ದಿಲ್ಲಿ ದರ್ಬಾರ್

Update: 2018-11-10 18:39 GMT

ದಿಗ್ವಿಜಯ್ ತಂತ್ರಗಾರಿಕೆ
ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಪಾತ್ರವು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಯಕ್ಷಪ್ರಶ್ನೆಗಳಲ್ಲೊಂದಾಗಿದೆ. ಚುನಾವಣಾ ಪ್ರಚಾರದ ಮುಂಚೂಣಿಯಲ್ಲಿ ದಿಗ್ವಿಜಯ್ ಸಿಂಗ್ ಕಾಣಿಸಿಕೊಳ್ಳದಿರುವುದು ಹಲವಾರು ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ. ಇಂದೋರ್ ತಾನು ಹುಟ್ಟಿ, ಬೆಳೆದ ಊರಾಗಿರುವ ಹೊರತಾಗಿಯೂ ಅಲ್ಲಿ ನಡೆಯಲಿರುವ ರಾಹುಲ್ ಗಾಂಧಿಯವರ ಸಾರ್ವಜನಿಕ ಸಭೆಯಲ್ಲಿ ತಾನು ಭಾಗವಹಿಸುವುದಿಲ್ಲವೆಂದು ದಿಗ್ವಿಜಯ್ ಕೆಲವು ದಿನಗಳ ಹಿಂದೆ ಟ್ವೀಟ್ ಮಾಡಿದ್ದರು. ಪಕ್ಷಾಧ್ಯಕ್ಷರು ತನಗೆ ಪಕ್ಷದ ಬೇರೆ ಹೊಣೆಗಾರಿಕೆ ನೀಡಿರುವುದೇ ಇದಕ್ಕೆ ಕಾರಣವೆಂದು ಅವರು ಸಬೂಬು ನೀಡಿದ್ದಾರೆ. ಆದರೆ ಕೆಲವರು ಮಾತ್ರ ದಿಗ್ವಿಜಯ್ ತನಗಾಗಿರುವ ನೋವನ್ನು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆಂದು ಹೇಳುತ್ತಿದ್ದಾರೆ. ದಿಗ್ವಿಜಯ್ ವಿರುದ್ಧ ಒಳಸಂಚು ನಡೆದಿದೆ ಎಂಬ ಮಾತುಗಳು ಕೂಡಾ ಕೇಳಿ ಬರುತ್ತಿವೆ. ಇದರ ಹಿಂದಿನ ಸಂಚುಗಾರರು ಯಾರಿರಬಹುದು?. ಅತ್ತ ಬಿಜೆಪಿ ಈ ವಿವಾದದಲ್ಲಿ ತಲೆತೂರಿಸಿದೆ. ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಹಂಚಿಕೆಯು ಒಂದು ದಂಧೆಯಾಗಿ ಬಿಟ್ಟಿದ್ದು, ಅಭ್ಯರ್ಥಿಗಳ ರಾಜಕೀಯ ಅರ್ಹತೆಯನ್ನು ನಿರ್ಲಕ್ಷಿಸಲಾಗಿದೆಯೆಂದು ದೂರಿ ದಿಗ್ವಿಜಯ್ ಬರೆದಿದ್ದಾರೆನ್ನಲಾದ ಪತ್ರವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಆದರೆ ತಾನು ಅಂತಹ ಯಾವುದೇ ಪತ್ರ ಬರೆದಿರುವುದನ್ನು ದಿಗ್ವಿಜಯ್ ಸಿಂಗ್ ನಿರಾಕರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕತ್ವವು ಚುನಾವಣಾ ಸಿದ್ಧತೆಯನ್ನು ನಿರ್ವಹಿಸಿದ ರೀತಿ ಬಗ್ಗೆ ಅವರು ಅಸಂತುಷ್ಟರಾಗಿದ್ದಾರೆನ್ನಲಾಗಿದೆ. ರಾಜಕೀಯವಾಗಿ ತಾನು ಈ ಹಿಂದೆ ಇದ್ದಷ್ಟು ಈಗ ಬಲಶಾಲಿಯಾಗಿ ಉಳಿದಿಲ್ಲವಾದರೂ ದಿಗ್ವಿಜಯ್‌ಸಿಂಗ್ ರಾಜ್ಯದಲ್ಲಿ ತನ್ನ ಛಾಪನ್ನು ಮೂಡಿಸುವ ಆಸಕ್ತಿ ಹೊಂದಿದ್ದಾರೆ. ಆದರೆ ಅವರು ಏನನ್ನೂ ಮಾಡದೆ, ಸುಮ್ಮನೆ ಮನೆಯಲ್ಲಿ ಕುಳಿತುಕೊಂಡರೂ, ಆತ ಕಾಂಗ್ರೆಸ್‌ನ ಪ್ರತಿಷ್ಠೆಗೆ ಗಂಭೀರ ಹಾನಿಯನ್ನುಂಟು ಮಾಡಬಹುದಾಗಿದೆ. ಇದಕ್ಕಾಗಿ ಪಕ್ಷ ಭಾರೀ ಬೆಲೆಯನ್ನೇ ತೆರಬೇಕಾಗಿ ಬರಬಹುದು.


ನಾಯ್ಡುರ ರಾಹುಲ್ ಪ್ರೀತಿ
  ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹಾಗೂ ರಾಹುಲ್‌ಗಾಂಧಿಯವರ ನಡುವೆ ನಡೆದ ಮಾತುಕತೆಯು ಎಲ್ಲರ ಗಮನಸೆಳೆದಿದೆ. ಚಂದ್ರಬಾಬು ನಾಯ್ಡು ಅವರ ನಡೆ ಅದಕ್ಕೆ ಒಂದು ಕಾರಣವಾಗಿದೆ. ದಕ್ಷಿಣ ಭಾರತದಲ್ಲಿ ತೀರಾ ಇತ್ತೀಚೆಗೆ ರಾಜಕೀಯದಲ್ಲಿ ಕೆಲವು ಬೆಳವಣಿಗೆಗಳು ನಡೆಯುವ ತನಕವೂ ನಾಯ್ಡು ಅವರ ಪಕ್ಷವು ಸುದೀರ್ಘ ಕಾಲದಿಂದ ಕೇಂದ್ರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷವಾಗಿತ್ತು. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ವಿರುದ್ಧ ಮಹಾಘಟಬಂಧನ ರೂಪುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತೆಲುಗುದೇಶಂ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷರ ಭೇಟಿಯು ಹೆಚ್ಚಿನ ಮಹತ್ವವನ್ನು ಪಡೆದಿದೆ. ಮುಂಬರುವ ಲೋಕಸಭಾ ಚುನಾವಣೆಗಳಿಗೆ ಶ್ರದ್ಧೆಯಿಂದ ಪೂರ್ವತಯಾರಿ ಆರಂಭಗೊಂಡಿದೆಯೆಂಬುದನ್ನು ಇದು ತೋರಿಸಿಕೊಡುತ್ತದೆ. ಆದರೆ ನಾಯ್ಡು ಅವರ ರಾಜಕೀಯ ಪ್ರಯಾಣದಲ್ಲಿ ಹಲವಾರು ಸ್ವಾರಸ್ಯಕರ ವಿಷಯಗಳಿವೆ. ಆಂಧ್ರ ಪ್ರದೇಶದ ಈ ರಾಜಕಾರಣಿ, ತನ್ನ ರಾಜಕೀಯ ಬದುಕನ್ನು ಕಾಂಗ್ರೆಸ್ ಪಕ್ಷದಿಂದಲೇ ಆರಂಭಿಸಿದ್ದರು. ಮಾತುಕತೆಯ ಸಂದರ್ಭದಲ್ಲಿ ನಾಯ್ಡು ಅವರು ಹಳೆಯ ತಲೆಮಾರಿನ ಪಕ್ಷವಾದ ಕಾಂಗ್ರೆಸ್ ಪಕ್ಷದ ಉಚ್ಛ್ರಾಯ ದಿನಗಳಲ್ಲಿನ ಕೆಲವು ಸುಮಧುರ ನೆನಪುಗಳನ್ನು ರಾಹುಲ್‌ಗೆ ವಿವರಿಸಿದರೆನ್ನಲಾಗಿದೆ. 1975-77ರ ಅವಧಿಯಲ್ಲಿ ತಾನು ಯುವಕಾಂಗ್ರೆಸ್‌ನ ಪದಾಧಿಕಾರಿಯಾಗಿದ್ದ ವೇಳೆ ಸಂಜಯ್‌ಗಾಂಧಿ ಜೊತೆ ನಿಕಟ ಸಂಪರ್ಕದಲ್ಲಿದ್ದುದನ್ನು ಅವರು ನೆನಪಿಸಿಕೊಂಡಿದ್ದರು. ವಾಸ್ತವಿಕವಾಗಿ, ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದನ್ನು ಕೂಡಾ ನಾಯ್ಡು ಸಮರ್ಥಿಸಿಕೊಂಡಿದ್ದರು. ತನ್ನ ಮಾವ ತೆಲುಗುದೇಶಂ ಪಕ್ಷವನ್ನು ಸ್ಥಾಪಿಸಿದ ಬಳಿಕವೂ ಕಾಂಗ್ರೆಸ್ ಜೊತೆಗಿನ ನಾಯ್ಡು ಅವರ ನಂಟು ಮುಂದುವರಿದಿತ್ತು. ಆಂಧ್ರದಲ್ಲಿ ಕಾಂಗ್ರೆಸ್ ಸರಕಾರದ ಪದಚ್ಯುತಿಗೆ ಕಾರಣವಾದ 1983ರ ವಿಧಾನಸಭಾ ಚುನಾವಣೆಯಲ್ಲಿಯೂ ನಾಯ್ಡು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಆದರೆ ಚುನಾವಣೆಯಲ್ಲಿ ಟಿಡಿಪಿ ಅಭ್ಯರ್ಥಿಯ ಎದುರು ಸೋಲುಂಡಿದ್ದರು. ಒಂದಾನೊಂದು ಕಾಲದಲ್ಲಿ ಟಡಿಪಿಯು ಕಟ್ಟಾ ಕಾಂಗ್ರೆಸ್ ವಿರೋಧಿ ಪಕ್ಷವಾಗಿತ್ತು. ಆದರೆ ಅದು ಇಂದು ಹಾಗಿಲ್ಲ. ಇದಕ್ಕಾಗಿ ನಾಯ್ಡು ಅವರಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ.


ವಿಜಯವರ್ಗೀಯ ಹಾಗೂ ಮ.ಪ್ರ.
 ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ತನ್ನ ಸಚಿವ ಕೈಲಾಶ್ ವಿಜಯವರ್ಗೀಯ ಅವರನ್ನು ನಿಯಂತ್ರಿಸಲೇ ಬೇಕಾದಂತಹ ಕಠಿಣ ಪರಿಸ್ಥಿತಿ ಎದುರಾಗಿತ್ತು. ಕೈಲಾಶ್ ಅವರನ್ನು ದಿಲ್ಲಿಗೆ ಕರೆಯಿಸಿಕೊಳ್ಳಬೇಕೆಂದು ಅವರು ಪಕ್ಷದ ಕೇಂದ್ರ ನಾಯಕತ್ವವನ್ನು ಕೋರಿದ್ದರು. ಅದಕ್ಕೆ ಪಕ್ಷ ಕೂಡಾ ಸಮ್ಮತಿಸಿತ್ತು. ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಿದಾಗಿನಿಂದ ಕೈಲಾಸ್ ವಿಜಯವರ್ಗೀಯ ಅವರು ತನ್ನ ರಾಜಕೀಯ ವಿರೋಧಿಗಳ ಬಗ್ಗೆ ಒರಟು ನಿಲುವನ್ನು ತಾಳಿದ್ದಾರೆ. ಅವರು ರಾಷ್ಟ್ರ ರಾಜಕಾರಣದೆಡೆಗೆ ತನ್ನ ಪಾತ್ರವನ್ನು ಬದಲಾಯಿಸಿರಬೇಕೆಂದು ಹಲವರು ಭಾವಿಸಿದ್ದರು. ಆದರೆ ತನ್ನ ಕುಟುಂಬ ಮತ್ತು ಅವರ ಪರಂಪರೆಯ ಉತ್ತರದಾಯಿಗಳು ಇರುವುದರಿದ ತನ್ನ ರಾಜ್ಯದಿಂದ ಅಷ್ಟು ಸುಲಭವಾಗಿ ದೂರವಿರಲು ಅವರಿಗೆ ಸಾಧ್ಯವಿಲ್ಲ. ಹೀಗಾಗಿ ವಿಜಯವರ್ಗೀಯ ಅವರು ತನ್ನ ಪುತ್ರ ಆಕಾಶ್‌ಗೆ ರಾಜಕಾರಣದಲ್ಲಿ ಭದ್ರ ನೆಲೆಯೊಂದನ್ನು ಸ್ಥಾಪಿಸಲು ಕಠಿಣವಾಗಿ ಶ್ರಮಿಸುತ್ತಿದ್ದಾರೆ. ಇಂದೋರ್-3 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸುತ್ತಿದ್ದಾರೆ. ಬಹುಶಃ ಅವರು 2019ರ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಪ್ರಸ್ತುತ ಇಂದೋರ್ ಕ್ಷೇತ್ರವನ್ನು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಪ್ರತಿನಿಧಿಸುತ್ತಿದ್ದಾರೆ. ಅಂತಿಮವಾಗಿ ಪಕ್ಷವು ಈ ಕ್ಷೇತ್ರವನ್ನು ವಿಜಯವರ್ಗೀಯ ಅವರಿಗೆ ನೀಡಲು ನಿರ್ಧರಿಸಿದೆ. ಆದರೆ, ನಾಯಕತ್ವದೊಂದಿಗೆ ವಿಜಯವರ್ಗೀಯ, ಈ ವಿಷಯವಾಗಿ ಯಾವ ರೀತಿಯ ಡೀಲ್ ಕುದುರಿಸಿಕೊಂಡಿದ್ದಾರೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಲೋಕಸಭಾ ಚುನಾವಣೆಯಲ್ಲಿ ವಿಜಯವರ್ಗೀಯ ಸ್ಪರ್ಧಿಸಲಿದ್ದಾರೆಯೇ ಅಥವಾ ತನ್ನ ಪುತ್ರನಿಗೆ ಎಂಎಲ್‌ಎ ಸೀಟು ಕೊಡಿಸುವುದರಲ್ಲಷ್ಟೇ ಅವರು ಸಂತೃಪ್ತರಾಗಿ ಉಳಿಯಬೇಕೇ ಎಂಬುದನ್ನು ಕಾದು ನೋಡಬೇಕಾಗಿದೆ.


ರಮಣ್ ಇನ್ ಕಂಟ್ರೋಲ್?
ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಮಧ್ಯಪ್ರದೇಶ, ನೆರೆರಾಜ್ಯವಾದ ಛತ್ತೀಸ್‌ಗಡದಲ್ಲಿ ವಿಧಾನಸಭಾ ಚುನಾವಣೆಗಾಗಿನ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಶುಕ್ರವಾರವಷ್ಟೇ ತಮ್ಮ ಪ್ರಥಮ ಚುನಾವಣಾ ಪ್ರಚಾರ ರ್ಯಾಲಿಗಳನ್ನು ನಡೆಸಿದ್ದರು. ಆದರೆ ದೀಪಾವಳಿ ಹಬ್ಬದ ಸಡಗರದಿಂದಾಗಿ ಚುನಾವಣಾ ಪ್ರಚಾರಕ್ಕೆ ಮಂಕುಬಡಿದಿತ್ತು. ಹೀಗಾಗಿ ರಾಜ್ಯದಲ್ಲಿ ಕನಿಷ್ಠ ಮೊದಲ ಹಂತದ ಚುನಾವಣೆವರೆಗಾದರೂ, ಛತ್ತೀಸ್‌ಗಡದಲ್ಲಿ ರಾಷ್ಟ್ರಮಟ್ಟದ ರಾಜಕಾರಣಿಗಳಿಂದ ಅವಿರತವಾಗಿ ಚುನಾವಣಾ ಪ್ರಚಾರ ನಡೆಯುವ ಸಾಧ್ಯತೆಗಳು ತೀರಾ ಕಡಿಮೆ. ಆದರೆ ಆತ್ಮವಿಶ್ವಾಸದ ಕೊರತೆ ಕೂಡಾ ಇದಕ್ಕೆ ಕಾರಣವೇ?. ಮುಖ್ಯಮಂತ್ರಿ ರಮಣ್ ಸಿಂಗ್ ಈ ಸಲವೂ ಜಯಗಳಿಸಲಿದ್ದು, ನಾಲ್ಕನೆಯ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆಂದು ಬಿಜೆಪಿ ಆತ್ಮವಿಶ್ವಾಸದೊಂದಿಗೆ ಹೇಳುತ್ತಿದೆ. ರಮಣ್‌ಸಿಂಗ್ ಅವರು ನಗರಪ್ರದೇಶಗಳಲ್ಲಿನ ಪಕ್ಷದ ಸಾಂಪ್ರದಾಯಿಕ ಮತಬ್ಯಾಂಕ್‌ಗಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ ಹಾಗೂ ಬುಡಕಟ್ಟು ಪ್ರದೇಶಗಳನ್ನು ಸಮೀಪಿಸುತ್ತಿದ್ದಾರೆ. ಆದರೆ ಬಿಜೆಪಿ ರ್ಯಾಲಿಗಳಲ್ಲಿ ಜನರು ಕಡಿಮೆ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ಪಕ್ಷದ ನಾಯಕರನ್ನು ಚಿಂತೆಗೀಡು ಮಾಡಿಲ್ಲ. ಆದರೆ ಕಾಂಗ್ರೆಸ್ ಬದಲು ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿಯ ಪಕ್ಷದ ಜೊತೆ ಚುನಾವಣಾ ಮೈತ್ರಿಯೇರ್ಪಡಿಸಿಕೊಂಡಿರುವುದರಿಂದ ಪ್ರತಿಪಕ್ಷಗಳ ಮತಗಳು ಒಡೆದು ಹೋಗುವ ಸಾಧ್ಯತೆಯ ಬಗ್ಗೆ ಅವರು ಬೆಟ್ಟು ಮಾಡಿತೋರಿಸುತ್ತಾರೆ. ಕಾಂಗ್ರೆಸ್ ಪಕ್ಷದ ಮೇಲೆ ಹದ್ದುಗಣ್ಣಿಟ್ಟಿರುವ ರಮಣ್‌ಸಿಂಗ್, ಕಾಂಗ್ರೆಸ್ ಪಕ್ಷದ ಕೆಲವು ಪ್ರಭಾವಿ ಕಾರ್ಯಕರ್ತರನ್ನು ಪಕ್ಷದೆಡೆಗೆ ಸೆಳೆದುಕೊಳ್ಳುವುದರಲ್ಲಿಯೂ ಯಶಸ್ವಿಯಾಗಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ನೈತಿಕ ಸ್ಥೆರ್ಯವನ್ನು ಕೆಡಿಸಿದೆಯೆಂದು ಬಿಜೆಪಿ ಭಾವಿಸಿಕೊಂಡಿದೆ.


ರಾಧಾ ಮೋಹನ್‌ಸಿಂಗ್ ಮಿಲನ್
ಕಳೆದ ಕೆಲವು ವಾರಗಳು ದಿಲ್ಲಿಯ ಪತ್ರಕರ್ತರಿಗೆ ಅತ್ಯಂತ ಬ್ಯುಸಿ ದಿನಗಳಾಗಿದ್ದವು. ಅವರು ಬ್ಯುಸಿಯಾಗಿದ್ದುದು, ವಿವಿಧ ಪಕ್ಷಗಳು ಆಯೋಜಿಸಿದ ‘ದೀವಾಲಿ ಮಿಲನ್’ ಕಾರ್ಯ ಕ್ರಮಗಳಿಗೆ ಭೇಟಿ ನೀಡುವುದಕ್ಕಷ್ಟೇ ಹೊರತು ಬೇರ್ಯಾವುದಕ್ಕೂ ಅಲ್ಲ. ರಾಧಾ ಮೋಹನ್‌ಸಿಂಗ್ ಅವರು ಕೃಷಿ ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಸಾವಯವ ಕೃಷಿ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಯಾವುದೇ ಪತ್ರಕರ್ತನನ್ನು ಕಂಡರೂ ಸಾಕು, ಅವರನ್ನು ನಿಲ್ಲಿಸಿ ಸಾವಯವ ಕೃಷಿಯ ಪ್ರಯೋಜನಗಳ ಬಗ್ಗೆ ಅವರಿಗೆ ತಿಳಿಹೇಳುತ್ತಾರೆ. ದಿಲ್ಲಿಯ ಲ್ಯುತೆನ್ ಪ್ರದೇಶದಲ್ಲಿರುವ ತನ್ನ ನಿವಾಸದಲ್ಲಿ ನಡೆದ ‘ದಿವಾಲಿ ಮಿಲನ್’ ಸಂತೋಷಕೂಟಕ್ಕೆ ಪತ್ರಕರ್ತರನ್ನು ಅವರು ಆಹ್ವಾನಿಸಿದ್ದರು. ಅವರಲ್ಲಿ ಕೆಲವರು ತಾವು ಸಂತೋಷಕೂಟದಲ್ಲಿ ಸಾವಯವ ಆಹಾರವನ್ನಷ್ಟೇ ತಿನ್ನಬೇಕಾದೀತು ಎಂದು ಚಟಾಕಿ ಹಾರಿಸುತ್ತಿದ್ದರು. ಸಂತೋಷಕೂಟದಲ್ಲಿ ಭಾಗವಹಿಸಿದ ಪತ್ರಕರ್ತರಿಗೆ ನಿರೀಕ್ಷೆಯಂತೆಯೇ ಸಾವಯವ ಆಹಾರ ಖಾದ್ಯಗಳ ಉಪಚಾರ ದೊರೆತಿತ್ತು. ಬಹುತೇಕ ಸಾವಯವ ಹಾಗೂ ಆಯುರ್ವೇದ ಉತ್ಪನ್ನ ಗಳನ್ನು ಅವರಿಗೆ ಉಡುಗೊರೆಯಾಗಿ ನೀಡಲಾಗಿತ್ತು. ಹಳೆಸ್ವಭಾವಗಳು ಸುಲಭವಾಗಿ ಬಿಟ್ಟುಹೋಗುವುದಿಲ್ಲ ಎಂಬ ನಾಣ್ಣುಡಿ ಯೊಂದಿದೆೆ. ಹಾಗೆಯೇ ರಾಧಾರಮಣ್‌ಸಿಂಗ್ ತನ್ನ ಈ ಸ್ವಭಾವವನ್ನು ಸದ್ಯಕ್ಕಂತೂ ಬಿಡುವ ಸಾಧ್ಯತೆಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News