ಅಮ್ಮಚ್ಚಿಯೆಂಬ ನೆನಪು: ಅಮ್ಮಚ್ಚಿಗಿಂತ ತುಸು ಹೆಚ್ಚೇ ಕಾಡುವ ಅಕ್ಕು..!

Update: 2018-11-04 15:46 GMT

ಅಮ್ಮಚ್ಚಿಯೆಂಬ ನೆನಪು ಸಿನೆಮಾ ವೈದೇಹಿ ಅವರ ಕತೆ, ಕಾದಂಬರಿಗಳನ್ನು ಓದುವವರಿಗೆ ಮಾತ್ರವಲ್ಲ, ಜೀವನ ಪ್ರೀತಿ ಹೊಂದಿರುವ ಪ್ರತಿಯೊಬ್ಬರಿಗೂ ಆತ್ಮೀಯವಾಗುವಂಥ ಚಿತ್ರ.

ಭಾವನೆಗಳನ್ನು ಹೆಚ್ಚು ತೆರೆಯುವ ಮೂಲಕ ಪ್ರೇಕ್ಷಕರಿಗೆ ಈಗ ಸಿನೆಮಾಗಳು ಹತ್ತಿರವಾಗುತ್ತಿವೆ. ತೆರೆದಿಡುವುದಕ್ಕೆ ಇನ್ನೇನೂ ಇಲ್ಲ ಎನ್ನುವಂಥ ಸಂದರ್ಭದಲ್ಲಿ ಕರಾವಳಿಯ ಗ್ರಾಮ ಭಾಗವೊಂದರಲ್ಲಿ ನಡೆಯುವ ಕತೆಯನ್ನು ಚಿತ್ರ ಹೇಳಿದೆ. ಇನ್ನೂ ಆಧುನಿಕತೆಯ ಕಡೆಗೆ ಮುಖ ಮಾಡಿರದ ಆ ಹಳ್ಳಿಯ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಗಳ ಒಳಗೆ ನಡೆಯುವ ಕತೆ ಇದು. ಕತೆ ಎಲ್ಲಿಯಾದಾದರೂ ನಮಗೆ ಅನ್ವಯಿಸುತ್ತದೆ ಎಂಬಂತೆ ಕತೆಯಲ್ಲಿ ಬರುವ ಹೆಣ್ಣುಪಾತ್ರಗಳ ತುಡಿತ ಇಂದಿಗೂ ಪ್ರಸ್ತುತ.

ಅಮ್ಮಚ್ಚಿಯ ಹೆಸರಿನಲ್ಲಿ ಚಿತ್ರದ ಶೀರ್ಷಿಕೆ ಇದ್ದರೂ ಚಿತ್ರದ ಮುಕ್ಕಾಲು ಪಾಲು ಭಾಗವನ್ನು ಆವರಿಸಿಕೊಂಡಿರುವುದು ಅಕ್ಕು ಎಂಬ ಮಾನಸಿಕ ಆಘಾತಕ್ಕೊಳಗಾಗಿರುವಂಥ ಮಹಿಳೆಯ ಪಾತ್ರ. ಮದುವೆಯ ಹೊಸದರಲ್ಲೇ ಮನೆ ಬಿಟ್ಟು ಹೋಗಿರುವಂಥ ಪತಿಯಿಂದ ನೊಂದು ಮತಿ ಭ್ರಮಣೆಗೊಳಗಾದ ಅಕ್ಕು ತವರು ಸೇರಿ ತಮಾಷೆಯ ವಸ್ತುವಾಗುತ್ತಾಳೆ. ಆದರೆ ಆ ತಮಾಷೆಯ ಘಟನೆಗಳು ಯಾವುದೂ ವ್ಯಂಗ್ಯವಾಗಿ ಕಾಣಿಸದೆ ಬದುಕಿನ ಕ್ರೌರ್ಯವಾಗಿ ಪ್ರೇಕ್ಷಕರನ್ನು ಮುಟ್ಟುವಂತೆ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಆದರೆ ಕೊನೆಗೆ ಮರಳಿ ಬರುವ ಪತಿಯನ್ನು ಓಡಿಸುವ ಅಕ್ಕು ಆತನಿಗಿಂತ ಉತ್ತಮರು ಬೇರೆ ಇದ್ದಾರೆ ಎನ್ನುವ ವಿವರಣೆಯ ಮೂಲಕ ಹೇಳುವ ಮಾತು ಮರುಳಿನದ್ದಲ್ಲ, ತಿರುಳಿನದ್ದಾಗಿರುತ್ತದೆ. ಯಾಕೆಂದರೆ ಏನೂ ತಿಳಿಯದಂತಿರುವ ಆಕೆಗೆ ಯಾರಿಗೂ ತಿಳಿಯದಂತೆ ತನ್ನ ಸಹೋದರ ಹೊಂದಿರುವ ಅಕ್ರಮ ಸಂಬಂಧದ ಅರಿವಿರುತ್ತದೆ!

ಸಂಪ್ರದಾಯದ ಹೆಸರಲ್ಲಿ ಹೆಣ್ಣೊಬ್ಬಳೇ ಬಲಿಪಶುವಾಗುವ ಬ್ರಾಹ್ಮಣ ಸಮುದಾಯದ ಅನಿಷ್ಟಗಳ ಬಗ್ಗೆ ಹೇಳುತ್ತಲೇ ಸಿನೆಮಾ ಎಲ್ಲರ ಮನದ ಅಂತರಾಳ ಸೇರಿಕೊಳ್ಳುತ್ತದೆ. ಇತ್ತಕಡೆ ಅಮ್ಮಚ್ಚಿಯ ಕತೆಯೂ ಅಷ್ಟೇ. ತಂದೆ ತಾಯಿ ಇರದ ಹುಡುಗಿಯೆಂಬ ಕಾರಣದಿಂದ ಶಿಕ್ಷಣದಿಂದ ವಂಚಿತೆಯಾಗಿ, ಬಡವಳೆಂಬ ಕಾರಣದಿಂದ ಒಳ್ಳೆಯ ಗಂಡನನ್ನು ಪಡೆಯಲಾಗದೆ ಒತ್ತಾಯದ ಸಂಬಂಧಕ್ಕೆ ತಲೆ ಬಾಗಲೇಬೇಕಾದ ಅನಿವಾರ್ಯದ ಜೀವವಾಗುತ್ತಾಳೆ. ಆದರೆ
ಕೊನೆಯಲ್ಲಿ ಇಬ್ಬರು ಕೂಡ ಆ ಸರಪಳಿಯಿಂದ ಹೊರಬರುವ ರೀತಿಯೇ ಸೊಗಸು. ಅದನ್ನು ಪರದೆಯ ಮೇಲೆ ಕಂಡಾಗಲಷ್ಟೇ ಅನುಭವಿಸಲು ಸಾಧ್ಯ.

ಚಿತ್ರದಲ್ಲಿ ಕತೆ ಸಂದೇಶ ನೀಡಿದರೆ ದೃಶ್ಯಗಳು ಸೌಂದರ್ಯವನ್ನೇ ಕಟ್ಟಿ ಕೊಡುತ್ತವೆ. ಅಕ್ಕು ಪಾತ್ರದಲ್ಲಿ ನಟಿಸಿರುವ ದೀಪಿಕಾ ಆರಾಧ್ಯ ಪಾತ್ರವೇ ತಾವಾಗಿದ್ದಾರೆ. ಸಾಮಾನ್ಯವಾಗಿ ರಂಗಭೂಮಿ ಕಲಾವಿದರು ಓವರ್ ಆ್ಯಕ್ಟಿಂಗ್ ಮಾಡುತ್ತಾರೆಂಬ ಆರೋಪ ಇರುತ್ತದೆ. ಆದರೆ ಶೇಷಮ್ಮನ ಪಾತ್ರ ಮಾಡಿದ ಗೀತಾ ಸುರತ್ಕಲ್ ಸೇರಿದಂತೆ ಚಿತ್ರದ ಎಲ್ಲ ಕಲಾವಿದರು ಸಹಜತೆಗೆ ಕನ್ನಡಿ ಹಿಡಿದಂಥ ಬದುಕಾಗಿದ್ದಾರೆ. ‘ಒಂದು ಮೊಟ್ಟೆಯ ಕತೆ’ಗಿಂತ ತೀರ ವಿಭಿನ್ನವಾದ ಪಾತ್ರಕ್ಕೆ ಕೂಡ ತಾನು ಎಷ್ಟೊಂದು ಚೆನ್ನಾಗಿ ನ್ಯಾಯ ಸಲ್ಲಿಸಬಲ್ಲೆ ಎನ್ನುವುದನ್ನು ರಾಜ್ ಬಿ. ಶೆಟ್ಟಿ ತೋರಿಸಿಕೊಟ್ಟಿದ್ದಾರೆ. ಒಟ್ಟಿನಲ್ಲಿ ಸಿನೆಮಾ ನಿರ್ದೇಶಕಿಯಾಗಿ ಕೂಡ ಚಂಪಾ ಶೆಟ್ಟಿ ಯಶಸ್ವಿಯಾಗಿದ್ದಾರೆ.

ಚಿತ್ರದ ಪ್ರತಿ ಫ್ರೇಮ್ಗಳು ಕೂಡ ಹಳೆಯ ಮಣಿರತ್ನಂ ಸಿನೆಮಾಗಳನ್ನು ನೋಡುವ ಅನುಭವ ತಂದುಕೊಡುವಂತಿವೆ. ಅದಕ್ಕೆ ತಕ್ಕಂತೆ ರಾಗಿ ಬೀಸುವ, ಹಪ್ಪಳ ಹರಡುವ, ಚೆನ್ನೆ ಮಣೆ ಆಡುವ ದೃಶ್ಯಗಳ ಸಾಕ್ಷಾತ್ಕಾರ ಅಮೋಘ. ಆದರೆ ಪುಟ್ಟಮತ್ತೆ ಅಜ್ಜಿಯ ಪಾತ್ರಕ್ಕೆ ಪುರುಷನನ್ನು ಆಯ್ಕೆ ಮಾಡಿರುವುದು ರಂಗಭೂಮಿಗಷ್ಟೇ ಸೀಮಿತವಾಗಿದ್ದರೆ ಚೆನ್ನಾಗಿತ್ತು. ಯಾಕೆಂದರೆ ವೇದಿಕೆಯ ಅಂತರ ಇಲ್ಲಿ ಇರದ ಕಾರಣ ಆ ವ್ಯತ್ಯಾಸ ಅರಿವಾಗಿಬಿಡುತ್ತದೆ. ಆದರೆ ಕಲಾವಿದನ ಪ್ರಯತ್ನ ಖಂಡಿತವಾಗಿ ಶ್ಲಾಘನೀಯ. ಬಾಲ ಕಲಾವಿದರಿಂದ ಹಿಡಿದು ಹಿನ್ನೆಲೆ ಸಂಗೀತದ ತನಕ ಚಿತ್ರದ ಎಲ್ಲ ಅಂಶಗಳು ಕೂಡಾ ಸಿನೆಮಾ ನೋಡಿದ ಬಹಳ ದಿನಗಳ ಕಾಲ ಕಾಡಲಿರುವುದು ಸುಳ್ಳಲ್ಲ. ಇಂಥ ಚಿತ್ರಗಳು ವಿಮರ್ಶಕರ ಪ್ರಶಂಸೆ ಮಾತ್ರವಲ್ಲ ಚಿತ್ರಾಸಕ್ತ ಪ್ರೇಕ್ಷಕರೆಲ್ಲರೂ ನೋಡುವಂತಾಗಲಿ.


ತಾರಾಗಣ: ರಾಜ್ ಬಿ. ಶೆಟ್ಟಿ, ದೀಪಿಕಾ ಆರಾಧ್ಯ
ನಿರ್ದೇಶನ: ಚಂಪಾ ಶೆಟ್ಟಿ
ನಿರ್ಮಾಣ : ಪ್ರಕಾಶ್ ಶೆಟ್ಟಿ

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News