕಾರಿಗಳು, ಭೂ ಒತ್ತುವರಿದಾರರು ಯಾರಿಗೂ ಯಾವ ಶಿಕ್ಷೆಯೂ ಆಗಲಿಲ್ಲ. ಮುಟ್ಟುಗೋಲು ಹಾಕಿಕೊಂಡು ಭೂಮಿ ಏನಾಯಿತು ಎಂಬುದೂ ಗೊತ್ತಾಗಲಿಲ್ಲ. ಲೋಕಾಯುಕ್ತ, ನ್ಯಾಯಾಂಗ ವ್ಯವಸ್ಥೆಯೂ ಏನೂ ಮಾಡಲಾಗಲಿಲ್ಲ. ಈ ವ್ಯವಸ್ಥೆಯ ವಿಕಾರಗಳನ್ನು, ವಿರಾಟ್ ರೂಪವನ್ನು ಖುದ್ದು ಕಂಡ ರಾಮಸ್ವಾಮಿ, ಹುಚ್ಚರಾಗಲಿಲ್ಲ. ಬದಲಿಗೆ ಮೌನವಾದರು. 2008ರ ಚುನಾವಣೆಯಲ್ಲಿ ‘ಸ್ಪರ್ಧಿಸಲ್ಲ, ನಿವೃತ್ತನಾಗುತ್ತೇನೆ’ ಎಂದರು. ಬಿಡದ ಪಕ್ಷ, ಕಾರ್ಯಕರ್ತರು ಮತ್ತೆ ನಿಲ್ಲಿಸಿದರು. ಒಂದಲ್ಲ ಎರಡು ಸಲ ನಿಂತರು, ಸೋತರು, ಹೈರಾಣಾದರು. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ, ಗೊತ್ತಿರುವ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾದಾಗ, ರಾಮಸ್ವಾಮಿಯವರ ಮನದ ಮೂಲೆಯಲ್ಲಿದ್ದ ಆಶಾಭಾವನೆ ಚಿಗುರೊಡೆಯಿತು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ, ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ, ರವಿಕೃಷ್ಣಾ ರೆಡ್ಡಿಯವ ರೊಂದಿಗೆ ಬೆಂಗಳೂರಿನ ಟೌನ್ ಹಾಲ್ ಮುಂದೆ ಭೂ ಒತ್ತುವರಿದಾರರ ವಿರುದ್ಧ ಸರಕಾರಕ್ಕೆ ಸಲ್ಲಿಸಿರುವ ವರದಿಯ ಶಿಫಾರಸಿನಂತೆ ಕ್ರಮ ಕೈಗೊಳ್ಳುವಂತೆ, ಸತತ 39 ದಿನ ಧರಣಿ ಸತ್ಯಾಗ್ರಹ ಕೂತರು. ಸಿದ್ದರಾಮಯ್ಯರನ್ನು ಖುದ್ದಾಗಿ ಕಂಡು, ಮನವಿ ಮಾಡಿಕೊಂಡರು. ಸಿದ್ದರಾಮಯ್ಯನವರು ಆ ತಕ್ಷಣವೇ ತಂಡ ರಚಿಸಿ ಸಾರಕ್ಕಿ ಕೆರೆ ಅಂಗಳದಲ್ಲಿ ಮನೆ ಕಟ್ಟಿಕೊಂಡಿದ್ದ ಬಡವರ ಮನೆ ಕೆಡವಿ, ಒಂದಷ್ಟು ಭೂಮಿ ಒತ್ತುವರಿ ಮಾಡಿಕೊಂಡರು. ಆಗ ಮತ್ತೆ ರಾಮಸ್ವಾಮಿಯವರು, ‘ಅಮಾಯಕರಿಗೆ ಶಿಕ್ಷೆ ಕಳ್ಳರಿಗೆ ರಕ್ಷಣೆ ಎಂಬಂತೆ ಆಗಬಾರದು. ಮೂಲ ಭೂಗಳ್ಳರನ್ನು ಪತ್ತೆ ಹಚ್ಚಬೇಕು. ಮನೆಗಳನ್ನು ಕಳೆದುಕೊಂಡವರಿಗೆ ಸರಕಾರ ಪರಿಹಾರ ನೀಡಬೇಕು’ ಎಂದು ಮನವಿ ಮಾಡಿಕೊಂಡರು.

ಈ ಕುಟಿಲ ರಾಜಕೀಯ ವ್ಯವಸ್ಥೆಯ ಸುಳಿಗೆ ಸಿಕ್ಕಿ ಉಳಿಯಲೂ ಆಗದೆ, ಹೊರಬರಲೂ ಆಗದೆ ಒದ್ದಾಡುತ್ತಿರುವ ಎ.ಟಿ.ರಾಮಸ್ವಾಮಿ, ಈಗ ಮತ್ತದೇ ಅಪ್ಪ-ಮಕ್ಕಳ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಾಕಣದಲ್ಲಿದ್ದಾರೆ. ಒಂದು ಕಡೆ ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿಯಾಗಿ ಮೆರೆಯುತ್ತಿರುವ ಮಂಜು, ಮತ್ತೊಂದು ಕಡೆ ಸರಕಾರಿ ಅಧಿಕಾರಿಯಾಗಿ ಸಾಕಷ್ಟು ದುಡಿದು, ಅದನ್ನೇ ಚೆಲ್ಲುತ್ತಿರುವ ಬಿಜೆಪಿಯ ಯೋಗಾರಮೇಶ್. ಇವರಿಬ್ಬರ ನಡುವೆ ರಾಮಸ್ವಾಮಿ, ಸದ್ಯದ ರಾಜಕಾರಣಕ್ಕೆ ಹೊಂದದ ವ್ಯಕ್ತಿಯಂತೆ ಕಾಣತೊಡಗಿರುವುದು ದುರಂತ. ಇಂತಹ ಎಟಿಆರ್ ಬಗ್ಗೆ ಅರಕಲಗೂಡಿನ ಜನರನ್ನು ಕೇಳಿದರೆ, ‘‘ಊರು ಅಬ್ಬೂರು. ಅವರ ಅಪ್ಪತಮ್ಮೇಗೌಡ್ರು. ಸ್ಥಿತಿವಂತರಲ್ಲ. ಎಚ್ಚೆನ್ ನಂಜೇಗೌಡ್ರು, ಕೇಬಿ ಮಲ್ಲಪ್ಪನವರ ಥರ ರಾಜಕೀಯ ಕುಟುಂಬವಲ್ಲ. ರಾಮ್ಮಸ್ವಾಮಿಯೋರು ತಮ್ಮ ಜಮೀನ್ನೆಲ್ಲ ಅಣ್ಣ ತಮ್ಮಂದಿರಿಗೇ ಬುಟ್ಟು, ಬೊಮ್ಮನಹಳ್ಳಿಲಿ ಬಂದ್ ಸೇರಕಂಡವ್ರೆ. ಮಾನವಂತರು. ಪ್ರಾಮಾಣಿಕ ವ್ಯಕ್ತಿ. ಸರಳಜೀವಿ. ಅವರ್ನ ನೋಡುದ್ರೆ, ಈ ಕಾಲ್ದಲು ಹಿಂಗವ್ರಲ್ಲ ಅಂತ ಖುಷಿಯಾಯ್ತದೆ. ಎಲ್ಲಾ ಸರಿ, ಆದರೆ ಜನರ ಜೊತೆ ಬೆರೆಯಲ್ಲ. ಕಷ್ಟ ಸುಖಕ್ಕಾಗಲ್ಲ. ಎದುರ್ಗೆ ಸಿಕ್ಕಿದ್ರು ಮಾತಾಡಸಲ್ಲ. ಗೆದ್ದಾಗಂತೂ, ಜನರ ಜೊತೆ ಬೇಯಕ್ಕಾಗಲ್ಲ ಕಣಯ್ಯ ಅಂತ ಮನೆ ಬುಟ್ಟೆ ಹೊರ್ಗೆ ಬರಲ್ಲ. ಮದುವೆ ಮುಂಜಿ ಅಂದ್ರೆ ನೂರು ರೂಪಾಯಿ, ಕವರಲ್ಲಿ ಹಾಕಿ ಕೊಡ್ತರೆ, ಅಷ್ಟೆ. ಅದಕ್ಕಿಂತ ಹೆಚ್ಚಿಗೆ ಕೊಟ್ಟಿದ್ನ ನಾನ್ ನೋಡೇ ಇಲ್ಲ. ಎಲೆಕ್ಷನ್ ಬಂದ್ರೂ ಅಷ್ಟೆ, ದುಡ್ಡು ಬಿಚ್ಚಲ್ಲ. ಕಾರ್ಯಕ್ರಮ ಮಾಡಬೇಕು ಅಂದ್ರೆ, ಅವರಿವರಿಗೆ ಹೇಳ್ತಾರೆ, ಕೊನೆಗೆ ಕಾರ್ಯಕರ್ತರೆ ಕಾಸು ಹಾಕ್ಕೊಂಡು ಓಡಾಡಬೇಕು. ಅದೇ ನೋಡಿ, ಮಂಜಣ್ಣ, ಯಾರಾದ್ರು ಹೋಗಿ ಅಣ್ಣಾ ಅಂದ್ರೆ ಸಾಕು, ಮಗ ಹುಟ್ಟಿರಲಿ, ಮದುವೆ, ಸಾವು, ಹಬ್ಬ-ಹುಣ್ಣಿಮೆಯಾಗಿರಲಿ, ಜೋಬಿಗೆ ಕೈಹಾಕಿ ಸಿಕ್ಕಿದಷ್ಟು ಕೊಡ್ತಾರೆ, ಅದು ನೂರು ಇನ್ನೂರಲ್ಲ, ಹತ್ತಿಪ್ಪತ್ತು ಸಾವಿರ. ಲೆಕ್ಕ ನೋಡಲ್ಲ. ಜನಕ್ಕೇನು ಬೇಕ್ ಸರ್, ರಸ್ತೆ, ಸ್ಕೂಲು, ಆಸ್ಪತ್ರೆ ಅವೆಲ್ಲ ಎಲ್ರೂ ಮಾಡ್ತರೆ, ಯಾರು ಬಂದ್ರೂ ಲಂಚ ಕೊಡದು ತಪ್ಪಲ್ಲ. ಅದೇನೂ ಹೊಸದೂ ಅಲ್ಲ. ಮಂಜಣ್ಣ ಎಲ್ಲಿ ಹೊಡಿತನೋ, ಎಷ್ಟು ಹೊಡಿತನೋ ಅದ್ನ ಕಟ್ಕಂಡು ನಾವೇನ್ಮಾಡದು, ನಮಗ್ಯಾಕದೆಲ್ಲ, ನಮ್ ಕಷ್ಟಕ್ಕಾಯ್ತನ, ನಮ್ ಜೊತೆಗೆ ಬೆರಿತನ ಅಷ್ಟೆ. ಇನ್ನು ನಮ್ಮ ತಾಲೂಕಲ್ಲಿ ಗೌಡ್ರು ಜಾಸ್ತಿಯವ್ರೆ. ಅದು ಬುಟ್ರೆ ದಲಿತ್ರು, ಕುರುಬ್ರು ಹೆಚ್ಚಾಗವ್ರೆ, ಮುಸ್ಲಿಮ್ಸು 20 ಸಾವ್ರ ಅವ್ರೆ. ಇವರೆ ಇಲ್ಲಿ ಡಿಸೈಡಿಂಗು. ಮೂರೂ ಪಾರ್ಟಿಯಿಂದ ಗೌಡ್ರೆ ನಿಂತವ್ರೆ, ಗೌಡ್ರು ಓಟು ಹರಿದುಹಂಚೋಯ್ತವೆ. ಆದರೆ ದಲಿತ್ರು, ಕುರುಬ್ರು, ಸಾಬ್ರು ಯಾರ ಕಡೆ ವಾಲ್ತರೋ ಅವರು ಗೆಲ್ತಾರೆ. ಕಾಂಗ್ರೆಸ್-ಬಿಜೆಪಿ ಈ ಸಲ ದುಡ್ನ ಉಳ್ಳಿಕಾಳ್ ಥರ ಚೆಲ್ಲಾಡ್ತರೆ, ನಮ್ ರಾಮಸ್ವಾಮಿಗಳು ಏನ್ಮಾಡ್ತರೋ, ಏನಾಯ್ತರೋ ನೋಡ್ಬೇಕು’’ ಎಂದರು.
ಒಟ್ಟಿನಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯೊಳಗೇ ಸರಳ, ನೇರ, ಮಾನವಂತ ರಾಜಕಾರಣಿಯನ್ನು ಸಹಿಸಿಕೊಳ್ಳದ ಸ್ಥಿತಿ ನಿರ್ಮಾಣ ವಾಗಿದೆ. ವೃತ್ತಿ ರಾಜಕಾರಣಿಗಳು ಮತ್ತು ಮತದಾರಪ್ರಭುಗಳು- ಇಬ್ಬರಿಗೂ ಈ ದೇಶ ಹೀಗೆಯೇ ಇರಬೇಕೆಂಬ ಆಸೆ ಇದ್ದಂತಿದೆ.

Writer - -ಬಸು ಮೇಗಲಕೇರಿ

contributor

Editor - -ಬಸು ಮೇಗಲಕೇರಿ

contributor

Similar News