ಶಿವಮೊಗ್ಗ: ಸಾಲುಸಾಲು ಚುನಾವಣಾ ನೀತಿ ಸಂಹಿತೆ ಎಫೆಕ್ಟ್; ನೆನೆಗುದಿಗೆ ಬಿದ್ದ ಪ್ರಾಧಿಕಾರದ ವಸತಿ ಯೋಜನೆಗಳು

Update: 2018-05-22 16:21 GMT

ಶಿವಮೊಗ್ಗ, ಮೇ 22: ಒಂದರ ಹಿಂದೊಂದರಂತೆ ಸಾಲುಸಾಲಾಗಿ ಎದುರಾಗುತ್ತಿರುವ ಚುನಾವಣಾ ನೀತಿ ಸಂಹಿತೆಗಳು, ಅಭಿವೃದ್ದಿ ಕಾರ್ಯ ಹಾಗೂ ವಿವಿಧ ಯೋಜನೆಗಳ ಮೇಲೆ ಗಂಭೀರ ಪರಿಣಾಮ ಬೀರುವಂತಾಗಿದೆ. ನೀತಿ-ಸಂಹಿತೆಯ ಎಫೆಕ್ಟ್ ನಿಂದ, ಶಿವಮೊಗ್ಗ ನಗರದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ವಸತಿ ಯೋಜನೆಗಳ ಅನುಷ್ಠಾನ ನೆನೆಗುದಿಗೆ ಬೀಳುವಂತಾಗಿದೆ. ಇದರಿಂದ ರಿಯಾಯಿತಿ ದರದಲ್ಲಿ ಸ್ವಂತ ನಿವೇಶನ - ಮನೆ ಹೊಂದುವ ನಗರ ವ್ಯಾಪ್ತಿಯ ಬಡ-ಮಧ್ಯಮ ವರ್ಗದ ವಸತಿರಹಿತರ ಕನಸು ನನಸಾಗದಂತಾಗಿದೆ. 

ಏನೀದು ಯೋಜನೆ?: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರವು ನಗರದ ಹೊರವಲಯ ಊರುಗಡೂರಿನಲ್ಲಿ ಲೇಔಟ್ ಹಾಗೂ ಸೋಮಿನಕೊಪ್ಪ ಬಡಾವಣೆಯಲ್ಲಿ ಫ್ಲ್ಯಾಟ್ ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡಿತ್ತು. ಪ್ರಾಧಿಕಾರ ವ್ಯಾಪ್ತಿಯ ಬಡ-ಮಧ್ಯಮ ವರ್ಗದ ವಸತಿ ರಹಿತರಿಗೆ ರಿಯಾಯಿತಿ ದರದಲ್ಲಿ ನಿವೇಶನ-ಮನೆ ಕಲ್ಪಿಸುವ ಉದ್ದೇಶವಿಟ್ಟಿಕೊಂಡಿತ್ತು. ಊರುಗಡೂರಿನಲ್ಲಿ ವಸತಿ ಬಡಾವಣೆ ರಚನೆಗಾಗಿ ಪ್ರಾಧಿಕಾರವು ಕಳೆದ ಸುಮಾರು 4 ದಶಕಗಳ ಹಿಂದೆಯೇ ಸರಿಸುಮಾರು 60 ಎಕರೆ ಪ್ರದೇಶವನ್ನು ಭೂ ಸ್ವಾದೀನ ಪಡಿಸಿಕೊಂಡಿತ್ತು. ಆದರೆ ಕೆಲ ಭೂ ಮಾಲೀಕರು ಹೆಚ್ಚಿನ ಪರಿಹಾರಕ್ಕೆ ಹಾಗೂ ಭೂ ಸ್ವಾದೀನ ಪ್ರಕ್ರಿಯೆ ಕೈಬಿಡಲು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಸುಮಾರು ಮೂರ್ನಾಲ್ಕು ದಶಕಗಳ ಕಾಲ ನಡೆದ ಕಾನೂನು ಸಮರದಲ್ಲಿ ಪ್ರಾಧಿಕಾರಕ್ಕೆ ಜಯ ಸಂದಿತ್ತು.

ಮತ್ತೊಂದೆಡೆ ಭೂ ಮಾಲೀಕರು ಸೂಕ್ತ ಪರಿಹಾರಕ್ಕೆ ಹೋರಾಟ ಮುಂದುವರಿಸಿದ್ದರು. ಈ ಹಿಂದಿನ ಸಿಎಂ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ದಿ ಸಚಿವರ ಬಳಿಗೆ ಭೂ ಮಾಲೀಕರ ನಿಯೋಗ ತೆರಳಿತ್ತು. ಅಂತಿಮವಾಗಿ ಪ್ರಾಧಿಕಾರವು ಭೂ ಸ್ವಾದೀನಪಡಿಸಿಕೊಂಡಿದ್ದ ಭೂಮಿಯನ್ನು ಸ್ವಾದೀನಪಡಿಸಿಕೊಂಡಿತ್ತು. 
4 ಎಕರೆ ಪ್ರದೇಶದಲ್ಲಿ ಫ್ಲ್ಯಾಟ್ ಹಾಗೂ ಉಳಿದ ಜಾಗದಲ್ಲಿ ನಿವೇಶನ ರಚನೆ ಮಾಡಿ ವಸತಿರಹಿತರಿಗೆ ವಿತರಣೆ ಮಾಡಲು ನಿರ್ಧರಿಸಿತ್ತು. ಅದರಂತೆ ಸಮಗ್ರ ಯೋಜನಾ ವರದಿ, ಪ್ಲ್ಯಾನ್ ತಯಾರಿಸಿತ್ತು. ರಾಜ್ಯ ಸರ್ಕಾರದ ಅನುಮತಿಗೆ ರವಾನಿಸಿತ್ತು. ಕಳೆದ ಆರು ತಿಂಗಳ ಹಿಂದೆಯೇ ಬಡಾವಣೆ ರಚನೆಗೆ ಸರ್ಕಾರ ಅನುಮತಿ ನೀಡಿತ್ತು. 

ಮತ್ತೊಂದೆಡ ಸೋಮಿನಕೊಪ್ಪ ಬಡಾವಣೆಯಲ್ಲಿ ಪ್ರಾಧಿಕಾರಕ್ಕೆ ಸೇರಿದ ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ಫ್ಲ್ಯಾಟ್ ನಿರ್ಮಾಣಕ್ಕೆ ನಿರ್ಧರಿಸಿ, ಸರ್ಕಾರದ ಅನುಮೋದನೆಗೆ ಕಳುಹಿಸಿಕೊಡಲಾಗಿತ್ತು. ಈ ಯೋಜನೆಗೂ ಕೂಡ ಸರ್ಕಾರದ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. 

ಅಡೆತಡೆ: ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕಿರುವ ಈ ವಸತಿ ಯೋಜನೆಗಳ ಕುರಿತಂತೆ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಅಂತಿಮ ಹಂತದ ಅನುಮೋದನೆ ಪಡೆದು, ನಿಯಮಾನುಸಾರ ಟೆಂಡರ್ ಪ್ರಕ್ರಿಯೆ ನಡೆಸಬೇಕಾಗಿದೆ. ತದನಂತರ ಲೇಔಟ್ ಹಾಗೂ ಫ್ಲ್ಯಾಟ್‍ಗಳ ನಿರ್ಮಾಣಕ್ಕೆ ಚಾಲನೆ ಸಿಗಬೇಕಾಗಿದೆ. 

ಆದರೆ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಎದುರಾದ ಕಾರಣದಿಂದ ಪ್ರಾಧಿಕಾರದ ಸಭೆ ಸೇರಲು ಹಾಗೂ ಟೆಂಡರ್ ಪ್ರಕ್ರಿಯೆ ನಡೆಸುವುದಕ್ಕೆ ತಡೆ ಬಿದ್ದಿತ್ತು. ಈ ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆ ವಿಧಾನ ಪರಿಷತ್‍ನ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆ ಎದುರಾಗಿದ್ದು, ಮೇ 15 ರಿಂದ ಜೂನ್ 12 ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ.

ಈ ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆ ಮಹಾನಗರ ಪಾಲಿಕೆ ಹಾಗೂ ಲೋಕಸಭೆ ಉಪ ಚುನಾವಣೆ ನೀತಿ ಸಂಹಿತೆಗಳು ಜಾರಿಯಾಗುವ ಲಕ್ಷಣಗಳಿವೆ. ಇದರಿಂದ ಪ್ರಾಧಿಕಾರವು ವಸತಿ ಯೋಜನೆಗಳ ಕಾರ್ಯಗತಗೊಳಿಸುವುದರ ಮೇಲೆ ಅಡೆತಡೆ ಬೀಳುವಂತಾಗಿದ್ದು, ಚುನಾವಣೆಗಳ ಕಾರಣದಿಂದಲೇ ಸದ್ಯಕ್ಕೆ ಈ ಯೋಜನೆಗಳು ಟೇಕಾಫ್ ಆಗುವ ಲಕ್ಷಣಗಳು ಗೋಚರವಾಗುತ್ತಿಲ್ಲವಾಗಿದೆ. 

ಗಮನಹರಿಸಲಿ: 'ಶಿವಮೊಗ್ಗದ ಅದೆಷ್ಟೊ ವಸತಿ ರಹಿತ ಬಡ - ಮಧ್ಯಮ ವರ್ಗದವರು, ಸರ್ಕಾರದ ಅಧೀನದ ಸಂಸ್ಥೆಗಳು ಕಾರ್ಯಗತಗೊಳಿಸುವ ವಸತಿ ಯೋಜನೆಗಳ ಮೂಲಕ ಸ್ವಂತ ಸೂರು ಹೊಂದುವ ಕನಸು ಕಟ್ಟಿಕೊಂಡಿದ್ದಾರೆ. ಆದರೆ ಕಳೆದ ಹಲವು ವರ್ಷಗಳಿಂದ ಪ್ರಾಧಿಕಾರ, ಕೆಹೆಚ್‍ಬಿಯಂತಹ ಸಂಸ್ಥೆಗಳು ಒಂದೇ ಒಂದು ಹೊಸ ಬಡಾವಣೆ ನಿರ್ಮಾಣ ಮಾಡಿ ಜನರಿಗೆ ನಿವೇಶನ-ವಸತಿ ನೀಡುವ ಕೆಲಸ ಮಾಡಿಲ್ಲ. ಪ್ರಸ್ತುತ ಚುನಾವಣೆಯ ನೆಪ ಮುಂದಿಟ್ಟುಕೊಂಡು ಪ್ರಾಧಿಕಾರವು ವಸತಿ ಯೋಜನೆಗಳ ಅನುಷ್ಠಾನಕ್ಕೆ ವಿಳಂಬ ಮಾಡುತ್ತಿರುವ ಕ್ರಮ ಸರಿಯಲ್ಲ. ಕಾಲಮಿತಿಯಲ್ಲಿ ವಸತಿ ಯೋಜನೆಗಳ ಅನುಷ್ಠಾನಗೊಳಿಸುವುದರ ಜೊತೆಗೆ ಅರ್ಹ ವಸತಿ ರಹಿತರಿಗೆ ನಿವೇಶನ-ಮನೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಗಮನಹರಿಸಬೇಕಾಗಿದೆ' ಎಂದು ಜಿಲ್ಲಾ ಪತ್ರ ಬರಹಗಾರರ ಸಂಘದ ಮುಖಂಡ ಜಿ.ಎಂ.ಸುರೇಶ್‍ಬಾಬುರವರು ಆಗ್ರಹಿಸುತ್ತಾರೆ. 

'ಚುನಾವಣಾ ಪ್ರಕ್ರಿಯೆಯಿಂದ ತಡೆ': ಅಧ್ಯಕ್ಷ ಇಸ್ಮಾಯಿಲ್ ಖಾನ್
'ವಿಧಾನಸಭೆ ಹಾಗೂ ವಿಧಾನ ಪರಿಷತ್ ಚುನಾವಣಾ ನೀತಿ ಸಂಹಿತೆಗಳ ಕಾರಣದಿಂದ ಊರುಗಡೂರು ಹಾಗೂ ಸೋಮಿನಕೊಪ್ಪ ವಸತಿ ಯೋಜನೆಗಳ ಟೆಂಡರ್ ಪ್ರಕ್ರಿಯೆ ವಿಳಂಬವಾಗುವಂತಾಗಿದೆ. ಮಾದರಿ ನೀತಿ ಸಂಹಿತೆ ಪೂರ್ಣಗೊಳ್ಳುತ್ತಿದ್ದಂತೆ ಪ್ರಾಧಿಕಾರದ ಸಭೆ ನಡೆಸಿ, ಟೆಂಡರ್ ಪ್ರಕ್ರಿಯೆಗೆ ಕ್ರಮಕೈಗೊಳ್ಳಲಾಗುವುದು. ಕಾಲಮಿತಿಯಲ್ಲಿ ಯೋಜನೆಗಳ ಅನುಷ್ಠಾನಗೊಳಿಸಿ, ಅರ್ಹ ವಸತಿ ರಹಿತರಿಗೆ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಗಮನಹರಿಸಲಾಗುವುದು' ಎಂದು ಶಿವಮೊಗ್ಗ - ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಇಸ್ಮಾಯಿಲ್ ಖಾನ್‍ರವರು ತಿಳಿಸಿದ್ದಾರೆ.                            

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News