ಕರ್ನಾಟಕದ ‘ಕಣ್ಣೀರ್’ಸ್ವಾಮಿ

Update: 2018-05-13 05:09 GMT

‘‘ಕುಮಾರಸ್ವಾಮಿ ಬದುಕಬೇಕಾದ್ರೆ ಜೆಡಿಎಸ್ ಗೆಲ್ಲಿಸಿ. ಇಲ್ಲದಿದ್ದರೆ ನಾನು ಹೆಚ್ಚು ದಿನ ಬದುಕುವುದಿಲ್ಲ. ನನ್ನ ಜೀವನ ನಿಮ್ಮ ಕೈಯಲ್ಲಿದೆ. ದುಡ್ಡು ಬೇಕೆಂದು ಅಭ್ಯರ್ಥಿಗಳು ಹಿಂದೆ ಬಿದ್ದಿದ್ದಾರೆ. ಕೈ ಖಾಲಿಯಾಗಿದೆ. ಚಂದಾ ಎತ್ತಿ ಕೊಡಬೇಕಿದೆ. ನಾನೆಲ್ಲಿ ಹೋಗಿ ಸಾಯಲಿ..’’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಚುನಾವಣಾ ರ್ಯಾಲಿಯಲ್ಲಿ ಸಾರ್ವಜನಿಕವಾಗಿ ಕಣ್ಣೀರು ಹಾಕಿದರು. ಇದು ಒಬ್ಬ ರಾಜಕೀಯ ನಾಯಕನ ಅಸಹಾಯಕ ಸ್ಥಿತಿಯನ್ನು, ಪ್ರಾದೇಶಿಕ ಪಕ್ಷದ ಪರಿಸ್ಥಿತಿಯನ್ನು, ಸದ್ಯದ ರಾಜಕಾರಣದ ಚಿತ್ರಣವನ್ನು ತೆರೆದಿಟ್ಟಿದೆ. ಅದಕ್ಕಿಂತಲೂ ಹೆಚ್ಚಾಗಿ ಜೆಡಿಎಸ್ ನೊಗವನ್ನು ಕುಮಾರಸ್ವಾಮಿ ಎಂಬ ನಾಯಕನೊಬ್ಬನೆ ಏಕಾಂಗಿಯಾಗಿ ಹೊತ್ತು ಸಾಗುತ್ತಿರುವುದನ್ನು ನಿಚ್ಚಳವಾಗಿ ತೋರುತ್ತದೆ. ಜಾತ್ಯತೀತ ಜನತಾದಳವನ್ನು ಅಪ್ಪ-ಮಕ್ಕಳ ಪಕ್ಷವೆಂದು ಕರೆದರೂ; ಪಕ್ಷದ ಆಗುಹೋಗುಗಳನ್ನು ನಿರ್ಣಯಿಸುವ, ನಿರ್ಧರಿಸುವ, ಕಾರ್ಯರೂಪಕ್ಕಿಳಿಸುವ ಸಂಪೂರ್ಣ ಜವಾಬ್ದಾರಿಯನ್ನು ಅಪ್ಪ-ಮಕ್ಕಳೇ ಮುಂದೆ ನಿಂತು ಮಾಡಿದರೂ; ಹಕ್ಕು- ಅಧಿಕಾರ-ಲಾಭ ಕುಟುಂಬದ ಇತರರಿಗೂ, ಜವಾಬ್ದಾರಿ ಮಾತ್ರ ಕುಮಾರಸ್ವಾಮಿಗೂ ಹಂಚಿಕೆಯಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ಗೌಡರ ಕುಟುಂಬದ, ಜೆಡಿಎಸ್ ಪಕ್ಷದ ಅಲಿಖಿತ ಒಪ್ಪಂದ. 1999ರ ವೇಳೆಗೆ ದೇವೇಗೌಡರು ಪ್ರಧಾನಿ ಪಟ್ಟದಿಂದ ಕೆಳಗಿಳಿದಿದ್ದರು. ಜನತಾದಳ ನಾಯಕರ ನಡುವೆ ಆಂತರಿಕ ಕಚ್ಚಾಟ, ಒಳಜಗಳ ಮುಗಿಲು ಮುಟ್ಟಿತ್ತು. ಅದರ ಫಲವಾಗಿ ಕಾಂಗ್ರೆಸ್ ಅಧಿಕಾರಕ್ಕೇರಿತ್ತು. ಗೌಡರ ರಾಜಕೀಯ ವೈರಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿ, 5 ವರ್ಷಗಳ ಕಾಲ ಅಧಿಕಾರವಿಲ್ಲದಂತಾಗಿತ್ತು. ಆ ಕಷ್ಟದ ಕಾಲದಲ್ಲೂ, 2004ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 58 ಸ್ಥಾನ ಗೆದ್ದಿತ್ತು. ಕೃಷ್ಣರ ನಿರ್ಗಮನವಾಗಿತ್ತು. ಆ ಸಂದರ್ಭ ನೋಡಿ ಸೆಕ್ಯುಲರ್ ಕಾರ್ಡ್ ಹಾಕಿದ ದೇವೇಗೌಡರು, 65 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಹೈಕಮಾಂಡನ್ನು ಬಗ್ಗಿಸಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿ ಸಮ್ಮಿಶ್ರ ಸರಕಾರ ರಚನೆಯಾಗುವಂತೆ ನೋಡಿಕೊಂಡರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿದ್ದ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆಯನ್ನು, ಜನತಾದಳದ ಸಿದ್ದರಾಮಯ್ಯರನ್ನು ವ್ಯವಸ್ಥಿತವಾಗಿ ಹಿಂದಕ್ಕೆ ತಳ್ಳಿದ ಗೌಡರು, ತಮ್ಮ ಅನುಕೂಲಕ್ಕೆ ಆಗುವ ಧರಂಸಿಂಗ್‌ರನ್ನು ಮುಖ್ಯಮಂತ್ರಿಯನ್ನಾಗಿಸುವಲ್ಲಿ ಯಶಸ್ವಿಯಾದರು. ಆಗ ಸರಕಾರ ಮತ್ತು ಪಕ್ಷ ಸಂಪೂರ್ಣವಾಗಿ ಗೌಡರ ಹಿಡಿತದಲ್ಲಿತ್ತು. ಎರಡು ವರ್ಷ ಯಾವ ಅಡೆತಡೆಯೂ ಇಲ್ಲದೆ, ಎಲ್ಲವೂ ಸರಾಗವಾಗಿ ನಡೆದಿತ್ತು. 2 ವರ್ಷಗಳ ನಂತರ, 2006ರಲ್ಲಿ, ಯಾವಾಗ ಕುಮಾರಸ್ವಾಮಿ ಜೆಡಿಎಸ್ ಶಾಸಕರ ಒಂದು ಗುಂಪನ್ನು ಹೈಜಾಕ್ ಮಾಡಿ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿ, ಮುಖ್ಯಮಂತ್ರಿಯಾದರೋ, ಅಂದಿನಿಂದ ಪಕ್ಷದ ಮೇಲಿನ ಹಿಡಿತ ಗೌಡರ ಕೈ ತಪ್ಪಿತು. ಹಣ-ಅಧಿಕಾರದ ಕಡೆ ಜನಜಂಗುಳಿ ಹರಿಯಿತು. ಅಲ್ಲಿಯವರೆಗೆ ಹಲ್ಲು ಕಚ್ಚಿಕೊಂಡಿದ್ದ ಹೊಸ ಪೀಳಿಗೆ ಕುಮಾರಸ್ವಾಮಿಯನ್ನು ನಾಯಕನನ್ನಾಗಿ ಆರಿಸಿಕೊಂಡಿತು. ಹಾಗೆ ಆರಿಸಿಕೊಳ್ಳುವಲ್ಲಿ ಕುಮಾರಸ್ವಾಮಿಯವರ ಧಾರಾಳತನ, ಆತ್ಮೀಯತೆ, ಕಷ್ಟಕ್ಕಾಗುವ ಗುಣವೇ ಮುಖ್ಯವಾಗಿತ್ತು. ಜೆಡಿಎಸ್-ಬಿಜೆಪಿಯ ಹೊಂದಾಣಿಕೆಯನ್ನು ಅನೈತಿಕ ಕೂಡಾವಳಿಯಂತೆ ಕಂಡು ಕಣ್ಣೀರಿಟ್ಟ ಗೌಡರು, ಪಕ್ಷದ ಚಟುವಟಿಕೆಗಳಿಂದ ದೂರವುಳಿದರು. ಅದು ಕುಮಾರಸ್ವಾಮಿಯವರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿತು. ಶಾಸಕರು, ಕಾರ್ಯಕರ್ತರು ಕುಮಾರಸ್ವಾಮಿಯ ನಾಯಕತ್ವವನ್ನು ಒಪ್ಪಿ, ರಾಜ್ಯದಲ್ಲಿ ಹೊಸ ರೆಸಾರ್ಟ್ ರಾಜಕಾರಣ ಆರಂಭವಾಯಿತು.

ಆದರೆ ದೇವೇಗೌಡರ ರಾಜಕಾರಣವನ್ನು ಕಾಲದಿಂದ ಬಲ್ಲವರು, ‘‘ದೇವೇಗೌಡರಿಗೂ ಕುಮಾರಸ್ವಾಮಿಗೂ ಭಾರೀ ವ್ಯತ್ಯಾಸವಿದೆ. ಗೌಡರ ಸ್ವಭಾವ ಮತ್ತು ಶೈಲಿ ಶಿಸ್ತಿನ ಸರಕಾರಿ ನೌಕರನ ಬದುಕಿನಂತೆ. ಕುಮಾರಸ್ವಾಮಿಯದು ಹೊಸಗಾಲದ ಐಟಿಬಿಟಿ ಟೆಕ್ಕಿಯಂತೆ. ಗೌಡರು ನಿಧಾನವಾಗಿ ಒಂದೊಂದೇ ಮೆಟ್ಟಿಲು ಹತ್ತಿ ಉನ್ನತ ಸ್ಥಾನಕ್ಕೇರಿದರೆ, ಕುಮಾರಸ್ವಾಮಿಯವರು ಶಾಸಕರಾದ ಹೊಸತರಲ್ಲಿಯೇ ಸಿಎಂ ಕುರ್ಚಿ ಮೇಲೆ ಕೂತರು. ಗೌಡರು ಅನುಭವ ನೆಚ್ಚಿ ಕೆಲಸ ಮಾಡಿದರೆ, ಕುಮಾರಸ್ವಾಮಿ ಯಾರ ಮಾತನ್ನೂ ಕೇಳದವರು. ಚುನಾವಣೆಗೆ ದುಡ್ಡು ಕೊಡುವ ಜಾಯಮಾನ ಗೌಡರದಲ್ಲ. ಆ ಸಂದರ್ಭದಲ್ಲಿ ಆಪ್ತರು ಖರ್ಚು ಮಾಡುತ್ತಾರೆ, ಅಧಿಕಾರಕ್ಕೆ ಬಂದ ನಂತರ, ಆಪ್ತರಿಗೆ ಅನುಕೂಲ ಮಾಡಿಕೊಡುತ್ತಾರೆ. ಇಲ್ಲಿ ಶಾಸಕ ಎನ್ನುವುದು ಬಂಡವಾಳವೂ ಹೌದು, ಸಮಯಕ್ಕೆ ಬೇಕಾದಾಗ ಬಿಕರಿಗಿಡುವ ಸರಕೂ ಹೌದು. ಇದು ದಶಕಗಳ ಕಾಲ ನಡೆಸಿಕೊಂಡು ಬಂದಿರುವ ಗೌಡರ ರಾಜಕಾರಣ. ಆದರೆ ಕುಮಾರಸ್ವಾಮಿಯವರದು ಇದಕ್ಕೆ ತದ್ವಿರುದ್ಧ. ಅವರದು ಸಮಾಧಾನದ ಬದುಕು; ಇವರದು ವೇಗೋತ್ಕರ್ಷದ ಬದುಕು. ಆ ವ್ಯತ್ಯಾಸವರಿತರೆ ಈಗಿನ ಸಮಸ್ಯೆಯ ಮೂಲ ಮತ್ತು ಪರಿಹಾರ ಎರಡೂ ತಿಳಿಯುತ್ತದೆ’’ ಎನ್ನುತ್ತಾರೆ. ಹಾಗೆಯೇ ಗೌಡರ ಕುಟುಂಬದವರ ಬಗ್ಗೆ, ‘ಯಾರನ್ನೂ ಹತ್ತಿರ ಬಿಟ್ಟುಕೊಂಡವರಲ್ಲ, ಕೈ ಎತ್ತಿ ಕೊಟ್ಟವರೂ ಅಲ್ಲ’ ಎಂಬ ಮಾತಿದೆ. ಜೊತೆಗೆ ಗೌಡರ ಕುಟುಂಬದಲ್ಲಿ ಎಲ್ಲರೂ ಒಂದು, ಕುಮಾರಸ್ವಾಮಿಯೇ ಒಂದು ಎನ್ನುವುದೂ ಚಾಲ್ತಿಯಲ್ಲಿದೆ. ಮುಖ್ಯಮಂತ್ರಿಯಾದ ನಂತರ ಅದು ಇನ್ನಷ್ಟು ನಿಚ್ಚಳವಾಗಿ ಕಾಣತೊಡಗಿತು. ಅದಕ್ಕೆ ತಕ್ಕಂತೆ ಅವರ ಸಿನೆಮಾ ನಿರ್ಮಾಣ, ಭಿನ್ನ ಆಸಕ್ತಿ-ಅಭಿರುಚಿಗಳು, ಬಹಳ ದೊಡ್ಡ ಸ್ನೇಹವಲಯ, ವ್ಯಾಪಾರ-ವಹಿವಾಟುಗಳೆಲ್ಲವೂ ಗೌಡರ ಕುಟುಂಬದ ಸಾಂಪ್ರದಾಯಿಕ ಶೈಲಿಗಿಂತ ಭಿನ್ನ ಎನ್ನುವುದನ್ನು ಸ್ಪಷ್ಟಪಡಿಸುತ್ತವೆ. ಇಷ್ಟಾದರೂ, ಗೌಡರ ಕುಟುಂಬದ ಎಲ್ಲರಲ್ಲೂ ಒಂದು ಸಮಾನ ಅಂಶವಿದೆ- ಅದು ದೇವರು, ಪೂಜೆ, ಹೋಮ, ಶಕುನ, ಜ್ಯೋತಿಷ್ಯ, ಗಿಳಿಶಾಸ್ತ್ರವನ್ನು ನಂಬುವುದರಲ್ಲಿ. ಆ ನಂಬಿಕೆಯೇ ಕುಮಾರಸ್ವಾಮಿಯವರಿಗೆ ಎರಡನೆ ಮದುವೆ ಮಾಡಿಸಿತು, ಮನೆಯವರನ್ನೆಲ್ಲ ಒಪ್ಪಿಸಿತು. ಜೊತೆಗೆ, ಸುದೀರ್ಘ ರಾಜಕೀಯ ಬದುಕಿನಲ್ಲಿ ಹೋರಾಟ ಮಾಡಿ ಗಳಿಸಿದ ಮುಖ್ಯಮಂತ್ರಿ ಪದವಿಯನ್ನು, ಮಗ ಚಿಟಿಕೆ ಹೊಡೆಯುವುದರೊಳಗೆ ಗಳಿಸಿದ್ದು ಗೌಡರನ್ನು ಭೀಷ್ಮನನ್ನಾಗಿಸಿತು. ಅಲ್ಲಿಗೆ ಕುಮಾರಸ್ವಾಮಿಯವರ ಸಾಂಸಾರಿಕ ಮತ್ತು ರಾಜಕೀಯ ಕೂಡಾವಳಿಗೆ ಗೌಡರ ಮೌನ ಸಮ್ಮತಿಯೂ ದೊರಕಿತ್ತು. ಮತ್ತೆ ಕುಟುಂಬ ಒಂದಾಗಿತ್ತು. ಆದರೂ ಗೌಡರ ಕುಟುಂಬದೊಳಗೆ, ‘‘ದೊಡ್ಡವನಿಗಿಂತ ಮುಂಚೆ ಚಿಕ್ಕವನು ಮುಖ್ಯಮಂತ್ರಿಯಾದನಲ್ಲ’’ ಎಂಬ ಮಾತು ಕದನಕ್ಕೆಳೆಸುತ್ತಲೇ ಇತ್ತು. ಜೊತೆಗೆ ಕುಮಾರಸ್ವಾಮಿಯವರ ಪತ್ನಿ ಅನಿತಾ ರಾಜಕಾರಣಕ್ಕೆ ಎಂಟ್ರಿ ಕೊಟ್ಟಾಗ, ಭವಾನಿ ರೇವಣ್ಣ ಕೂಡ ಚುರುಕಾದರು. ಅಲ್ಲಿಗೆ ಮನೆಯೊಳಗಿನ ಕುರುಕ್ಷೇತ್ರ ಕ್ಲೈಮ್ಯಾಕ್ಸ್ ಹಂತ ತಲುಪಿತ್ತು. ಗೌಡರಿಗೂ ಜಾತ್ಯತೀತತೆಯ ಜ್ಞಾನೋದಯವಾಗಿತ್ತು. ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಂಡು ಮತ್ತೆ ಸೆಕ್ಯುಲರ್ ಮಂತ್ರ ಜಪಿಸತೊಡಗಿದರು. ಅಷ್ಟರಲ್ಲಾಗಲೇ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವೆದ್ದಿತ್ತು. ಅಧಿಕಾರದ ಹತ್ತಿರಕ್ಕೂ ಬರದ ಬಿಜೆಪಿ ಅಪ್ಪ-ಮಕ್ಕಳ ಆಟದಿಂದಾಗಿ ಅಧಿಕಾರಕ್ಕೇರಿತ್ತು. ರಾಜ್ಯದ ಜನತೆಯ ದೃಷ್ಟಿಯಲ್ಲಿ ಜೆಡಿಎಸ್ ಖಳನಾಯಕನ ಸ್ಥಾನ ಅಲಂಕರಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ, 2008ರಿಂದ 2018, ಜಾತ್ಯತೀತ ಜನತಾ ದಳಕ್ಕೆ ಅಧಿಕಾರ ಸಿಕ್ಕಿ ಹತ್ತು ವರ್ಷಗಳಾಗಿವೆ. ಈ ಹತ್ತು ವರ್ಷಗಳಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಿದ್ದರೆ; ರಾಜ್ಯದ ಎಲ್ಲ ಜಾತಿ ಜನರನ್ನು ಒಳಗೊಂಡಿದ್ದರೆ ಅದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮುತ್ತಿತ್ತು. ಯಾರೂ ಸುಲಭಕ್ಕೆ ಸೋಲಿಸಲಾಗದ ಪಕ್ಷವಾಗಿ ಗಟ್ಟಿಯಾಗಿ ನೆಲೆಯೂರುತ್ತಿತ್ತು. ಅದು ಬೇರೆ ರಾಜ್ಯಗಳಿಗೆ ಮಾದರಿಯಾಗುತ್ತಿತ್ತು. ಆದರೆ ಅಪ್ಪ-ಮಕ್ಕಳ ಸ್ವಾರ್ಥ ಕುಟುಂಬ ರಾಜಕಾರಣಕ್ಕೆ ಬಲಿಯಾಗಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ದುರದೃಷ್ಟಕರ ಸಂಗತಿ ಎಂದರೆ, ಇಂತಹ ದಿಕ್ಕೆಟ್ಟ ಸ್ಥಿತಿಯಲ್ಲಿಯೂ ಪಕ್ಷ ಎನ್ನುವುದು ಗೌಡರ ಕುಟುಂಬಕ್ಕೆ ಹಾಲು ಕರೆಯುವ ಹಸುವೇ ಆಗಿದೆ. ಜೆಡಿಎಸ್ ನಾಯಕರೊಬ್ಬರು, ‘‘ಗೌಡರು ಶಿಡ್ಲಘಟ್ಟದ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿ ರವಿಗೆ ಟಿಕೆಟ್ ಕೊಟ್ಟರೆ, ಮಗ ಕುಮಾರಸ್ವಾಮಿ ಹಾಲಿ ಶಾಸಕ ರಾಜಣ್ಣರಿಗೆ, ಹತ್ತು ಕೋಟಿ ಖರ್ಚಾದರೂ ಸರಿ, ರವಿ ಸೋಲಬೇಕು ಎಂದು ಕುಮ್ಮಕ್ಕು ಕೊಡುತ್ತಾರೆ. ಇವತ್ತು ನಮ್ಮ ಪಾರ್ಟಿ ಕತೆ ಇಲ್ಲಿಗೆ ಬಂದು ನಿಂತಿದೆ’’ ಎಂದು ಬೇಸರಿಸಿಕೊಳ್ಳುತ್ತಾರೆ. ಇಷ್ಟಾದರೂ, ಗೌಡರು ಸೆಕ್ಯುಲರ್ ಹಣೆಪಟ್ಟೆ ಉಳಿಸಿಕೊಳ್ಳಲು ಬಿಎಸ್ಪಿಯ ಮಾಯಾವತಿ ಮತ್ತು ಎಂಐಎಂನ ಅಸದುದ್ದೀನ್ ಉವೈಸಿಯೊಂದಿಗೆ ಮೈತ್ರಿ ಮಾಡಿಕೊಂಡು ದಲಿತ-ಮುಸ್ಲಿಂ ಮತದಾರರ ಓಲೈಕೆಗೆ ಮುಂದಾದರು. ಆ ಮೂಲಕ ಕುಮಾರಸ್ವಾಮಿಗೆ ಸಾರ್ವಜನಿಕವಾಗಿ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದಿರಲು ಸೂಚನೆ ರವಾನಿಸಿದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ‘‘ಕುಮಾರಸ್ವಾಮಿ-ಅಮಿತ್ ಶಾರನ್ನು ಭೇಟಿ ಮಾಡಿದ್ದಾರೆ’’ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಗುಲ್ಲೆಬ್ಬಿಸಿದರು. ಈ ಸುದ್ದಿಯ ಜಾಡು ಹಿಡಿದ ಎನ್‌ಡಿಟಿವಿಯವರು ಖುದ್ದು ಗೌಡರನ್ನು ಭೇಟಿ ಮಾಡಿ ಪ್ರಶ್ನಿಸಿದಾಗ, ‘‘ಕುಮಾರಸ್ವಾಮಿ ಮೈತ್ರಿಗೆ ಮುಂದಾದರೆ, ಆತ ನನ್ನ ಮಗನೇ ಅಲ್ಲ. ಕುಟುಂಬದಿಂದ ಬಹಿಷ್ಕರಿಸಲಾಗುವುದು’’ ಎಂದರು. ಹಾಗೆಯೇ ಕುಮಾರಸ್ವಾಮಿಯವರನ್ನು ಕೇಳಿದರೆ, ‘‘ಆದ ತಪ್ಪಿನಿಂದ ಪಾಠ ಕಲಿತಿದ್ದೇನೆ. ಮುಂದೆ ತಪ್ಪುಮಾಡುವುದಿಲ್ಲ’’ ಎಂದರು. ಆದರೆ ಹೋದಲ್ಲಿ ಬಂದಲ್ಲಿ ಗೌಡರು, ‘‘ಬಡವರ ಪಕ್ಷವನ್ನು ಬೆಂಬಲಿಸಿ’’ ಎಂದರೆ, ಕುಮಾರಸ್ವಾಮಿ, ‘‘ಎರಡೂ ಪಕ್ಷಗಳಿಗೆ ಅಧಿಕಾರ ಕೊಟ್ಟು ನೋಡಿದ್ದೀರ. ನನಗೊಂದು ಅವಕಾಶ ಕೊಡಿ, ನಾನು ನಿಮ್ಮ ಮನೆಯ ಮಗ’’ ಎಂದು ಗೋಗರೆದರು. ಅಭ್ಯರ್ಥಿಗಳು ಕುಮಾರಣ್ಣನ ಹಿಂದೆ ಬಿದ್ದಾಗ, ‘‘ನನ್ನ ಕೈ ಖಾಲಿಯಾಗಿದೆ. ಚಂದಾ ಎತ್ತಿ ಕೊಡಬೇಕಿದೆ. ನಾನೆಲ್ಲಿ ಹೋಗಿ ಸಾಯಲಿ..’’ ಎಂದು ಕಣ್ಣೀರು ಹಾಕಿದರು. ಇದು, ಎರಡು ಪ್ರಬಲ ರಾಷ್ಟ್ರೀಯ ಪಕ್ಷಗಳ ಹಣ ಮತ್ತು ಅಧಿಕಾರದ ಆರ್ಭಟದೆದುರು ಪ್ರಾದೇಶಿಕ ಪಕ್ಷವೊಂದು ಪೈಪೋಟಿ ನೀಡಲಾಗದೆ ನರಳುತ್ತಿರುವ ಸ್ಥಿತಿಯನ್ನು ಹೇಳುವಂತಿದ್ದರೆ; ಭಾವನಾತ್ಮಕ ನೆಲೆಯಲ್ಲಿ ಮತದಾರರನ್ನು ಮನವೊಲಿಸುವ ಮಾರ್ಗದಂತೆಯೂ ಕಾಣುತ್ತಿದೆ. ಹಾಗೆಯೇ ಕುಮಾರಸ್ವಾಮಿಯವರ ಒಡಲಾಳದ ನೋವನ್ನು ಹೊರಹಾಕುತ್ತಿರುವಂತೆಯೂ ಕಾಣುತ್ತಿದೆ. ಜೆಡಿಎಸ್ ವರಿಷ್ಠ ದೇವೇಗೌಡರು ಮೂವತ್ತರಿಂದ ನಲವತ್ತು ಸ್ಥಾನ ಗೆಲ್ಲಬೇಕು, ಆ ಸಂಖ್ಯೆ ಅಷ್ಟೇ ಇರಬೇಕು, ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು, ಜಾತ್ಯತೀತತೆಯನ್ನು ಉಳಿಸಿಕೊಂಡು, ರೇವಣ್ಣನನ್ನು ಉಪಮುಖ್ಯಮಂತ್ರಿ ಮಾಡುವ; ಅಕಸ್ಮಾತ್ ಕಾಂಗ್ರೆಸ್ ಜೊತೆ ಮೈತ್ರಿಯಾಗದಿದ್ದರೆ ಬಿಜೆಪಿ ಜೊತೆ ಸೇರಲೂ ಸಿದ್ಧರಾಗಿದ್ದಾರೆಂಬ ಸುದಿ ಇದೆ. ಸಿದ್ದರಾಮಯ್ಯನವರು, ಕಾಂಗ್ರೆಸ್ ಬಹುಮತ ಗಳಿಸದಿದ್ದರೆ, ಜೆಡಿಎಸ್‌ನ ಒಂದು ಗುಂಪನ್ನು ಹೈಜಾಕ್ ಮಾಡಿ, ಅಪ್ಪ-ಮಕ್ಕಳಿಗೆ ಶಾಕ್ ಕೊಡಲು ಸಿದ್ಧರಾಗಿದ್ದಾರೆಂಬ ವದಂತಿಯೂ ಇದೆ. ಬಿರು ಬಿಸಿಲಿನಲ್ಲಿ ಓಡಾಡಿ ಹೈರಾಣಾಗಿರುವ ಕುಮಾರಸ್ವಾಮಿ, ಕುಟುಂಬದ ಸಹಕಾರವಿಲ್ಲದೆ, ಆಪ್ತ ಸ್ನೇಹಿತರ ಒಡನಾಟವಿಲ್ಲದೆ, ಆರೋಗ್ಯ ಸರಿಯಿಲ್ಲದೆ, ಅಭ್ಯರ್ಥಿಗಳಿಗೆ ಹಣ ಹಂಚಲಾಗದೆ, ಗೆದ್ದರೂ ಗದ್ದುಗೆಯ ಮೇಲೆ ಕೂರಲಾಗದೆ, ಎಲ್ಲ ಗೊತ್ತಿದ್ದೂ ಹೇಳಲಾ ಗದೆ- ಒಡಲಾಳದ ಸಂಕಟ ಸಾರ್ವಜನಿಕ ರ್ಯಾಲಿಯಲ್ಲಿ ಕಣ್ಣೀರಾಗಿ ಹರಿದಿದೆ. ಈಗ ಚುನಾವಣೆಯೂ ಮುಗಿದಿದೆ.

Writer - ಬಸು ಮೇಗಲಕೇರಿ.

contributor

Editor - ಬಸು ಮೇಗಲಕೇರಿ.

contributor

Similar News