ಎಚ್ಕೆ ಪಾಟೀಲರೇಕೆ ಸುಮ್ಮನಾದರು?

Update: 2018-07-14 18:31 GMT

‘‘ಸಚಿವ ಸ್ಥಾನದ ನಿರೀಕ್ಷೆಯಲ್ಲಿ ನಾನಿಲ್ಲ. ಸಚಿವ ಸ್ಥಾನ ಒತ್ತಾಯ ಪೂರ್ವಕವಾಗಿ ಪಡೆದುಕೊಳ್ಳುವುದಲ್ಲ. ರಾಜೀನಾಮೆ, ಪ್ರತಿಭಟನೆ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರುವುದು ಸೂಕ್ತವಲ್ಲ’’ -ಇದು ಮಂತ್ರಿಯಾಗದಿರುವುದಕ್ಕೆ ಎಚ್.ಕೆ.ಪಾಟೀಲರು ಹೇಳಿದ್ದು. ಇದು ಸಮಜಾಯಿಷಿಯಂತೆ; ತಮ್ಮನ್ನೇ ತಾವು ಸಮಾಧಾನಿಸಿಕೊಂಡಂತೆ ಕಾಣುತ್ತಿದೆ. ಈ ಮಾತಿನಲ್ಲಿಯೇ ಅವರ ವ್ಯಕ್ತಿತ್ವವೂ ಅಡಗಿದೆ. ಯಾವುದನ್ನೂ ಕೇಳಿ ಪಡೆಯದ, ಕೊಟ್ಟಿದ್ದನ್ನು ಕಡೆಗಣಿಸದ, ಮಾಡಿದ ಕೆಲಸವನ್ನು ಹೇಳಿಕೊಳ್ಳದ, ಪ್ರಚಾರವನ್ನೂ ಬಯಸದ ಅವರ ಗುಣೇ ಇವತ್ತು ಅವರಿಗೆ ಮುಳುವಾಗಿದೆ.

ಮೂರೂವರೆ ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದು ಪಕ್ಷ ನಿಷ್ಠೆ ಪ್ರದರ್ಶಿಸಿರುವ, ಹಲವು ಸ್ಥಾನಗಳನ್ನು ದಕ್ಷತೆಯಿಂದ ನಿರ್ವಹಿಸಿರುವ ಖಾತೆಗಳ ಕೆಲಸಕ್ಕಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಎಚ್ಕೆ ಪಾಟೀಲರಿಗೆ ಸಮ್ಮಿಶ್ರ ಸರಕಾರ- ಜಾತಿ ಲಾಬಿ-ಹೊಸ ಮುಖದ ಕಾರಣ ಕೊಟ್ಟು ಮಂತ್ರಿ ಸ್ಥಾನ ಸಿಗದಂತೆ ನೋಡಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಜಿ.ಪರಮೇಶ್ವರ್ ಉಪಮುಖ್ಯಮಂತ್ರಿ ಯಾದಾಗ, ತೆರವಾದ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನಾದರೂ ಕೊಡಿ ಎಂದು ಪಾಟೀಲರು ಹೈಕಮಾಂಡ್‌ಗೆ ಮನವಿ ಮಾಡಿಕೊಂಡರು. ಒಂದಷ್ಟು ಶಾಸಕರನ್ನು ಕಟ್ಟಿಕೊಂಡು ಒತ್ತಡವನ್ನೂ ಹಾಕಿದರು. ಹೈಕಮಾಂಡ್‌ನಿಂದ ಎಚ್ಕೆ ಪಾಟೀಲರಿಗೆ ‘ತಕ್ಷಣ ದಿಲ್ಲಿಗೆ ಬನ್ನಿ’ ಎಂಬ ಕರೆ ಬಂತು. ಇತ್ತ ಎಲ್ಲರೂ ಪಾಟೀಲರಿಗೆ ಅಧ್ಯಕ್ಷ ಸ್ಥಾನ ಗ್ಯಾರಂಟಿ ಎಂದು ಮಾತನಾಡಿಕೊಳ್ಳಲಾರಂಭಿಸಿದರು. ಆದರೆ ದಿಲ್ಲಿಗೆ ಕರೆಸಿಕೊಂಡ ರಾಹುಲ್ ಗಾಂಧಿ, ‘‘ದಿನೇಶ್ ಗುಂಡೂರಾವ್‌ರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ, ಸಹಕರಿಸಿ’’ ಎಂು ಸಮಾಧಾನ ಮಾಡಿ ಕಳುಹಿಸಿದರು.

ಪಕ್ಷ ನಿಷ್ಠೆ, ಪ್ರತಿಭೆ, ಶಿಸ್ತು, ದಕ್ಷತೆಯನ್ನೇ ಮೈಗೂಡಿಸಿಕೊಂಡಿರುವ ಎಚ್ಕೆ ಪಾಟೀಲರಿಗೆ ಹೈಕಮಾಂಡ್ ಏಕೆ ಹೀಗೆ ಮಾಡುತ್ತಿದೆ ಮತ್ತು ಪಾಟೀಲರೇಕೆ ಪ್ರತಿಸಲ ಸೋತು ಸುಮ್ಮನಾಗುತ್ತಿದ್ದಾರೆ? ಇದು ಪಾಟೀಲರನ್ನು ಬಲ್ಲವರೆಲ್ಲರ ಪ್ರಶ್ನೆ. ಆದರೆ ಕಾಂಗ್ರೆಸ್ ಕಲ್ಚರ್ ಗೊತ್ತಿದ್ದವರು, ಈ ಹಿಂದೆ ಹಲವು ನಾಯಕರಿಗೆ ಆದ ಅನ್ಯಾಯ ವನ್ನು ಕಂಡಿದ್ದವರು, ಇದು ಇಲ್ಲಿ ಮಾಮೂಲಿ ಎನ್ನುತ್ತಾರೆ. ಹಾಗಾದರೆ, ಈ ಕಾಂಗ್ರೆಸ್ ಪಕ್ಷಕ್ಕೆ ಇನ್ನೆಂಥವರು ಬೇಕು? ಇದು ಹೀಗೆಯೇ ಮುಂದುವರಿದರೆ ಬಲಾಢ್ಯ ಮೋದಿಯನ್ನು ಮಣಿಸಲು ಸಾಧ್ಯವೇ?

1984ರಲ್ಲಿ ಶಿವಮೊಗ್ಗ, ಕಾರವಾರ, ಧಾರವಾಡ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ರಾಜಕಾರಣಕ್ಕಿಳಿದ ಎಚ್ಕೆ ಪಾಟೀಲ್, 2008ರವರೆಗೆ, ಸತತವಾಗಿ ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದವರು. 1992ರಲ್ಲಿ ತಂದೆ ಕೆ.ಎಚ್.ಪಾಟೀಲ್ ನಿಧನರಾದಾಗ, ವೀರಪ್ಪಮೊಯ್ಲಿಯವರ ಕ್ಯಾಬಿನೆಟ್‌ನಲ್ಲಿ ಮೊದಲ ಬಾರಿಗೆ ಜವಳಿ ಖಾತೆಯ ರಾಜ್ಯ ಸಚಿವರಾದರು. ಸಿಕ್ಕ 2 ವರ್ಷಗಳ ಕಾಲಾವಧಿಯಲ್ಲಿ ನೇಕಾರರ ಬದುಕು ಬದಲಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು, ಆಮದು ನೀತಿ ಬದಲಾವಣೆಗೆ ಶ್ರಮಿಸಿದರು. 1994ರಲ್ಲಿ ಮೇಲ್ಮನೆಯ ವಿರೋಧ ಪಕ್ಷದ ನಾಯಕರಾಗಿ ಸುದ್ದಿಮಾಧ್ಯಮಗಳ ಗಮನ ಸೆಳೆದರು. 1999ರಲ್ಲಿ ಎಸ್.ಎಂ.ಕೃಷ್ಣರ ಕ್ಯಾಬಿನೆಟ್‌ನಲ್ಲಿ ಮೂರೂವರೆ ವರ್ಷಗಳ ಕಾಲ ಜಲ ಸಂಪನ್ಮೂಲ ಸಚಿವರಾಗಿ, ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಆಲಮಟ್ಟಿ ಮತ್ತು ನಾರಾಯಣಪುರ ಅಣೆಕಟ್ಟುಗಳನ್ನು ಆರಂಭಿಸಿದ್ದು ಮತ್ತು 14 ಮಧ್ಯಮ ಏತ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದು ಪಾಟೀಲರ ಹೆಗ್ಗಳಿಕೆ. ಆದರೆ ಪಾಟೀಲರ ಕಾರ್ಯಕ್ಷಮತೆ ಮತ್ತು ಏರುಗತಿಯ ಬೆಳವಣಿಗೆ ತಮಗೆ ತೊಂದರೆ ಎಂದು ಭ್ರಮಿಸಿದ ಎಸ್.ಎಂ. ಕೃಷ್ಣ, ತಮ್ಮ ಶಿಷ್ಯ ಡಿ.ಕೆ. ಶಿವಕುಮಾರ್ ಬಿಟ್ಟು ಕಿರುಕುಳ ಕೊಟ್ಟರು. ಸಾಲದು ಎಂದು ಜಲಸಂಪನ್ಮೂಲ ಖಾತೆಯನ್ನು ಕಿತ್ತುಕೊಂಡು ಅಲ್ಲಂ ವೀರಭದ್ರಪ್ಪಮತ್ತು ಎಂ. ಶಿವಣ್ಣರಿಗೆ ಹಂಚಿ, ಆಲಮಟ್ಟಿ ಮತ್ತು ನಾರಾಯಣಪುರ ಅಣೆಕಟ್ಟುಗಳ ಶಂಕುಸ್ಥಾಪನೆಗೆ ಪಾಟೀಲರನ್ನು ಕರೆಯದೆ ಅವಮಾನಿಸಿದರು. ನಂತರ ಕೃಷಿ ಖಾತೆ ಕೊಟ್ಟು, ಕಡತಗಳನ್ನು ಪರಿಶೀಲಿಸುಷ್ಟರಲ್ಲಿ ಚುನಾವಣೆ ಘೋಷಿಸಿಬಿಟ್ಟರು.

2004ರಲ್ಲಿ ಕಾಂಗ್ರೆಸ್ ಬಹುಮತ ಗಳಿಸದೆ, ಜೆಡಿಎಸ್‌ನೊಂದಿಗೆ ಸಮ್ಮಿಶ್ರ ಸರಕಾರ ರಚನೆಗೆ ಮುಂದಾದಾಗ, ಮುಖ್ಯಮಂತ್ರಿ ಆಯ್ಕೆ ಎದುರಾದಾಗ, ಶಾಸಕರು ಎಸ್.ಎಂ.ಕೃಷ್ಣ, ಎಚ್.ಕೆ.ಪಾಟೀಲ್ ಮತ್ತು ಧರಂಸಿಂಗ್‌ರನ್ನು ಬೆಂಬಲಿಸಿದ್ದರು. ಆದರೆ ದೇವೇಗೌಡರು ಕೃಷ್ಣ -ಪಾಟೀಲರನ್ನು ಬಿಟ್ಟು, ಒಗ್ಗುವ ಧರಂಸಿಂಗ್‌ರನ್ನು ಆಯ್ಕೆ ಮಾಡಿಕೊಂಡಿದ್ದರು. ಆಗಲೂ ಸೋತು, ತಮಗೆ ದೊರೆತ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆಯಲ್ಲಿ ಗಮನಾರ್ಹವಾದ ಕೆಲಸಗಳನ್ನೇ ಮಾಡಿದರು. ಉತ್ತರ ಕರ್ನಾಟಕದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಹೈಕೋರ್ಟ್ ಸಂಚಾರಿ ಪೀಠವನ್ನು ಧಾರವಾಡ ಮತ್ತು ಕಲಬುರ್ಗಿಯಲ್ಲಿ ಸ್ಥಾಪಿಸುವಲ್ಲಿ ಹಾಗೂ ಧಾರವಾಡಕ್ಕೆ ಕಾನೂನು ವಿವಿ ತರುವಲ್ಲಿ ಪಾಟೀಲರು ಯಶಸ್ವಿಯಾಗಿದ್ದರು.

ಸಾರ್ವಜನಿಕ ಬದುಕಿನಲ್ಲಿ ಸ್ವಚ್ಛವಾಗಿದ್ದು, ಇಷ್ಟೆಲ್ಲ ಸಾಧನೆಗೈದ ಪಾಟೀಲರು 2008 ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ, ಅಪ್ಪನ ಕಾಲದಿಂದಲೂ ಗೆಲ್ಲುತ್ತಲೇ ಬಂದಿದ್ದ, ತಮ್ಮದೇ ಸ್ವಂತ ಗದಗ ಕ್ಷೇತ್ರದಿಂದ ಸ್ಪರ್ಧೆಗಿಳಿದಾಗ, ರೆಡ್ಡಿ-ರಾಮುಲು ಹಣ ಹರಿಸಿ, ಕಾಂಗ್ರೆಸ್‌ನವರೇ ಪಾಟೀಲರನ್ನು ಸೋಲಿಸಿದರು. ಸಾಲದು ಎಂದು ಪ್ರಜ್ಞಾವಂತ ಮತದಾರರಿರುವ ಪದವೀಧರ ಕ್ಷೇತ್ರದಲ್ಲೂ ಸೋಲಿಸಿ ಸುಮ್ಮನೆ ಕೂರುವಂತೆ ಮಾಡಿದರು. ಒಂದೇ ವರ್ಷದಲ್ಲಿ ಪಾಟೀಲರು ಎರಡು ಸಲ ಹೀನಾಯವಾಗಿ ಸೋಲಲು ಮತ್ತೊಂದು ಕಾರಣ- ಪಾಟೀಲರು ಲಿಂಗಾಯತರಲ್ಲ ಎನ್ನುವುದು. ಸ್ಥಳೀಯವಾಗಿ ನಾಮದ ರೆಡ್ಡಿಗಳು ಅಥವಾ ನಾಮಧಾರಿ ರೆಡ್ಡಿಗಳೆಂದೇ ಗುರುತಿಸಿಕೊಂಡಿರುವ ಪಾಟೀಲರ ಕುಟುಂಬಕ್ಕೆ ತಿರುಪತಿ ತಿಮ್ಮಪ್ಪಮನೆದೇವರು. ಇತ್ತೀ ಚಿನ ದಿನಗಳಲ್ಲಿ ಕೊಡುವುದು-ತೆಗೆದುಕೊಳ್ಳುವುದೆಲ್ಲ ಇದ್ದರೂ, ಲಿಂಗಾಯತರಲ್ಲ ಎಂದು ಬೇರೆಯಾಗಿ ನೋಡುವುದು ಬಲವಾಗಿ ಬೇರೂರಿದೆ. ಆದರೆ ಬೆಂಗಳೂರು-ದಿಲ್ಲಿ ಮಟ್ಟದಲ್ಲಿ, ಪಕ್ಷದ ವಲಯದಲ್ಲಿ, ಸುದ್ದಿಮಾಧ್ಯಮಗಳಲ್ಲಿ ಪಾಟೀಲರನ್ನು ಪ್ರಭಾವಿ ಲಿಂಗಾಯತ ನಾಯಕರೆಂದೇ ಪರಿಗಣಿಸ್ಪಡುವುದೊಂದು ವಿಚಿತ್ರ.

2008ರಲ್ಲಿ ಸೋತು ಸುಮ್ಮನೆ ಕೂರದ ಪಾಟೀಲರು, ಜನಪರ ಕೆಲಸಗಳಲ್ಲಿ ತೊಡಗಿಕೊಂಡರು. ಹುಲಕೋಟಿ ರೂರಲ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ, ಸ್ಥಳೀಯ ತಂತ್ರಜ್ಞರನ್ನು ಬಳಸಿಕೊಂಡು, 2ರೂ.ಗೆ 20 ಲೀಟರ್ ಶುದ್ಧ ಕುಡಿಯುವ ನೀರಿನ 34 ಘಟಕಗಳನ್ನು ಸ್ಥಾಪಿಸಿದರು. ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಫ್ಲೋರೈಡ್ ಮುಕ್ತ ಶುದ್ಧ ಕುಡಿಯುವ ನೀರಿನ ‘ಆಲ್ ಟೈಮ್ ವಾಟರ್’ ಘಟಕಗಳನ್ನು ಸ್ಥಾಪಿಸಿ ಜನರ ದಾಹ ತೀರಿಸಿದರು. ಇದನ್ನು ಗಮನಿಸಿದ ಸೋನಿಯಾ ಗಾಂಧಿ, ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ತಲಾ 5 ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿ, ಪಾಟೀಲರ ಕೆಲಸವನ್ನು ಮುಕ್ತಕಂಠದಿಂದ ಹೊಗಳಿದರು. ಆಗಿನ ಕೇಂದ್ರ ಸಚಿವ ಪಿ.ಚಿದಂಬರಂ, ಪಾಟೀಲರ ವಾಟರ್ ಪ್ಲಾಂಟ್‌ನಿಂದ ಪ್ರೇರಿತರಾಗಿ, 1,200 ಕೋಟಿ ರೂ.ಗಳ ರಾಷ್ಟ್ರೀಯ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಇದೆಲ್ಲವನ್ನು ಗಮನಿಸಿದ, ಅಲ್ಲಿಯವರೆಗೆ ಪಾಟೀಲರೊಂದಿಗೆ ಅರ್ಥಹೀನ ಶತ್ರುಭಾವ ಹೊಂದಿದ್ದ ಡಿ.ಕೆ. ಶಿವಕುಮಾರ್, ಖುದ್ದಾಗಿ ಗದಗಕ್ಕೆ ತೆರಳಿ, ಮೂರು ದಿನ ಠಿಕಾಣಿ ಹೂಡಿ, ನೋಡಿ, ‘‘ನಿಮ್ಮದು ನಿಜಕ್ಕೂ ಜನಪರ ಕೆಲಸ’’ ಎಂದು ಪ್ರಶಂಸಿಸಿ, ಪ್ರಭಾವಿತರಾಗಿ ಕನಕಪುರ ತಾಲೂಕಿನಲ್ಲಿ 7 ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿದರು.

ಇನ್ನು 2013ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಯಲ್ಲಿ ಗೆದ್ದಾಗ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ, ಪಾಟೀಲರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ನೀಡಿದರು. ಈ ಖಾತೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಇಡೀ ದೇಶವೇ ಕರ್ನಾಟಕದತ್ತ ನೋಡುವಂತೆ, ಪ್ರಧಾನಿ ಮೋದಿಯೇ ರಾಜ್ಯದ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಎರವಲು ಪಡೆಯುವಂತಹ- ಗ್ರಾಮಸ್ವರಾಜ್ಯ ಕಾನೂನು, ಬಾಪೂಜಿ ಕಾಯಕ ಸಾಕ್ಷಿ ತಂತ್ರಾಂಶ, ಬಾಪೂಜಿ ಡಿಜಿಟಲ್ ಸೇವಾ ಕೇಂದ್ರ, ಗ್ರಾಮಸಭೆಗಳ ಸದೃಢೀಕರಣ, ಮೈಸೂರಿನ ತರಬೇತಿ ಸಂಸ್ಥೆಯನ್ನು ದೇಶದ ಅತ್ಯುತ್ತಮ ತರಬೇತಿ ಸಂಸ್ಥೆಯನ್ನಾಗಿ ರೂಪಿಸಿದ್ದು, ಗದಗದಲ್ಲಿ ಪಂಚಾಯತ್ ರಾಜ್ಯ ವಿವಿ ಸ್ಥಾಪಿಸಿದ್ದು- ಒಟ್ಟಿನಲ್ಲಿ ಅಬ್ದುಲ್ ನಝೀರ್ ಸಾಬರ ಕನಸನ್ನು ನನಸಾಗಿಸಿದರು. ಕೇಂದ್ರ ಸರಕಾರದಿಂದ ಪ್ರತೀವರ್ಷ ಅತ್ಯುತ್ತಮ ಸಾಧನೆಗಾಗಿ ಪ್ರಶಸಿ್ತ ಪಡೆದು ಪ್ರಶಂಸೆಗೊಳಗಾದರು.

ಇಷ್ಟೆಲ್ಲ ಸಾಧನೆಗಳ ಸಂಭಾವಿತ, 65 ವರ್ಷಗಳ ಪಾಟೀಲರಿಗೆ ಕಾಂಗ್ರೆಸ್ ಪಕ್ಷ ಸ್ಥಾನ-ಮಾನ ನೀಡದೆ ನಿರಾಕರಿಸಿದ್ದೇಕೆ? ಪಾಟೀಲರು ಮಾಡಿದ್ದನ್ನು ಹೇಳಿಕೊಳ್ಳುವುದಿಲ್ಲ. ಭಾವನೆಗಳನ್ನು ನೈಜವಾಗಿ ವ್ಯಕ್ತಪಡಿಸುವುದಿಲ್ಲ. ತಂದೆಗಿದ್ದ ಭಾಷಣ ಕಲೆ ಪಾಟೀಲರಿಗಿಲ್ಲ. ಸಮಕಾಲೀನ ಸಂದರ್ಭಗಳಿಗೆ ಸೈದ್ಧಾಂತಿಕವಾಗಿ ಸ್ಪಂದಿಸಿದವರಲ್ಲ. ನಾಯಕತ್ವ ಬಯಸುವ ವ್ಯಕ್ತಿತ್ವವಿಲ್ಲ. ಗದಗ-ಧಾರವಾಡ-ಹಾವೇರಿ ಬಿಟ್ಟು ಬೇರೆ ಕಡೆ ಹೋಗುವುದಿಲ್ಲ. ಶಾಸಕರ ಗುಂಪು ಕಟ್ಟಿ ಪೋಷಿಸುವುದಿಲ್ಲ. ಅಧಿಕಾರಿಯಂತೆ ಕೆಲಸ ಮಾಡುತ್ತಾರೆ, ಅದು ರಾಜಕೀಯ ನಾಯಕನ ಖಾತೆಗೆ ಜಮೆಯಾಗುವುದಿಲ್ಲ. ಬೆಂಬಲಿಗರಿಗೆ ಬೇಸರವಾಗಿದೆ ಎನ್ನುತ್ತಾರೆ, ತಮಗೆ ಅನ್ಯಾಯವಾಗಿದೆ ಎಂದು ಹೇಳಿಕೊಳ್ಳುವುದಿಲ್ಲ. ಎಲ್ಲದಕ್ಕೂ ಪತ್ರ ಬರೆಯುತ್ತಾರೆ, ಎದುರಿಗೆ ನಿಂತು ಹೇಳುವ ಧೈರ್ಯ ಮಾಡುವುದಿಲ್ಲ. ಹೈಕಮಾಂಡಿಗೆ ಕಪ್ಪಕಾಣಿಕೆ ಕೊಡುತ್ತಾರೆ, ಆದರೆ ಕಡು ಭ್ರಷ್ಟರಲ್ಲ. ಸಜ್ಜನ, ಸುಶಿಕ್ಷಿತರಾದರೂ ಕೆಟ್ಟದ್ದನ್ನು ಕಟುವಾಗಿ ವಿರೋಧಿಸುವುದಿಲ್ಲ. ಲಿಂಗಾಯತ-ವೀರಶೈವ ಎರಡೂ ಒಂದೇ ಎನ್ನುತ್ತಾರೆ, ವಿಭಜನೆ ಸರಿಯಲ್ಲ ಎಂದು ಬಹಿರಂಗವಾಗಿ ಹೇಳುವುದಿಲ್ಲ. ಲಿಂಗಾಯತ ಸ್ವಾಮೀಜಿಗಳು-ರಾಜಕಾರಣಿಗಳು ಪಾಟೀಲರನ್ನು ಒಪ್ಪುವುದಿಲ್ಲ... ಹೀಗೆ ಪಾಟೀಲರ ದೌರ್ಬಲ್ಯಗಳನ್ನು ಪಟ್ಟಿ ಮಾಡುತ್ತಲೇ ಹೋಗಬುದು.

ಉತ್ತರ ಕರ್ನಾಟಕದ ಪ್ರಭಾವಿ ಜನನಾಯಕ, ಸಹಕಾರಿ ಧುರೀಣ, ಹುಲಕೋಟಿಯ ಹುಲಿ ಎಂದೇ ಹೆಸರಾಗಿದ್ದ ಕೆ.ಎಚ್.ಪಾಟೀಲರಿಗೂ ರಾಜಕಾರಣದಲ್ಲಿ ಇಂತಹ ಸಂದಿಗ್ಧ ಎದುರಾಗಿತ್ತು. 1967ರಲ್ಲಿಯೇ ನಿಜಲಿಂಗಪ್ಪನವರ ವಿರುದ್ಧ ಸಡ್ಡು ಹೊಡೆದು, ಜನತಾ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಕೆ.ಎಚ್. ಪಾಟೀಲರು, ನಂತರ ಇಂದಿರಾ ಕಾಂಗ್ರೆಸ್ ಸೇರಿದ್ದರು. ಆದರೆ ಅಲ್ಲಿನ ಲಿಂಗಾಯತ ನಾಯಕರಾದ ಸಿದ್ದವೀರಪ್ಪ, ಚೆನ್ನಬಸಪ್ಪ, ಕೊಂಡಜ್ಜಿ ಬಸಪ್ಪರಂತಹ ಬಲಾಢ್ಯರ ಮುಂದೆ ಮಂಕಾಗಿದ್ದರು. ಜೊತೆಗೆ 1972ರಲ್ಲಿ ದೇವರಾಜ ಅರಸರಂತಹ ವರ್ಚಸ್ವಿ ನಾಯಕ ಮುಖ್ಯಮಂತ್ರಿಯಾಗುತ್ತಿದ್ದಂತೆ, ಅರಣ್ಯ ಖಾತೆ ಸಚಿವ ಸ್ಥಾನಕ್ಕೆ, ಆ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ದೇವರಾಜ ಅರಸರೊಂದಿಗೆ ಕೆ.ಎಚ್.ಪಾಟೀಲರ ರಾಜಕೀಯ ಸೆಣಸಾಟ ಅತಿರೇಕಕ್ಕೆ ಹೋದಾಗ, 1977ರಲ್ಲಿ ಕಾಂಗ್ರೆಸ್ ತೊರೆದು ರೆಡ್ಡಿ ಕಾಂಗ್ರೆಸ್ ಸೇರಿ, ಅರಸು-ಇಂದಿರಾ ವಿರುದ್ಧ ಗುಟುರು ಹಾಕಿದ್ದರು. ಸ್ವತಂತ್ರವಾಗಿ ಸ್ಪರ್ಧಿಸಿ ಸೋತು ಸುಮ್ಮನಾಗಿದ್ದರು.

ಎಚ್.ಕೆ.ಪಾಟೀಲ್, ಹುಲಕೋಟಿ ಹುಲಿಯ ಪುತ್ರರಾದರೂ, ಪರಂಪರಾಗತ ರಾಜಕಾರಣವನ್ನು ಮುಂದುವರಿಸಿಕೊಂಡು ಬಂದರೂ, ಹುಲಿಯ ಗುಣಗಳನ್ನು ಕಾಲಕ್ಕೆ ತಕ್ಕಂತೆ ಪಾಲಿಷ್ ಮಾಡಿಕೊಂಡವರು ಅಥವಾ ಪಕ್ಷದ ವಿರುದ್ಧ, ನಾಯಕರ ವಿರುದ್ಧ ಸಿಡಿದೇಳುವುದರಿಂದ ಪ್ರಯೋಜನವಿಲ್ಲ ಎಂಬ ಸತ್ಯವನ್ನು ಅನುಭವದಿಂದ ಅರಿತವರು. ವಿಪರ್ಯಾಸವೆಂದರೆ, ಕೆ.ಎಚ್.ಪಾಟೀಲರ ಗೌಡಿಕೆ ಗತ್ತು ಮತ್ತು ಎಚ್.ಕೆ.ಪಾಟೀಲರ ಸೌಮ್ಯ ಸ್ವಭಾವ- ಎರಡೂ ಕಾಂಗ್ರೆಸ್ ಕಲ್ಚರ್‌ನಲ್ಲಿ ನಡೆಯದ ನಾಣ್ಯಗಳು. ಇವತ್ತಿನ ರಾಜಕಾರಣಕ್ಕೆ ಗೌಡಿಕೆ ಗತ್ತಲ್ಲ, ಸೌಮ್ಯ ಸ್ವಭಾವವಲ್ಲ, ಜಾತಿಯಲ್ಲ, ಗೆಲುವಲ್ಲ- ಅದಕ್ಕೂ ಮೀರಿದ ಹೊಸಗಾಲದ ಪಟ್ಟುಗಳನ್ನು ಮೈಗೂಡಿಸಿಕೊಳ್ಳಬೇಕಾದ ಅಗತ್ಯ ಮತ್ತು ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಅಪಾರ ಹಣ ಮಾಡುವುದು, ಹೈಕಮಾಂಡಿಗೆ ಕಪ್ಪಕೊಡುವುದು, ಚುನಾವಣೆಗೆ ಚೆಲ್ಲುವುದು, ಐಟಿ ದಾಳಿಗಳನ್ನೂ ಅರಗಿಸಿಕೊಳ್ಳುವುದು- ಚಾಲ್ತಿ ನಾಯಕನ ಗುಣಗಳಂತೆ ಕಾಣುತ್ತಿವೆ. ಸದ್ಯದ ರಾಜಕಾರಣದಲ್ಲಿ ಅವುಗಳಿಗೇ, ಅಂಥವರಿಗೇ ಹೆಚ್ಚು ಮಣೆ, ಮನ್ನಣೆ ದೊರಕುತ್ತಿದೆ. ಸಜ್ಜನರಿಗೆ-ಸಾಮಾನ್ಯರಿಗೆ ಸದ್ಯದ ರಾಜಕಾರಣ ಅಗಿಯಲೂ ಆಗದ, ಉಗಿಯಲೂ ಆಗದ ಬಿಸಿ ತುಪ್ಪ. ಇದು ಗೊತ್ತಿರುವ, ಗೊತ್ತಿದ್ದೂ ಹೇಳಲಾಗದ ಎಚ್ಕೆ ಪಾಟೀಲ್...

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News