‘ಕಾಲ’ಕ್ಕೆ ಕಾದ ಡಿಕೆ

Update: 2018-05-27 08:43 GMT

‘‘ಅಡುಗೆ ಮಾಡಿದವರಿಗೆ ಒಮ್ಮಮ್ಮೆ ಅವರಿಗೇ ತಿನ್ನಲು ಸಿಗುವುದಿಲ್ಲ. ಬೇರೆಯವರಿಗೆ ಅವರ ಅನ್ನ ಸಿಗುತ್ತದೆ, ಏನ್ಮಾಡಕಾಗುತ್ತೆ? ಅಧಿಕಾರ ಬರುವಾಗ ಹುಡುಕಿಕೊಂಡು ಬರುತ್ತೆ ಬಿಡಿ, ಕಾಯೋಣ’’ ಎಂದಿದ್ದಾರೆ ಡಿ.ಕೆ.ಶಿವಕುಮಾರ್.

ಇದು ಅವರಿಗೆ ರಾಜಕಾರಣ ಕಲಿಸಿದ ಪಾಠ. ‘ಕಾಲ’ಕ್ಕೆ ಕಾಯ ಬೇಕು ಎಂಬುದನ್ನು- ‘ಕಾಲ’ಕ್ಕೆ ತಕ್ಕಂತೆ ಡಿಕೆ ಎಂಬ ಕಬ್ಬಿಣ ಕಾದಿದೆ ಎಂಬುದನ್ನು- ತೋರುವ ಕಾಲದ ಆಟ. ಇದನ್ನು ಕೆಲವರು ಅನುಭವ, ಅಧ್ಯಾತ್ಮ ಎಂದೆಲ್ಲ ವ್ಯಾಖ್ಯಾನಿಸಬಹುದು. ಅಥವಾ ಜಾಣ್ಮೆ, ಬುದ್ಧಿವಂತಿಕೆ, ಮಾಗುವಿಕೆ ಎನ್ನಲೂಬಹುದು. ಕೃಷಿ ಕುಟುಂಬದಿಂದ ಬಂದವರಿಗೆ ‘ಅನ್ನ’ ಎನ್ನುವುದು ಬದುಕನ್ನು ಬೆಸೆಯುವ, ದಿನನಿತ್ಯ ಬಳಕೆಯಾಗುವ, ರೂಪಕವಾಗಿ ಕಾಡುವ ಕಲಿಸುವ ಸಾಧನ. ಅದನ್ನೇ ಡಿಕೆ ಕೂಡ ಸದ್ಯದ ರಾಜಕಾರಣದ ಸಂದರ್ಭಕ್ಕನುಸಾರವಾಗಿ ಬಳಸಿದ್ದಾರೆ. ಆ ಮೂಲಕ ತಮ್ಮನ್ನು ತಾವೇ ಸಂತೈಸಿಕೊಂಡಿದ್ದಾರೆ, ಮುಟ್ಟಿಸಬೇಕಾದವರಿಗೆ ಸೂಕ್ಷ್ಮ ವಾಗಿ ಸಂದೇಶವನ್ನೂ ಮುಟ್ಟಿಸಿದ್ದಾರೆ.

ಆದರೆ ಈ ಮಟ್ಟಿಗಿನ ಮೆಚ್ಯೂರಿಟಿ ಇಲ್ಲದ ಅವರ ಸಹೋದರ ಡಿ.ಕೆ.ಸುರೇಶ್, ‘‘ಕೆಲಸಕ್ಕೆ ನಾವು, ಅಧಿಕಾರಕ್ಕೆ ಅವರಾ?’’ ಎಂದು ಕಾಂಗ್ರೆಸ್ ನಾಯಕರೆದುರೆ ತಮ್ಮ ಒಡಲಾಳದ ಸಂಕಟವನ್ನು ಹೊರಹಾಕಿದ್ದಾರೆ. ಅವರ ಮಾತಲ್ಲಿ ನಿಜವಿರಬಹುದು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬರಲು ಡಿಕೆ ಶಿವಕುಮಾರ್ ಸಾಕಷ್ಟು ಶ್ರಮ ಸುರಿದಿರಬಹುದು. ವಿರೋಧಪಕ್ಷಗಳ ಖರೀದಿಯಿಂದ ಬಚಾವು ಮಾಡಲು ಶಾಸಕರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿರಬಹುದು. ಶಾಸಕರ ಸಕಲೆಂಟು ಬೇಡಿಕೆ ಗಳನ್ನು ಪೂರೈಸಲು ಹಣ-ಸಮಯ ವ್ಯಯಿಸಿರಬಹುದು. ಕಾಂಗ್ರೆಸ್ ಒಳಗಿನ ಮತ್ತು ಹೊರಗಿನ ವಿರೋಧಿಗಳಿಂದ ಎದುರಾಗುವ ಎಲ್ಲ ರೀತಿಯ ಅಡೆ-ತಡೆಗಳನ್ನು ಸಮರ್ಥವಾಗಿ ನಿಭಾಯಿಸಿರಬಹುದು. ಬಿಕ್ಕಟ್ಟಿನ ಸಂದರ್ಭಗಳನ್ನು ಸವಾಲಿನಂತೆ ಸ್ವೀಕರಿಸಿ ಯಶಸ್ಸು ಕಂಡಿರಬಹುದು. ಹಾಗಂತ ಅದನ್ನು ಹೀಗೆ ಚಿಲ್ಲರೆ ಮಾತುಗಳ ಮಟ್ಟಕ್ಕೆ ಇಳಿಸಿದರೆ- ಜವಾಬ್ದಾರಿ ನಿಭಾಯಿಸಿದ ವ್ಯಕ್ತಿಯ ಬೆವರಿಗೂ ಬೆಲೆ ಇಲ್ಲ, ಶ್ರಮಕ್ಕೂ ಫಲವಿಲ್ಲ. ಇದು ಡಿಕೆ ಸುರೇಶ್‌ಗೆ ಗೊತ್ತಿಲ್ಲ.

ಗೊತ್ತಿರುವ ಡಿಕೆ ಶಿವಕುಮಾರ್, ‘‘ಪಕ್ಷ ವಿಶ್ವಾಸವಿಟ್ಟು ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ, ನನ್ನ ಶ್ರಮಕ್ಕೆ, ಸೇವೆಗೆ ಪ್ರತಿಫಲವಾಗಿ ಪಕ್ಷ ಸೂಕ್ತ ಸ್ಥಾನಮಾನ ನೀಡಲಿದೆ’’ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ‘ಸೂಕ್ತ ಸ್ಥಾನಮಾನ’ ಕೊಡಲೇಬೇಕು ಎಂಬುದನ್ನು ‘ಜವಾಬ್ದಾರಿ, ಶ್ರಮ, ಸೇವೆ’ಗಳ ಮೂಲಕ ಅಧಿಕಾರಯುತವಾಗಿ ಪಕ್ಷದ ಹೈಕಮಾಂಡ್ ಮೇಲೆ ಪರೋಕ್ಷವಾಗಿ ಒತ್ತಡವನ್ನೂ ಹಾಕಿದ್ದಾರೆ.

ಡಿಕೆಯ ಒತ್ತಡವನ್ನು ಕಾಂಗ್ರೆಸ್ಸಿನ ಹಿರಿಯ ನಾಯಕರು ವಿಶ್ಲೇಷಿಸುತ್ತ, ‘‘ಸಾಮಾನ್ಯವಾಗಿ ನಮ್ಮ ಕಾಂಗ್ರೆಸ್ಸಿಗರು ಆರಾಮ ಖೋರ ರಾಜಕಾರಣಿಗಳು. ಗೆದ್ದಾಗ ಅಧಿಕಾರ, ಸೋತಾಗ ಸೋಮಾರಿ ಎನ್ನುವ ಜಾಯಮಾನದವರು. ಆದರೆ ಡಿಕೆ ಹಾಗಲ್ಲ. ಹೆಚ್ಚೂಕಡಿಮೆ ದೇವೇಗೌಡರಂತೆ ಅಥವಾ ಅವರಿಗಿಂತಲೂ ಒಂದು ಕೈ ಹೆಚ್ಚು. ಪ್ರವಾಹದೆದುರು ಈಜುವ ಛಲಗಾರ, ಹಿಡಿದಿದ್ದನ್ನು ಸಾಧಿಸುವ ಹಠವಾದಿ, ರಾಜಕಾರಣದಲ್ಲಿ ಚಾಣಕ್ಯ. ಎಂತಹ ಕಠಿಣ ಪರಿಸ್ಥಿತಿ ಎದುರಿಸಲೂ ಸಿದ್ಧರಿರುವ, ಮುಂದೆ ನಿಂತು ಎದುರಿಸುವ ಧೈರ್ಯಸ್ಥ. ಮೀಡಿಯಾಗಳ ‘ಮರ್ಮ’ ಬಲ್ಲವರು. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟೇ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಗೆ ಶಕ್ತಿಮೀರಿ ಶ್ರಮಿಸಿದರು. ಆದರೆ ಪರಿಸ್ಥಿತಿಯ ಲಾಭ ಕುಮಾರಸ್ವಾಮಿ ಪಾಲಾಯಿತು. ಪ್ರಯತ್ನವನ್ನೇನೂ ಬಿಟ್ಟಿಲ್ಲ, ಬಿಡುವುದೂ ಇಲ್ಲ. ಅವರ ಪಟ್ಟುಗಳೇ ಬೇರೆ’’ ಎನ್ನುತ್ತಾರೆ.

ಡಿಕೆಯವರಲ್ಲಿ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ, ಬದಲಾದ ಸಂದರ್ಭವನ್ನು ತನ್ನನುಕೂಲಕ್ಕೆ ಬಳಸಿಕೊಳ್ಳುವ ಗುಣವಿದೆ. ಎಸ್.ಎಂ.ಕೃಷ್ಣರಿದ್ದಾಗ ಅವರಿಗೆ ಜೈ, ಬಿಜೆಪಿಗೆ ಹೋದಾಗ ಅದಕ್ಕೂ ಸೈ. ಮೂಲ ಕಾಂಗ್ರೆಸ್ಸಿಗನೆಂದು ದೂರವು ಳಿಯದೆ ಸಿದ್ದರಾಮಯ್ಯನವರೊಂದಿಗೂ ಹೊಂದಿಕೊಂಡಿದ್ದವರು. ಗೌಡರ ಕುಟುಂಬದೊಂದಿಗಿನ ಹಗೆತನವನ್ನು ಮರೆತು, ಸಿಟ್ಟನ್ನು ಕಟ್ಟಿಟ್ಟು, ಕಹಿ ನೋವನ್ನು ನುಂಗಿ ಅವರೊಂದಿಗೆ ಕೈ ಜೋಡಿಸಿದ್ದು- ಸಾಮಾನ್ಯರಿಗೆ ಸಾಧ್ಯವಿಲ್ಲದ್ದು. ಹಾಗೆಯೇ ಉಪಮುಖ್ಯಮಂತ್ರಿ ಬೇಕೆಂದು ಹಠಕ್ಕೆ ಬಿದ್ದರು. ಅದೂ ದಕ್ಕದಿದ್ದಾಗ ಶಾಸಕರನ್ನು ಹಿಡಿದಿಟ್ಟಿದ್ದ ಹಿಲ್ಟನ್ ಹೊಟೇಲ್ ರೆಸಾರ್ಟ್‌ನಿಂದ ದೂರವಾಗಿ, ಯಾರ ಸಂಪರ್ಕಕ್ಕೂ ಸಿಗದೆ ಹೈಕಮಾಂಡನ್ನು ಸಂಕಷ್ಟಕ್ಕೆ ಸಿಲುಕಿ ಸಿದರು. ವಿಶ್ವಾಸಮತ ಯಾಚನೆಯ ಹಿಂದಿನ ರಾತ್ರಿ ನಡೆದ ಶಾಸಕರ ಸಭೆಗೂ ಗೈರು ಹಾಜರಾದರು. ಕೇಳಿದರೆ, ‘‘ಮಾಯ ಆಗೋದಕ್ಕೆ ನಾನು ಹೇಡಿಯಲ್ಲ. ನಾನು ನೇರವಾಗಿಯೇ ಹೋರಾಟ ಮಾಡುವವನು’’ ಎಂದು ಆರ್‌ಆರ್ ನಗರ ಚುನಾವಣೆಯ ನೆಪ ಹೇಳಿದರು. ‘‘ವಿಶ್ವಾಸಮತಕ್ಕೆ ಯಾವ ಅಡೆತಡೆಯೂ ಆಗುವುದಿಲ್ಲ, ಆಲ್ ಈಸ್ ವೆಲ್’’ ಎಂದರು. ಡಿಕೆ ಹೇಳಿದಂತೆಯೇ ಎಲ್ಲವೂ ನಡೆಯಿತು. ಅವರಲ್ಲಿ ಶಕ್ತಿ-ಸಾಮರ್ಥ್ಯ ವೂ ಇದೆ, ಅದೇ ಒತ್ತಡ-ಒತ್ತಾಯದಂತೆಯೂ ಕೆಲಸ ಮಾಡುತ್ತಿದೆ. ಅದಕ್ಕೆ ಹೈಕಮಾಂಡ್ ಮಣಿಯಬಹುದು, ಸಚಿವ ಸ್ಥಾನ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲೂಬಹುದು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಆಶ್ಚರ್ಯಕರ ಸಂಗತಿ ಎಂದರೆ, ಡಿಕೆಯ ಈ ಶಕ್ತಿ-ಸಾಮರ್ಥ್ಯ ವನ್ನು ಬಹಳ ಹಿಂದೆಯೇ, 1985ರಲ್ಲಿಯೇ ದೇವೇಗೌಡರು ಗುರುತಿಸಿದ್ದರು. ‘‘ಈ ಹುಡುಗನ್ನ ಹಿಂಗೇ ಬಿಟ್ರೆ ಮುಂದೊಂದು ದಿನ ನಮ್ಮ ಪಾರ್ಟಿಗೇ ಮುಳುಗು ನೀರಾಗುತ್ತಾನೆ. ಇವನನ್ನ ಈಗಲೇ ಮಟ್ಟ ಹಾಕಬೇಕು. ಇಲ್ಲದಿದ್ರೆ ನಮ್ಮನ್ನು ನೆಟ್ಟಗೆ ಮಾಡ್ತಾನೆ’’ ಎಂದು ಭವಿಷ್ಯ ನುಡಿದಿದ್ದರು. 1985 ರಲ್ಲಿ ರಾಮಕೃಷ್ಣ ಹೆಗಡೆ ಅವರು ವಿಧಾನಸಭೆ ವಿಸರ್ಜಿಸಿ ಮತ್ತೆ ಚುನಾವಣೆಗೆ ಹೋದಾಗ, ಬೆಂಗಳೂರಿನ ಗ್ರಾಮಾಂತರ ಜಿಲ್ಲೆ ಸಾತನೂರಿನಿಂದ ದೇವೇಗೌಡರು ಸ್ಪರ್ಧಿಸಿದ್ದರು. ಆಗ ಗೌಡರ ಎದುರಾಳಿಯಾಗಿ ಮೊದಲ ಬಾರಿಗೆ ಕಣಕ್ಕಿಳಿದಿದ್ದವರು ಇದೇ ಡಿಕೆ ಶಿವಕುಮಾರ್. ಆಗಿನ್ನೂ ಅವರಿಗೆ 24ರ ಹರೆಯ. ಮೊದಲ ಪ್ರಯತ್ನದಲ್ಲಿಯೇ 30 ಸಾವಿರ ಮತ ಪಡೆದು ದೊಡ್ಡಗೌಡರಿಗೆ ನಡುಕ ಹುಟ್ಟಿಸಿದ್ದರು. ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕ, ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ್ದ ಬಲಾಢ್ಯ ದೇವೇಗೌಡರಿಗೆ ಆಗಲೇ, ಶಿವಕುಮಾರ್ ರಾಜಕೀಯ ಭವಿಷ್ಯದ ಬಗ್ಗೆ ವಾಸನೆ ಬಡಿದಿತ್ತು. ಅಯಾಚಿತವಾಗಿ ಆ ಮಾತು ಹೊರಬಿದ್ದಿತ್ತು.

ದೇವೇಗೌಡರ ಮಾತು ನಿಜವಾಗಲು ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ಕನಕಪುರದ ಉಯ್ಯಂಬಳ್ಳಿ ಹೋಬಳಿಯ ದೊಡ್ಡಾಲಹಳ್ಳಿ ಕೆಂಪೇಗೌಡ-ಗೌರಮ್ಮನವರ ಪುತ್ರನಾಗಿ 1961, ಮೇ 15ರಂದು ಜನಿಸಿದ ಡಿಕೆ ಶಿವಕುಮಾರ್, ಪ್ರಾಥಮಿಕ ಶಿಕ್ಷಣವನ್ನು ಕನಕಪುರದ ಎಸ್.ಕರಿಯಪ್ಪನವರ ವಿದ್ಯಾಸಂಸ್ಥೆಯಲ್ಲಿ ಮುಗಿಸಿ, ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದರು. ರಾಜಕಾರಣಕ್ಕೆ ಬಂದಮೇಲೆ ಮುಕ್ತ ವಿವಿ ಮೂಲಕ ರಾಜ್ಯಶಾಸ್ತ್ರದಲ್ಲಿ ಎಂಎ ಮಾಡಿದರು. ಮೊದಲ ಬಾರಿಗೆ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕರಾಗುವ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದರು. ನಂತರ ಜಿಲ್ಲಾ ಪಂಚಾಯತ್ ಸದಸ್ಯರಾದರು. 1985 ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋತರು.

1989 ರ ಚುನಾವಣೆಯಲ್ಲಿ ಶಾಸಕನಾಗಿ ಗೆದ್ದು ವಿಧಾನಸೌಧದ ಮೆಟ್ಟಿಲು ಹತ್ತಿದ ಡಿಕೆ, ಅಲ್ಲಿಂದ 2018ರವರೆಗೆ, ಸತತವಾಗಿ ಏಳು ಬಾರಿ ಗೆಲ್ಲುವ ಮೂಲಕ ದಾಖಲೆ ಬರೆದವರು. ಅಗ್ರೆಸ್ಸಿವ್ ಆ್ಯಟಿಟ್ಯೂಡ್ ಇಟ್ಟುಕೊಂಡೆ ರಾಜಕಾರಣದ ಒಳ-ಹೊರಗನ್ನು ಅರಿತು ಅರಗಿಸಿಕೊಂಡವರು. 1994ರಲ್ಲಿ ವಿರೋಧಿಗಳ ತಂತ್ರಕ್ಕೆ ಬಲಿಯಾಗಿ ಟಿಕೆಟ್ ವಂಚಿತರಾದರು. ಧೈರ್ಯಗೆಡದ ಡಿಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದುಬಂದರು. 1999ರಲ್ಲಿ ಮಾಜಿ ಪ್ರಧಾನಿ ಪುತ್ರ ಕುಮಾರಸ್ವಾಮಿಯನ್ನು ಮಣಿಸಿ ದರು. ಎಸ್.ಎಂ.ಕೃಷ್ಣ ಸಂಪುಟದಲ್ಲಿ ನಗರಾಭಿವೃದ್ಧಿ, ಸಹಕಾರ ಸಚಿವನಾಗಿ, ನೀಲಿಗಣ್ಣಿನ ಹುಡುಗನಾಗಿ, ನಾಲ್ಕೂವರೆ ವರ್ಷಗಳ ಕಾಲ ರಾಜನಂತೆ ಮೆರೆದರು. ಶಿಕ್ಷಣ, ರಿಯಲ್ ಎಸ್ಟೇಟ್ ಮತ್ತು ಗಣಿಗಾರಿಕೆಗಳಲ್ಲಿ ಪರೋಕ್ಷವಾಗಿ ಪಾಲ್ಗೊಂಡು, ರಾಜಕಾರಣದೊಂದಿಗೆ ಉದ್ಯಮ ಬೆರೆಸಿ ಆರ್ಥಿಕವಾಗಿ ಸದೃಢರಾದರು. ಆನಂತರ ಗೌಡರ ಪಕ್ಷದ ಪಿಜಿಆರ್ ಸಿಂಧ್ಯಾರೊಂದಿಗೆ ಒಳಒಪ್ಪಂದ ಮಾಡಿಕೊಂಡು ಪ್ರತಿ ಚುನಾವಣೆಯಲ್ಲೂ ಗೆಲುವು ದಾಖಲಿಸುತ್ತಲೇ ನಡೆದರು. ಗೌಡರು ಡಿಕೆಯ ಗೆಲುವಿಗೆ ಕಡಿವಾಣ ಹಾಕಲು ಕ್ಷೇತ್ರ ವಿಂಗಡಣೆ ನೆಪದಲ್ಲಿ ಸಾತನೂರು ಕ್ಷೇತ್ರವನ್ನೇ ಇಲ್ಲವಾಗಿಸಿದರು. ಆದರೆ ಡಿಕೆ ಕನಕಪುರಕ್ಕೆ ಬಂದರು, ಅಲ್ಲಿಂದಲೂ ಗೆದ್ದರು. ಅಷ್ಟೇ ಅಲ್ಲ, ಗೌಡರ ಕುಟುಂಬದ ತಂತ್ರಗಳಿಗೆ ರಕ್ಷಣಾತ್ಮಕ ಪ್ರತಿತಂತ್ರಕ್ಕಷ್ಟೇ ಸೀಮಿತವಾಗಿದ್ದ ರಾಜಕೀಯ ಜಾಣ್ಮೆಯನ್ನು, ಗೌಡರ ಎದುರು ಮಹಿಳೆಯನ್ನು ಕಣಕ್ಕಿಳಿಸಿ ಮಣಿಸುವ ಮೂಲಕ, ಗೌಡರ ಪ್ರಾಬಲ್ಯ ಮುರಿಯಲೂ ಬಳಸಿಕೊಂಡರು. ಸಹೋದರ ಡಿ.ಕೆ.ಸುರೇಶ್‌ರನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡು ಬಲ ವೃದ್ಧಿಸಿಕೊಂಡರು. ಸಾಲದು ಎಂಬಂತೆ, ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡುವ ಮೂಲಕ ಜೆಡಿಎಸ್‌ನಲ್ಲಿದ್ದ ಏಳು ಶಾಸಕರನ್ನು ಕಾಂಗ್ರೆಸ್‌ಗೆ ಸೆಳೆದು, ಗೌಡರ ಬಲ ಕುಗ್ಗಿಸಿದರು.

ಇಷ್ಟೆಲ್ಲ ಇದ್ದರೂ 2004ರಿಂದ 2014ರವರೆಗೆ, 10 ವರ್ಷಗಳ ಕಾಲ ಅಧಿಕಾರ ಸ್ಥಾನದಿಂದ ದೂರವೇ ಇದ್ದರು. ಆದರೆ ಪಕ್ಷ ತೊರೆಯದೆ ‘ಕಾಲ’ಕ್ಕಾಗಿ ಕಾದರು. ನಂತರ ಹೈಕಮಾಂಡ್ ಮೇಲೆ ಒತ್ತಡ ಹೇರಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಇಂಧನ ಸಚಿವರಾದರು. ಅಲ್ಲೂ ಅಷ್ಟೇ, ಅವಧಿಯುದ್ದಕ್ಕೂ ಅವರನ್ನು ಬೆಂಬಲಿಸುತ್ತ ಬಂದರೂ, ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ರೇಸಿನಲ್ಲಿ ನಾನೂ ಒಬ್ಬ ಎಂಬುದನ್ನು ಪ್ರತಿ ಹಂತದಲ್ಲೂ ಸಾಬೀತುಪಡಿಸಿದರು. ಬಹುಸಂಖ್ಯಾತರಾದ ಒಕ್ಕಲಿಗ ಜಾತಿ ಬಲದ ಜೊತೆಗೆ ಹಣಬಲವೂ (1985ರಲ್ಲಿ ಮೊದಲ ಸಲ ಚುನಾವಣೆಗೆ ನಿಂತಾಗ ಸಾಮಾನ್ಯ ರೈತನ ಮಗನಾಗಿದ್ದ ಡಿಕೆ, 2018ರ ಚುನಾವಣೆಯ ಹೊತ್ತಿಗೆ ಬರೋಬ್ಬರಿ 548 ಕೋಟಿ ರೂ.ಗಳ ಅಧಿಕೃತ ಆಸ್ತಿ ಘೋಷಣೆಯ ಮೂಲಕ ಶ್ರೀಮಂತ ರಾಜಕಾರಣಿಯ ಪಟ್ಟಿಗೆ ಸೇರಿದ್ದರು) ಬೆನ್ನಿಗಿತ್ತು. 2017ರಲ್ಲಿ ಗುಜರಾತಿನ ಅಹ್ಮದ್ ಪಟೇಲ್ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗುವಾಗ, ಬಿಜೆಪಿ ಶಾಸಕರನ್ನು ಖರೀದಿಸಲು ಮುಂದಾ ದಾಗ, ಅವರನ್ನು ಕಾಯ್ದಿಟ್ಟುಕೊಂಡು, ಅಹ್ಮದ್ ಪಟೇಲ್‌ರನ್ನು ಗೆಲ್ಲಿಸುವ ಮೂಲಕ, ದಿಲ್ಲಿ ಮಟ್ಟದಲ್ಲಿ ಗುರುತಿಸುವಂತಹ ವರ್ಚಸ್ವಿ ನಾಯಕನಾಗಿಯೂ ಬೆಳೆದು ನಿಂತರು. ಇದು ಪ್ರಧಾನಿ ಮೋದಿಯ ಕಣ್ಣನ್ನು ಕೆಂಪಗಾಗಿಸಿತು. ಟ್ರಬಲ್ ಶೂಟರ್ ಡಿಕೆ ಮತ್ತವರ ಸಂಬಂಧಿಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿಸಿ, ಟ್ರಬಲ್ ಕೊಡಲು ನೋಡಿದರು. ಇದು ದೇಶದಾದ್ಯಂತ ಭಾರೀ ಸುದ್ದಿಯಾಗಿ, ಕಾಂಗ್ರೆಸ್ ಪಕ್ಷದ ನೈತಿಕ ಬಲ ಕುಗ್ಗಿಸುವ ತಂತ್ರವಾಗಿತ್ತು. ಆದರೆ ಡಿಕೆ ಮಾತ್ರ ಏನೂ ಆಗಿಯೇ ಇಲ್ಲವೆಂಬಂತೆ, ತಮ್ಮ ಎಂದಿನ ಗೌಡಿಕೆ ಗತ್ತಿನಲ್ಲಿ ಓಡಾಡಿಕೊಂಡಿದ್ದಾರೆ ಅಥವಾ ಹಾಗೆ ವರ್ತಿಸುತ್ತಿದ್ದಾರೆ. ಭವಿಷ್ಯದ ಸಿಎಂ ಕುರ್ಚಿಯ ಕಾಗುಣಿತದಲ್ಲಿ ಮುಳುಗಿದ್ದಾರೆ. ಆಶ್ಚರ್ಯಕರ ಸಂಗತಿ ಎಂದರೆ, ಯಾರನ್ನು ತಮ್ಮ ರಾಜಕೀಯ ಎದುರಾಳಿ ಎಂದು ಪರಿಗಣಿಸಿದ್ದರೋ, ಉದ್ದಕ್ಕೂ ಪ್ರಬಲವಾಗಿ ವಿರೋಧಿಸಿಕೊಂಡು ಬಂದಿದ್ದರೋ, ಅದೇ ಗೌಡರ ಕುಟುಂಬ, ತತ್ವ-ಸಿದ್ಧಾಂತ ಮುಂದೊಡ್ಡಿ ಅಧಿಕಾರ ಹಿಡಿದಿದೆ. ಹಿಡಿಯುವಲ್ಲಿ ಸಹಕರಿಸಿದ ಡಿಕೆಯ ಬೆನ್ನಿಗೆ ನಿಂತು ಬೆಂಬಲಿಸುತ್ತಿದೆ. ಬದಲಾದ ಪರಿಸ್ಥಿತಿಯನ್ನು ಅರಿತ ಸಿದ್ದರಾಮಯ್ಯ ಕೂಡ ಡಿಕೆಯ ಪರವಿದ್ದಾರೆ. ಡಿಸಿಎಂ ಕುರ್ಚಿ ಮೇಲೆ ಕೂತ ಪರಮೇಶ್ವರ್, ‘‘ಕೆಪಿಸಿಸಿ ಅಧ್ಯಕ್ಷರಾಗಲು ಡಿಕೆ ಅರ್ಹರಿದ್ದಾರೆ’’ ಎಂದಿದ್ದಾರೆ. ಖರ್ಗೆ ದಿಲ್ಲಿಗೆ ಸೀಮಿತರಾಗಿದ್ದಾರೆ. ಲಿಂಗಾಯತರಲ್ಲಿ ಪ್ರಭಾವಿಗಳ ಕೊರತೆ ಕಾಡುತ್ತಿದೆ. ಹೈಕಮಾಂಡಿಗೆ 2019ರ ಲೋಕಸಭಾ ಚುನಾವಣೆ ಮುಖ್ಯವಾಗಿದೆ. ಡಿಕೆಯೂ ಕಾದಿದ್ದಾರೆ, ಕಾಲವೂ ಕೂಡಿ ಬಂದಿದೆ.

Writer - -ಬಸು ಮೇಗಲಕೇರಿ

contributor

Editor - -ಬಸು ಮೇಗಲಕೇರಿ

contributor

Similar News