ಹಿಂದುತ್ವಕ್ಕೆ ಶಾಪವಾಗಲಿರುವ ಸನ್ಯಾಸಿಗಳ ಉಪವಾಸ!
ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಮಾಜಿ ಉಪನ್ಯಾಸಕ ಗುರು ದಾಸ್ ಅಗರ್ವಾಲ್ 2011ರಲ್ಲಿ ತನ್ನ 79ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿ ಸ್ವಾಮಿ ಜ್ಞಾನಸ್ವರೂಪ ಸನಂದ ಎಂದು ಗುರುತಿಸಿಕೊಂಡರು. ಇವರು ಗಂಗಾ ನದಿಯ ರಕ್ಷಣೆಗಾಗಿ ಕಾನೂನು ರಚಿಸಬೇಕೆಂದು ಆಗ್ರಹಿಸಿ ಉಪವಾಸ ನಡೆಸಿ ಕೊನೆಗೆ 2018ರ ಅಕ್ಟೋಬರ್ 11ರಂದು ತನ್ನ ಉಪವಾಸದ 112ನೇ ದಿನದಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ, ಋಷಿಕೇಶದಲ್ಲಿ ನಿಧನರಾದರು. ಹರ್ಯಾಣದಲ್ಲಿ ಗೋವುಗಳಿಗೆ ಮೇಯಲು ಮೀಸಲಿರಿಸಿದ್ದ ಜಮೀನಿನಲ್ಲಿ ಅತಿಕ್ರಮಣವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಉಪವಾಸ ನಡೆಸಿದ್ದ 40ರ ಹರೆಯದ ಜೈನಮುನಿ ಸಂತ ಗೋಪಾಲ ದಾಸರು ಪ್ರೊ. ಅಗರ್ವಾಲ್ ಅವರಿಂದ ಪ್ರೇರಿತರಾಗಿ ಗಂಗಾ ನದಿಯ ಕಾರಣಕ್ಕಾಗಿ ಅಗರ್ವಾಲ್ ನಿಧನದ ಎರಡು ದಿನಗಳ ನಂತರ ಬದ್ರಿನಾಥದ ಬದ್ರಿಧಾಮ ದೇವಸ್ಥಾನದಲ್ಲಿ ಜೂನ್ 24,2018ರಂದು ಉಪವಾಸ ಆರಂಭಿಸಿದರು. ಸದ್ಯ ಅವರನ್ನು ಹೊಸದಿಲ್ಲಿಯ ಎಐಐಎಂಎಸ್‌ನ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.
ಪ್ರೊ. ಅಗರ್ವಾಲ್ ಅವರ ಉಪವಾಸದ ಮುಂದುವರಿದ ಭಾಗವಾಗಿ ಅವರು ಉಪವಾಸ ಕುಳಿತಿದ್ದ ಮಾತೃ ಸದನದಲ್ಲೇ 26ರ ಹರೆಯದ ಬ್ರಹ್ಮಚಾರಿ ಆತ್ಮಬೋಧಾನಂದ ಅವರು ಅಕ್ಟೋಬರ್ 24ರಂದು ಉಪವಾಸ ಆರಂಭಿಸಿದರು. ಸ್ವಾಮಿ ಜ್ಞಾನಸ್ವರೂಪ ಸನಂದ ಅವರಿಗೆ ಏನಾದರೂ ಆದರೆ ಅವರ ಅಪೂರ್ಣ ಕಾರ್ಯವನ್ನು ತಾನು ಮತ್ತು ಅವರ ಶಿಷ್ಯರು ಮುಂದುವರಿಸುವುದಾಗಿ ಸ್ವಾಮಿ ಸನಂದ ಅವರನ್ನು ಭೇಟಿಯಾಗಲು ಬರುತ್ತಿದ್ದ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಮಾತೃ ಸದನದ ಮುಖ್ಯಸ್ಥ ಸ್ವಾಮಿ ಶಿವಾನಂದ ಎಚ್ಚರಿಸಿದ್ದರು. ಮಾತೃ ಸದನಕ್ಕೆ ಸಂಬಂಧಪಟ್ಟ ಸನ್ಯಾಸಿಗಳಲ್ಲಿ ಪ್ರೊ. ಅಗರ್ವಾಲ್ ಉಪವಾಸ ನಡೆಸುತ್ತಿದ್ದ 59ನೇ ಸನ್ಯಾಸಿಯಾಗಿದ್ದರೆ ಆತ್ಮಬೋಧಾನಂದ ಅವರು 60ನೇ ಸ್ವಾಮಿಯಾಗಿದ್ದಾರೆ. ಆತ್ಮಬೋಧಾನಂದ ಅಕ್ಟೋಬರ್ 24ರಂದು ಉಪವಾಸ ಆರಂಭಿಸಿದ್ದು ಅಂದಿನಿಂದ ಮಾತೃ ಸದನದ ಇನ್ನೋರ್ವ ಸನ್ಯಾಸಿ ಸ್ವಾಮಿ ಪುಣ್ಯಾನಂದ ಎಲ್ಲ ರೀತಿಯ ಆಹಾರಗಳನ್ನು ತ್ಯಜಿಸಿದ್ದು, ಕೇವಲ ಹಣ್ಣುಗಳನ್ನು ಸೇವಿಸುತ್ತಿದ್ದಾರೆ. ಒಂದು ವೇಳೆ ಆತ್ಮಬೋಧಾನಂದ ಅವರ ಆರೋಗ್ಯದಲ್ಲಿ ಏರುಪೇರಾದ ಪಕ್ಷದಲ್ಲಿ ಜಲಾಹಾರಕ್ಕೆ ತಮ್ಮನ್ನು ಒಗ್ಗಿಸಿಕೊಳ್ಳಲು ಅವರು ಸಿದ್ಧರಾಗುತ್ತಿದ್ದಾರೆ.
ಗಂಗಾ ನದಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ತಡೆಯಬೇಕೆಂದು ಆಗ್ರಹಿಸಿ ಮಾತೃ ಸದನದ ಸ್ವಾಮಿ ನಿಗಮಾನಂದ ಅವರು ಉಪವಾಸ ನಡೆಸಿದ್ದು, 2011ರಲ್ಲಿ ತನ್ನ ಉಪವಾಸದ 115ನೇ ದಿನದಂದು ಹರಿದ್ವಾರದ ಸರಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರನ್ನು ಉತ್ತರಾಖಂಡದ ಆಡಳಿತಪಕ್ಷ ಬಿಜೆಪಿಗೆ ಸಂಬಂಧಿಸಿದ ಗಣಿ ಮಾಫಿಯಾ ಹತ್ಯೆ ಮಾಡಿದೆ ಎಂದು ಮಾತೃ ಸದನ ಆರೋಪಿಸಿತ್ತು. ಮಾತೃ ಸದನದ ನಿರ್ಮಾಣದ ಒಂದು ವರ್ಷದ ನಂತರ 1998ರ ಮಾರ್ಚ್ 4 ಮತ್ತು 16ರ ಅವಧಿಯಲ್ಲಿ ಸ್ವಾಮಿ ನಿಗಮಾನಂದರ ಜೊತೆ ಸ್ವಾಮಿ ಗೋಕುಲಾನಂದ ಕೂಡಾ ಉಪವಾಸ ಆಚರಿಸಿದ್ದರು. ನಂತರ ಅವರು ನೈನಿತಾಲ್‌ನ ಬಮನೇಶ್ವರ ದೇವಸ್ಥಾನದಲ್ಲಿ ಅನಾಮಧೇಯರಾಗಿ ಬದುಕುತ್ತಿದ್ದ ಸಮಯದಲ್ಲಿ 2013ರಲ್ಲಿ ಅವರನ್ನು ಗಣಿ ಮಾಫಿಯಾ ಹತ್ಯೆ ಮಾಡಿತ್ತು ಎಂದು ನಂಬಲಾಗಿದೆ. ಸ್ವಾಮಿ ಶಿವಾನಂದ ಮತ್ತು ಬ್ರಹ್ಮಚಾರಿ ಆತ್ಮಬೋಧಾನಂದ ಅವರು ಪ್ರಧಾನ ಮಂತ್ರಿಗೆ ಬರೆದ ಪ್ರತ್ಯೇಕ ಪತ್ರಗಳಲ್ಲಿ, ಗಂಗೆಯು ಪಾಪಗಳಿಂದ ಕಲುಷಿತಗೊಂಡಾಗ ಆಕೆಯನ್ನು ಈ ಶಾಪದಿಂದ ಮುಕ್ತಗೊಳಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡುವುದು ಸನ್ಯಾಸಿಗಳ ಕರ್ತವ್ಯವಾಗಿದೆ ಎಂದು ತಿಳಿಸಲು ಭಗವದ್ಗೀತೆಯ ಸಾಲುಗಳನ್ನು ಉಲ್ಲೇಖಿಸಿದ್ದರು.
ಆದರೆ ಈ ಇಬ್ಬರು ಸನ್ಯಾಸಿಗಳು ಗಂಗೆಗಾಗಿ ಉಪವಾಸ ಮಾಡುವುದು ತಮ್ಮ ಧಾರ್ಮಿಕ ಕರ್ತವ್ಯ ಎಂದು ಪರಿಗಣಿಸಿ ಸುಮ್ಮನಾಗಲಿಲ್ಲ. ಅವರು ಸರಕಾರವನ್ನು, ಅದರ ಸಚಿವರನ್ನು, ನೀತಿಗಳನ್ನು ಮತ್ತು ಅದರ ಮನೋಭಾವವನ್ನು ಟೀಕಿಸಿದರು. ಪ್ರಧಾನ ಮಂತ್ರಿಗಳು ಗ್ರಾಹಕ ಕೇಂದ್ರಿತ ಅಭಿವೃದ್ಧಿ ನೀತಿಗಳನ್ನು ರಚಿಸುತ್ತಿದ್ದಾರೆ. ಇದರಲ್ಲಿ ಗಂಗಾ ನದಿಯನ್ನು ಕೇವಲ ಲಾಭಕ್ಕಾಗಿ ಬಳಸಬಹುದಾದ ಜಲ ಸಂಪನ್ಮೂಲವಾಗಿ ಕಾಣಲಾಗುತ್ತದೆ ಎಂದು ಈ ಇಬ್ಬರು ಸನ್ಯಾಸಿಗಳೂ ದೂರಿದ್ದರು. ಜಲ ಸಂಪನ್ಮೂಲ, ನದಿ ದಡ ಅಭಿವೃದ್ಧಿ ಮತ್ತು ಗಂಗಾ ಪುನರುತ್ಥಾನ ಸಚಿವ ನಿತಿನ್ ಗಡ್ಕರಿಗೆ ಗಂಗೆಯ ಘನತೆಯನ್ನು ಶ್ಲಾಘಿಸುವಂಥ ಸಾಮರ್ಥ್ಯವಿಲ್ಲ ಎಂದು ತಿಳಿಸಿದ್ದ ಸ್ವಾಮಿ ಶಿವಾನಂದ ಅವರು ಗಡ್ಕರಿಯನ್ನು ಟೀಕಿಸಲು ಅತ್ಯಂತ ಕಠಿಣ ಶಬ್ದಗಳನ್ನು ಬಳಸಿದ್ದರು. ಪ್ರೊ. ಅಗರ್ವಾಲ್ ಅವರ ಸಾವಿನ ಕೆಲವೇ ಸಮಯಕ್ಕೆ ಮೊದಲು ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ಸುಳ್ಳು ಹೇಳಿದ ಕಾರಣಕ್ಕೆ ಗಡ್ಕರಿಯನ್ನು ಆತ್ಮಬೋಧಾನಂದ ಅವರು ತೀವ್ರವಾಗಿ ಖಂಡಿಸಿದ್ದರು. ಪವಿತ್ರ ಗಂಗಾಜಲವನ್ನು ಬಾಟಲಿಗಳಲ್ಲಿ ಹಾಕಿ ಮಾರಾಟ ಮಾಡುವ ಕೈಗಾರಿಕೆಗಳ ಬಗ್ಗೆ ಮತ್ತು ನೀರಿನ ಕಾರ್ಪೊರೇಟೀಕರಣವನ್ನು ಇಬ್ಬರು ಸನ್ಯಾಸಿಗಳೂ ಕಟುವಾಗಿ ಟೀಕಿಸಿದ್ದರು.
ಪ್ರಧಾನಿ ಮೋದಿಯ ವಿದೇಶ ಪ್ರೀತಿಯ ಬಗ್ಗೆ ಕೆಂಡಕಾರಿದ್ದ ಸ್ವಾಮಿ ಶಿವಾನಂದ ಅವರು ಸಾಂಸ್ಕೃತಿಕ ನಗರಿ ವಾರಣಾಸಿಯನ್ನು ಕ್ಯೊಟೊ ಮಾಡುವ ಪ್ರಯತ್ನ ವಿರುದ್ಧವೂ ಹರಿಹಾಯ್ದಿದ್ದರು. ಸದ್ಯದ ಸರಕಾರವು ಕೇವಲ ಮಾತಿನಲ್ಲಿ ಮಾತ್ರ ರಾಷ್ಟ್ರೀಯವಾದಿಯಾಗಿದ್ದು ಅಭಿವೃದ್ಧಿಯ ಬಗ್ಗೆ ಅದು ಪಾಶ್ಚಾತ್ಯ ದೃಷ್ಟಿಕೋನವನ್ನು ಹೊಂದಿದೆ ಎಂದು ಆತ್ಮಬೋಧಾನಂದ ದೂರಿದ್ದರು. ಸದ್ಯ ಅವರು ಪ್ರೊ.ಜಿ.ಡಿ.ಅಗರ್ವಾಲ್ ಅವರ ನಾಲ್ಕು ಬೇಡಿಕೆಗಳಲ್ಲಿ ಎರಡನ್ನು ತುರ್ತಾಗಿ ನಡೆಸಿಕೊಡಬೇಕು ಎಂದು ಪ್ರಧಾನಿಯನ್ನು ಆಗ್ರಹಿಸಿದ್ದಾರೆ. ಮೊದಲನೆಯದಾಗಿ, ಸದ್ಯ ಗಂಗಾ ನದಿಯಲ್ಲಿ ನಡೆಯುತ್ತಿರುವ ಮತ್ತು ಪ್ರಸ್ತಾವಿತ ಜಲವಿದ್ಯುತ್ ಯೋಜನೆಗಳನ್ನು ಸ್ಥಗಿತಗೊಳಿಸುವುದು. ಎರಡನೆಯದಾಗಿ, ಪ್ರೊ.ಅಗರ್ವಾಲ್‌ಗೆ ದೇಶದ ಶ್ರದ್ಧಾಂಜಲಿ ರೂಪದಲ್ಲಿ ಗಂಗಾ ನದಿಯಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಗಣಿಗಾರಿಕೆಗೆ ತಡೆ ಹೇರಬೇಕು. ಪ್ರೊ.ಅಗರ್ವಾಲ್ ಅವರ ಉಪವಾಸವನ್ನು ಒಬ್ಬ ವ್ಯಕ್ತಿಯ ಹಠವಾದ ಎಂದು ಪರಿಗಣಿಸಿದ ಸರಕಾರವನ್ನು ಆತ್ಮಬೋಧಾನಂದ ತರಾಟೆಗೆ ತೆಗದುಕೊಂಡಿದ್ದಾರೆ.
ಅಗರ್ವಾಲ್ ಅವರು, ಗಂಗಾ ನದಿಯ ಪರಿಸ್ಥಿತಿ, ಜಾಗತಿಕ ಪರಿಸರದ ಸ್ಥಿತಿ, ಅಪರಾಧ ಮತ್ತು ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುವ ಅನೈತಿಕ ಅಭಿವೃದ್ಧಿ ನೀತಿಗಳು ಮತ್ತು ವಿವೇಚನಾರಹಿತ ಮನುಷ್ಯ ಎಲ್ಲ ಜೀವಜಂತುಗಳು, ಪರಿಸರ ಮತ್ತು ಸಹಜೀವನದ ಸಂಸ್ಕೃತಿಯನ್ನೇ ನಾಶ ಮಾಡಲು ಹಠ ಹಿಡಿದಿರುವ ಬಗ್ಗೆ ಇರುವ ನೋವನ್ನು ಪ್ರತಿನಿಧಿಸಿದ್ದಾರೆ ಎಂದು ಆತ್ಮಬೋಧಾನಂದ ತಿಳಿಸಿದ್ದಾರೆ. ಅಧಿಕಾರದ ಅಹಂನಿಂದಾಗಿ, ಪ್ರೊ. ಅಗರ್ವಾಲ್ ಅವರನ್ನು ಗಂಗಾ ನದಿಗಾಗಿ ಸನ್ಯಾಸಿಗಳು ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಬಯಸುವ ಪದ್ಧತಿಯ ನೋವಿನ ಪ್ರತಿನಿಧಿಯಾಗಿ ಪರಿಗಣಿಸಲು ಸರಕಾರ ನಿರಾಕರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಗಂಗಾ ನದಿಗಾಗಿ ಉಪವಾಸ ಆಚರಿಸಿ ನಿಧನರಾಗುತ್ತಿರುವ ಸನ್ಯಾಸಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮತ್ತು ಇದೇ ದಾರಿಯಲ್ಲಿ ನಡೆಯಲು ಬಯಸುವ ಸನ್ಯಾಸಿಗಳ ಸಂಖ್ಯೆ ಬೆಳೆಯುತ್ತಿರುವಂತೆ ಈ ವಿದ್ಯಮಾನವನ್ನು ನಿರ್ಲಕ್ಷಿಸಲು ದೇಶ ಮತ್ತು ಸರಕಾರಕ್ಕೆ ಕಷ್ಟವಾಗಬಹುದು. ಸದ್ಯ ಅಯೋಧ್ಯೆಯಲ್ಲಿ ರಾಮ ಮಂದಿರ ಮತ್ತು ಕೇರಳದಲ್ಲಿ ಶಬರಿಮಲೆ ವಿವಾದದಲ್ಲಿ ವ್ಯಸ್ತವಾಗಿರುವ ಬಿಜೆಪಿ ಗಂಗಾ ನದಿಯ ವಿಷಯವನ್ನು ಕಡೆಗಣಿಸುವುದು ಆಪತ್ತನ್ನು ಬರಮಾಡಿಕೊಂಡಂತೆ. ವಾರಣಾಸಿಯಿಂದ ಸಂಸತ್ ಚುನಾವಣೆಗೆ ಸ್ಪರ್ಧಿಸುವಂತೆ ತಾಯಿ ಗಂಗೆಯಿಂದ ನನಗೆ ಕರೆ ಬಂದಿತ್ತು ಎಂಬ ಪ್ರಧಾನಿ ಮೋದಿಯ ಮಾತನ್ನು ಜನರು ಮರೆತಿಲ್ಲ. ಗಂಗೆಯನ್ನು ಸ್ವಚ್ಛಗೊಳಿಸಲು ನಮಾಮಿ ಗಂಗೆ ಎಂಬ ಪ್ರತಿಷ್ಠಿತ ಮತ್ತು ಭಾರೀ ಬಜೆಟ್‌ನ ಯೋಜನೆ ಅನುಷ್ಠಾನಗೊಳಿಸಲಾಗಿದ್ದರೂ ಇದರಿಂದ ಸಾಧಿಸಿದ್ದು ಅತ್ಯಲ್ಪ ಮಾತ್ರ. ನರೇಂದ್ರ ಮೋದಿ ಚುನಾವಣೆಯಲ್ಲಿ ವಾರಣಾಸಿಯಿಂದ ಗೆದ್ದ ದಿನಕ್ಕಿಂತಲೂ ಗಂಗೆ ಈಗ ಹೆಚ್ಚು ಮಲಿನಗೊಂಡಿದೆ. ವಾಸ್ತವದಲ್ಲಿ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಗಂಗಾ ನದಿ ವಿಷಯವು ನರೇಂದ್ರ ಮೋದಿ ಮತ್ತು ಬಿಜೆಪಿಯ ದುರ್ಬಲ ಕೊಂಡಿಯಾಗಿ ಪರಿಣಮಿಸಲೂಬಹುದು.
ಕೃಪೆ: countercurrents.org