ಪೂರ್ಣಾವಧಿ ಪೂರೈಸದ ಶಿವಮೊಗ್ಗ ಜಿಲ್ಲೆಯ ಸಿಎಂಗಳು !
ಶಿವಮೊಗ್ಗ, ಮೇ 18: ರಾಜ್ಯಕ್ಕೆ ಅತೀ ಹೆಚ್ಚು ಮುಖ್ಯಮಂತ್ರಿಗಳನ್ನು ನೀಡಿದ ಹೆಗ್ಗಳಿಕೆ ಶಿವಮೊಗ್ಗ ಜಿಲ್ಲೆಯದ್ದಾಗಿದೆ. 2013 ರವರೆಗೆ ಜಿಲ್ಲೆಗೆ ಸೇರಿದ ನಾಲ್ವರು ನಾಯಕರು, ಐದು ಬಾರಿ ಸಿಎಂ ಗದ್ದುಗೆಯೇರಿದ್ದಾರೆ. ಆದರೆ ಯಾರೊಬ್ಬರೂ 5 ವರ್ಷಗಳ ಪೂರ್ಣಾವಧಿ ಪೂರೈಸಿಲ್ಲ. ಕೆಲ ನಾಯಕರು ಅರ್ಧದಲ್ಲಿಯೇ ಸಿಎಂ ಕುರ್ಚಿಯಿಂದ ಕೆಳಗಿಳಿದರೆ, ಉಳಿದವರಿಗೆ ಸಿಕ್ಕ ಅಧಿಕಾರಾವಧಿ ಮಾತ್ರ ಅತ್ಯಲ್ಪವಾಗಿತ್ತು.
ಹೌದು. ಜಿಲ್ಲೆಯವರಾದ ಕಡಿದಾಳು ಮಂಜಪ್ಪ, ಎಸ್.ಬಂಗಾರಪ್ಪ, ಜೆ.ಹೆಚ್.ಪಟೇಲ್, ಬಿ.ಎಸ್.ಯಡಿಯೂರಪ್ಪರವರು ಈ ಹಿಂದೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಇದರಲ್ಲಿ ಪ್ರಸ್ತುತ ಅವಧಿ ಸೇರಿದಂತೆ ಬಿ.ಎಸ್.ಯಡಿಯೂರಪ್ಪರವರು ಮೂರು ಬಾರಿ ಸಿಎಂ ಗದ್ದುಗೆಯೇರಿದ್ದರೆ, ಉಳಿದವರು ಒಮ್ಮೆ ಮಾತ್ರ ಸಿಎಂ ಆಗಿ ಕಾರ್ಯಾ ನಿರ್ವಹಿಸಿದ್ದಾರೆ. ಆದರೆ ಈ ನಾಲ್ವರು ನಾಯಕರಿಗೂ ಸಿಎಂ ಕುರ್ಚಿಯಲ್ಲಿ ಪೂರ್ಣಾವಧಿಯಿರುವ ಯೋಗ ಕೂಡಿಬಂದಿಲ್ಲದಿರುವುದು ವಿಶೇಷವಾಗಿದೆ.
ಇದೀಗ ಮೇ 17 ರಂದು ರಾಜ್ಯದ 23 ನೇ ಸಿಎಂ ಆಗಿ ಜಿಲ್ಲೆಯ ಬಿ.ಎಸ್.ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಭಾರೀ ರಾಜಕೀಯ ಹೈಡ್ರಾಮಾದಲ್ಲಿ ಅವರು ಸಿಎಂ ಹುದ್ದೆಯಲ್ಲಿ ಮುಂದುವರಿಯುತ್ತಾರಾ? ಇಲ್ಲವಾ? ಎಂಬ ಚರ್ಚೆಗಳು ನಡೆಯಲಾರಂಭಿಸಿದೆ. ಶನಿವಾರ ವಿಧಾನಸೌಧದಲ್ಲಿ ನಡೆಯಲಿರುವ ವಿಶ್ವಾಸಮತಯಾಚನೆಯತ್ತ ಎಲ್ಲರ ಗಮನ ಸೆಳೆದಿದೆ.
ಹಿನ್ನೆಲೆ: ಮೊದಲ ವಿಧಾನಸಭೆ ಚುನಾವಣೆ ನಡೆದ 1952 ರಲ್ಲಿ, ಗಾಂಧಿವಾದಿ ಎಂದೇ ಖ್ಯಾತರಾಗಿದ್ದ ಕಡಿದಾಳು ಮಂಜಪ್ಪರವರು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, 16,570 ಮತ ಪಡೆದು ವಿಧಾನಸಭೆಗೆ ಆಯ್ಕೆಯಾಗಿದ್ದರು.
ಸಿಎಂ ಆಗಿ ನಾಲ್ಕೂವರೆ ವರ್ಷ ಕಾರ್ಯಾಭಾರ ನಿರ್ವಹಿಸಿದ್ದ ಕೆಂಗಲ್ ಹನುಮಂತಯ್ಯರವರು ರಾಜೀನಾಮೆ ನೀಡಿದ್ದ ವೇಳೆ, ಧೀಮಂತ ವ್ಯಕ್ತಿತ್ವದ ಕಡಿದಾಳು ಮಂಜಪ್ಪರಿಗೆ ಸಿಎಂ ಹುದ್ದೆ ಅನಾಯಾಸವಾಗಿ ಹುಡುಕಿಕೊಂಡು ಬಂದಿತ್ತು. 1956 ಆಗಸ್ಟ್ 19 ರಿಂದ ಅಕ್ಟೋಬರ್ 31 ರವರೆಗೆ, 73 ದಿನಗಳ ಕಾಲ ಕಡಿದಾಳು ಮಂಜಪ್ಪ ಮುಖ್ಯಮಂತ್ರಿಯಾಗಿದ್ದರು. ಅಲ್ಲಿಗೆ ಕಾಂಗ್ರೆಸ್ ಸರ್ಕಾರದ 5 ವರ್ಷದ ಅವಧಿ ಪೂರ್ಣಗೊಂಡಿತ್ತು.
ರಾಜ್ಯ ರಾಜಕಾರಣದಲ್ಲಿ ವರ್ಣ ರಂಜಿತ ರಾಜಕಾರಣಿ ಎಂದೇ ಬಿರುದಾಂಕಿತರಾಗಿದ್ದ ಎಸ್. ಬಂಗಾರಪ್ಪರವರು 1989 ರ ವಿಧಾನಸಭೆ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದು, 41,648 ಮತ ಪಡೆದು ಆಯ್ಕೆಯಾಗಿದ್ದರು. ನಾನಾ ಕಾರಣಗಳಿಂದ ವೀರೇಂದ್ರ ಪಾಟೀಲ್‍ರವರು ಸಿಎಂ ಆದ 314 ದಿನಗಳಲ್ಲಿಯೇ ಹುದ್ದೆಯಿಂದ ಕೆಳಗಿಳಿಯುವಂತಾಯಿತು
ಎಸ್.ಬಂಗಾರಪ್ಪರತ್ತ ಚಿತ್ತ ಹರಿಸಿದ ಅಂದಿನ ಕಾಂಗ್ರೆಸ್ ವರಿಷ್ಠರು, ಅವರಿಗೆ ಸಿಎಂ ಪಟ್ಟ ಕಟ್ಟಿದ್ದರು. 1990 ರ ಅಕ್ಟೋಬರ್ 17 ರಿಂದ 1992 ರ 19 ನವೆಂಬರ್ ವರೆಗೆ (2 ವರ್ಷ 33 ದಿನ) ಸಿಎಂ ಆಗಿದ್ದರು. ನಂತರ ವಿವಿಧ ಕಾರಣಗಳಿಂದಾಗಿ ಅವರು ಸಿಎಂ ಸ್ಥಾನ ಕಳೆದುಕೊಳ್ಳುವಂತಾಯಿತು.
ಈ ಹಿಂದೆ ಶಿವಮೊಗ್ಗ ಜಿಲ್ಲೆಯ ಭಾಗವಾಗಿದ್ದ ಚೆನ್ನಗಿರಿ (ಪ್ರಸ್ತುತ ದಾವಣಗೆರೆ ಜಿಲ್ಲೆಯ ತಾಲೂಕು) ಕ್ಷೇತ್ರದಿಂದ ಜನತಾದಳದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಮಾಜವಾದಿ ಹೋರಾಟಗಾರ ಜೆ.ಹೆಚ್.ಪಟೇಲ್‍ರವರು 38,178 ಮತ ಪಡೆದು ಆಯ್ಕೆಯಾಗಿದ್ದರು. ಹೆಚ್.ಡಿ.ದೇವೇಗೌಡರವರು ಸಿಎಂ ಆಗಿ ಆಯ್ಕೆಯಾಗಿದ್ದರು. ಆದರೆ ಕೇಂದ್ರದಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಅವರಿಗೆ ಪ್ರಧಾನಮಂತ್ರಿ ಹುದ್ದೆ ಹುಡುಕಿಕೊಂಡು ಬಂದಿತ್ತು. ಈ ಕಾರಣದಿಂದ 1 ವರ್ಷ 172 ದಿನ ಸಿಎಂ ಆಗಿದ್ದ ಅವರು, ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದರಿಂದ ಜೆ.ಹೆಚ್.ಪಟೇಲ್‍ಗೆ ಸಿಎಂ ಹುದ್ದೆ ಸಿಕ್ಕಿತ್ತು. 1996 ರ ಮಾರ್ಚ್ 31 ರಿಂದ 1999 ಅಕ್ಟೋಬರ್ 7 ರವರೆಗೆ (3 ವರ್ಷ 129) ಅವರು ಸಿಎಂ ಆಗಿದ್ದರು. ಅಲ್ಲಿಗೆ ಜನತಾದಳ ಸರ್ಕಾರದ 5 ವರ್ಷ ಅವಧಿ ಪೂರ್ಣಗೊಂಡಿತ್ತು. ಇವರಿಗೂ ಕೂಡ ಪೂರ್ಣಾವಧಿ ಸಿಎಂ ಹುದ್ದೆಯ ಭಾಗ್ಯ ದೊರಕಲಿಲ್ಲ.
ಇದಾದ ನಂತರ 2004 ರ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಕಣಕ್ಕಿಳಿದು ಆಯ್ಕೆಯಾಗಿದ್ದ ಬಿ.ಎಸ್.ಯಡಿಯೂರಪ್ಪರವರು 7 ದಿನಗಳವರೆಗೆ ಸಿಎಂ ಆಗಿದ್ದರು. 2004 ರ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಈ ಕಾರಣದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದರು. ಈ ನಡುವೆ ಹೆಚ್.ಡಿ.ಕುಮಾರಸ್ವಾಮಿಯವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸಿಎಂ ಆಗಿದ್ದರು. ಬಿ.ಎಸ್.ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದರು. ಒಪ್ಪಂದದಂತೆ ತಲಾ 20 ತಿಂಗಳ ಸಿಎಂ ಹುದ್ದೆ ಹಂಚಿಕೆಯ ಮಾತುಕತೆಯಾಗಿತ್ತು. ಹೆಚ್.ಡಿ.ಕುಮಾರಸ್ವಾಮಿ 20 ತಿಂಗಳ ಅವಧಿ ಪೂರ್ಣಗೊಂಡ ನಂತರ ಬಿ.ಎಸ್.ಯಡಿಯೂರಪ್ಪರವರು 2007 ರ ನವೆಂಬರ್ 12 ರಂದು ಸಿಎಂ ಆಗಿದ್ದರು. ಆದರೆ ಜೆಡಿಎಸ್ ಬೆಂಬಲ ಹಿಂದೆಗೆದುಕೊಂಡಿತು. ಇದರಿಂದ ಯಡಿಯೂರಪ್ಪಗೆ ಸಿಎಂ ಸ್ಥಾನ ಕಳೆದುಕೊಂಡಿದ್ದರು.
ಇದಾದ ನಂತರ 2008 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅತ್ಯದಿಕ ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಅದರಂತೆ ಬಿ.ಎಸ್.ಯಡಿಯೂರಪ್ಪಗೆ ಸಿಎಂ ಹುದ್ದೆ ಮತ್ತೆ ಒಲಿದು ಬಂದಿತ್ತು. 2008 ರ ಮೇ 30 ರಂದು ಸಿಎಂ ಆಗಿ ಅವರು ಅಧಿಕಾರ ಸ್ವೀಕರಿಸಿದ್ದರು. ಆದರೆ ನಾನಾ ಆರೋಪಗಳಿಗೆ ತುತ್ತಾಗಿ 2011 ರ ಜುಲೈ 31 ರಂದು (3 ವರ್ಷ 62 ದಿನ) ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದಾದ ನಂತರ 2018 ರ ಮೇ 17 ರಂದು ಬಿ.ಎಸ್.ಯಡಿಯೂರಪ್ಪರವರು ಮತ್ತೆ ಸಿಎಂ ಸ್ಥಾನಕ್ಕೇರಿದ್ದಾರೆ. ಎಷ್ಟು ದಿನ ಅಧಿಕಾರದಲ್ಲಿರುತ್ತಾರೆಂಬುವುದು ಶನಿವಾರ ವಿಧಾನಸಭೆಯಲ್ಲಿ ನಡೆಯಲಿರುವ ವಿಶ್ವಾಸಮತಯಾಚನೆಯ ನಂತರವಷ್ಟೆ ಸ್ಪಷ್ಟವಾಗಬೇಕಾಗಿದೆ.
ನಾಯಕರು ಅಧಿಕಾರದಲ್ಲಿದ್ದ ದಿನ ಮತ್ತು ವರ್ಷ
ಕಡಿದಾಳು ಮಂಜಪ್ಪ(ಕಾಂಗ್ರೆಸ್) - 73 ದಿವಸ (1956)
ಎಸ್.ಬಂಗಾರಪ್ಪ (ಕಾಂಗ್ರೆಸ್) - 2 ವರ್ಷ 33 ದಿವಸ (1990 - 92)
ಜೆ.ಹೆಚ್.ಪಟೇಲ್ (ಜನತಾದಳ) - 3 ವರ್ಷ 129 ದಿವಸ (1996 - 99)
ಬಿ.ಎಸ್.ಯಡಿಯೂರಪ್ಪ (ಬಿಜೆಪಿ) - 7 ದಿವಸ (2007)
ಬಿ.ಎಸ್.ಯಡಿಯೂರಪ್ಪ (ಬಿಜೆಪಿ) - 3 ವರ್ಷ 62 ದಿವಸ (2008 - 2011)
ಬಿ.ಎಸ್.ಯಡಿಯೂರಪ್ಪ (ಬಿಜೆಪಿ) - ಮೇ 17 2018 ರಿಂದ......!