ಪ್ರಧಾನಿ ಮೋದಿ ಭಾಷಣದಲ್ಲಿ ಕರಾವಳಿಯ ಶೂದ್ರ, ಮುಸ್ಲಿಂ, ಬ್ರಾಹ್ಮಣರ ಇತಿಹಾಸ - ವರ್ತಮಾನದ ಸಂಘರ್ಷ

Update: 2018-05-01 17:48 GMT

ಪ್ರಧಾನಿ ನರೇಂದ್ರ ಮೋದಿಯವರು ಉಡುಪಿಯಲ್ಲಿ ಮಾಡಿರುವ ಚುನಾವಣಾ ಪ್ರಚಾರ ಭಾಷಣ ಇತಿಹಾಸ ಮತ್ತು ವರ್ತಮಾನದ ಸಂಘರ್ಷದ ಮಾತುಗಳಾಗಿವೆ. ಕರಾವಳಿಯ ನೆಲದ ಮೂಲಕ ದೇಶಕ್ಕೆ ಬ್ಯಾಂಕಿಂಗ್ ಅನ್ನು ನೀಡಿದ ಹಾಜಿ ಅಬ್ದುಲ್ಲ ಮತ್ತು ಎ ಬಿ ಶೆಟ್ಟರ ಕರ್ಮಭೂಮಿಯಿದು ಎನ್ನುತ್ತಾರೆ ಪ್ರಧಾನಿ ನರೇಂದ್ರ ಮೋದಿಯವರು.

ಹೌದು. ಹಾಜಿ ಅಬ್ದುಲ್ಲರು 1906ರಲ್ಲಿ ಉಡುಪಿಯಲ್ಲಿ ಕಾರ್ಪೊರೇಶ‌ನ್‌ ಬ್ಯಾಂಕ್‌ನ್ನು ಹುಟ್ಟು ಹಾಕಿದರು.  ಆಗ ಬ್ರಿಟೀಷ್ ಆಳ್ವಿಕೆಯ ಕಾಲ. ತನ್ನಲ್ಲಿದ್ದ 700 ಎಕರೆ ಕೃಷಿ ಭೂಮಿಯನ್ನು ಬಹುತೇಕ ಗೇಣಿದಾರ ರೈತರಿಗೆ ನಾವು ಊಹಿಸಲೂ ಸಾಧ್ಯವಾಗದ ಕಾಲದಲ್ಲಿ ಹಾಜಿ ಅಬ್ದುಲ್ಲರು ರೈತರಿಗೆ ಬಿಟ್ಟುಕೊಟ್ಟಿದ್ದರು. ಉಳಿದ ಬಹುತೇಕ ಭೂಮಿಗಳನ್ನು ಶಾಲೆ, ಆಸ್ಪತ್ರೆಗೆ ದಾನವಾಗಿ ನೀಡಿದ್ದರು. ಈಗಲೂ ಉಡುಪಿ ಸರಕಾರಿ ಆಸ್ಪತ್ರೆಯ ಜಾಗ ಹಾಜಿ ಅಬ್ದುಲ್ಲರ ಹೆಸರಿನಲ್ಲಿದೆ.

ಮಧ್ವಾಚಾರ್ಯರು ಸ್ಥಾಪಿಸಿ ಹೊರಟ ಉಡುಪಿಯ ಅಷ್ಟಮಠ ಆಗ ಭೀಕರ ಸಮಸ್ಯೆಗಳನ್ನು ಎದುರಿಸುತ್ತಿದ್ದ ದಿನವದು. ಬರದ ಪರಿಣಾಮವಾಗಿ ಅಷ್ಟಮಠದ  ಸ್ವಾಮೀಜಿಗಳಿಗೆ ದೀಪದ ಎಣ್ಣೆಗೂ ತಾತ್ವಾರ ಇತ್ತು. ಆಗ ಅಳಿವಿನಂಚಿನಲ್ಲಿದ್ದ ಅಷ್ಟಮಠಕ್ಕೆ ಎಣ್ಣೆ, ಅಕ್ಕಿ, ಹಣ ನೀಡಿ ಕಾಪಾಡಿದವರು ಇದೇ ಹಾಜಿ ಅಬ್ದುಲ್ಲ. ಆ ನಂತರ ಹಾಜಿ ಅಬ್ದುಲ್ಲರು ಅಷ್ಟಮಠದ ಲಕ್ಷದೀಪೋತ್ಸವಕ್ಕೆ ಖಾಯಂ ಅತಿಥಿಯಾಗಿದ್ದರು. ಹಾಜಿ ಅಬ್ದುಲ್ಲರನ್ನು ರಾಜ ಮಹಾರಾಜರನ್ನು ದೇವಸ್ಥಾನದೊಳಗೆ ಕರೆದೊಯ್ಯುವಾಗ ನೀಡಲಾಗುತ್ತಿದ್ದ ಹಗಲು ದೀವಿಟಿಗೆಯ ಮರ್ಯಾದೆಯನ್ನು ನೀಡಲಾಗುತ್ತಿತ್ತು.

ಈಗ ಕರಾವಳಿಯಲ್ಲಿ ಸಚಿವ ಯು ಟಿ ಖಾದರ್, ಶಾಸಕ ಮೊಯ್ದಿನ್ ಬಾವರಂತವರು ದೈವಸ್ಥಾನಕ್ಕೆ ಬಂದರೆ ಪ್ರಸಾದ ನೀಡಬೇಡಿ ಎಂದು ಬಿಜೆಪಿಯ ಮಾತೃ ಸಂಘಟನೆಯಾದ ಅರ್ ಎಸ್ ಎಸ್ ಆದೇಶ ನೀಡುತ್ತದೆ. ಯು ಟಿ ಖಾದರ್, ಮೊಯ್ದಿನ್ ಬಾವರಂತಹ ಮುಸ್ಲಿಂ ಇತಿಹಾಸವೇ ಹಿಂದೂಗಳ ಆರಾಧ್ಯ ಮಠ ಮಂದಿರಗಳನ್ನು ರಕ್ಷಿಸಿತ್ತು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಭಾಷಣ ನಮಗೆ ನೆನಪು ಮಾಡಿಕೊಡುತ್ತದೆ.

ಹಾಜಿ ಅಬ್ದುಲ್ಲರು ಇಷ್ಟಕ್ಕೇ ನಮಗೆ ಈ ಕಾಲದಲ್ಲಿ ಮುಖ್ಯವಾಗುವುದಿಲ್ಲ. ಈಗ ನಡೆಯುವ ಬ್ಯಾಂಕಿಂಗ್ ಬೆಳವಣಿಗೆಗಳ ಜೊತೆ ಹಾಜಿ ಅಬ್ದುಲ್ಲರು ಜಗಳ ಮಾಡುತ್ತಾರೆ. ಅಂದು ತನ್ನಲ್ಲಿದ್ದ ಭೂಮಿಯನ್ನು, ಹಣವನ್ನು ದೇವಸ್ಥಾನ, ಶಾಲೆ, ಆಸ್ಪತ್ರೆ, ಬ್ಯಾಂಕಿಗೆ ದಾನ ಮಾಡಿ ಅಬ್ದುಲ್ಲರು ದಿವಾಳಿಯಾಗುತ್ತಾ ಬರುತ್ತಾರೆ. ಆದರೆ ಬ್ಯಾಂಕ್ ದಿನದಿಂದ ದಿನಕ್ಕೆ ಉದ್ದಾರವಾಗುತ್ತಿರುತ್ತದೆ. ಕೊನೆಗೆ ಅಬ್ದುಲ್ಲರು ತನ್ನಲ್ಲಿದ್ದ ಮೂರು ಹಡಗುಗಳನ್ನು ಉಳಿಸಿಕೊಳ್ಳಲು ತಾನೇ ಸ್ಥಾಪಕ ಅಧ್ಯಕ್ಷನಾಗಿದ್ದ ಕಾರ್ಪೊರೇಷನ್ ಬ್ಯಾಂಕಿನಿಂದ ಸಾಲ ಪಡೆಯುತ್ತಾರೆ. ಆದರೆ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಬ್ಯಾಂಕಿನ ಸಿಬ್ಬಂದಿಗಳು ಸ್ಥಾಪಕಾಧ್ಯಕ್ಷ ಅಬ್ದುಲ್ಲರ ಹಡಗನ್ನು ಜಪ್ತಿ ಮಾಡುತ್ತಾರೆ. ಕೊನೆಗೆ ಬದುಕಲು ಸಾಧ್ಯವಾಗದೆ ಅಬ್ದುಲ್ಲರು 1935 ಆಗಸ್ಟ್ 12ರಂದು ಆತ್ಮಹತ್ಯೆ ಮಾಡಿಕೊಂಡರು.

1935 ರಲ್ಲಿ ಅವರೇ ಮಾಲೀಕರು ಆಗಿದ್ದ ಕಾರ್ಪೋರೇಷನ್ ಬ್ಯಾಂಕಿನ ಒಬ್ಬ ಸಿಬ್ಬಂದಿ ಅವರ ಸಾಲ ವಸೂಲಿ ಮಾಡುತ್ತಾನೆ. ಆಗ ಸಿಬ್ಬಂದಿಯನ್ನು ಕೆಲಸದಿಂದ ಕಿತ್ತೆಸೆಯುವ ಎಲ್ಲಾ ಅವಕಾಶಗಳು ಇದ್ದರೂ ಅಧಿಕಾರ ದುರುಪಯೋಗ ಮಾಡದೇ ಅವರು ಆತ್ಮಹತ್ಯೆಯ ದಾರಿಯನ್ನು ಹಿಡಿಯುತ್ತಾರೆ. ಕಾನೂನು ಕಟ್ಟಳೆಗಳು ಇಲ್ಲದ ದಿನಗಳಲ್ಲೂ ತನ್ನ ಸಾಲಕ್ಕಾಗಿ, ತನ್ನ ಸಾವು ಬದುಕಿನ ಹೋರಾಟಕ್ಕಾಗಿ ಅವರು ಬ್ಯಾಂಕನ್ನು ಬಲಿಕೊಡುವುದಿಲ್ಲ. ಬ್ಯಾಂಕಿಂಗ್ ವ್ಯವಸ್ಥೆಗೆ ಹಾಜಿ ಅಬ್ದುಲ್ಲರ ಕೊಡುಗೆಯನ್ನು ಜ್ಞಾಪಿಸಿರುವ ಪ್ರಧಾನಿಗಳ ಸದ್ಯದ ದಿನಗಳಲ್ಲಿ ಬ್ಯಾಂಕುಗಳಿಂದ ಸಾಲ ಪಡೆದ ಉಧ್ಯಮಿಗಳು ಎಲ್ಲಿದ್ದಾರೆ ? ಮತ್ತು ಬ್ಯಾಂಕುಗಳು ಎಲ್ಲಿವೆ ಎಂಬುದನ್ನು ದೇಶ ಅರಿಯಬೇಕಿದೆ.

ಪ್ರಧಾನಿ ಮೋದಿಯವರು ಉಲ್ಲೇಖಿಸಿದ ಮತ್ತೊಂದು ಹೆಸರು ವಿಜಯ ಬ್ಯಾಂಕಿನ ಸಂಸ್ಥಾಪಕ ಎ ಬಿ ಶೆಟ್ಟರದ್ದು. 1931 ರಲ್ಲಿ ವಿಜಯಬ್ಯಾಂಕ್ ಸ್ಥಾಪಿಸಿದ್ದ ಎ ಬಿ ಶೆಟ್ಟರು ಬಂಟ ಸಮುದಾಯದ ನೂರಾರು ಯುವಕರಿಗೆ ಬ್ಯಾಂಕಿನ ಬಾಗಿಲು ತೆರೆಸಿದರು. ಪ್ರಾರಂಭದಲ್ಲಿ ಬಂಟ ಸಮುದಾಯದ ಯುವಕರಿಗೇ ಪ್ರಾಶಸ್ತ್ಯ ನೀಡಿದರಾದರೂ ನಂತರ ಎಲ್ಲಾ ಸಮುದಾಯದವರಿಗೂ ವಿಜಯ ಬ್ಯಾಂಕ್ ನಲ್ಲಿ ಉದ್ಯೋಗ ಅವಕಾಶ ಸಿಗುವಂತಾಯಿತು.‌ ಪಕ್ಕಾ ಕಾಂಗ್ರೆಸ್ಸಿಗರಾಗಿದ್ದ ಎ ಬಿ ಶೆಟ್ಟರು ನಂತರ ಶಾಸಕರಾಗಿ ಆಯ್ಕೆಯಾಗಿ ಮದ್ರಾಸ್ ಸರಕಾರದಲ್ಲಿ ಸಹಕಾರಿ ಸಚಿವರಾಗಿಯೂ ಕೆಲಸ ನಿರ್ವಹಿಸಿದರು.

ಬಂಟ ಸಮುದಾಯದ ಪ್ರತಿಷ್ಠೆಯ ಬ್ಯಾಂಕ್ ಆಗಿದ್ದ ವಿಜಯ ಬ್ಯಾಂಕ್ ಇಂದಿರಾ ಗಾಂಧಿಯವರ ಉಳುವವನೇ ಹೊಲದೊಡೆಯ ಕಾನೂನಿನ ಹೊಡೆತಕ್ಕೆ ಸಿಕ್ಕಿ ದಿವಾಳಿಯಾಗಬೇಕಿತ್ತು. ಸ್ವತಃ ಅಧ್ಯಕ್ಷ ಎ ಬಿ ಶೆಟ್ಟರು ಸೇರಿದಂತೆ ಬ್ಯಾಂಕಿನ ಪಾಲುದಾರ ಬಂಟರೆಲ್ಲರ ಕೃಷಿ ಭೂಮಿ ಉಳುವ ಹಿಂದುಳಿದ ವರ್ಗದ ಪಾಲಾಯಿತು. ತಮ್ಮ ಭೂಮಿಯನ್ನು ಕಳೆದುಕೊಂಡರೂ ವಿಜಯ ಬ್ಯಾಂಕನ್ನು, ಅದರಲ್ಲಿದ್ದ ಬಡವರ ಹಣವನ್ನು ಸ್ವಲ್ಪವೂ ವ್ಯತ್ಯಾಸವಾಗದಂತೆ ಕಾಪಾಡಿದವರು ಎ ಬಿ ಶೆಟ್ಟರು ಮತ್ತು ಬಂಟ ಸಮುದಾಯ. ಆದರೆ ಇವತ್ತು ವಿಜಯ ಬ್ಯಾಂಕ್ ಎಲ್ಲಿದೆ ? ಈಗಿನ ಆರ್ಥಿಕ ನೀತಿಗಳಿಂದಾಗಿ ವಿಜಯ ಬ್ಯಾಂಕನ್ನು ಬೇರೆ ಬ್ಯಾಂಕುಗಳ ಜೊತೆ ವಿಲೀನ ಮಾಡುವ ಬಗ್ಗೆ ಚರ್ಚೆಗಳಾಗಿದ್ದವು.

ಇದೇ ಭಾಷಣದಲ್ಲಿ ಪ್ರಧಾನಿ ಮೋದಿಯವರು ಕರಾವಳಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಕೊಲೆಗಳನ್ನು ಪ್ರಸ್ತಾಪಿಸುತ್ತಾರೆ. ಕೊಲೆಯಾದ ಸಮುದಾಯದಲ್ಲಿ ಎಲ್ಲರೂ ಹಿಂದುಳಿದ ವರ್ಗಕ್ಕೆ ಸೇರಿದವರು. ಈ ಕೊಲೆಗಳು ಆಗಿರುವುದು ಮತೀಯ ಕಾರಣಗಳಿಗಾಗಿ ಎಂಬುದು ಎಲ್ಲರಿಗೂ ಗೊತ್ತಿರುವಂತದ್ದು. ಆದರೆ ಪ್ರಧಾನಿಯವರು ಕೊಲೆಯಾದ ಹಿಂದೂ ಕಾರ್ಯಕರ್ತರಿಗೆ ಮಾತ್ರ ಮರುಕಪಡುತ್ತಾರೆ. ಹಿಂದೂ ಕಾರ್ಯಕರ್ತರ ಕೊಲೆಗೂ ಮುನ್ನ ಮತ್ತು ನಂತರ ನಡೆದಿರುವ ಅಲ್ಪಸಂಖ್ಯಾತರ ಕೊಲೆಯ ಬಗ್ಗೆ ಮಾತನಾಡುವುದಿಲ್ಲ. ಕನಿಷ್ಠ ಈ ಕೊಲೆ ರಾಜಕಾರಣವನ್ನು ನಿಲ್ಲಿಸಿ ಎಂದು ಕರಾವಳಿ ಸಮುದಾಯಕ್ಕೆ ಹೇಳುವ ಔದಾರ್ಯವನ್ನೂ ತೋರುವುದಿಲ್ಲ.

ಉಡುಪಿ ಅಷ್ಟಮಠವನ್ನು ಉಳಿಸಿದ ಹಾಜಿ ಅಬ್ದುಲ್ಲರ ನಾಡು ನಿಮ್ಮದು. ಹಿಂದೂ ಮುಸ್ಲಿಮರು ಒಂದಾಗಿರಿ ಎಂದು ಹೇಳುವ ಬದಲಿಗೆ, ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಉಲ್ಲೇಖಿಸಿ ಪ್ರಚೋದಿಸುವ ಕೆಲಸವನ್ನು ಪ್ರಧಾನಿಗಳು ಮಾಡುತ್ತಾರೆ.

ಪ್ರಧಾನಿ ಮೋದಿಯವರು ಪ್ರಸ್ತಾಪಿಸಿದ ಕೊಲೆ ರಾಜಕಾರಣಕ್ಕೂ, ಹಾಜಿ ಅಬ್ದುಲ್ಲ , ಎ ಬಿ ಶೆಟ್ಟರಿಗೂ ನೇರ ಸಂಬಂಧ ಇದೆ. ಅಂದು ಹಾಜಿ ಅಬ್ದುಲ್ಲರು ಸ್ಥಾಪಿಸಿದ ಕಾರ್ಪೋರೇಷನ್ ಬ್ಯಾಂಕಿನಲ್ಲಿ ಮೊದಲ ಸಲಹೆಗಾರರಾಗಿದ್ದವರು ಈಗ ಆರ್ ಎಸ್ ಎಸ್ ನಲ್ಲಿರುವ ಗೌಡ ಸಾರಸ್ವತ ಬ್ರಾಹ್ಮಣರು. ಅಲ್ಲಿಂದ ನಂತರ ಹಾಜಿ ಅಬ್ದುಲ್ಲರು ಬ್ಯಾಂಕಿನ ಅಧ್ಯಕ್ಷರಾಗಿದ್ದರೂ ಸಿಬ್ಬಂದಿಗಳು ಮತ್ತು ಅಧಿಕಾರಿಗಳಲ್ಲಿ ಬಹುತೇಕರು ಜಿಎಸ್ ಬಿ ಅಥವಾ ಬ್ರಾಹ್ಮಣ ಸಮಯದಾಯಕ್ಕೆ ಸೇರಿದವರಾಗಿದ್ದರು. ಈಗ ಕೊಂಕಣಿ ಜಿಎಸ್ ಬಿ ಗಳು ಕೋಮುರಾಜಕಾರಣದ ಬಗ್ಗೆ ತಳೆದಿರುವ ನಿಲುವುಗಳು ಏನು ? ಕಾಂಗ್ರೆಸ್ಸಿಗರಾಗಿದ್ದುಕೊಂಡು ಗಾಂಧೀಜಿಯ ಅನುಯಾಯಿಯಾಗಿದ್ದ ಎ ಬಿ ಶೆಟ್ಟರು ಅಂದು ಬ್ಯಾಂಕು, ಹಾಸ್ಟೆಲ್ ಗಳನ್ನು ಸ್ಥಾಪಿಸದೇ ಇದ್ದಿದ್ದರೆ ಇಂದಿರಾ ಗಾಂದಿಯವರ ಕಾಲದಲ್ಲಿ ಭೂಮಿ ಕಳೆದುಕೊಂಡ ಬಂಟರು ಎಲ್ಲಿರುತ್ತಿದ್ದರು ? ಆದರೆ ಈಗ ಎಲ್ಲಿದ್ದಾರೆ ? ಬಿಲ್ಲವರಿಗೊಬ್ಬ ಎ ಬಿ ಶೆಟ್ಟಿ, ಹಾಜಿ ಅಬ್ದುಲ್ಲ ದೊರೆತಿದ್ದರೆ ಬಹುಶಃ ಈಗ ಹತ್ಯೆ ಮಾಡುತ್ತಿರುವ ಮತ್ತು ಹತ್ಯೆಗೊಳಗಾಗುತ್ತಿರುವ ಬಿಲ್ಲವರು ಬ್ಯಾಂಕಿನಲ್ಲೋ, ಉದ್ಯಮದಲ್ಲೋ ಇರುತ್ತಿದ್ದರು.

ಪ್ರಧಾನಿ ನರೇಂದ್ರ ಮೋದಿಯವರು ಉಡುಪಿಯ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಹಾಜಿ ಅಬ್ದುಲ್ಲ, ಎ ಬಿ ಶೆಟ್ಟಿ, ಹಿಂದೂ ಕಾರ್ಯಕರ್ತರ ಹತ್ಯೆಗಳ ವಿಷಯಗಳು ಇತಿಹಾಸ ಮತ್ತು ವರ್ತಮಾನದ ಸಂಘರ್ಷವನ್ನು ನಡೆಸುತ್ತಿದೆ. ಈ ಸಂಘರ್ಷ ಮತ್ತೆ ನಮ್ಮ ಕರಾವಳಿಯ ಜನಸಮುದಾಯವನ್ನು ಇತಿಹಾಸದ ಸೌಹಾರ್ದದ ದಿನಗಳಿಗೆ ಮರಳಿಸಬೇಕಿದೆ.

Writer - ನವೀನ್ ಸೂರಿಂಜೆ

contributor

Editor - ನವೀನ್ ಸೂರಿಂಜೆ

contributor

Similar News