ಶಿವಮೊಗ್ಗ ಜಿಲ್ಲೆ ಚುನಾವಣಾ ಕಣ: ಬಿಜೆಪಿಗೆ ಪ್ರತಿಷ್ಠೆ, ಕಾಂಗ್ರೆಸ್-ಜೆಡಿಎಸ್‍ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ

Update: 2018-05-01 14:42 GMT

ಶಿವಮೊಗ್ಗ, ಮೇ 1: 'ಶತಾಯಗತಾಯ ಅತೀ ಹೆಚ್ಚು ಸ್ಥಾನಗಳಲ್ಲಿ ಜಯ ಸಾಧಿಸುವ ಮೂಲಕ ಮತ್ತೆ ಜಿಲ್ಲೆಯಲ್ಲಿ ಸಾಮರ್ಥ್ಯ ಪ್ರದರ್ಶಿಸುವ ಹವಣಿಕೆಯಲ್ಲಿ ಬಿಜೆಪಿ...ಕಳೆದ ಚುನಾವಣೆಯಲ್ಲಿ ಗೆದ್ದ ಸ್ಥಾನಗಳನ್ನಾದರೂ ಈ ಬಾರಿ ಗಳಿಸುವ ಮೂಲಕ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್..!

ಇದು, ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಶಿವಮೊಗ್ಗ ಜಿಲ್ಲೆಯಲ್ಲಿ ಅನುಸರಿಸುತ್ತಿರುವ ರಾಜಕೀಯ ಲೆಕ್ಕಾಚಾರದ ಪ್ರಮುಖಾಂಶಗಳು. ಈ ಚುನಾವಣೆಯು ನಾನಾ ಕಾರಣಗಳಿಂದ ಮೂರು ಪಕ್ಷಗಳಿಗೂ ಅತ್ಯಂತ ಮಹತ್ವದ್ದಾಗಿ ಪರಿಣಮಿಸಿದೆ. ಮುಂಬರುವ ಲೋಕಸಭೆ ಚುನಾವಣೆ ಹಾಗೂ ಪಕ್ಷಕ್ಕಿರುವ ಜನ ಬೆಂಬಲ ಸಾಬೀತುಪಡಿಸುವ ಉದ್ದೇಶದಿಂದ ಹೆಚ್ಚಿನ ಸ್ಥಾನಗಳಲ್ಲಿ ಜಯ ಸಾಧಿಸಬೇಕಾದ ಅನಿವಾರ್ಯತೆ ಮೂರು ಪಕ್ಷಗಳದ್ದಾಗಿದೆ.

ಕಾಂಗ್ರೆಸ್, ಜೆಡಿಎಸ್‍ಗೆ ಹೋಲಿಸಿದರೆ ಬಿಜೆಪಿ ಅತ್ಯಂತ ಹೆಚ್ಚು ಒತ್ತಡದಲ್ಲಿರುವುದು ಕಂಡುಬರುತ್ತಿದೆ. ಆ ಪಕ್ಷದ ಅತಿರಥ-ಮಹಾರಥ ನಾಯಕರು ಜಿಲ್ಲೆಯಲ್ಲಿದ್ದಾರೆ. ಹಾಗೆಯೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕಾದ ಮುಖಭಂಗದಿಂದ ಹೊರಬರಲು ಹರಸಾಹಸ ನಡೆಸುತ್ತಿದೆ. ಈ ಕಾರಣದಿಂದ ಎದುರಾಳಿ ಪಕ್ಷಗಳಿಗಿಂತ ಹೆಚ್ಚು ಸ್ಥಾನಗಳಲ್ಲಿ ಜಯ ಸಾಧಿಸಲೇಬೇಕಾದ ಸಂದಿಗ್ದತೆಯಲ್ಲಿ ಕಮಲ ಪಾಳಯವಿದೆ,

ಉಳಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಈ ಒತ್ತಡ ಕಂಡುಬರುತ್ತಿಲ್ಲ. ಹೆಚ್ಚಲ್ಲದಿದ್ದರೂ ಕಳೆದ ಚುನಾವಣೆಯಲ್ಲಿ ಗಳಿಸಿದ ಸ್ಥಾನಗಳನ್ನು ಮುಂದುವರಿಸಿಕೊಂಡು ಹೋಗುವ ಮೂಲಕ, ಪ್ರಸ್ತುತ ಜಿಲ್ಲೆಯಲ್ಲಿ ಕಂಡುಕೊಂಡಿರುವ ಅಸ್ತಿತ್ವ ಕಾಯ್ದುಕೊಂಡು ಹೋಗುವ ಲೆಕ್ಕಾಚಾರ ಆ ಪಕ್ಷಗಳದ್ದಾಗಿದೆ. 

'ಕಮಲ'ದ ಚಿಂತೆ: ಕಳೆದ ಚುನಾವಣೆಯು ಬಿಜೆಪಿ ಪಾಲಿಗೆ ಅಕ್ಷರಶಃ ದುಃಸ್ವಪ್ನದಂತಿದೆ. ಕೆಜೆಪಿ - ಬಿಜೆಪಿ ದಾಯಾದಿ ಕಲಹದ ನೇರ ಎಫೆಕ್ಟ್ ಜಿಲ್ಲೆಯಲ್ಲಿ ಕಾಣಿಸಿಕೊಂಡಿತ್ತು. ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಒಂದು ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ಜಯ ಸಾಧಿಸಿರಲಿಲ್ಲ. ಶೂನ್ಯ ಸಂಪಾದನೆ ಮಾಡಿತ್ತು. ಧೂಳೀಪಟವಾಗಿತ್ತು. ಹಿಂದೆಂದೂ ಬಿಜೆಪಿ ಇಷ್ಟೊಂದು ಕಳಪೆ ಸಾಧನೆ ಜಿಲ್ಲೆಯಲ್ಲಿ ಮಾಡಿರಲಿಲ್ಲ. 

ಆದರೆ ಬದಲಾದ ರಾಜಕಾರಣದಲ್ಲಿ ಹಾಲಿ ಚುನಾವಣೆಯಲ್ಲಿ ಕೆಜೆಪಿ ಮರೆಯಾಗಿದೆ. ದಾಯಾದಿಗಳು ಒಂದಾಗಿ, ಒಟ್ಟಾಗಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಹಾಗೆಯೇ ಪಕ್ಷದ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಜಿಲ್ಲೆಯವರೇ ಆಗಿರುವುದರಿಂದ ಅತ್ಯದಿಕ ಸ್ಥಾನಗಳಲ್ಲಿ ಜಯ ಸಾಧಿಸಲೆಬೇಕಾದ ಜರೂರತ್ತು ಈ ಪಕ್ಷದ ನಾಯಕರ ಮೇಲಿದೆ. ಇದರಿಂದ ಈ ಬಾರಿಯ ಬಿಜೆಪಿ ಸಾಧನೆ ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ. 

'ಕೈ' ಚಿಂತನೆ: ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಮುಂಬರುವ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದು, ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಜಿಲ್ಲೆಯಲ್ಲಿ ಹೆಚ್ಚು ಅಭ್ಯರ್ಥಿಗಳು ಗೆಲ್ಲಿಸಿಕೊಳ್ಳುವ ಉಮೇದಿನಲ್ಲಿರುವುದು ನಿಜವಾಗಿದೆ. ಆದರೆ ಕಳೆದ ಚುನಾವಣೆಯ ಚಿತ್ರಣಕ್ಕೂ ಈ ಬಾರಿಗೂ ಅಜಗಜಾಂತರ ವ್ಯತ್ಯಾಸವಿರುವುದು ಹಾಗೂ ಎಲ್ಲ ಏಳು ಕ್ಷೇತ್ರಗಳಲ್ಲಿಯೂ ಜಿದ್ದಾಜಿದ್ದಿನ ಅಖಾಡ ಏರ್ಪಟ್ಟಿರುವುದರ ವಾಸ್ತವ ಅರಿತುಕೊಂಡಿರುವ ಆ ಪಕ್ಷದ ನಾಯಕರು, ಹೆಚ್ಚಲ್ಲದಿದ್ದರೂ ಕಳೆದ ಬಾರಿ ಗಳಿಸಿದ್ದ 3 ಸ್ಥಾನಗಳನ್ನು ಉಳಿಸಿಕೊಂಡು ಹೋಗುವ ಚಿಂತನೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾಕಷ್ಟು ಕಾರ್ಯತಂತ್ರ ಕೂಡ ರೂಪಿಸುತ್ತಿದ್ದಾರೆ. 

'ಹೊರೆ'ಯ ಲೆಕ್ಕ: ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ನೆಲೆಯಿಲ್ಲವೆಂಬ ಎದುರಾಳಿಗಳ ಆರೋಪ ಹುಸಿಗೊಳಿಸುವಂತೆ, ಕಳೆದ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಆ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿದ್ದರು. ಜೆಡಿಎಸ್‍ನ ಈ ಸಾಧನೆಯು ಎದುರಾಳಿಗಳನ್ನೇ ದಂಗು ಬಡಿಯುವಂತೆ ಮಾಡಿತ್ತು. ಪ್ರಸ್ತುತ ಚುನಾವಣೆಯಲ್ಲಿಯೂ ಹೆಚ್ಚು ಸ್ಥಾನ ಗಳಿಸುವ ಮೂಲಕ, ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಕಾರ್ಯತಂತ್ರ ನಡೆಸುತ್ತಿದೆಯಾದರೂ, ಕಾಂಗ್ರೆಸ್ ರೀತಿಯಲ್ಲಿ ಕಳೆದ ಬಾರಿ ಗಳಿಸಿದ ಸ್ಥಾನಗಳನ್ನು ಉಳಿಸಿಕೊಂಡು ಹೋಗುವ ತಂತ್ರಗಾರಿಕೆ ನಡೆಸುತ್ತಿದೆ. 

'ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ' : ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ
'ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 5 ಕ್ಕೂ ಹೆಚ್ಚು ಕಡೆ ಕಾಂಗ್ರೆಸ್ ಪಕ್ಷ ಜಯ ಸಾಧಿಸಲಿದ್ದು, ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ' ಎಂದು ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿಯವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಪಾರದರ್ಶಕ, ಸ್ವಚ್ಚ, ಜನಪರ ಆಡಳಿತಕ್ಕೆ ಜಿಲ್ಲೆಯ ಮತದಾರರು ಬೆಂಬಲ ವ್ಯಕ್ತಪಡಿಸಲಿದ್ದಾರೆ. ಸರ್ಕಾರದ ಸದೃಢ ಆಡಳಿತವೇ ಜಿಲ್ಲೆಯಲ್ಲಿ ಪಕ್ಷದ ಗೆಲುವಿಗೆ ಪೂರಕವಾಗಲಿದೆ. ಹಾಗೆಯೇ ಕೇಂದ್ರ ಬಿಜೆಪಿ ಸರ್ಕಾರದ ಜನ ವಿರೋಧಿ ಆಡಳಿತ ಕೂಡ ಪಕ್ಷದ ಉತ್ತಮ ಸಾಧನೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಡುತ್ತಾರೆ. 

'ಅತ್ಯಧಿಕ ಸ್ಥಾನಗಳಲ್ಲಿ ಬಿಜೆಪಿ ಜಯ ನಿಶ್ಚಿತ' : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಅರುಣ್
'ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿ ಗೆಲುವಿನ ನಾಗಾಲೋಟ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಏಳರಲ್ಲಿ ಕನಿಷ್ಠ 6 ಕ್ಷೇತ್ರಗಳಲ್ಲಿ ಪಕ್ಷ ಜಯಭೇರಿ ಬಾರಿಸುವುದು ಖಚಿತ. ಜಿಲ್ಲೆಯಲ್ಲಿ ಪಕ್ಷ ಮತ್ತೆ ತನ್ನ ಪ್ರಾಬಲ್ಯ ಮೆರೆಯುವುದು ನಿಶ್ಚಿತ. ಇದು ನೂರಕ್ಕೆ ನೂರರಷ್ಟು ಸತ್ಯವಾಗಿದೆ' ಎಂದು ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಅರುಣ್ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ. 

ಕಳೆದ ಚುನಾವಣೆಯಲ್ಲಿ, ಬಿಜೆಪಿ-ಕೆಜೆಪಿ ಕಲಹದ ಕಾರಣದಿಂದ ಪಕ್ಷ ಹಿನ್ನಡೆ ಅನುಭವಿಸುವಂತಾಯಿತು. ಆದರೆ ಪ್ರಸ್ತುತ ಪಕ್ಷದ ಸಂಘಟನೆ ಬಲಿಷ್ಠವಾಗಿದೆ. ಗೊಂದಲಗಳು ಮರೆಯಾಗಿವೆ. ಒಟ್ಟಾಗಿ ಚುನಾವಣೆ ಎದುರಿಸುತ್ತಿರುವುದು ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಹಾಗೆಯೇ ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಜಿಲ್ಲೆಯ ನಿರ್ಲಕ್ಷ್ಯದ ಬಗ್ಗೆ ಜಿಲ್ಲೆಯ ಮತದಾರರು ಬೇಸರಗೊಂಡಿದ್ದಾರೆ. ಈ ಕಾರಣದಿಂದ ಬಿಜೆಪಿ ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿಸುತ್ತಾರೆ. 

'ಕನಿಷ್ಠ 5 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು' : ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್
'ಜಿಲ್ಲೆಯ ಕನಿಷ್ಠ 5 ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷ ಗೆಲುವು ಸಾಧಿಸುವ ವಿಶ್ವಾಸವಿದೆ. ಕಳೆದ ಚುನಾವಣೆ ರೀತಿಯಲ್ಲಿ ಈ ಚುನಾವಣೆಯಲ್ಲಿಯೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ - ಕಾಂಗ್ರೆಸ್‍ಗೆ ಶಾಕ್ ನೀಡಲಿದೆ. ಜಿಲ್ಲೆಯಲ್ಲಿ ಮತ್ತೆ ಜೆಡಿಎಸ್ ತನ್ನ ಪ್ರಾಬಲ್ಯ ಮೆರೆಯಲಿದೆ' ಎಂದು ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್ ವಿಶ್ವಾಸ ವ್ಯಕ್ತಪಡಿಸುತ್ತಾರೆ. 

ರಾಜ್ಯದ ಇತರೆಡೆ ಕಂಡುಬರುತ್ತಿರುವಂತೆ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿಯೂ ಜೆಡಿಎಸ್ ಪರವಾದ ಅಲೆ ಕಂಡುಬರುತ್ತಿದೆ. ಪಕ್ಷದ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿಯವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂಬ ಒತ್ತಾಸೆ ಮತದಾರರ ವಲಯದಲ್ಲಿ ಕಂಡುಬರುತ್ತಿದೆ. ಈ ಕಾರಣದಿಂದ ಜಿಲ್ಲೆಯ ಮತದಾರರು ಜೆಡಿಎಸ್‍ ಬೆಂಬಲಿಸಲು ನಿರ್ಧರಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳನ್ನು ಹಿಂದಿಕ್ಕಿ, ಅತ್ಯಧಿಕ ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸುವುದು ಖಚಿತವಾಗಿದೆ ಎಂದು ಅಭಿಪ್ರಾಯಪಡುತ್ತಾರೆ. 

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News