ಮೌಢ್ಯ ಕಂದಾಚಾರಗಳ ವಿರುದ್ಧ ಜಾಗೃತಿ ಮೂಡಿಸುವ ಅಗತ್ಯವಿದೆ: ಪ್ರೊ.ಚಂದ್ರಶೇಖರ ಪಾಟೀಲ್

Update: 2019-01-11 18:41 GMT

ಮೈಸೂರು,ಜ.11: ಪುರೋಹಿತಶಾಹಿಗಳು ಎಲ್ಲಿ ಇರುತ್ತಾರೋ ಅಲ್ಲಿ ಮೂಢನಂಬಿಕೆ, ಮೌಡ್ಯ ಹುಟ್ಟುಹಾಕುತ್ತಾರೆ. ಮೌಢ್ಯ ಕಂದಾಚಾರಗಳ ವಿರುದ್ದ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸಾಹಿತಿ ಮತ್ತು ಚಿಂತಕ ಪ್ರೊ.ಚಂದ್ರಶೇಖರ ಪಾಟೀಲ ಹೇಳಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಜಿಲ್ಲಾ ಘಟಕ ಮತ್ತು ಕನ್ನಡ ಸಾಹಿತ್ಯ ಕಲಾಕೂಟ, ಹಾಗೂ ಕೆ.ಎಸ್.ಶಿವರಾಮು ಸ್ನೇಹ ಬಳಗದ ವತಿಯಿಂದ ಶುಕ್ರವಾರ ಕಲಾಮಂದಿರದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ಮಡೆಸ್ನಾನ ವಿರೋಧಿ ಹೋರಾಟಗಾರ ಹಾಗೂ ಡಾ.ಅಂಬೇಡ್ಕರ್ ಫೆಲೋಶಿಪ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕೆ.ಎಸ್.ಶಿವರಾಮು ರವರಿಗೆ ಅಭಿನಂದನೆ ಹಾಗೂ ಮೌಢ್ಯ-ಸಾಮಾಜಿಕ ಹೋರಾಟಗಳು- ಒಂದು ಚಿಂತನೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮೌಢ್ಯ ಕಂದಾಚಾರಗಳನ್ನು ವೈದಿಕ ಧರ್ಮ ನಮ್ಮಲ್ಲಿ ಬಿತ್ತಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಮೌಢ್ಯ ಕಂದಾಚಾರದ ವಿರುದ್ಧ ಹಲವಾರು ಹೋರಾಟಗಳು ನಡೆಯುತ್ತಲೇ ಬಂದಿವೆ. ಆದರೂ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಚಾತುವರ್ಣ ಪದ್ಧತಿಯಿಂದಾಗಿ ಸಮಾಜ ಹೊಡೆದು ಶೋಷಣೆಗೆ ಒಳಗಾಗುವಂತಹ ಪದ್ಧತಿ ಬಂತು. ಇದರ ವಿರುದ್ಧ ಸಾಕಷ್ಟು ಮಂದಿ ಹೋರಾಟ ಮಾಡಿದರು. ಬುದ್ಧ ಬಸವಣ್ಣರಾದಿಯಾಗಿ ಅಂಬೇಡ್ಕರ್ ಅವರು ಸಾಕಷ್ಟು ಅಧ್ಯಯನ ಮಾಡಿ ಸಂವಿಧಾನವನ್ನು ರಚಿಸಿದರು. ಈ ದೇಶದ ಸರ್ವಶ್ರೇಷ್ಠ ಗ್ರಂಥ ಸಂವಿಧಾನ. ಅದರಂತೆಯೇ ನಾವುಗಳು ನಡೆಯಬೇಕಿದೆ ಎಂದು ಹೇಳಿದರು.

ನಾನು ಒಂದು ಸಮುದಾಯದಲ್ಲಿ ಹುಟ್ಟಿದ್ದೇನೆ. ಬಸವಣ್ಣ ನವರ ಧರ್ಮದಲ್ಲಿ ನಂಬಿಕೆಯಿಟ್ಟು ಕೊಂಡಿರುವವನು, ಆ ಧರ್ಮ ಅನುಷ್ಠಾನಕ್ಕೆ ಬರಲು ಕೆಲವು ಕೃತಗಾಮಿಗಳು ಹದಗೆಡಿಸಿದವು. ಇಂದು ಸಹ ನಮ್ಮಲ್ಲಿ ಮಡೆಸ್ನಾನಕ್ಕೆ ಬಿನ್ನವಾದ ಪರಂಪರೆಯೊಂದಿದೆ. ಕೆಲವು ವೀರಶೈವ ಮಠಗಳಲ್ಲಿ ಅಲ್ಲಿನ ಸ್ವಾಮಿಗಳ ಪಾದ ಪೂಜೆ ಮಾಡಿ ತೊಳೆದ ನೀರನ್ನು ಕುಡಿಯುತ್ತಾರೆ. ಇದು ಸಹ ಒಂದು ಮೌಢ್ಯದ ಸಂಕೇತ ಇದನ್ನು ತೊಡೆದು ಹಾಕಬೇಕು ಎಂದು ಹೇಳಿದರು.

ಸ್ವಾಮೀಜಿಗಳ ಪಾದಸ್ಪರ್ಶಮಾಡಿ ನೀರನ್ನು ಕುಡಿಯುವ ಮೂಲಕ ಕಂದಾಚಾರದಂತಹ ವ್ಯವಸ್ಥೆ ಜೀವಂತವಾಗಿದೆ. ನಾವು ಮನುಷ್ಯತ್ವಕ್ಕೆ ಬೆಲೆ ಕೊಡಬೇಕೇ ಹೊರತು ಪಾದಗಳಿಗಲ್ಲ. ಇಂತಹ ವ್ಯವಸ್ಥೆಯ ವಿರುದ್ಧ ಹೋರಾಟದ ಅಗತ್ಯವಿದೆ ಎಂದು ಹೇಳಿದರು.

ಪುರೋಹಿತಶಾಹಿಗಳು ಮೌಢ್ಯ ಕಂದಾಚಾರನ್ನು ಬಂಡವಾಳ ಮಾಡಿಕೊಂಡು ಸಮಾಜದಲ್ಲಿ ಹೇರುವ ಹುನ್ನಾರ ನಡೆಸುತ್ತಾರೆ. ಅಕ್ಷರ ಜ್ಞಾನಪಡೆದ ನಾವು ಚಿಂತನೆ ಮಾಡಬೇಕಿದೆ. ಸಂವಿಧಾನದ ಮೌಲ್ಯಗಳನ್ನು ಉಳಿಸಿಕೊಳ್ಳಲು ವೈಚಾರಿಕ  ಜಾಗೃತಿಯನ್ನು ಮೂಡಿಸಬೇಕಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಮಡೆಸ್ನಾನ ಹೋರಾಟಗಾರ ಪ್ರಶಸ್ತಿ ಪುರಸ್ಕೃತ ಕೆ.ಎಸ್.ಶಿವರಾಮು ಅವರನ್ನು ಪೇಟ ಹಾಕಿ ನನೆಪಿನ ಕಾಣಿಕೆ ನೀಡಿ, ಶಿವರಾಮು ಅವರ ಛಾಯಹಾಚಿತ್ರ ಬರೆದ ಪಟವನ್ನು ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಮಾಧ್ಯಮ ಸಂಹವನ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಸಾಹಿತಿ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್, ಚಿಂತಕಿ ಪೆರಿಯಾರ್‍ವಾದಿ ಕಲೈಸೆಲ್ವಿ, ಸಮಾಜ ಸೇವಕ ರಘುರಾಮ್ ವಾಜಪೇಯಿ, ಮಡ್ಡಿಕೆರೆ ಗೋಪಾಲ್, ಚಂದ್ರಶೇಖರ್, ಮೂಗೂರು ನಂಜುಂಡಸ್ವಾಮಿ, ಜಾಕೀರ್ ಹುಸೇನ್, ಕೆ.ಎಸ್.ನಾಗರಾಜು ಇದ್ದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಸಂಶೋಧಕ ವಿದ್ಯಾರ್ಥಿಗಳಾದ ಡಾ.ದಿಲೀಪ್ ನರಸಯ್ಯ, ಮಹೇಶ್ ಸೋಸಲೆ, ಮಹದೇವಸ್ವಾಮಿ, ದಲಿತ ಮುಖಂಡರಾದ, ಶಿವಪ್ಪ, ಶಿವಸ್ವಾಮಿ, ದೇವನೂರು ಪುಟ್ಟನಂಜಯ್ಯ, ಡಾ.ರಂಗಸ್ವಾಮಿ ಸೇರಿದಂತೆ ಹಲವಾರು ಅಭಿಮಾನಿಗಳು ಸ್ನೇಹಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News