ಹಸನ್ ನಯೀಂ ಸುರಕೋಡ್‍ಗೆ ಪ್ರೊ.ಎಚ್‍ಎಲ್ ಕೆ ವೈಚಾರಿಕ ಪ್ರಶಸ್ತಿ

Update: 2018-12-26 14:45 GMT

ಮಂಡ್ಯ, ಡಿ.26: ವಿಚಾರವಾದಿ ಪ್ರೊ.ಎಚ್.ಎಲ್.ಕೇಶವಮೂರ್ತಿ ಪ್ರತಿಷ್ಠಾನ ಕೊಡಮಾಡುವ ವೈಚಾರಿಕ ಪ್ರಶಸ್ತಿಗೆ ಬೆಳಗಾವಿಯ ರಾಮದುರ್ಗದ ಸಮಾಜವಾದಿ ಚಿಂತಕ, ಪತ್ರಕರ್ತ, ಲೇಖಕ, ಕವಿ ಹಸನ್ ನಯೀಂ ಸುರಕೋಡ್ ಅವರನ್ನು ಆಯ್ಕೆ ಮಾಡಲಾಗಿದೆ.

ಡಿ.28 ರಂದು ಬೆಳಗ್ಗೆ 11ಕ್ಕೆ ನಗರದ ಗಾಂಧಿಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಚಾಲನೆ ನೀಡಲಿದ್ದಾರೆ. ಹಿರಿಯ ಪತ್ರಕರ್ತ, ಲೇಖಕ ಡಾ.ಎನ್.ಜಗದೀಶ್ ಕೊಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಖ್ಯಾತ ಲೇಖಕ ಡಾ.ಕಾಳೇಗೌಡ ನಾಗವಾರ ಅಭಿನಂದನಾ ಭಾಷಣ ಮಾಡಲಿದ್ದು, ಮಹಿಳಾ ಹೋರಾಟಗಾರರಾದ ಸುನಂದ ಜಯರಾಂ, ದೇವಿ ಭಾಗವಹಿಸಲಿದ್ದಾರ. ಎ ಗಾಮನಹಳ್ಳಿ ಸ್ವಾಮಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮವಿದೆ.

ನಾಡಿನ ಖ್ಯಾತ ವಿಚಾರವಾದಿ, ಹೋರಾಟಗಾರ ಮತ್ತು ಲೇಖಕ ಪ್ರೊ.ಎಚ್.ಎಲ್.ಕೇಶವಮೂರ್ತಿ ಅವರ ಸಂಸ್ಮರಣೆಯಲ್ಲಿ ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದ್ದು, ಪ್ರತಿಷ್ಠಾನ ವೈಚಾರಿಕ, ವೈಜ್ಞಾನಿಕ ಚಟುವಟಿಕೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಕೇಶವಮೂರ್ತಿ ಅವರ ಹೆಸರಿನಲ್ಲಿ ವೈಚಾರಿಕ ಆಂದೋಲನದಲ್ಲಿ ಸಕ್ರಿಯರಾಗಿರುವ ಸಾಧಕರಿಗೆ ವೈಚಾರಿಕ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಗುರುಪ್ರಸಾದ್ ಕೆರಗೋಡು ತಿಳಿಸಿದ್ದಾರೆ.

ಪ್ರತಿಷ್ಠಾನದ ಪ್ರಥಮ ಪ್ರಶಸ್ತಿಗೆ ಖ್ಯಾತ ಸಮಾಜವಾದಿ ಚಿಂತಕ, ಕವಿ ಹಸನ್ ನಯೀಂ ಸುರಕೋಡ್ ಅವರನ್ನು ಆಯ್ಕೆ ಮಾಡಿದ್ದು, ಸಾರ್ವಜನಿಕರು ಸಮಾರಂಭದಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಪ್ರಶಸ್ತಿ ಪುರಸ್ಕೃತ ಸುರಕೋಡ್ ಕುರಿತು

ಕನ್ನಡದ ಹಿರಿಯ ಬರಹಗಾರರೂ, ಅನುವಾದಕರೂ ಆಗಿರುವ ಹಸನ್ ನಯೀಂ ಸುರಕೋಡ್ ಬೆಳಗಾವಿ ಜಿಲ್ಲೆ ರಾಮದುರ್ಗದವರು. ಅರ್ಥಶಾಸ್ತ್ರ ವಿಷಯದಲ್ಲಿ ಎಂ.ಎ. ಪದವಿ ಪಡೆದಿರುವ ಸುರಕೋಡ್, ಇಂಗ್ಲೀಷ್, ಹಿಂದಿ, ಉರ್ದು ಮತ್ತು ಕನ್ನಡ ಭಾಷೆಗಳಲ್ಲಿ ಪರಿಣಿತರು. ಸೈದ್ಧಾಂತಿಕವಾಗಿ ಲೋಹಿಯಾರ ಸಮಾಜವಾದಿ ಚಿಂತನೆಗಳನ್ನು ಒಪ್ಪಿದವರು. ರಾಮಮನೋಹರ ಲೋಹಿಯಾ, ಕಿಶನ್ ಪಟ್ನಾಯಕ್, ಮಧುಲಿಮಯೆ ಮುಂತಾದವರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲೋಹಿಯಾರ ಜೀವನ ಚರಿತ್ರೆಯನ್ನೂ ಅನುವಾದಿಸಿದ್ದಾರೆ.

ಕೋಮು ಸೌಹಾರ್ದ ಕುರಿತಾಗಿ ಆಳವಾಗಿ ಯೋಚಿಸಲು ಹಚ್ಚುವಂತಹ ಬರಹಗಳನ್ನು ಸುರಕೋಡರು ಬರೆದಿದ್ದಾರೆ. ಉರ್ದು ಭಾಷೆಯ ಮಹಾಕವಿ ಫೈಜ್ ಅಹಮದ್ ಫೈಜ್ ಅವರ ಕಾವ್ಯ ಮತ್ತು ಬದುಕು, ಸಾದತ್ ಹಸನ್ ಮಂಟೋ ಅವರ ಕೃತಿಗಳು, ಅಮೃತಾ ಪ್ರೀತಂ ಆತ್ಮಕತೆ, ಪಾಕಿಸ್ತಾನಿ ಕವಿ ಸಾರಾ ಶಗುಫ್ತಾ ಕುರಿತ ಅಮೃತಾ ಪ್ರೀತಂ ಹೊತ್ತಗೆ, ಅಸ್ಗರ್ ಅಲಿ ಇಂಜಿನಿಯರ್ ಅವರ ವೈಚಾರಿಕ ಬರಹಗಳು, ಮೊದಲಾದ ಪುಸ್ತಕಗಳನ್ನು ಕನ್ನಡಕ್ಕೆ ತಂದಿದ್ದಾರೆ. ಉರ್ದುವಿನ ಕ್ರಾಂತಿಕಾರಿ ಕವಿ ಸಾಹಿರ್ ಲುಧಿಯಾನವಿ ಅವರ ಜೀವನ ಮತ್ತು ಕಾವ್ಯ ಕುರಿತ ‘ಪ್ರೇಮಲೋಕದ ಮಾಯಾವಿ’ ಇವರ ವಿಶಿಷ್ಟ ಕೃತಿಯಾಗಿದೆ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಬಿ.ಎ.ಸನದಿ ಪ್ರತಿಷ್ಠಾನದ ಕನ್ನಡಗಡಿ ತಿಲಕ, ಶ್ರೀಮತಿ ಚಂದಮ್ಮ ನೀರಾವರಿ ಸ್ಮಾರಕ ಪ್ರಶಸ್ತಿ, ಕಾಗೋಡು ಪ್ರಶಸ್ತಿ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಸುರಕೋಡ್ ಅವರಿಗೆ ಸಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News