ಚಿಕ್ಕಮಗಳೂರು: ಅಕ್ರಮ ಚಟುವಟಿಕೆಗಳ ಬೀಡಾಗುತ್ತಿರುವ ಕಲ್ಲತ್ತಗಿರಿ ಪ್ರವಾಸಿತಾಣ
ಚಿಕ್ಕಮಗಳೂರು, ನ.25: ಪ್ರವಾಸಿಗರ ಸ್ವರ್ಗವಾಗಿರುವ ಕಾಫಿನಾಡಿನ ಪ್ರಾಕೃತಿಕ ಸೌಂದರ್ಯಕ್ಕೆ ಬೆರಗಾಗದವರಿಲ್ಲ ಎಂದರೆ ತಪ್ಪಾಗಲಾರದು. ಮುಳ್ಳಯ್ಯನಗಿರಿ, ಬಾಬಾ ಬುಡಾನ್‌ಗಿರಿ ಶ್ರೇಣಿ ಜೀವವೈವಿಧ್ಯಗಳ ಬೀಡಾಗಿದ್ದು, ಇಲ್ಲಿನ ಸ್ವಚ್ಛಂದ ಪರಿಸರದಲ್ಲಿನ ಜರಿ, ಜಲಪಾತಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಈ ಕಾರಣಕ್ಕೆ ಮುಳ್ಳಯ್ಯನಗಿರಿ, ಬಾಬಾ ಬುಡಾನ್‌ಗಿರಿ ಶ್ರೇಣಿ ವ್ಯಾಪ್ತಿಯಲ್ಲಿನ ಸುಂದರ ಪರಿಸರ ವೀಕ್ಷಣೆಗೆ ವೀಕೆಂಡ್‌ಗಳಲ್ಲಿ ನಾಡಿನ ಮೂಲೆ ಮೂಲೆಗಳಿಂದ ಬರುತ್ತಾರೆ. ಹೀಗೆ ಸುಂದರ ಪರಿಸರವನ್ನು ಆಹ್ಲಾದಿಸಲು ಬರುವ ಪ್ರವಾಸಿಗರ ಒಂದೆಡೆಯಾದರೆ, ಮತ್ತೊಂದೆಡೆ ಮೋಜು ಮಸ್ತಿಗಾಗಿ ಬಂದು ಇಲ್ಲಿನ ಪರಿಸರವನ್ನು ಅಂದಗೆಡಿಸುತ್ತಿರುವ ಕಿಡಿಗೇಡಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಪರಿಸರ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ತರೀಕೆರೆ ತಾಲೂಕು, ಲಿಂಗದಹಳ್ಳಿ ವ್ಯಾಪ್ತಿಯಲ್ಲಿರುವ ಹಾಗೂ ಮುಳ್ಳಯ್ಯನಗಿರಿ, ಬಾಬಾ ಬುಡಾನ್‌ಗಿರಿ ಶ್ರೇಣಿ ವ್ಯಾಪ್ತಿಯಲ್ಲಿರುವ ಕೆಮಣ್ಣುಗುಂಡಿ ಪ್ರವಾಸಿ ಕೇಂದ್ರಕ್ಕೆ ಹೋಗುವ ದಾರಿ ಮಧ್ಯೆ ಸಿಗುವ ಕಲ್ಲತ್ತಗಿರಿ ಜಲಪಾತ ಜಿಲ್ಲೆಯ ಇಲ್ಲಿನ ಪ್ರಮುಖ ಪ್ರವಾಸಿ ತಾಣವಾಗಿದೆ. ಪ್ರಕೃತಿಯ ವಿಸ್ಮಯ ಎಂಬಂತೆ ವರುಷದ 365 ದಿನಗಳ ಕಾಲವೂ ತುಂಬಿ ಹರಿಯುವ ಈ ಜಲಪಾತದ ರಮಣೀಯ ಸೊಬಗನ್ನು ಮುಳ್ಳಯ್ಯನಗಿರಿ, ಬಾಬಾಬುಡಾನ್‌ಗಿರಿ, ಕೆಮ್ಮಣ್ಣುಗುಂಡಿ ಪ್ರವಾಸಕ್ಕೆ ಬರುವ ಪ್ರವಾಸಿಗರು ಸವಿಯದೇ ಮುಂದಡಿ ಇಡಲಾರರು. ಆದರೆ ತಣ್ಣನೆಯ ವಾತಾವರಣದಲ್ಲಿ ಕಣ್ಣಿಗೆ ಮುದ ನೀಡುವ ಈ ಜಲಪಾತದ ಸೊಬಗು ಸವಿಯಲು ಬರುವ ಪ್ರವಾಸಿಗರಿಗಿಂತ ಜಲಪಾತದ ಸುತ್ತಮುತ್ತ ಮೋಜು ಮಸ್ತಿಗೆ ಬರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ ಎಂದು ಜಿಲ್ಲೆಯ ಪರಿಸರಪ್ರಿಯರು ಆರೋಪಿಸುತ್ತಿದ್ದು, ಈ ಸುಂದರ ಪ್ರಾಕೃತಿಕ ತಾಣ ನಿಧಾನವಾಗಿ ಕಿಡಿಗೇಡಿಗಳು, ಮದ್ಯಪಾನ ಪ್ರಿಯರಿಂದಾಗಿ ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿ ಪರಿಣಮಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲಾಕೇಂದ್ರದಿಂದ ತರೀಕೆರೆ ಪಟ್ಟಣ ಸಂಪರ್ಕಿಸುವ ಲಿಂಗದಹಳ್ಳಿ ಮಾರ್ಗವಾಗಿ ಜಿಲ್ಲೆಯ ಪ್ರಮುಖ ಗಿರಿಧಾಮವಾಗಿರುವ ಕೆಮ್ಮಣ್ಣುಗುಂಡಿಗೆ ಹೋಗುವ ರಸ್ತೆ ಮಧ್ಯೆ ಸಿಗುವ ಕಲ್ಲತ್ತಗಿರಿ ಜಲಪಾತ ಪ್ರಕೃತಿ ನಿರ್ಮಿಸಿದ ಸುಂದರ ತಾಣ. ಕೆಮ್ಮಣ್ಣುಗುಂಡಿ ಗಿರಿಧಾಮ ನೋಡಲು ಬರುವ ಪ್ರವಾಸಿಗರು ದಾರಿ ಮಧ್ಯೆ ಸಿಗುವ ರುದ್ರರಮಣೀಯ ಜಲಪಾತದ ಸೊಬಗು ಸವಿಯುತ್ತಾರೆ. ಆದರೆ ಇತ್ತೀಚೆಗೆ ಇಲ್ಲಿ ಮದ್ಯಪಾನ, ಧೂಮಪಾನ ಮಾಡುತ್ತಾ ಮೋಜು ಮಾಡಲು ಬರುವವರ ಸಂಖ್ಯೆ ಹೆಚ್ಚುತ್ತಿದ್ದು, ಪರಿಸರದ ಸುತ್ತಮುತ್ತ ಮದ್ಯದ ಬಾಟಲಿಗಳು, ಪೌಚ್‌ಗಳು, ಸಿಗರೇಟು ಪ್ಯಾಕ್‌ಗಳು ಹೆಜ್ಜೆ ಹೆಜ್ಜೆಗೂ ಹರಡಿಕೊಂಡು ಬಿದ್ದಿರುತ್ತವೆೆ. ಬೆಂಗಳೂರು, ಮೈಸೂರು ಮತ್ತಿತರ ಮಹಾನಗರಗಳಿಂದ ವಾರಾಂತ್ಯದಲ್ಲಿ ಪ್ರವಾಸಕ್ಕೆ ಬರುವ ಕೆಲ ಶ್ರೀಮಂತ ಯುವಕರು ಪ್ರವಾಸ ಮುಗಿಸಿ ಹೋಗುವಾಗ ಪಾರ್ಟಿ, ಮೋಜು, ಮಸ್ತಿ ಹೆಸರಿನಲ್ಲಿ ಮದ್ಯಪಾನ ಮಾಡುವುದಲ್ಲದೆ ಪಾರ್ಟಿಯ ತ್ಯಾಜ್ಯವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಪ್ರವಾಸಿ ತಾಣದ ಅಂದಗೆಡಿಸುತ್ತಿದ್ದಾರೆ. ಚಿಕ್ಕಮಗಳೂರು, ತರೀಕೆರೆ ಮಾರ್ಗವಾಗಿ ಕೆಮ್ಮಣ್ಣುಗುಂಡಿ ಪ್ರವಾಸಕ್ಕೆ ಬರುವ ಮಾರ್ಗದಲ್ಲಿ ಕೆಲವೆಡೆ ಚೆಕ್‌ಪೋಸ್ಟ್‌ಗಳಿವೆ. ಆದರೆ ಇಲ್ಲಿ ಪ್ರವಾಸಿಗರ ವಾಹನಗಳನ್ನು ತಪಾಸಣೆ ಮಾಡಿ, ಮದ್ಯದ ಬಾಟಲಿಗಳನ್ನು ಕೊಂಡೊಯ್ಯಲು ಅವಕಾಶ ನೀಡದಿದ್ದಲ್ಲಿ ಇಲ್ಲಿನ ಪರಿಸರ ಉಳಿಯುತ್ತದೆ ಎಂದು ಕಲ್ಲತ್ತಗಿರಿ ಸುತ್ತಮುತ್ತಲಿನ ಗ್ರಾಮಸ್ಥರು ಹೇಳುತ್ತಾರೆ.
ಪ್ರತೀ ಬಾರಿ ರಜೆ ದಿನಗಳಲ್ಲಿನ ಚಿಕ್ಕಮಗಳೂರು ಜಿಲ್ಲೆಯ ಸುಂದರ ಪರಿಸರ ಸವಿಯಲು ಸ್ನೇಹಿತರೊಂದಿಗೆ ಬರುವುದು ನನ್ನ ಹವ್ಯಾಸ. ಇಲ್ಲಿನ ಗಿರಿಶ್ರೇಣಿಗಳ ಸೌಂದರ್ಯ ಪ್ರಕೃತಿ ನೀಡಿದ ಕೊಡುಗೆಯಾಗಿದೆ. ಆದರೆ ಕೆಲವರು ಇಲ್ಲಿನ ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ಪ್ರವಾಸಿ ತಾಣವಾಗಿರುವ ಕಲ್ಲತ್ತಗಿರಿ ಜಲಪಾತ ಇತ್ತೀಚೆಗೆ ಹಾಳಾಗುತ್ತಿದೆ. ಇಲ್ಲಿನ ರುದ್ರರಮಣೀಯ ಸೊಬಗನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಾದರೂ ಸಂಬಂಧಿಸಿದ ಇಲಾಖೆ ವತಿಯಿಂದ ಪ್ರವಾಸಕ್ಕೆ ಬರುವವರಿಗೆ ಮದ್ಯಪಾನ ನಿಷೇಧ ಮಾಡಬೇಕು. ನಿಯಮ ಉಲ್ಲಂಘಿಸಿದಲ್ಲಿ ದಂಡ ವಿಧಿಸುವುದರಿಂದ ಕಲ್ಲತ್ತಗಿರಿ ಜಲಪಾತ ಅನೈತಿಕ ಚಟುವಟಿಕೆಗಳ ಬೀಡಾಗುವುದನ್ನು ತಪ್ಪಿಸಬಹುದು.
-ಅರುಣ್‌ಕುಮಾರ್, ಪರಿಸರ ಪ್ರೇಮಿ, ಇಂಜಿನಿಯರಿಂಗ್ ವಿದ್ಯಾರ್ಥಿ, ಬೆಂಗಳೂರು.