ದಿಲ್ಲಿ ದರ್ಬಾರ್
ಕುಶ್ವಾಹರ ಹುಸಿ ಬೆದರಿಕೆ?
ನವೆಂಬರ್ 30ರೊಳಗೆ ಒಂದು ಗೌರವಾನ್ವಿತ ಸೀಟು ಹಂಚಿಕೆ ಸೂತ್ರ ಮುಂದಿರಿಸುವಂತೆ ಕಳೆದ ವಾರ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಎನ್‌ಡಿಎಗೆ ಅಂತಿಮ ಎಚ್ಚರಿಕೆ ನೀಡಿದ್ದರು. ಅದುವರೆಗೆ ತಾನು ತುಟಿ ಬಿಚ್ಚುವುದಿಲ್ಲ ಹಾಗೂ ತನಗೆ ದೊರಕುವ ಪ್ರತಿಕ್ರಿಯೆ ಆಧರಿಸಿ ನವೆಂಬರ್ 30ರ ಬಳಿಕ ಮಾತನಾಡುವುದಾಗಿ ಇದೀಗ ಅವರು ಹೇಳಿದ್ದಾರೆ. ತಮ್ಮ ರಾಷ್ಟ್ರೀಯ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ)ಕ್ಕೆ ಬಿಹಾರದಲ್ಲಿ ಸುಮಾರು 4 ಸ್ಥಾನಗಳನ್ನು ಅವರು ನಿರೀಕ್ಷಿಸುತ್ತಿದ್ದರೆ, ಬಿಜೆಪಿ ಹಾಗೂ ಜೆಡಿಯು 2 ಸ್ಥಾನಗಳನ್ನೂ ಬಿಟ್ಟುಕೊಡುವ ನಿರೀಕ್ಷೆಯಿಲ್ಲ. ಲೋಕಸಭೆಯಲ್ಲಿ ಕುಶ್ವಾಹರ ಪಕ್ಷದ ಇಬ್ಬರು ಸಂಸದರು ಬೇರೆ ಪಕ್ಷಕ್ಕೆ ಹಾರಲು ತುದಿಗಾಲಲ್ಲಿ ನಿಂತಿದ್ದರೆ, ಬಿಹಾರದಲ್ಲಿ ಹೆಚ್ಚಿನ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಹಾಗೂ ಆರ್‌ಜೆಡಿ ಜೊತೆ ಕುಶ್ವಾಹ ಮಾತುಕತೆ ನಡೆಸುತ್ತಿದ್ದಾರೆ. ಆದರೆ ಆರ್‌ಜೆಡಿ ಕೂಡಾ ಕುಶ್ವಾಹ ಪಕ್ಷಕ್ಕೆ ಹೆಚ್ಚಿನ ಸ್ಥಾನ ಬಿಟ್ಟುಕೊಡಲು ಸಿದ್ಧವಿಲ್ಲ ಎನ್ನಲಾಗುತ್ತಿದೆ. ಇದೀಗ ಕುಶ್ವಾಹ ಸಂದಿಗ್ಧ ಸ್ಥಿತಿಯಲ್ಲಿದ್ದು, ತನ್ನ ಆತ್ಮಗೌರವವನ್ನು ಬದಿಗಿಟ್ಟು ಬಿಜೆಪಿ ಮತ್ತು ಜೆಡಿಯು ಜೊತೆಗೇ ಸಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಇಲ್ಲೂ ಒಂದು ಸಮಸ್ಯೆ ಇದೆ. ಕುಶ್ವಾಹರ ಪಕ್ಷ ಜೊತೆಗಿದ್ದರೆ 2019ರ ಚುನಾವಣೆಯಲ್ಲಿ ಎನ್‌ಡಿಎ ಮಿತ್ರಕೂಟಕ್ಕೆ ಲಾಭಕ್ಕಿಂತ ಹೆಚ್ಚುವರಿ ಹೊರೆಯಾಗುವ ಸಂಭವವಿದೆ ಎಂದು ಜೆಡಿಯು ಭಾವನೆ. ಹಾಗಿದ್ದರೆ ಮೈತ್ರಿಕೂಟದಿಂದ ತಮ್ಮ ಪಕ್ಷವನ್ನು ಹೊರಹಾಕಿದರೆ, ಆಗ ಅನುಕಂಪ ಗಿಟ್ಟಿಸಿಕೊಂಡು ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಸ್ಪರ್ಧಿಸಬಹುದು ಎಂಬುದು ಕುಶ್ವಾಹ ಲೆಕ್ಕಾಚಾರ ಎನ್ನಲಾಗುತ್ತಿದೆ.
ಶಿವರಾಜ್ ಎಂಬ ಶ್ರಮಜೀವಿ
ಚುನಾವಣೆಯ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾರಿಗೆ ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ರನ್ನು ಹೊಗಳಿದಷ್ಟೂ ಸಾಲುವುದಿಲ್ಲ. ಚೌಹಾಣ್‌ರಷ್ಟು ಕಠಿಣ ಶ್ರಮವಹಿಸುವ ಮುಖ್ಯಮಂತ್ರಿಯನ್ನು ತಾನು ಇದುವರೆಗೂ ಕಂಡಿಲ್ಲ ಎಂದು ಶಾ ಹೊಗಳಿದ್ದಷ್ಟೇ ಅಲ್ಲ, ಶಿವರಾಜ್ ಸಿಂಗ್ ಅಭಿವೃದ್ಧಿಯ ಸಂಕೇತ ಎಂದು ವಿಶ್ಲೇಷಿಸಿದ್ದಾರೆ. ಈ ಹೊಗಳಿಕೆ ಬಿಜೆಪಿಯ ಹಲವರನ್ನು ಗೊಂದಲದಲ್ಲಿ ಸಿಲುಕಿಸಿದೆ. ಶಾ ಮತ್ತು ಪ್ರಧಾನಿ ಮೋದಿ ಪಕ್ಷದಲ್ಲಿ ಕಠಿಣ ದುಡಿಮೆಗಾರರಿಗೆ ಅವರ ಪರಿಶ್ರಮದ ಶ್ರೇಯವನ್ನು ನೀಡಿದವರಲ್ಲ ಎಂದು ಎಲ್ಲರಿಗೂ ತಿಳಿದ ವಿಚಾರ. ಯಾವ ಹೊಗಳಿಕೆಯಿದ್ದರೂ ಅಮಿತ್‌ಭಾಯ್ ಹಾಗೂ ಮೋದೀಜಿಗೆ ಸಲ್ಲಬೇಕು ಎಂಬ ಭಾವನೆ ಪ್ರಚಲಿತವಾಗಿದೆ. ಅಲ್ಲದೆ ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಆಡಳಿತ ಪಕ್ಷದ ಮುಖವಾಗಿ ಪ್ರಧಾನಿಯನ್ನು ಬಿಂಬಿಸದೆ ಮುಖ್ಯಮಂತ್ರಿ ಚೌಹಾಣ್‌ರನ್ನು ಬಿಂಬಿಸಲಾಗಿದೆ. ಕಳೆದ ಚುನಾವಣೆಗಳಲ್ಲಿ ಪ್ರಧಾನಿಯವರನ್ನು ಆಡಳಿತ ಪಕ್ಷದ ಮುಖವಾಗಿ ಬಿಂಬಿಸಿದ್ದ ಕಾರಣ ಈ ಬದಲಾವಣೆಯ ಬಗ್ಗೆ ಊಹಾಪೋಹ ಕೇಳಿಬರುತ್ತಿದೆ. ಮಧ್ಯಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇದೊಂದು ಜಾಣನಡೆಯಾಗಿದೆ ಎಂಬ ಮಾತೂ ಕೇಳಿಬರುತ್ತಿದೆ. ಈ ವರದಿಗಳು ನಿಜವಾದರೆ ಆಗ ಸೋಲಿಗೆ ಮೋದಿ ಅಥವಾ ಶಾರನ್ನು ಬೊಟ್ಟುಮಾಡುವಂತಿಲ್ಲ. ಗೆಲುವು ಅಥವಾ ಸೋಲಿಗೆ ಚೌಹಾಣರೇ ಹೊಣೆಯಾಗಿದ್ದಾರೆ.
ಶಾರ ರೋಡ್‌ಶೋ ಪ್ರೇಮ
ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಡದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ಶಾರಿಗೆ ರೋಡ್‌ಶೋ ಬಗ್ಗೆ ಮೋಹ ಹೆಚ್ಚಿದೆ ಎಂದು ಕಾಣುತ್ತದೆ. ಪ್ರಚಾರ ಸಭೆಗೆ ಹೋದಲ್ಲೆಲ್ಲಾ ತನ್ನ ತೆರೆದ ವಾಹನದಲ್ಲಿ ಆ ಕ್ಷೇತ್ರದ ಅಭ್ಯರ್ಥಿಯನ್ನು ಕುಳ್ಳಿರಿಸಿಕೊಂಡು ಜನರ ಗುಂಪಿನತ್ತ ಕೈಬೀಸುತ್ತಾ ಸಾಗುವುದು ಶಾರ ಫ್ಯಾಶನ್ ಆಗಿಬಿಟ್ಟಿದೆ. ರ್ಯಾಲಿ ನಡೆಸುವುದಕ್ಕಿಂತ ರೋಡ್‌ಶೋ ಮೂಲಕ ಹೆಚ್ಚು ಜನರನ್ನು ತಲುಪುವ ಸುಲಭ ಮಾರ್ಗವಿದು. ಆದರೆ ನಿಜವಾದ ಕಾರಣ ಬೇರೆಯೇ ಇರುವಂತೆ ಭಾಸವಾಗುತ್ತದೆ. ನಗರಗಳಲ್ಲಿ ಸಂಘಪರಿವಾರದ ಮೇಲ್ವರ್ಗದ ಜನತೆ ಹಾಗೂ ವ್ಯಾಪಾರಿಗಳು ಹೆಚ್ಚಿರುವ ಮಾರುಕಟ್ಟೆ ಅಥವಾ ವಸತಿ ಪ್ರದೇಶಗಳಲ್ಲೇ ಅಮಿತ್ ಶಾರ ರೋಡ್‌ಶೋ ಸಾಗುತ್ತದೆ. ಶಾರ ಚುನಾವಣಾ ಪ್ರಚಾರ ಸಭೆಗೆ ರೈತರನ್ನು ಹಾಗೂ ಬಡವರ್ಗದ ಜನರನ್ನು ಸೇರಿಸುವುದು ತುಂಬಾ ಕಷ್ಟವಾಗುತ್ತಿದೆ ಎಂದು ಮಧ್ಯಪ್ರದೇಶ ಮತ್ತು ರಾಜಸ್ಥಾನದ ಸ್ಥಳೀಯ ಬಿಜೆಪಿ ಘಟಕಗಳು ಹೇಳುತ್ತಿರುವ ಹಿನ್ನೆಲೆಯಲ್ಲಿ, ವಾಹನಗಳ ಸಾಲಿನಲ್ಲಿ ಸಾಗುತ್ತಾ, ಜನರತ್ತ ಕೈಬೀಸುತ್ತಾ, ಬೆಂಬಲಿಗರ ಜೈಕಾರ, ಪುಷ್ಪಾರ್ಚನೆಯಿಂದ ಪುಳಕಿತಗೊಂಡು ಸಾಗುವುದು ಉತ್ತಮ ಎಂದು ಶಾಗೆ ಅನಿಸಿರಬಹುದು. ಆದರೆ ರೈತರು ಹಾಗೂ ಗ್ರಾಮೀಣ ಪ್ರದೇಶಗಳ ನಿವಾಸಿಗಳೇನು ಮಾಡಬೇಕು? ಅವರು ಮತಯಂತ್ರಗಳ ಮೂಲಕ ತಮ್ಮ ಬೆಂಬಲ ಯಾರಿಗೆ ಎಂದು ತಿಳಿಸುವವರೆಗೆ ಶಾ ರೋಡ್‌ಶೋ ಮಾಡುತ್ತಾ ಖುಷಿಯಾಗಿರಬಹುದು.
ಗೆಹ್ಲೋಟ್ ಎಂಬ ಜಾದೂಗಾರ
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಅಶೋಕ್ ಗೆಹ್ಲೋಟ್, ತನ್ನ ಬಾಲ್ಯದ ದಿನಗಳಲ್ಲಿ ಖ್ಯಾತ ಜಾದೂಗಾರರಾದ ತಮ್ಮ ತಂದೆ ಬಾಬು ಲಕ್ಷ್ಮಣ್‌ಸಿಂಗ್ ದಕ್ಷ್ ಜೊತೆ ದೇಶದಾದ್ಯಂತ ಸುತ್ತಾಡುತ್ತಿದ್ದರು. ತಂದೆಗೆ ಸಹಾಯಕನಾಗಿದ್ದ ಗೆಹ್ಲೋಟ್ ಕೂಡಾ ಕೆಲವೊಂದು ಟ್ರಿಕ್ಸ್‌ಗಳನ್ನು ಪ್ರದರ್ಶಿಸಿ ಜನರನ್ನು ಸಮ್ಮೋಹನಗೊಳಿಸುತ್ತಿದ್ದರು. ನಾನು ರಾಜಕೀಯ ಪ್ರವೇಶಿಸದಿದ್ದರೆ ಓರ್ವ ಜಾದೂಗಾರನಾಗುತ್ತಿದ್ದೆ. ನಾನು ಯಾವಾಗಲೂ ಸಮಾಜಸೇವೆಯನ್ನು ಇಷ್ಟಪಡುತ್ತಿದ್ದೆ ಮತ್ತು ಇಂದ್ರಜಾಲದ ಟ್ರಿಕ್ಸ್‌ಗಳನ್ನು ಕಲಿಯಲು ಬಯಸುತ್ತಿದ್ದೆ. ಭವಿಷ್ಯದಲ್ಲೂ ಜಾದೂಗಾರನಾಗಲು ನನಗೆ ಅವಕಾಶ ಸಿಗಲಿಕ್ಕಿಲ್ಲ. ಆದರೆ ಮ್ಯಾಜಿಕ್ ಎಂಬುದು ಸದಾ ನನ್ನ ಆತ್ಮದಲ್ಲಿರುತ್ತದೆ ಎಂದು ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ಇಂದಿರಾ ಗಾಂಧಿಯವರ ಸಮ್ಮುಖದಲ್ಲಿ, ಆಗ ಚಿಕ್ಕವರಿದ್ದ ರಾಹುಲ್ ಹಾಗೂ ಪ್ರಿಯಾಂಕಾರನ್ನು ಕೆಲವೊಂದು ಮ್ಯಾಜಿಕ್ ಟ್ರಿಕ್ಸ್ ಪ್ರದರ್ಶಿಸಿ ಗೆಹ್ಲೋಟ್ ರಂಜಿಸಿದ್ದರು ಎಂದು ಹೇಳಲಾಗುತ್ತಿದೆ. ಗೆಹ್ಲೋಟ್ ಜಾದೂ ಪ್ರದರ್ಶಿಸಿರುವುದನ್ನು ರಾಹುಲ್ ಮತ್ತು ಪ್ರಿಯಾಂಕಾ ನೆನಪಲ್ಲಿ ಇಟ್ಟುಕೊಂಡಿದ್ದಾರೆಯೇ ಎಂಬುದು ತಿಳಿದಿಲ್ಲ. ಆದರೆ ಗಾಂಧಿ ಮನೆತನ ಮಾತ್ರ ಯಾವತ್ತೂ ಅಶೋಕ್ ಗೆಹ್ಲೋಟ್‌ರ ಮಾತಿನ ವೈಖರಿಗೆ ವಿಸ್ಮಯರಾಗುತ್ತಿದ್ದುದಂತೂ ಸ್ಪಷ್ಟ. ಎಲ್ಲಾ ವಿಷಯದಲ್ಲೂ ಅವರು ಗೆಹ್ಲೋಟರ ಬಗ್ಗೆ ವಿಶ್ವಾಸ ಇರಿಸಿಕೊಂಡಿದ್ದಾರೆ. ಒಂದು ವೇಳೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆದ್ದರೆ, ಅಲ್ಲಿ ಮುಖ್ಯಮಂತ್ರಿಯಾಗಲಿರುವುದು ಸಚಿನ್ ಪೈಲಟ್ ಅಲ್ಲ, ಗೆಹ್ಲೋಟ್ ಎಂದೂ ಹೇಳಲಾಗುತ್ತಿದೆ. ಅಂತಿಮವಾಗಿ ಪೈಲಟ್‌ರ ಪುತ್ರನನ್ನು ಜಾದೂಗಾರ ಸೋಲಿಸಿದರೂ ಅಚ್ಚರಿಯಿಲ್ಲ.
ಸಿಜೆಐಯ ಹಾಸ್ಯಪ್ರಜ್ಞೆ
ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ) ರಂಜನ್ ಗೊಗೊಯಿಯವರ ಹಾಸ್ಯಪ್ರಜ್ಞೆ ಎಷ್ಟು ಖ್ಯಾತಿ ಪಡೆದಿದೆ ಎಂದರೆ ಹಿರಿಯ ವಕೀಲರೂ ಗೊಗೊಯಿ ಎದುರು ಹೆಚ್ಚಿಗೆ ಮಾತನಾಡಲು ಹಿಂಜರಿಯುತ್ತಾರೆ. ಸಿಬಿಐಯ ಒಳಜಗಳದ ಪ್ರಕರಣ ದಲ್ಲಿ ಸಿಬಿಐ ನಿರ್ದೇಶಕ ಅಲೋಕ್ ವರ್ಮರನ್ನು ಸಿವಿಸಿ(ಕೇಂದ್ರ ಜಾಗೃತ ಆಯೋಗ) ನಡೆಸಿದ ತನಿಖೆಯ ವಿಚಾರಣೆ ಸಂದರ್ಭ ಗೊಗೊಯಿರ ಹಾಸ್ಯಪ್ರಜ್ಞೆ ಸಾಬೀತಾಯಿತು. ಸಿವಿಸಿ ವರ್ಮರ ತನಿಖೆಯ ವರದಿಯನ್ನು ನ್ಯಾಯಾಲಯಕ್ಕೆ ಸೀಲ್ ಮಾಡಿದ ಕವರ್‌ನಲ್ಲಿ ಸಲ್ಲಿಸಿದ್ದು, ಇದರ ಒಂದು ಪ್ರತಿ ಒದಗಿಸಬೇಕೆಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಗೊಗೊಯಿ, ‘‘ವರದಿಯ ಲೇಖಕ ನೀವಲ್ಲವೇ?’’ ಎಂದು ಚಟಾಕಿ ಹಾರಿಸಿದರು.
ಇದೇ ಪ್ರಕರಣದಲ್ಲಿ, ಏಕಾಏಕಿ ವರ್ಗಾವಣೆಗೊಂಡಿರುವ ಸಿಬಿಐ ಅಧಿಕಾರಿ ಅಜಯ್‌ಕುಮಾರ್ ಬಸ್ಸಿ ಪರ ವಕೀಲ ರಾಜೀವ್ ಧವನ್‌ರನ್ನು ಗೊಗೊಯಿ - ಅಜಯ್‌ಕುಮಾರ್ ಬಸ್ಸಿ ಅಂಡಮಾನ್‌ಗೆ ವರ್ಗಾವಣೆಗೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು. ಅದಕ್ಕೆ ಧವನ್, ಅಲ್ಲ ಪೋರ್ಟ್‌ಬ್ಲೇರ್‌ಗೆ ಎಂದುತ್ತರಿಸಿದರು. ಆಗ ಗೊಗೊಯಿ, ಪೋರ್ಟ್‌ಬ್ಲೇರ್ ಅತ್ಯುತ್ತಮ ಪ್ರವಾಸೀ ಸ್ಥಳವಾಗಿದೆ ಎಂದು ಹೇಳಿದಾಗ ಧವನ್‌ಗೆ ನಗಬೇಕೋ, ಅಳಬೇಕೋ ತಿಳಿಯಲಿಲ್ಲ.