ಕಳಸ: ನಕ್ಸಲ್ ಪೀಡಿತ ಗುಳ್ಯ ಗ್ರಾಮಕ್ಕಿಲ್ಲ ಮೂಲಭೂತ ಸೌಕರ್ಯ

Update: 2019-01-29 00:02 IST
ಕಳಸ: ನಕ್ಸಲ್ ಪೀಡಿತ ಗುಳ್ಯ ಗ್ರಾಮಕ್ಕಿಲ್ಲ ಮೂಲಭೂತ ಸೌಕರ್ಯ
  • whatsapp icon

ಚಿಕ್ಕಮಗಳೂರು, ಜ.24: ಜಿಲ್ಲೆಯ ಮಲೆನಾಡು ತಾಲೂಕುಗಳು ನಕ್ಸಲ್ ಪೀಡಿತ ತಾಲೂಕುಗಳಾಗಿದ್ದು, ಈ ತಾಲೂಕು ವ್ಯಾಪ್ತಿಯ ಕೆಲ ನಕ್ಸಲ್ ಪೀಡಿತ ಗ್ರಾಮಗಳಿಗೆ ಇತ್ತೀಚೆಗೆ ನಕ್ಸಲರ ಸಂಪರ್ಕ ಇಲ್ಲವಾಗಿದೆ. ನಕ್ಸಲರ ಸಂಪರ್ಕದಿಂದ ಈ ಗ್ರಾಮಗಳ ಜನರನ್ನು ದೂರ ಇಡುವ ಸಲುವಾಗಿ ಈ ಗ್ರಾಮಗಳ ಅಭಿವೃದ್ಧಿ ನೆಪದಲ್ಲಿ ಸರಕಾರ ಕೋಟ್ಯಂತರ ರೂ. ಅನುದಾನವನ್ನು ನಕ್ಸಲ್ ಪ್ಯಾಕೇಜ್ ಹೆಸರಿನಲ್ಲಿ ಬಿಡುಗಡೆ ಮಾಡುತ್ತಾ ಬಂದಿದೆ. ಆದರೆ ಈ ಅನುದಾನ ನಕ್ಸಲ್ ಪೀಡಿತ ಗ್ರಾಮಗಳನ್ನು ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ಆರೋಪಗಳು ಹಿಂದಿನ ಕೇಳಿಬಂದಿದ್ದು, ಮೂಲಸೌಕರ್ಯಗಳಿಂದ ವಂಚಿತವಾಗಿರುವ ಕಳಸ ಹೋಬಳಿ ವ್ಯಾಪ್ತಿಯ ಗುಳ್ಯ ಗ್ರಾಮದಲ್ಲಿರುವ ಗಿರಿಜನರ ಹಾಡಿ ಈ ಆರೋಪಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

ಗುಳ್ಯ ಗ್ರಾಮ ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿರುವ ಕಳಸ ಹೋಬಳಿ ವ್ಯಾಪ್ತಿಗೆ ಒಳಪಟ್ಟಿದೆ. ಹೋಬಳಿಯ ಸಂಸೆ ಗ್ರಾಪಂ ವ್ಯಾಪ್ತಿಯಲ್ಲಿರುವ ಗುಳ್ಯ ಗ್ರಾಮದ ಸುತ್ತಮುತ್ತಲಿನ ಬಹುತೇಕ ನಿವಾಸಿಗಳು ಗಿರಿಜನ ಸಮುದಾಯದವರಾಗಿದ್ದಾರೆ. ಈ ಪೈಕಿ ಗುಳ್ಯ ಗ್ರಾಮದಲ್ಲಿ ಸುಮಾರು 8-10 ಗಿರಿಜನ ಸಮುದಾಯದವರ ಹಾಡಿ ಇದ್ದು, ಅನಾದಿಕಾಲದಿಂದಲೂ ಇಲ್ಲಿಯ ನಿವಾಸಿಗಳಾಗಿರುವ ಇಲ್ಲಿನ ಪ್ರತೀ ಕುಟಂಬಗಳು 1-5 ಎಕರೆಯಷ್ಟು ಕೃಷಿ ಜಮೀನುಗಳನ್ನು ಹೊಂದಿ ಕೃಷಿಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ.

ಸಂಸೆ ಗ್ರಾಪಂ ವ್ಯಾಪ್ತಿಯಲ್ಲಿರುವ ಗುಳ್ಯ ಗ್ರಾಮ ತಲುಪಲು ಕಳಸ-ಕುದುರೆಮುಖ ಹೆದ್ದಾರಿ ರಸ್ತೆಯಲ್ಲಿರುವ ಬಾಳಗಲ್‍ನಿಂದ ಸುಮಾರು 10 ಕಿಮೀ ದೂರದ ಕಚ್ಚಾ ರಸ್ತೆಯಲ್ಲಿ ಮುಳ್ಳೋಡಿ ಗ್ರಾಮಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ಹರಿಯುವ ಭದ್ರಾ ನದಿಯ ಉಪನದಿಯಾಚೆಗೆ ಗುಳ್ಳ ಗ್ರಾಮವಿದೆ. ಈ ಗ್ರಾಮದ ನಿವಾಸಿಗಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ನಾಗರಿಕ ಸೌಲಭ್ಯಗಳಾದ ಆರೋಗ್ಯ, ಶಿಕ್ಷಣ, ಕಂದಾಯ, ಪೊಲೀಸ್ ಮತ್ತಿತರ ಸೇವೆಗಳಿಗೆ ಸಂಸೆ, ಕಳಸ ಪಟ್ಟಣವನ್ನೇ ಅವಲಂಬಿಸಿದ್ದಾರೆ. ವಿಪರ್ಯಾಸವೆಂದರೆ ಈ ಗ್ರಾಮದ ನಿವಾಸಿಗಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಸೇವೆಗನ್ನು ಅನುಭವಿಸಬೇಕಾದರೆ ತಮ್ಮ ಜೀವವನ್ನು ಪಣಕ್ಕಿಟ್ಟು, ಹರಸಾಹಸ ಪಡಬೇಕಿದೆ. ಏಕೆಂದರೆ ಈ ಗ್ರಾಮದ ಸಮೀಪದಲ್ಲಿ ಹರಿಯುವ ನದಿ ದಾಟಲು ಸೇತುವೆಯಂತಹ ನಾಗರಿಕ ಸೌಲಭ್ಯ ಇಲ್ಲವಾಗಿದ್ದು, ಇಂದಿಗೂ ಇಲ್ಲಿನ ಗ್ರಾಮಸ್ಥರು ತಾವೇ ಸಿದ್ಧಪಡಿಸಿದ ಬೆತ್ತಗಳಿಂದ ಜೋಡಿಸಿ ಮಾಡಿರುವ ಮುರುಕಲು ಹಗ್ಗದ ಸೇತುವೆ ಸಹಾಯದಿಂದ ನದಿ ದಾಟುವ ದೃಶ್ಯ ಮನಕಲಕುತ್ತದೆ. 

ಈ ಹಗ್ಗ, ಬೆತ್ತಗಳನ್ನು ಜೋಡಿಸಿ ಮಾಡಿರುವ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ಅನಿವಾರ್ಯವಾಗಿ ಇಂದಿಗೂ ಗುಳ್ಯ ಗ್ರಾಮದ ನಿವಾಸಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಇದೇ ಅಪಾಯಕಾರಿ ಸೇತುವೆಯ ಮೇಲೆ ಪ್ರಾಣ ಪಣಕ್ಕಿಟ್ಟು ನದಿ ದಾಟಬೇಕಾಗಿದೆ. ಬೇಸಿಗೆಯಲ್ಲಿ ಇಲ್ಲಿ ಹರಿಯುವ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ ಜನರು ನದಿಗಿಳಿದು ನಡೆದು ದಾಟಿ ಬರುತ್ತಾರೆ. ಆದರೆ ಶಾಲಾ ಮಕ್ಕಳು ಇಂದಿಗೂ ಹಗ್ಗದ ಸೇತುವೆ ಮೂಲಕ ನದಿ ದಾಟಬೇಕಿದೆ. ಮಳೆಗಾಲದಲ್ಲಿ ಮಾತ್ರ ಈ ನದಿ ತುಂಬಿ ಅಪಾಯಕಾರಿ ಮಟ್ಟದಲ್ಲಿ ಹರಿಯುವುದರಿಂದ ನಿವಾಸಿಗಳಿಗೆ ನದಿಗಿಳಿಯುವಂತಿಲ್ಲ. ಮುರುಕಲು ಹಗ್ಗದ ಸೇತುವೆಯ ಮೇಲೆ ಜೀವಭಯ ಬಿಟ್ಟು ಸರ್ಕಸ್ ಮಾಡುತ್ತಾ ನದಿ ದಾಟಬೇಕಿದೆ. ಹೀಗೆ ಈ ಸೇತುವೆ ದಾಟುವ ವೇಳೆ ಈ ಹಿಂದೆ ನಿವಾಸಿಯೊಬ್ಬರು ನದಿ ಬಿದ್ದು ಗಾಯಗೊಂಡಿರುವ ಘಟನೆಯೂ ಇಲ್ಲಿ ನಡೆದಿದೆ ಎನ್ನುವುದು ನಿವಾಸಿಗಳ ಭೀತಿಗೆ ಕಾರಣವಾಗಿದೆ. 

ಗ್ರಾಮ ಸಂಪರ್ಕಕ್ಕೆ ಸೇತುವೆ ಸೌಲಭ್ಯವಿಲ್ಲದ ಕಾರಣ ಇಲ್ಲಿನ ನಿವಾಸಿಗಳು ಭತ್ತ, ಅಕ್ಕಿ ಮೂಟೆಗಳೂ ಸೇರಿದಂತೆ ಅಗತ್ಯವಸ್ತುಗಳನ್ನು ತಲೆಯ ಮೇಲೆ ಸುಮಾರು ಅರ್ಧ ಕಿಮೀ ಕಾಲು ದಾರಿಯಲ್ಲಿ ಹೊತ್ತು ಸೇತುವೆವರೆಗೂ ಸಾಗಿಸಬೇಕಾಗಿದೆ. ಅನಾರೋಗ್ಯ ಪೀಡಿತರನ್ನು, ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭಗಳಲ್ಲಿ ಹೆಗಲ ಮೇಲೆ ಹೊತ್ತುಕೊಂಡೇ ಸಾಗಿಸಬೇಕಾದ ಸಂಕಟ ಅನುಭವಿಸುವುದು ಇಲ್ಲಿನ ನಿವಾಸಿಗಳ ಪಾಲಿಗೆ ಅನಿವಾರ್ಯವಾಗಿದ್ದು, ಸೇತುವೆ ನಿರ್ಮಾಣಕ್ಕೆ ನಿವಾಸಿಗಳು ಮಾಡಿದ ಮನವಿಗೆ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿಲ್ಲ ಎನ್ನುವುದು ನಿವಾಸಿಗಳ ಅಳಲಾಗಿದೆ. ಬಿ.ಬಿ.ನಿಂಗಯ್ಯ ಅವರು ಶಾಸಕರಾಗಿದ್ದ ಅವಧಿಯಲ್ಲಿ ಇಜಿನಿಯರೊಬ್ಬರು ಗ್ರಾಮಕ್ಕೆ ಭೇಟಿ ನೀಡಿ ಸೇತುವೆ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿ ಹೋದವರು ಮತ್ತೆ ಗ್ರಾಮದತ್ತ ತಲೆ ಹಾಕಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಇನ್ನು ಈ ಗ್ರಾಮದ ಕೆಲವರ ಮನೆಗಳು ಜೋಪಡಿಗಳಂತಿದ್ದು, ಸರಕಾರದ ಆಶ್ರಯ, ಅಂಬೇಡ್ಕರ್ ಆಶ್ರಯ ಯೋಜನೆಗಳ ಮನೆಗಳು ಈ ಗ್ರಾಮಗಳನ್ನು ತಲುಪದಿರುವ ಬಗ್ಗೆ ಸಾಕ್ಷಾತ್ಕಾರ ಮಾಡಿಸುತ್ತಿವೆ. ಅದೃಷ್ಟವಶಾತ್ ಇಲ್ಲಿನ ನಿವಾಸಿಗಳ ಮನೆಗಳಿಗೆ ವಿದ್ಯುತ್ ಸೌಲಭ್ಯ ಧಕ್ಕಿರುವುದರಿಂದ ಗ್ರಾಮ ಕತ್ತಲೆಯ ಕೂಪದಲ್ಲಿರುವುದು ತಪ್ಪಿದಂತಾಗಿದೆ. ಗ್ರಾಮದ ಪಕ್ಕದಲ್ಲೇ ನೈಸರ್ಗಿಕ ನೀರು ಹರಿಯುವುದರಿಂದ ಕುಡಿಯುವ ನೀರಿನ ಸೌಲಭ್ಯಕ್ಕೆ ಮಾತ್ರ ತೊಂದರೆ ಇಲ್ಲವಾಗಿದೆ. ಆದರೆ ಗ್ರಾಮದ ನಿವಾಸಿಗಳು ಅಲ್ಪಸ್ವಲ್ಪ ಜಮೀನುಗಳನ್ನು ಹೊಂದಿದ್ದಾರಾದರೂ ಕೆಲ ಕುಟುಂಬಗಳ ಜಮೀನುಗಳಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ ಎಂಬ ದೂರು ನಿವಾಸಿಗಳದ್ದಾಗಿದೆ. ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯಡಿ ಸಾಗುವಳಿ ಚೀಟಿಗಾಗಿ ನೀಡಿದ ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿರುವುದರಿಂದ ಹಕ್ಕುಪತ್ರ ಇನ್ನೂ ಕೈಸೇರಿಲ್ಲ ಎಂಬುದು ಗ್ರಾಮಸ್ಥರ ದೂರಾಗಿದೆ.

ಮಲೆನಾಡು ಭಾಗದಲ್ಲಿ ಬೆಟ್ಟು ಗುಡ್ಡಗಳಲ್ಲಿ ಗಿರಿಜನರ ಹಾಡಿಗಳಿದ್ದು, ಇಲ್ಲಿಗೆ ರಸ್ತೆ ಸಂಪರ್ಕಗಳ ಕೊರತೆ ಇದೆ. ಇದರಿಂದಾಗಿ ಗಿರಿಜನರು ಆರೋಗ್ಯ ಸೇವೆಯನ್ನು ಸಮರ್ಪಕವಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಸರಕಾರ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಶುಶ್ರೂಷಕಿಯರನ್ನು ಇಂತಹ ಗ್ರಾಮಗಳ ಭೇಟಿ ಮಾಡುವುದನ್ನು ಕಡ್ಡಾಯ ಮಾಡಿದೆ. ಆದರೆ ಗುಳ್ಯ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಸರಿಯಾಗಿ ಭೇಟಿ ನೀಡುವುದಿಲ್ಲ ಎಂಬ ಆರೋಪವನ್ನೂ ಇಲ್ಲಿನ ನಿವಾಸಿಗಳು ಮಾಡುತ್ತಿದ್ದಾರೆ.

ಇನ್ನು ಇದೇ ಗ್ರಾಮದ ಸಮೀಪದಲ್ಲಿ ಕುತ್ತಿಗೆರೆ-ಶುಂಠಿಕುಂಬ್ರಿ ಎಂಬ ಗಿರಿಜನರ ಕಾಲನಿ ಇದ್ದು, ಇಲ್ಲಿ ಸುಮಾರು 30ಕ್ಕೂ ಹೆಚ್ಚು ಗಿರಿಜನ ಕುಟುಂಬಗಳು ವಾಸವಿದೆ. ಇಲ್ಲಿನ ನಿವಾಸಿಗಳು ತಮ್ಮ ಕೃಷಿ ಭೂಮಿಗೆ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯಡಿ ಹಕ್ಕುಪತ್ರಗಳನ್ನು ಪಡೆದಿದ್ದಾರಾದರೂ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯ ಹಾಗೂ ಸುಗಮ ಸಂಚಾರಕ್ಕಾಗಿ ರಸ್ತೆ ಸೌಕರ್ಯಗಳಿಲ್ಲ. ಇಲ್ಲಿನ ನಿವಾಸಿಗಳು ನೀರಿಗಾಗಿ ಹಳ್ಳವೊಂದನ್ನು ಅವಲಂಬಿಸಬೇಕಾಗಿದ್ದು, ಪ್ರತಿನಿತ್ಯ ನೀರು ಹೊರುವುದು ಇಲ್ಲಿನ ಮಹಿಳೆಯರ ಪಾಲಿಗೆ ಅನಿವಾರ್ಯವಾಗಿದೆ. ಗ್ರಾಮ ಸಂಪರ್ಕದ ರಸ್ತೆ ನಿರ್ಮಾಣಕ್ಕೆ ಹಾಗೂ ಕುಡಿಯವು ನೀರಿನ ಸರಬರಾಜು ಪೈಪ್‍ಲೈನ್ ಅಳವಡಿಕೆಗೆ ಅಡ್ಡಿಪಡಿಸುತ್ತಿರುವ ಅರಣ್ಯಾಧಿಕಾರಿಗಳು ಇಲ್ಲಿನ ನಿವಾಸಿಗಳ ಪಾಲಿಗೆ ವಿಲನ್‍ಗಳಾಗಿದ್ದಾರೆಂಬುದು ಗ್ರಾಮಸ್ಥರ ದೂರಾಗಿದೆ.

ನಕ್ಸಲರು ಭೇಟಿ ನೀಡಿದ್ದರು: ಹೇಳಿಕೇಳಿ ಕಳಸ ಹೋಬಳಿ ನಕ್ಸಲ್ ಪೀಡಿತ ಗ್ರಾಮಗಳನ್ನು ಹೊಂದಿರುವ ಹೋಬಳಿ ಕೇಂದ್ರವಾಗಿದೆ. ಅದರಲ್ಲೂ ಸಂಸೆ ಗ್ರಾಪಂ ವ್ಯಾಪ್ತಿಯ ಹತ್ತಾರು ಗ್ರಾಮಗಳು ನಕ್ಸಲ್ ಪೀಡಿತ ಗ್ರಾಮಗಳೆಂದು ಸರಕಾರಿ ದಾಖಲೆಗಳೇ ಹೇಳುತ್ತಿವೆ. ಈ ಪೈಕಿ ಗುಳ್ಯ ಗ್ರಾಮವೂ ನಕ್ಸಲ್ ಪೀಡಿತ ಗ್ರಾಮವಾಗಿದ್ದು, ಈ ಹಿಂದೆ ಅನೇಕ ಬಾರಿ ಈ ಗ್ರಾಮಕ್ಕೆ ನಕ್ಸಲರು ಭೇಟಿ ನೀಡಿ ಗ್ರಾಮದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಹೋಗಿದ್ದಾರೆ. ಇತ್ತೀಚೆಗಷ್ಟೆ ಈ ಗ್ರಾಮಕ್ಕೆ ನಕ್ಸಲರು ಭೇಟಿ ನೀಡಿದ್ದರು ಎಂಬ ವದಂತಿ ಹಬ್ಬಿತ್ತು. ಇದರ ಮಾಹಿತಿ ಪಡೆದ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಲ್ಲದೇ ಗ್ರಾಮದ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಇಲಾಖೆಗಳ ಗಮನಸೆಳೆಯುವ ಕೆಲಸ ಮಾಡುವ ಭರವಸೆಯನ್ನೂ ನೀಡಿದ್ದರು. ಆದರೆ ಗ್ರಾಮದ ಯಾವ ಸಮಸ್ಯೆಗಳೂ ಬಗೆಹರಿದಿಲ್ಲ ಎಂದು ನಿವಾಸಿಗಳು ವಾರ್ತಾಭಾರತಿಗೆ ತಿಳಿಸಿದ್ದಾರೆ. 

ನಕ್ಸಲ್ ಪ್ಯಾಕೆಜ್ ಎಲ್ಲಿ ಹೋಗುತ್ತೋ ಗೊತ್ತಿಲ್ಲ: ಗುಳ್ಯ ಗ್ರಾಮ ನಕ್ಸಲ್ ಪೀಡಿತ ಗ್ರಾಮ ಎಂಬುದು ಎಲ್ಲ ಇಲಾಖಾದಿಕಾರಿಗಳಿಗೂ ತಿಳಿದಿದೆ. ನಕ್ಸಲ್ ಪ್ಯಾಕೇಜ್ ಅಡಿಯಲ್ಲಿ ಕೋಟ್ಯಂತರ ರೂ. ಅನುದಾನ ಬರುತ್ತದೆ ಎನ್ನುತ್ತಾರೆ. ಆದರೆ ಬಂದ ಹಣ ಎಲ್ಲಿ ಹೋಗುತ್ತದೋ ಗೊತ್ತಿಲ್ಲ. ಈ ಗ್ರಾಮ ನಕ್ಸಲ್ ಪೀಡಿತ ಗ್ರಾಮವಾದರೂ ಈ ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಗಿರಿಜನರ ಕಾಲನಿಗಳಿಗೆ ಸೇತುವೆ, ರಸ್ತೆ, ಕುಡಿಯುವ ನೀರಿನ ಸೌಲಭ್ಯಗಳು ಮರೀಚಿಕೆಯಾಗಿವೆ. ಇತ್ತೀಚೆಗೆ ಇಲ್ಲಿನ ಸಮಸ್ಯೆಗಳ ಸಂಬಂಧ ನಕ್ಸಲರು ಭೇಟಿ ನೀಡಿ ಸಮಸ್ಯೆ ಕೇಳಿಕೊಂಡು ಹೋಗಿದ್ದಾರೆ. ಇದು ಗೊತ್ತಾಗಿ ಪೊಲೀಸರು ಭೇಟಿ ನೀಡಿ ವರದಿ ಮಾಡಿದ್ದಾರೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಎಲ್ಲ ಇಲಾಖೆಗಳಿಗೂ ಮನವಿ ಮಾಡಲಾಗಿದೆ. ಆದರೆ ಸಮಸ್ಯೆ ಪರಿಹಾರ ಕಂಡಿಲ್ಲ. ಗುಳ್ಯ ಗ್ರಾಮ ಸಂಪರ್ಕಕ್ಕೆ ಸೇತುವೆ ಹಾಗೂ ಕೃಷಿ ಭೂಮಿಗೆ ಹಕ್ಕುಪತ್ರ ಕೊಡಿಸಬೇಕು. ಪಕ್ಕದ ಗ್ರಾಮದ ಗಿರಿಜನರ ಜಮೀನುಗಳಿಗೆ ಹೋಗಲು ರಸ್ತೆ ಹಾಗೂ ಕುಡಿಯುವ ನೀರಿನ ಸೌಲಭ್ಯ ಕೊಡಿಸಬೇಕು. ಈ ಭಾಗದಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಇದ್ದು, ಬಿಎಸ್ಸೆನೆಲ್ ಟವರ್ ನಿರ್ಮಾಣವಾಗಬೇಕು.
- ವಾಸುದೇವ್, ಗುಳ್ಯ ಗ್ರಾಮದ ನಿವಾಸಿ

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News