ಮಲೆನಾಡಿನಲ್ಲಿ ಚುನಾವಣೆ ಬಹಿಷ್ಕಾರದ ಕೂಗು: ‘ಈ ಬಾರಿ ಮತದಾನ ಮಾಡಲ್ಲ’ ತಲೆಬರಹದ ಪೋಸ್ಟ್ ಜಾಲತಾಣದಲ್ಲಿ ವೈರಲ್

Update: 2019-03-12 17:47 GMT

ಚಿಕ್ಕಮಗಳೂರು, ಮಾ.12: ಚುನಾವಣಾ ಸಂದರ್ಭದಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಮತದಾನ ಬಹಿಷ್ಕಾರ ಹಾಕುವ ಕಾರ್ಯಕ್ರಮಗಳು ಸಾಮಾನ್ಯ. ಅಂತೆಯೇ ಇದೀಗ ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ, ಕಾಫಿನಾಡಿನ ಪಟ್ಟಣವೊಂದರಲ್ಲಿ, ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು, ಮತದಾನ ಬಹಿಷ್ಕಾರ ಮಾಡುವ ಸಲುವಾಗಿ, ಯುವಕರ ಗುಂಪೊಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಪಟ್ಟಣ ಇತ್ತೀಚೆಗೆ ಸಮ್ಮಿಶ್ರ ಸರಕಾರ ಮಂಡಿಸಿದ ಬಜೆಟ್‌ನಲ್ಲಿ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದೆ.  ಪಟ್ಟಣದ ಮುಖ್ಯ ರಸ್ತೆ ಕಳೆದ ಕೆಲ ವರ್ಷಗಳ ಹಿಂದೆ ಸುಸಜ್ಜಿತ ಕಾಂಕ್ರೀಟ್ ರಸ್ತೆಯಾಗಿ ಮಾರ್ಪಟ್ಟಿದೆ. ಆದರೆ ಪಟ್ಟಣದ ಸಂತೇಮೈದಾನ ಹಾಗೂ ಹೊರನಾಡು ಕಡೆಯಿಂದ ಕುದುರೆಮುಖ ರಸ್ತೆ ಸಂಪರ್ಕಿಸುವ ಸುಮಾರು ಅರ್ಧ ಕಿಮೀ ಉದ್ದದ ಮಹಾವೀರ ರಸ್ತೆಯಲ್ಲಿ ಗುಂಡಿ ಬಿದ್ದು ಈಗಾಗಲೇ ನಾಲ್ಕು ವರ್ಷವಾದರೂ ಇನ್ನೂ ದುರಸ್ತಿಗೊಂಡಿಲ್ಲ. ಪಟ್ಟಣದ ಮಹಾವೀರ ರಸ್ತೆ ಎರಡೂ ಬದಿಗಳಲ್ಲಿ ಪ್ರಮುಖ ವಾಣಿಜ್ಯ ಅಂಗಡಿ ಮುಂಗಟ್ಟುಗಳನ್ನು ಹೊಂದಿದೆ. ಪಟ್ಟಣದ ಪ್ರಮುಖ ಖಾಸಗಿ ಆಸ್ಪತ್ರೆಯೊಂದಕ್ಕೆ ಇದೇ ರಸ್ತೆಯಲ್ಲಿ ಹೋಗಬೇಕಿದೆ. ಪಟ್ಟಣದ ಏಕೈಕ ಮಸೀದಿ ಇದೇ ರಸ್ತೆಗೆ ಹೊಂದಿಕೊಂಡಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಸಾವಿರಾರು ಯುವಕರು ಸ್ವ-ಉದ್ಯೋಗ ಮಾಡಲು ದಾರಿಯಾಗಿದೆ ಈ ಮಹಾವೀರ ರಸ್ತೆ.

ಹೀಗೆ ಪಟ್ಟಣದ ಅವಿಭಾಜ್ಯ ಅಂಗದಂತಿರುವ ಈ ರಸ್ತೆ ಕಳೆದ ನಾಲ್ಕು ವರ್ಷಗಳಿಂದ ಗುಂಡಿ ಗೊಟರುಗಳಲ್ಲಿ ಕಳೆದು ಹೋಗಿದ್ದು, ರಸ್ತೆಯಲ್ಲಿ ಡಾಂಬಾರಿನ ಲವಶೇಷವಿಲ್ಲದೆ ಅಸ್ತಿಪಂಜರದಂತಾಗಿದೆ. ಪರಿಣಾಮ ರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿ ಮುಂಗಟ್ಟುಗಳ ಮಾಲಕರು ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದಾಗಿ ಏಳುದ ಧೂಳು ತಿಂದು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ರಸ್ತೆಯ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರು ಈ ರಸ್ತೆಯಲ್ಲಿ ಸಂಚರಿಸದಿರುವುದರಿಂದ ಕೆಲ ವಾಣಿಜ್ಯ ಅಂಗಡಿ ಮುಂಗಟ್ಟುಗಳು ವ್ಯಾಪಾರ ಇಲ್ಲದೇ ಬಾಗಿಲು ಮುಚ್ಚುವಂತಾಗಿದೆ ಎಂದು ನಾಗರಿಕರು ದೂರುತ್ತಾರೆ.

ರಸ್ತೆ ದುರಸ್ತಿಗಾಗಿ ಕಳೆದ ನಾಲ್ಕು ವರ್ಷಗಳಿಂದಲೂ ಈ ರಸ್ತೆಯ ನಿವಾಸಿಗಳು, ವ್ಯಾಪಾರಿಗಳು ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಸಕರಿಗೆ ಮನವಿ ಸಲ್ಲಿಸಿ ಸುಸ್ತಾಗಿದ್ದಾರೆಯೇ ಹೊರತು ಇದುವರೆಗೂ ರಸ್ತೆ ದುರಸ್ತಿಗೆ ಭಾಗ್ಯ ಕಂಡಿಲ್ಲ. ಇತ್ತೀಚೆಗೆ ಪಟ್ಟಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲೂ ಈ ರಸ್ತೆಯ ಅವ್ಯವಸ್ಥೆ ಪ್ರತಿಧ್ವನಿಸಿತ್ತು. ಆದರೆ ಶಾಸಕ ಕುಮಾರಸ್ವಾಮಿ ಹಾಗೂ ಜಿಲ್ಲಾಧಿಕಾರಿ ಭರವಸೆ ಮೇರೆಗೆ ಜನರ ಆಕ್ರೋಶ ತಣ್ಣಗಾಗಿತ್ತು. ಆದರೆ ಅಂದಿನ ಭರವಸೆಯೂ ಮಾತಿಗೆ ಮಾತ್ರ ಸೀಮಿತವಾಗಿತ್ತೆಂಬುದು ಈ ರಸ್ತೆಯ ನಿವಾಸಿಗಳ ಅಳಲಾಗಿದೆ. 

ಇದೀಗ ‘ಈ ಬಾರಿ ಮತದಾನ ಮಾಡಲ್ಲ' ಎಂಬ ತಲೆ ಬರಹದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮತದಾನ ಬಹಿಷ್ಕಾರಕ್ಕೆ ಕರೆ ನೀಡಿರುವವವರು ಮಹಾವೀರ ರಸ್ತೆಯ ಅವ್ಯವಸ್ಥೆಯಿಂದ ಅನುಭವಿಸುತ್ತಿರುವ ಯಾತನೆಯನ್ನು ತೋಡಿಕೊಂಡಿದ್ದಾರೆ. ಮಹಾವೀರ ರಸ್ತೆಯ ಸದ್ಯದ ಅಸ್ತಿಪಂಜರದಂತಹ ಸ್ಥಿತಿಯನ್ನು ತೋರಿಸುವ ಭಾವಚಿತ್ರವನ್ನೂ ಪೋಸ್ಟ್ ಮಾಡಲಾಗಿದ್ದು, ಮತದಾನ ಬಹಿಷ್ಕಾರಕ್ಕೆ ಸಹಕಾರ ನೀಡುವಂತೆ ಪೋಸ್ಟ್‌ನಲ್ಲಿ ಕೋರಲಾಗಿದೆ. ಚುನಾವಣೆಗೂ ಮುನ್ನ ರಸ್ತೆ ದುರಸ್ತಿ ಮಾಡಿದಲ್ಲಿ, ಚುನಾವಣೆ ಬಹಿಷ್ಕಾರ ಹಿಂಪಡೆಯುವುದಾಗಿ ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ರಸ್ತೆ ಸಮಸ್ಯೆ ಸಂಬಂಧದ ನಿರ್ಲಕ್ಷ್ಯಕ್ಕೆ ಆಕ್ರೋಶದ ರೂಪದಲ್ಲಿ ಹಾಕಲಾಗಿರುವ ಈ ಮತದಾನ ಬಹಿಷ್ಕಾರಕ್ಕೆ ಇದೀಗ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. 

ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿಯೂ ಮತದಾನದ ಬಹಿಷ್ಕಾರದ ಕೂಗೆದ್ದಿದ್ದು, ತಾಲೂಕಿನ ಮರಿತೊಟ್ಟು ಗ್ರಾಪಂ ವ್ಯಾಪ್ತಿಯ ಅಂದಗಾರು ಮೊದಲಮನೆ ಗ್ರಾಮದಲ್ಲಿ ಈ ಬಾರಿಯ ಚುನಾವಣೆ ಬಹಿಷ್ಕರಿಸುವುದಾಗಿ ಬರೆಯಲಾಗಿರುವ ಬ್ಯಾನರ್ ಒಂದನ್ನು ಗ್ರಾಮದ ರಸ್ತೆಯಲ್ಲಿ ಹಾಕಿರುವುದಾಗಿ ವರದಿಯಾಗಿದೆ. ಗ್ರಾಮದಲ್ಲಿ 22 ಕುಟುಂಬಗಳಿದ್ದು, ವಿದ್ಯುತ್ ಸಮಸ್ಯೆಯಿಂದ ಗ್ರಾಮಸ್ಥರು ಕತ್ತಲೆಯಲ್ಲಿ ಮುಳುಗುವಂತಾಗಿದೆ. ಮುಖ್ಯರಸ್ತೆಯಲ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟು ದಶಕ ಕಳೆದಿದ್ದರೂ ದುರಸ್ತಿ ಮರೀಚಿಕೆ ಎಂಬಂತಾಗಿದೆ. ಗ್ರಾಮದ ಸಮಸ್ಯೆಗಳ ಬಗ್ಗೆ ಸಂಬಂಧಿಸಿದವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಚುನಾವಣೆಗೂ ಮುನ್ನ ಈ ಸಮಸ್ಯೆ ಬಗೆಹರಿಸಿದಲ್ಲಿ ಮತದಾನ ಮಾಡುತ್ತೇವೆ. ತಪ್ಪಿದಲ್ಲಿ ಮತದಾನವನ್ನು ಬಹಿಷ್ಕರಿಸುತ್ತೇವೆ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ.

ಮಹಾವೀರ ರಸ್ತೆ ಹದಗೆಟ್ಟು ಅನೇಕ ವರ್ಷಗಳೇ ಕಳೆದಿವೆ. ರಸ್ತೆಯಲ್ಲಿ ಹಬ್ಬುವ ವಿಪರೀತ ಧೂಳಿನಿಂದಾಗಿ, ಈ ಭಾಗದಲ್ಲಿ ಅಂಗಡಿಗಳನ್ನು ಹೊಂದಿರುವ ಮಾಲಕರು ವ್ಯಾಪಾರವಿಲ್ಲದೇ ನಷ್ಟ ಅನುಭವಿಸುತ್ತಿದ್ದಾರೆ. ಇಲ್ಲಿಗೆ ಬರುವ ಪ್ರವಾಸಿಗರು ರಸ್ತೆಯ ಗುಂಡಿ ಕಂಡು ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆ ದುರಸ್ತಿಗಾಗಿ ನೂರಾರು ಬಾರಿ ಪ್ರತಿಭಟನೆ, ಮನವಿಗಳನ್ನು ಮಾಡಿದರೂ, ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧ ಪಟ್ಟ ಸರಕಾರಿ ಅಧಿಕಾರಿಗಳನ್ನು ಕೇಳಿದಾಗ ದುರಸ್ತಿಗೆ ಅನುದಾನ ಬಂದಿದೆ ಎನ್ನುತ್ತಾರಾದರೂ, ಇದುವರೆಗೆ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ. ಹೀಗಾಗಿ ಮಹಾವೀರ ರಸ್ತೆಯಲ್ಲಿರುವ ನಾವೆಲ್ಲರೂ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ.

-ಟಿಟ್ಟು ಥಾಮಸ್,ಮಹಾವೀರ ರಸ್ತೆಯ ವ್ಯಾಪಾರಿ, ಕಳಸ

ರಸ್ತೆ ಅವ್ಯವಸ್ಥೆ ಹಾಗೂ ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದಿರುವ ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತಿರುವ ಕಳಸ ಪಟ್ಟಣದ ಮಹಾವೀರ ರಸ್ತೆಯ ವ್ಯಾಪಾರಿಗಳು ಹಾಗೂ ಪಟ್ಟಣದ ಕೆಲ ಯುವಕರು ಪ್ರತಿಭಟನೆ ರೂಪದಲ್ಲಿ; ಸಾಮಾಜಿಕ ಜಾಲತಾಣಗಳಲ್ಲಿ ಮತದಾನ ಬಹಿಷ್ಕಾರಕ್ಕೆ ಸಂಬಂಧಿಸಿದ ಪೋಸ್ಟ್ ಒಂದನ್ನು ಹರಿಯಬಿಟ್ಟಿದ್ದಾರೆ. ‘ಈ ಬಾರಿ ಮತದಾನ ಮಾಡಲ್ಲ' ಎಂಬ ತಲೆಬರಹದ ಪೋಸ್ಟ್‌ಗೆ ಕಳಸ ಪಟ್ಟಣದಲ್ಲೇ ಸಾವಿರಾರು ಲೈಕ್, ಶೇರ್ ಬಂದಿದ್ದು, ಮತದಾನ ಬಹಿಷ್ಕಾರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾದಂತಾಗಿದೆ.

Writer - ಕೆ.ಎಲ್. ಶಿವು

contributor

Editor - ಕೆ.ಎಲ್. ಶಿವು

contributor

Similar News