ಹಾಸನದ ಅಣ್ಣ ರೇವಣ್ಣ
‘‘ನನ್ನದೇನಿದ್ದರೂ ರಸ್ತೆ ಮಾಡೋದಷ್ಟೇ ಕೆಲಸ, ಹುಬ್ಬಳ್ಳಿ- ಧಾರವಾಡ ನಡುವಿನ ರಸ್ತೆ ಯೋಜನೆಗೆ ದೇಗುಲ ಅಡ್ಡಿಯಾಗಿದ್ರೆ ತಲೆ ಕೆಡಿಸಿಕೊಳ್ಳದೆ ಒಡೆದು ಹಾಕಿ, ಕೋಟ್ಯಂತರ ರೂ. ವೆಚ್ಚದ ಈ ಯೋಜನೆ ಏಳು ವರ್ಷವಾದರೂ ಮುಗಿದಿಲ್ಲ, ಅವನ್ಯಾರ್ರಿ ಎಂಡಿ, ಏನ್ಕೆಲಸಾ ಮಾಡ್ತಾವ್ನೆ, ನಾಚಿಕೆ ಆಗಲ್ವೇನ್ರಿ ನಿಮಗೆ, ಥೂ’’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಇತ್ತೀಚೆಗೆ ಧಾರವಾಡ ನಗರದ ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.
ಇದು ರೇವಣ್ಣನವರ ಕಾರ್ಯ ವೈಖರಿ. ಅಭಿವೃದ್ಧಿ ವಿಷಯಕ್ಕೆ ಬಂದರೆ ಅವರು ದೇವರು-ದೊಡ್ಡವರು ಯಾರನ್ನೂ ನೋಡುವುದಿಲ್ಲ ಎನ್ನುವ ಮಾತೂ ಇದೆ. ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವ ತಂತ್ರವೆಂದೂ ಇದನ್ನು ವ್ಯಾಖ್ಯಾನಿಸಲಾಗುತ್ತದೆ. ಆದರೆ ಈ ಹೇಳಿಕೆ ಮಾಧ್ಯಮಗಳಲ್ಲಿ, ‘ದೇವರು-ದೈವಕ್ಕೆ ವಿರುದ್ಧವಾಗಿ ಮಾತನಾಡಿ ಜನರ ಭಾವನೆಗಳಿಗೆ ರೇವಣ್ಣ ಧಕ್ಕೆ ತಂದಿದ್ದಾರೆ’ ಎಂದು ವರದಿಯಾಗಿದೆ. ರೇವಣ್ಣನವರಿಗೆ ದೇವರು, ದೇವಸ್ಥಾನವೆಂದರೆ ಭಾರೀ ಭಯ-ಭಕ್ತಿ ಇರಬಹುದು. ಪೂಜೆ ಪುನಸ್ಕಾರಗಳಲ್ಲಿ ಅತಿಯಾಗಿ ಭಾಗಿಯಾಗಬಹುದು. ಹಾಗಂತ ಅದನ್ನು ರಾಜ್ಯದ ಅಭಿವೃದ್ಧಿ ಕಾರ್ಯಗಳೊಂದಿಗೆ ತಳಕು ಹಾಕಲಾಗುವುದೇ? ಎಂದರೆ, ‘‘ಮುಖ್ಯಮಂತ್ರಿ ಸ್ಥಾನಕ್ಕೆ ಎಚ್.ಡಿ.ಕುಮಾರಸ್ವಾಮಿಯವರ ಹೆಸರು ಸೂಚಿಸುತ್ತಿದ್ದಂತೆ, ಕಾಣದ ದೇವರು, ದೇವಸ್ಥಾನಗಳಿಗೆಲ್ಲ ಅವರನ್ನು ಕರೆದುಕೊಂಡು ಹೋಗಿ ಅಡ್ಡ ಬೀಳಿಸಿದ್ದು ಇದೇ ರೇವಣ್ಣರಲ್ಲವೇ? ಸಚಿವ ಸಂಪುಟದ ಪ್ರಮಾಣ ವಚನ ಸಮಾರಂಭವನ್ನು ಮಧ್ಯಾಹ್ನ 2ಕ್ಕೆ ಎಂದು ಅಧಿಕೃತವಾಗಿ ರಾಜ್ಯಭವನಕ್ಕೆ ಪತ್ರದ ಮೂಲಕ ತಿಳಿಸಿದ್ದರೆ, ರೇವಣ್ಣ ಅದನ್ನು 2:12ಕ್ಕೆ ಎಂದು ಹೇಳಿ ಸರಕಾರದ ಅಧಿಕೃತ ವೇಳಾಪಟ್ಟಿಯನ್ನೇ ಬದಲಿಸಲಿಲ್ಲವೇ?, ರಾಜಭವನದ ರೀತಿ-ರಿವಾಜುಗಳನ್ನೇ ತಮ್ಮ ಮೂಗಿನ ನೇರಕ್ಕೆ ಬಗ್ಗಿಸಿಕೊಳ್ಳಲಿಲ್ಲವೇ?’’ ಎನ್ನುವವರೂ ಇದ್ದಾರೆ. ಹೌದು, ಅಧಿಕಾರ-ಅಭಿವೃದ್ಧಿ-ದೇವರು ಒಂದರೊಳಗೊಂದು ಮಿಳಿತಗೊಂಡ ಕಾಲವಿದು!
ರೇವಣ್ಣನವರು ಹುಟ್ಟಿ ಬೆಳೆದುಬಂದ ರೀತಿ, ಓದು-ತಿಳಿವಳಿಕೆಗೆ ತಕ್ಕಂತೆ ಅವರು ರೂಢಿಸಿಕೊಂಡ ಆಚಾರ-ವಿಚಾರಗಳು ಅವರನ್ನು ಯಶಸ್ಸಿನ ಮೆಟ್ಟಿಲು ಹತ್ತಿಸಿರಬಹುದು. ಹಾಗಾಗಿ ಅವುಗಳನ್ನು ಅವರು ಅತಿ ಎನಿಸುವಷ್ಟು ಹಚ್ಚಿಕೊಂಡಿರಲೂಬಹುದು. ಅವರ ಆಪ್ತರನ್ನು ಕೇಳಿದರೆ, ‘‘ಬೆಳಗಿನ ನಿತ್ಯಕರ್ಮಗಳು ತಪ್ಪಿದರೂ, ದೇವರ ಮೇಲೆ ಹೂ ಹಾಕುವುದನ್ನು ಮರೆಯಲ್ಲ. ಹಣೆಯಲ್ಲಿ ಮೂರು ಥರದ- ಬಿಳಿ, ಕೆಂಪು, ಕಪ್ಪುಮಸಿ ಇದ್ದೇ ಇರಬೇಕು. ಬಲಗೈನ ಮಣಿಕಟ್ಟಿನಲ್ಲಿ ಹತ್ತಾರು ದೇವರ ದಾರಗಳನ್ನು ಕಟ್ಟಿರಲೇಬೇಕು. ಹಾಗೆಯೇ ಕತ್ತಿನಲ್ಲಿ- ಏಲಕ್ಕಿ ಸರ, ಮಣಿ ಸರ, ರುದ್ರಾಕ್ಷಿ ಸರ, ಕರಿದಾರ- ಅದೆಷ್ಟಿದ್ದಾವೋ ಅವರಿಗೇ ಗೊತ್ತಿಲ್ಲ. ಬೆಳಗ್ಗೆ ನಾಲ್ಕರಿಂದ ಎಂಟು ಗಂಟೆಯವರೆಗೆ, ಅವರು ಯಾವ ಊರಿನಲ್ಲಿಯೇ ಇರಲಿ- ಹಲವು ದೇವಸ್ಥಾನಗಳ, ಹತ್ತಾರು ಪೂಜಾರಿಗಳು ಪ್ರಸಾದ ತಂದು ಕೊಡುತ್ತಲೇ ಇರುತ್ತಾರೆ. ಅದೇ ಅವರಿಗೆ ಬ್ರೇಕ್‌ಫಾಸ್ಟ್’’ ಎಂದು ಅರ ದಿನನಿತ್ಯದ ಡೈರಿ ಬಿಚ್ಚಿಡುತ್ತಾರೆ.
ಅರವತ್ತು ವಸಂತಗಳನ್ನು ಕಂಡಿರುವ ರೇವಣ್ಣ ಇವತ್ತಿಗೂ ಅಪ್ಪಟ ಹಳ್ಳಿ ಹೈದ. ಬಿಳಿ ಷರ್ಟು, ಬಿಳಿ ಪಂಚೆಯುಟ್ಟು ಹಳ್ಳಿಯ ಪಂಚಾಯತ್ ಮೆಂಬರ್‌ನಂತೆ ಕಾಣುವ ಸರಳ ವ್ಯಕ್ತಿ. ಸೂಟು- ಬೂಟುಗಳ ಸಹವಾಸಕ್ಕೆ ಹೋದವರಲ್ಲ. ಕುಡಿಯುವ- ಸೇದುವ, ಮೋಜು-ಮೇಜವಾನಿಗಳ ಅಭ್ಯಾಸವಿಲ್ಲ. ದುಷ್ಟನಲ್ಲ, ದಾನಿಯೂ ಅಲ್ಲ. ಹಾಸನವನ್ನು ಯಾರಿಗೂ ಬಿಟ್ಟುಕೊಟ್ಟವರಲ್ಲ. ಕೃಷಿ, ಹೈನುಗಾರಿಕೆ ಅಂದರೆ ಇಷ್ಟ. ಓದು ಕಷ್ಟ. ಆ ಕಾರಣಕ್ಕಾಗಿಯೇ ಅಮ್ಮ ಚೆನ್ನಮ್ಮನವರಿಗೆ ರೇವಣ್ಣರೆಂದರೆ ಇಷ್ಟ. ಮನೆಯಲ್ಲಿ ಏನೇ ಮಹತ್ವದ ಮಾತುಕತೆ, ಆಸ್ತಿ, ಅಧಿಕಾರ ಹಂಚುವಿಕೆಯಲ್ಲಿ ಚೆನ್ನಮ್ಮನವರು ರೇವಣ್ಣರ ಪರ. ರೇವಣ್ಣನವರು ಕೂಡ ಅಮ್ಮ ಹೇಳಿದಂತೆಯೇ ಕೇಳುತ್ತಾರೆ. 1994ರಲ್ಲಿ, ಎಚ್.ಡಿ.ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗಲೇಬೇಕು ಎಂದು, ಹೊಳೆನರಸೀಪುರದಲ್ಲಿ ಸ್ಪರ್ಧಿಸಿದರೆ ಗೆಲುವು ಸಾಧ್ಯವಿಲ್ಲವೆಂದು, ದೂರದ ರಾಮನಗರವನ್ನು ಆಯ್ಕೆ ಮಾಡಿಕೊಂಡರು. ತೆರವಾದ ಹೊಳೆನರಸೀಪುರ ಕ್ಷೇತ್ರವನ್ನು ತಮಗಾಗಿ ಹಗಲಿರುಳು ದುಡಿದ ಪಕ್ಷದ ಕಾರ್ಯಕರ್ತರಿಗೆ ಬಿಟ್ಟುಕೊಡಬಹುದಾಗಿತ್ತು. ಆದರೆ ಗೌಡರು, ಮಡದಿ ಮಾತಿಗೆ ಮಣಿದು, ಪುತ್ರ ರೇವಣ್ಣನವರ ಸುಪರ್ದಿಗೆ ವಹಿಸಿದರು. 1994ರಲ್ಲಿ ಮೊದಲ ಬಾರಿಗೆ ಗೆದ್ದು ಶಾಸಕರಾದ ರೇವಣ್ಣನವರು, ವಿಧಾನಸೌಧ ಪ್ರವೇಶಿಸುತ್ತಿದ್ದಂತೆಯೇ, ತಂದೆ ದೇವೇಗೌಡರು ಮುಖ್ಯಮಂತ್ರಿ ಕುರ್ಚಿಯಲ್ಲಿ ವಿರಾಜಮಾನರಾಗಿದ್ದರು. ಸಾಲದೆಂದು, ದೇವೇಗೌಡರು ಪ್ರಧಾನಮಂತ್ರಿಯಾಗಿ ದಿಲ್ಲಿಗೆ ತೆರಳಿದಾಗ, ವಸತಿ ಖಾತೆ ಸಚಿವರಾಗಿದ್ದ ರಾಯರೆಡ್ಡಿ ಗೆದ್ದು ಲೋಕಸಭಾ ಸದಸ್ಯರಾದಾಗ, ಜೆ. ಎಚ್. ಪಟೇಲರು ಮುಖ್ಯಮಂತ್ರಿಯಾದರು, ರೇವಣ್ಣ ವಸತಿ ಖಾತೆ ಸಚಿವರಾದರು. ಮೊದಲ ಬಾರಿಗೆ ಗೆದ್ದುಬಂದ ಹೊಸ ಶಾಸಕನಿಗೆ ಅಧಿಕಾರ, ಪ್ರಭಾವ, ಪ್ರಚಾರ ಹುಡುಕಿಕೊಂಡು ಬಂದು ಕಾಲಬುಡದಲ್ಲಿ ಬಿದ್ದಿದ್ದವು.
ತಂದೆ ದೇವೇಗೌಡರು ಮುಖ್ಯಮಂತ್ರಿಯಾದಾಗ, ರಾಷ್ಟ್ರದ ಅತ್ಯುನ್ನತ ಪದವಿಯಾದ ಪ್ರಧಾನಮಂತ್ರಿ ಸ್ಥಾನ ಅಲಂಕರಿಸಿದಾಗ, ತಾವು ಮಂತ್ರಿಯಾದಾಗ- ಐಎಎಸ್, ಐಪಿಎಸ್‌ಗಳಂತಹ ಉನ್ನತಾಧಿಕಾರಿಗಳು ತಮ್ಮ ಮುಂದೆ ನಡುಬಗ್ಗಿಸಿ ನಿಂತು ಆಜ್ಞೆ, ಆದೇಶ, ಸೂಚನೆಗಳನ್ನು ಪಾಲಿಸುವಾಗ- ಇದು ಪ್ರಜಾಪ್ರಭುತ್ವದ ಸೊಗಸು ಎಂದು ರೇವಣ್ಣರಿಗೆ ಅರಿವಾಗಲಿಲ್ಲ. ಬದಲಿಗೆ ರಾಜ ಮಹಾರಾಜರ ಆಳ್ವಿಕೆ ಮರುಕಳಿಸಿದಂತೆ ಕಾಣತೊಡಗಿತು. ಜನ ಕೊಟ್ಟ ಅಧಿಕಾರವನ್ನು ಜನರಿಗಾಗಿ ಬಳಸುವ ದಿಸೆಯಲ್ಲಿ, ಆಸ್ತಿ, ಹಣ ಮಾಡುವುದು, ಅಧಿಕಾರ ಹಿಡಿಯುವುದೇ ರಾಜಕಾರಣ ಎನಿಸಿತು. ಇದೇ ಅವಧಿಯಲ್ಲಿ, ಚನ್ನರಾಯಪಟ್ಟಣದ ಬಳಿಯ ಬಾಗೂರು-ನವಿಲೆ ಸುರಂಗ ಮಾರ್ಗದಿಂದ ರೈತರ ತೆಂಗಿನ ಮರ ಗಳು ಸುಳಿ ಸುಟ್ಟು ನಿಂತಾಗ, ಬದುಕು ಬರಿದಾದಾಗ, ಒಂದು ವರ್ಷ ಕಾಲ ಸತತವಾಗಿ ಪ್ರತಿಭಟನಾ ಧರಣಿ ಕೂತಾಗ- ಆ ರೈತರ ಬೆಂಬಲಕ್ಕೆ ನಿಂತು ಸಂತೈಸಿ, ಪರಿಹಾರ ಕೊಡಿಸಬೇಕಾದ ದೇವೇಗೌಡರು ಮತ್ತು ರೇವಣ್ಣ ಅತ್ತ ತಲೆ ಹಾಕಿಯೂ ಮಲಗಲಿಲ್ಲ. ಬದಲಿಗೆ ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರನ್ನು ಛೂಬಿಟ್ಟು ಲಾಠಿಚಾರ್ಜ್ ಮಾಡಿಸಿದರು. ಕೇಸು ದಾಖಲಿಸಿ ಕೋರ್ಟು ಕಚೇರಿ ಅಲೆಯುವಂತೆ ನೋಡಿಕೊಂಡರು. ಹಾಗೆ ನೋಡಿದರೆ, ಅನ್ಯಾಯಕ್ಕೊಳಗಾದ ಬಾಗೂರಿನ ಜನ- ರೈತರು; ಗೌಡರನ್ನು ಮತ್ತವರ ಪಾರ್ಟಿಯನ್ನು ನಿರಂತರವಾಗಿ ಗೆಲ್ಲಿಸಿದ- ಒಕ್ಕಲಿಗರು!
ದೇವೇಗೌಡರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದಾಗ, ಜನತಾ ದಳದಲ್ಲಿ ಒಳಜಗಳ ಹೆಚ್ಚಾದಾಗ, 1999ರ ಚುನಾವಣೆಯಲ್ಲಿ ರೇವಣ್ಣ ಸೋತರು. ‘‘ರಾಜಕೀಯ ನಾಯಕರು ಸೋತರೆ ಮೌನವಾಗುತ್ತಾರೆ, ಮನುಷ್ಯರಾಗುತ್ತಾರೆ. ಅದಕ್ಕೆ ಬಹಳ ದೊಡ್ಡ ಉದಾಹರಣೆ, ನಮ್ಮ ದೊಡ್ಡಗೌಡ್ರು. ಆದರೆ ನಮ್ಮ ರೇವಣ್ಣ, ಹೊಳೆನರಸೀಪುರದ ಸೆರಗಿನಲ್ಲಿರುವ ಸೂರನಹಳ್ಳಿಯ ಜನ ಜನತಾದಳಕ್ಕೆ ವಿರುದ್ಧವಿದ್ದಾರೆಂದು ಭ್ರಮಿಸಿ, ಆ ಹಳ್ಳಿಯ ಜನಗಳೊಂದಿಗೆ ಜಿದ್ದಿಗೆ ಬಿದ್ದರು. ಸರಕಾರಿ ಸೌಲಭ್ಯಗಳಿಗೆ ಕತ್ತರಿ ಹಾಕಿದರು. ಅವರ ಹಸಿರು ಗದ್ದೆಗಳ ಮೇಲೆ ರಸ್ತೆ ಬರುವಂತೆ ಮಾಡಿದರು. ಹಳ್ಳಿಗರು ಕೋರ್ಟ್ ಮೆಟ್ಟಿಲು ಹತ್ತಿದರು. ಅದಾಗಿ ದಶಕಗಳೇ ಕಳೆದಿದೆ. ರಸ್ತೆಯೂ ಆಗಲಿಲ್ಲ, ಪರಿಹಾರವೂ ಸಿಗಲಿಲ್ಲ’’ ಎನ್ನುತ್ತಾರೆ ಸೂರನಹಳ್ಳಿಯ ಹಿರಿಯ ನಾಗರಿಕರೊಬ್ಬರು. ಆದರೆ ಸೋತ ರೇವಣ್ಣ ಹಾಲು ಮಹಾಮಂಡಳದ ಅಧ್ಯಕ್ಷರಾಗಿ 9 ವರ್ಷಗಳ ಕಾಲ ದರ್ಬಾರು ನಡೆಸಿದರು. 2004ರಲ್ಲಿ ಶಾಸಕರಾಗಿ ಪುನರಾಯ್ಕೆಯಾದಾಗ, ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಯಾದಾಗ- ಧರಂಸಿಂಗ್ ಕ್ಯಾಬಿನೆಟ್‌ನಲ್ಲಿ ಲೋಕೋಪಯೋಗಿ ಮತ್ತು ಇಂಧನದಂತಹ ‘ತೂಕ’ದ ಎರಡೆರಡು ಖಾತೆಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.
ಎಚ್.ಡಿ.ರೇವಣ್ಣನವರು, ಈಗ, 2018ರಲ್ಲಿ ಸಮ್ಮಿಶ್ರ ಸರಕಾರದ ಸಚಿವ ಸಂಪುಟ ರಚನೆಯಾಗುವಾಗ, ಖಾತೆ ಹಂಚಿಕೆಯಾಗುವಾಗ ಲೋಕೋಪಯೋಗಿ ಮತ್ತು ಇಂಧನ ಖಾತೆಗಳೆರಡೂ ಬೇಕು ಎಂದು ಹಟಕ್ಕೆ ಬಿದ್ದರು. ಎರಡು ಪಕ್ಷಗಳ ಮೈತ್ರಿ ನಂಟಿಗೇ ಕಂಟಕ ತಂದಿದ್ದರು. ಈ ಬಗ್ಗೆ ಹಿರಿಯ ಪತ್ರಕರ್ತರನ್ನು ಮಾತಿಗೆಳೆದರೆ, ‘‘ರೇವಣ್ಣನವರು ಕೃಷಿ ಕುಟುಂಬದಿಂದ ಬಂದಿದ್ದರೂ, ಅವರಿಗೆ ಹೈನುಗಾರಿಕೆ, ತೋಟಗಾರಿಕೆ, ಕೃಷಿ ಖಾತೆಯತ್ತ ಒಲವಿಲ್ಲ. 2004ರಲ್ಲಿ ಇದೇ ರೀತಿ ಸಮ್ಮಿಶ್ರ ಸರಕಾರವಿತ್ತು. ಧರಂಸಿಂಗ್ ಡಮ್ಮಿ ಸಿಎಂ, ದೇವೇಗೌಡರದೇ ಎಲ್ಲ, ರೇವಣ್ಣರಿಗೆ ಲೋಕೋಪಯೋಗಿ ಮತ್ತು ಇಂಧನ ಖಾತೆಗಳನ್ನು ಕೊಡಲಾಗಿತ್ತು. ಅದು ಅವರ ವಿದ್ವತ್ತು, ಅನುಭವ, ಹಿರಿತನದ ಆಧಾರದ ಮೇಲಲ್ಲ, ಮನೆಯ ಒತ್ತಾಯದಿಂದ. ಆಗ ಇದೇ ರೇವಣ್ಣ, ಸುಜ್ಲಾನ್ ವಿಂಡ್ ಪವರ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡು, ಹೂವಿನಹಡಗಲಿಯಿಂದ ಗದಗದ ಕಪ್ಪತ್ತಗುಡ್ಡದವರೆಗೆ ಗಾಳಿಯಂತ್ರಗಳನ್ನು ಅಳವಡಿಸುವ ಭಾರೀ ಯೋಜನೆಗೆ ಕೈಹಾಕಿ, ಅಭಿವೃದ್ಧಿ ಎಂದಿದ್ದರು. 10 ಗಾಳಿಯಂತ್ರಕ್ಕೆ 1 ಉಚಿತ ಎನ್ನುವ ಸುದ್ದಿ ಹಬ್ಬಿತ್ತು. ಆ ಕುರಿತು 2006ರಲ್ಲಿ ವರದಿ ಮಾಡಿದ್ದೆ. ರೇವಣ್ಣರ ಸಹೋದರ ಡಾ.ರಮೇಶ್ ನನ್ನನ್ನು ಹುಡುಕಿಕೊಂಡು ಮನೆಗೇ ಬಂದಿದ್ದರು’’ ಎಂದು ತೂಕದ ಖಾತೆಗಳ ಮಹತ್ವವನ್ನು ಹೊರಹಾಕಿದರು.
ಈಗ ಸಹೋದರ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರು ವಾಗ, ಅವರ ಬೆಂಬಲಕ್ಕೆ ನಿಂತಿರುವ ರೇವಣ್ಣ, ಸಮ್ಮಿಶ್ರ ಸರಕಾರವನ್ನು ಉಳಿಸುವಂತೆ ವರ್ತಿಸುತ್ತಿದ್ದಾರೆ. ಹಾಗೆಯೇ ಸರಕಾರವೇ ಸ್ವಂತದ್ದೆಂದು ಭಾವಿಸಿ ಅತಿ ಉತ್ಸಾಹದಿಂದ ಓಡಾಡುತ್ತಿದ್ದಾರೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ 316 ಕೊಠಡಿಯೇ ಬೇಕೆಂದು, ಅದು ವಾಸ್ತು ಪ್ರಕಾರವೇ ಇರಬೇಕೆಂದು, ಪಂಡಿತರು ಹೇಳಿದ ರೀತಿಯೇ ರಿನೋವೇಟ್ ಮಾಡಿಸಿಕೊಂಡಿದ್ದಾರೆ. ಹಾಗೆಯೇ ಸಿಎಂ ಕಾರ್ಯದರ್ಶಿ ಮಟ್ಟದ ಸಭೆಗೆ ಆಹ್ವಾನವಿಲ್ಲದಿದ್ದರೂ ಹೋಗಿ, ಅಸಂಬದ್ಧವಾಗಿ ಮಾತಾಡಿ, ಮುಖ್ಯಮಂತ್ರಿಗಳಿಂದಲೇ ಸುಮ್ಮನಿರಿ ಎಂದು ಹೇಳಿಸಿಕೊಂಡಿದ್ದಾರೆ. ಸಿಎಂ ದಿಲ್ಲಿಯಲ್ಲಿ ರಾಹುಲ್ ಗಾಂಧಿ ನೋಡಲು ಹೋದಾಗ, ಅನಗತ್ಯ ಕಾಲಹರಣ ಮಾಡಿ ದಿಲ್ಲಿ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಕೇಂದ್ರ ಮಂತ್ರಿ ಗಡ್ಕರಿ ಬಳಿ ಬರೀ ಹಾಸನದ ಬಗ್ಗೆ ಪ್ರಸ್ತಾಪಿಸಿ ಸಿಎಂ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಚಿವರಿಗೆ ಇನ್ನೂ ಜಿಲ್ಲಾ ಉಸ್ತುವಾರಿಯನ್ನೇ ವಹಿಸಿಲ್ಲ, ಆಗಲೇ ಹಾಸನದಲ್ಲಿ ಪ್ರಗತಿ ಪರಿಶೀಲನಾ ಸಭೆ ಕರೆದು ಸ್ಕೂಲ್ ಮಾಸ್ಟರ್ ಥರ ದೊಣ್ಣೆ ಹಿಡಿದು ಅಧಿಕಾರಿಗಳನ್ನು ಗದರಿಸಿದ್ದಾರೆ. ಇತರ ಇಲಾಖೆಗಳಲ್ಲಿ ಕೈಯಾಡಿಸಿ, ಅಧಿಕಾರಿ ವರ್ಗಾವಣೆಯಲ್ಲಿ, ಪಿಎ-ಪಿಎಸ್ ನೇಮಕದಲ್ಲಿ ಮೂಗು ತೂರಿಸಿ ಸಚಿವ ಸಹೋದ್ಯೋಗಿಗಳ ಕಿರಿಕಿರಿಗೆ ಕಾರಣರಾಗಿದ್ದಾರೆ. ದೂರದ ಧರ್ಮಸ್ಥಳದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಿದ್ದರಾಮಯ್ಯರನ್ನು ಭೇಟಿ ಮಾಡಿ ದೊಡ್ಡಗೌಡರಲ್ಲಿ ಕಸಿವಿಸಿ ಉಂಟುಮಾಡಿದ್ದಾರೆ. ಸಮನ್ವಯ ಸಮಿತಿಯಲ್ಲಿ ಸಾಲ ಮನ್ನಾ ಮೊದಲಾಗಲಿ ಎಂದು ಡಿ.ಕೆ.ಶಿವಕುಮಾರ್ ಜೊತೆಗೆ ಜಗಳಕ್ಕೆ ಬಿದ್ದಿದ್ದಾರೆ. ಬಜೆಜ್ ಪೂರ್ವಭಾವಿ ಸಭೆಯಲ್ಲಿ ತಮ್ಮ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಚರ್ಚೆ ಇಲ್ಲದಿದ್ದರೂ ಭಾಗವಹಿಸಿ, ಕಂದಾಯ ಮಂತ್ರಿ ದೇಶಪಾಂಡೆ ಕಾರಲ್ಲಿಯೇ ಕೂತು ಕಾಯುವಂತೆ ಮಾಡಿ ಮಾಧ್ಯಮಗಳ ಬಾಯಿಗೆ ತುತ್ತಾಗಿದ್ದಾರೆ. ಒಟ್ಟಿನಲ್ಲಿ ಸಮ್ಮಿಶ್ರ ಸರಕಾರದಲ್ಲಿ ದಿನಕ್ಕೊಂದು ಪ್ರಹಸನದಲ್ಲಿ ಪಾಲ್ಗೊಂಡು ವಿರೋಧಿಗಳ ಟೀಕೆಗೆ ವಸ್ತುವಾಗಿದ್ದಾರೆ. ಆಡಳಿತಾತ್ಮಕ ವಿಷಯಗಳಲ್ಲಿ ಅನಗತ್ಯ ಮೂಗು ತೂರಿಸಿ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಾರೆ. ಸಂಕಷ್ಟದಲ್ಲಿರುವ ಸಮ್ಮಿಶ್ರ ಸರಕಾರವನ್ನು ಪ್ರತಿದಿನವೂ ಮುಜುಗರಕ್ಕೀಡು ಮಾಡುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ, ಸಮ್ಮಿಶ್ರ ಸರಕಾರ ಉಳಿಯುವುದು ಕಷ್ಟವಿದೆ ಎನ್ನುತ್ತಾರೆ ರಾಜಕೀಯ ಪಂಡಿತರು.
ಆಶ್ಚರ್ಯವೆಂದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಹಿಂದಿನ ಅನುಭವಗಳಿಂದ ಪಾಠ ಕಲಿತು, ಅಧಿಕಾರವಿಲ್ಲದ 10 ವರ್ಷಗಳನ್ನು ನೆನೆದು, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ, ಜನಪರ ಕಾರ್ಯಕ್ರಮಗಳ ಮೂಲಕ ಉತ್ತಮ ಆಡಳಿತ ನೀಡಿ, ಜನಮಾನಸದಲ್ಲಿ ಉಳಿಯುವ ಪ್ರಯತ್ನದಲ್ಲಿದ್ದಾರೆ. ದಿಲ್ಲಿಯಲ್ಲಿ ಮೋದಿಯೊಂದಿಗೆ, ರಾಜ್ಯ-ಕೇಂದ್ರಗಳ ಸೌಹಾರ್ದ ಸಂಬಂಧ ಕುದುರಿಸುವ; ಅದೇ ಸಮಯದಲ್ಲಿ ರಾಹುಲ್ ಗಾಂಧಿಯೊಂದಿಗೂ ಪಕ್ಷ-ಸರಕಾರದ ಸಮನ್ವಯತೆ ಸಾಧಿಸುವ ಚಾಣಾಕ್ಷತೆ ಮೆರೆದಿದ್ದಾರೆ. ಒಬ್ಬ ನುರಿತ ಪಕ್ವ ರಾಜಕಾರಣಿಯಂತಾಗಿ ಸರಕಾರವನ್ನು ಸರಿದೂಗಿಸಿಕೊಂಡು ಹೋಗಲು ಹೆಣಗಾಡುತ್ತಿದ್ದಾರೆ. ಆದರೆ ಹಾಸನದ ಅಣ್ಣ ರೇವಣ್ಣ, ಕುಮಾರಸ್ವಾಮಿ ಮತ್ತು ದೇವೇಗೌಡರ ಶ್ರಮ, ಶಕ್ತಿ, ಸಂಯಮವನ್ನು ಪ್ರತಿದಿನವೂ ಪರೀಕ್ಷೆಗೊಡ್ಡುತ್ತಿದ್ದಾರೆ.