ಗೋಡ್ಸೆ ಪ್ರತಿಕೃತಿ ನೇಣುಗಂಬಕ್ಕೆ ಏರಿಸಿ ಎಸ್ ಡಿಪಿಐ ಪ್ರತಿಭಟನೆ
ಹುಬ್ಬಳ್ಳಿ, ಫೆ.02: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಘಟನೆಯನ್ನು ಮರುಸೃಷ್ಟಿಸಿ ಸಂಭ್ರಮಾಚರಣೆ ಮಾಡಿದನ್ನು ಖಂಡಿಸಿ ಎಸ್.ಡಿ.ಪಿ.ಐ ವತಿಯಿಂದ ತಹಶೀಲ್ದಾರ್ ಕಚೇರಿ ಎದುರಿಗೆ ಗೋಡ್ಸೆಯ ಪ್ರತಿಕೃತಿ ನೇಣುಕಂಬಕ್ಕೆ ಏರಿಸಿ ಪ್ರತಿಭಟನೆ ನಡೆಸಲಾಯಿತು.
ಗಾಂಧಿ ಹತ್ಯೆಯಾದ ಜ.30 ರಂದು ಗಾಂಧೀಜಿಯವರ ಸಿದ್ದಾಂತ, ಸಂದೇಶ, ತ್ಯಾಗದ ಬಗ್ಗೆ ದೇಶ ವಿದೇಶಗಳಲ್ಲಿ ಸ್ಮರಣೆ ನಡೆಯುತ್ತಿರುವ ಸಂದರ್ಭದಲ್ಲಿ ದೇಶಕ್ಕೆ ಅವಮಾನವಾಗುಂತಹ ಘಟನೆ ನಡೆಯುವುದು ವಿಪರ್ಯಾಸ. ಉತ್ತರ ಪ್ರದೇಶದ ಅಲಿಗಢದಲ್ಲಿ ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಹಾಗೂ ಇತರರು ನಕಲಿ ಬಂದೂಕಿನಿಂದ ಗಾಂಧೀಜಿ ಪ್ರತಿಕೃತಿಗೆ ಗುಂಡಿಕ್ಕಿ ಹತ್ಯೆ ಮಾಡುವ ಘಟನೆಯನ್ನು ಮರುಸೃಷ್ಟಿಸಿ ಸಂಭ್ರಮಾಚರಣೆ ಮಾಡಿದ್ದು, ಹತ್ಯಾ ದಿನವನ್ನು ಶೌರ್ಯ ದಿನವೆಂದು ಆಚರಿಸಿ ಸಿಹಿತಿಂಡಿ ಹಂಚಿ, ಗೋಡ್ಸೆ ಪ್ರತಿಕೃತಿಗೆ ಮಾಲಾರ್ಪಣೆ ಮಾಡುವ ಮೂಲಕ ಭಯೋತ್ಪಾದನೆಗೆ ಪರೋಕ್ಷವಾಗಿ ಕರೆ ನೀಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರತಿಭಟನಾಕಾರರು ಗೋಡ್ಸೆಗೆ ಮರುಜನ್ಮ ಅನುಮತಿಸಲಾರೆವು ಎಂಬ ಘೋಷಣೆ ಕೂಗ್ಗಿ, ದೇಶಕ್ಕೆ ಗಾಂಧೀಜಿ ಕೊಡುಗೆ ಜೊತೆಗೆ ಭಯೋತ್ಪಾದಕ ಕೃತ್ಯದ ಬಗ್ಗೆ ಜನಜಾಗೃತಿ ಮೂಡಿಸಬೇಕು. ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ ನ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಅಹ್ಮದ್ ಅತ್ತಾರಿ, ಉಪಾಧ್ಯಕ್ಷ ಸಮೀರ್ ಬೆಟಗೇರಿ, ಇರ್ಷಾದ್ ಅಹ್ಮದ್ ರಿತ್ತಿ, ಅಬ್ದುಲ್ಲಾ ಕೋಳೂರ, ಅಬ್ದುಲ್ ಹಮೀದ ಬೆಂಗಾಲಿ ಸೇರಿ ಹಲವು ಕಾರ್ಯಕರ್ತರು ಇದ್ದರು.