ನಕ್ಸಲ್ ಭೇಟಿ ವದಂತಿ: ಕುದುರೆಮುಖ ಠಾಣಾ ವ್ಯಾಪ್ತಿಯಲ್ಲಿ ಕೂಂಬಿಂಗ್ ಕಾರ್ಯಾಚರಣೆ
ಚಿಕ್ಕಮಗಳೂರು, ಆ.12: ಕೆಲವು ದಿನಗಳ ಹಿಂದೆ ಕಳಸ ಹೋಬಳಿ ವ್ಯಾಪ್ತಿಯ ಗುಳ್ಯಾ ಗ್ರಾಮದಲ್ಲಿನ ಮನೆಯೊಂದಕ್ಕೆ ನಕ್ಸಲರು ಭೇಟಿ ನೀಡಿದ್ದಾರೆಂಬ ವದಂತಿ ಹಿನ್ನೆಲೆಯಲ್ಲಿ ಶುಕ್ರವಾರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಕಳಸ ಭಾಗದಲ್ಲಿ ಎಎನ್‌ಎಫ್ ತಂಡ ಕೂಂಬಿಂಗ್ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದು ಬಂದಿದೆ.
ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ವ್ಯಾಪ್ತಿಯಲಿರುವ ಗುಳ್ಯಾ ಗ್ರಾಮದ ವಾಸುದೇವ್ ಎಂಬವರ ಮನೆಗೆ ಇತ್ತೀಚೆಗೆ ಇಬ್ಬರು ನಕ್ಸಲರು ಭೇಟಿ ನೀಡಿದ್ದಾರೆಂಬ ಊಹಾಪೋಹ ಕಳಸ ಭಾಗದಲ್ಲಿ ಇತ್ತೀಚೆಗೆ ಕೇಳಿ ಬಂದಿತ್ತು. ಈ ಸಂಬಂಧ ವಾಸುದೇವ್ ಅವರು, ನಕ್ಸಲರು ತನ್ನ ಮನೆಗೆ ಭೇಟಿ ನೀಡಿದ್ದರೆಂದು ಮಾತನಾಡುತ್ತಿರುವ ವೀಡಿಯೊವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರ ತಂಡ ವಾಸುದೇವ್ ಅವರ ಮನೆಗೆ ಭೇಟಿ ನೀಡಿ ಈ ಸಂಬಂಧ ಸತ್ಯಾಸತ್ಯತೆಯನ್ನು ಪರಿಶೀಲಿಸಿದೆ ಎಂದು ತಿಳಿದು ಬಂದಿದೆ.
ವಾಸುದೇವ್ ನೀಡಿರುವ ಹೇಳಿಕೆಯ ಆಧಾರದ ಮೇಲೆ ನಕ್ಸಲ್ ನಾಯಕರೆನ್ನಲಾದ ಕೃಷ್ಣ ಮೂರ್ತಿ ಮತ್ತು ಮುಂಡಗಾರು ಲತಾ ಹಾಗೂ 6 ಮಂದಿಯ ವಿರುದ್ಧ ಕುದುರೆಮುಖ ಪೊಲೀಸರು ಮಂಗಳವಾರ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆಂದು ತಡವಾಗಿ ಬೆಳಕಿಗೆ ಬಂದಿದೆ. ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೆಲ ನಿರ್ದಿಷ್ಟ ಪ್ರದೇಶಗಳೂ ಸೇರಿದಂತೆ ಗುಳ್ಯಾ ಗ್ರಾಮದ ಕೆಲವೆಡೆ ಎಎಲ್‌ಎಫ್ ತಂಡದ ಸಿಬ್ಬಂದಿ ಶುಕ್ರವಾರ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆನ್ನಲಾಗಿದೆ. ಕಾರ್ಯಾಚರಣೆಯಲ್ಲಿ ಉಡುಪಿ, ಚಿಕ್ಕಮಗಳೂರು, ಮಂಗಳೂರು ಜಿಲ್ಲೆಗಳ ಎಎನ್‌ಎಫ್ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿದು ಬಂದಿದೆ.
ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕ್ಸಲರು ಭೇಟಿ ನೀಡಿದ್ದಾರೆಂಬ ವದಂತಿ ಇದೆ. ಈ ಹಿನ್ನೆಲೆಯಲ್ಲಿ ವಾಸುದೇವ್ ಎಂಬವರು ನೀಡಿದ ಹೇಳಿಕೆ ಮೇಲೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಮಲೆನಾಡು ವ್ಯಾಪ್ತಿಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ಸಾಮಾನ್ಯ ಸಂಗತಿ. ಶುಕ್ರವಾರವೂ ಕುದುರೆಮುಖ ವ್ಯಾಪ್ತಿಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಲಾಗಿದೆ. ಇದರಲ್ಲಿ ಹೊಸತೇನೂ ಇಲ್ಲ. ಎಂದಿನಂತೆ ಕೂಂಬಿಂಗ್ ನಡೆಸಲಾಗಿದೆ.
- ಕೆ.ಅಣ್ಣಾಮಲೈ, ಎಸ್ಪಿ