ಕನ್ನಡ ರಂಗಭೂಮಿ ಮತ್ತು ಚಲನಚಿತ್ರಗಳ ಸಾವಯವ ಸಂಬಂಧಗಳು
ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಾದ್ಯಂತ ರಂಗ ಚಟುವಟಿಕೆಗಳು ಹೆಚ್ಚಿನ ಭರಾಟೆ ಕಂಡುಕೊಂಡಿವೆ. ಉತ್ಸಾಹಿ ಯುವಕರ ದಂಡು ಆ ಕ್ಷೇತ್ರದತ್ತ ಲಗ್ಗೆ ಹಾಕಿದೆ. ಚಲನ ಚಿತ್ರರಂಗ ಮತ್ತು ದೂರದರ್ಶನಗಳೆರಡೂ ಉದ್ಯಮದ ಸ್ಥಾನಕ್ಕೇರಿ ಕುಳಿತಿವೆ. ಕಲೆಯನ್ನು ಪ್ರೀತಿಸಿ ಅದರೊಡನೆ ಅನುಸಂಧಾನ ನಡೆಸಿ ಹೊಸದನ್ನು ಅನ್ವೇಷಿಸುವ ಗೀಳಿಗಿಂತ, ಈ ಕ್ಷೇತ್ರಗಳು ತಂದುಕೊಡುವ ದಿಢೀರ್ ಪ್ರಸಿದ್ಧಿ ಮತ್ತು ಹಣ-ಎರಡೇ ಪ್ರಮುಖ ಆಕರ್ಷಣೆಯ ಅಂಶಗಳಾಗಿವೆ. ಇದು ಎಲ್ಲರಿಗೂ ಅನ್ವಯಿಸುವ ಅಭಿಪ್ರಾಯವಲ್ಲವಾದರೂ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಬಹುತೇಕ ಅನ್ವಯವಾಗುತ್ತದೆ.
ಪಾರ್ಸಿ ರಂಗಭೂಮಿಯ ಪ್ರಭಾವದಿಂದಲೇ ಕರ್ನಾಟಕದಲ್ಲೂ ವೃತ್ತಿರಂಗಭೂಮಿಗಳು ತಲೆಯೆತ್ತಿದ್ದವು. ಅಲ್ಲದೆ, ಮರಾಠಿ ರಂಗಭೂಮಿಯ ಪ್ರಭಾವವನ್ನು ಪ್ರತಿರೋಧಿಸಲು ಸಹ ಕನ್ನಡ ರಂಗಭೂಮಿ ಗದಗಿನಲ್ಲಿ ಮೊದಲ ವೃತ್ತಿ ರಂಗಭೂಮಿ ಆರಂಭವಾಯಿತು.
1880 ರಿಂದ ಕನ್ನಡ ವೃತ್ತಿ ರಂಗಭೂಮಿ ತನ್ನ ಬೇರುಗಳನ್ನು ಬಲವಾಗಿ ಊರಿದ್ದಷ್ಟೇ ಅಲ್ಲ ಇಡೀ ದಕ್ಷಿಣ ಭಾರತಕ್ಕೆ ವ್ಯಾಪಿಸಿತು. ಭಾಷೆಯ ಗಡಿಗಳಿಲ್ಲದೆ ಸ್ವಚ್ಛಂದವಾಗಿ ಬೆಳೆದ ಕನ್ನಡ ರಂಗಭೂಮಿ ಅಪ್ರತಿಮ ನಾಟಕಕಾರರನ್ನು ಕಲಾವಿದರನ್ನು, ವ್ಯವಹಾರ ಕುಶಲಿಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿತು. ‘ಕಂಪೆನಿ ನಾಟಕಗಳು’ ಎಂದು ವೃತ್ತಿರಂಗಭೂಮಿಯ ನಾಟಕಗಳು ಜನಪ್ರಿಯವಾಗಿ ಮನರಂಜನೆಯ ಅನೇಕ ಸಾಧ್ಯತೆಗಳನ್ನು ಪರಿಚಯಿಸಿದವು.
ಭಾರತೀಯ ಚಲನಚಿತ್ರರಂಗದ ಮೇಲೆ ವೃತ್ತಿ ನಾಟಕಗಳು ಪ್ರಭಾವ ಬೀರಿರುವ ರೀತಿಯಲ್ಲಿಯೇ ಕನ್ನಡ ಚಿತ್ರರಂಗದ ಮೇಲೂ ಬೀರಿವೆ. ಭಾರತೀಯ ಚಲನಚಿತ್ರ ಪರಂಪರೆ ಆರಂಭವಾದದ್ದು ಧುಂಡಿರಾಜ್ ಗೋವಿಂದ ಫಾಲ್ಕೆ ನಿರ್ಮಿಸಿ ನಿರ್ದೇಶಿಸಿದ ರಾಜಾ ಹರಿಶ್ಚಂದ್ರ (1913) ಚಿತ್ರದ ಮೂಲಕ. ಆದರೂ ಮೂಕಿ ಚಿತ್ರರಂಗ ಕಥಾ ಚಿತ್ರಗಳಿಗಿಂತ ಹೆಚ್ಚಾಗಿ ಜನರಂಜನೆಯ ದೃಶ್ಯಗಳನ್ನು, ಹಾಸ್ಯ ಪ್ರಸಂಗಗಳನ್ನು ಚಿತ್ರಿಸಿ ಪ್ರದರ್ಶಿಸುವ ಕಡೆ ಹೆಚ್ಚು ವಾಲಿತ್ತು
ಮಾತಿನ ಯುಗ ಆರಂಭವಾದ ನಂತರ ಭಾರತದಲ್ಲಿ ಇವೆಲ್ಲವೂ ತಲೆ ಕೆಳಗಾಯಿತು. ಆಗ ಸಿನೆಮಾಗಳು ನಾಟಕದ ವಿಸ್ತೃತ ರೂಪದಂತೆ ತಯಾರಾದವು. ನವರಸಗಳನ್ನು ಬಳಸಿದ ಭಾರತೀಯ ಪರಂಪರೆಯ ನಾಟಕಗಳ ಸ್ಪಷ್ಟವಾದ ಪಾತ್ರಗಳು, ತೀವ್ರ ಭಾವನಾತ್ಮಕ ಅಂಶಗಳು, ಕಣ್ಮನ ಸೂರೆಗೊಳ್ಳುವ ದೃಶ್ಯಗಳು, ನೀತಿ ಬೋಧನೆ ಮುಂತಾದವುಗಳನ್ನು ಅಳವಡಿಸಿಕೊಂಡೇ ಚಿತ್ರಗಳು ತಯಾರಾಗತೊಡಗಿದವು.
ಭಾರತೀಯ ಚಲನಚಿತ್ರೋದ್ಯಮವು ತನ್ನ ಆರಂಭದ ದಿನಗಳಲ್ಲಿ ಕಥಾವಸ್ತುವಿಗೆ ಸಂಪೂರ್ಣವಾಗಿ ತನ್ನ ಸಂಸ್ಕೃತಿಯಲ್ಲಿ ಸಂಪದ್ಭರಿತವಾಗಿದ್ದ ಪುರಾಣದ ಕತೆಗಳು, ಚಾರಿತ್ರಿಕ ಘಟನೆಗಳು ಮತ್ತು ಜಾನಪದದ ರಮ್ಯಲೋಕವನ್ನೇ ನೆಚ್ಚಿಕೊಂಡಿತ್ತು. ತಾಂತ್ರಿಕ ಸಾಧ್ಯತೆಗಳನ್ನು ಬಳಸಿಕೊಂಡು ಸಿನೆಮಾ ಮಾಧ್ಯಮವು ರಂಗಭೂಮಿಗಿಂತ ಬಹುದೊಡ್ಡ ಭ್ರಮಾಲೋಕವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಯಿತು.
ಭಾರತದ ಮೊದಲ ಚಿತ್ರ ‘ಅಲಂ ಅರಾ’ (1931) ಹಿಂದಿ ಭಾಷೆಯಲ್ಲಿ ತಯಾರಾಯಿತು. ಅದು ರಂಗದಲ್ಲಿ ಯಶಸ್ವಿಯಾಗಿದ್ದ ಅದೇ ಹೆಸರಿನ ಪಾರ್ಸಿ ನಾಟಕವನ್ನು ಆಧರಿಸಿತ್ತು. ಆನಂತರ ತಮಿಳಿನಲ್ಲಿ ತೆರೆಕಂಡ ಮೊದಲ ಚಿತ್ರ ‘ಕಾಳಿದಾಸ’ (1931) ಚಿತ್ರವೂ ನಾಟಕವನ್ನೇ ಆಧರಿಸಿತ್ತು. ಪ್ರಥಮವಾಗಿ ತೆಲುಗಿನಲ್ಲಿ ತಯಾರಾದ ‘ಭಕ್ತ ಪ್ರಹ್ಲಾದ’ (1932) ಸಹ ನಾಟಕ ರೂಪವೇ! ಬಂಗಾಳಿ ಭಾಷೆಯ ಮೊದಲ ಚಿತ್ರ ‘ದೇನಾ ಪಾವೋನ’ (1931) ಚಿತ್ರ ಮಾತ್ರ ಶರತ್‌ಚಂದ್ರ ಚಟ್ಟೋಪಾಧ್ಯಾಯರ ಕಾದಂಬರಿಯನ್ನು ಆಧರಿಸಿತ್ತು.
ಕನ್ನಡದ ಮೊದಲ ಮಾತಿನ ಸಿನೆಮಾ ‘ಸತಿ ಸುಲೋಚನಾ’ ಸಹ ಬೆಳ್ಳಾವೆ ನರಹರಿಶಾಸ್ತ್ರಿಗಳ ನಾಟಕವನ್ನು ಆಧರಿಸಿತ್ತು. ಇದರಲ್ಲಿ ಪಾಲ್ಗೊಂಡ ಕಲಾವಿದರು, ನಿರ್ದೇಶಕರು, ಸಂಗೀತ ಸಂಯೋಜಕರೆಲ್ಲ ರಂಗಭೂಮಿಯ ಕಲಾವಿದರೇ! ಮೊದಲು ಸೆಟ್ ಏರಿದರೂ ಎರಡನೇ ಚಿತ್ರವಾಗಿ ಬಿಡಗಡೆಯಾದ ‘ಭಕ್ತಧ್ರುವ’ ಚಿತ್ರದಲ್ಲಿಯೂ ಬಹುತೇಕ ಕಲಾವಿದರು ತಂತ್ರಜ್ಞರು ನಾಟಕಗಳಲ್ಲಿ ತೊಡಗಿಸಿಕೊಂಡಿದ್ದವರೆ ಆಗಿದ್ದರು. ನಾಯಕ ಇಂದ್ರಜಿತುವಿನ ಪಾತ್ರ ವಹಿಸಿದ ದಿವಂಗತ ಎಂ.ವಿ. ಸುಬ್ಬಯ್ಯನಾಯ್ಡುರವರು ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ರಂಗದ ಅಭಿಜಾತ ಕಲಾವಿದರೊಬ್ಬರು. ರಂಗಭೂಮಿಯಲ್ಲಿ ಅನೇಕ ಪ್ರಯೋಗ ನಡೆಸಿದವರು. ಸತಿಸುಲೋಚನಾ ಚಿತ್ರದಲ್ಲಿ ರಾವಣನ ಪಾತ್ರ ವಹಿಸಿದ್ದ ಅಭಿಜಾತ ರಂಗಕಲಾವಿದ ಆರ್.ನಾಗೇಂದ್ರರಾಯರ ಜೊತೆಗೂಡಿ ನಾಯ್ಡು ಅವರು ಶ್ರೀ ಸಾಹಿತ್ಯ ಸಾಮ್ರಾಜ್ಯ ಮಂಡಳಿಯನ್ನು ಹುಟ್ಟುಹಾಕಿದರು. ನಾಯ್ಡು-ರಾಯರು ಅಣ್ಣ ತಮ್ಮಂದಿರಂತೆ ಶ್ರೀ ಸಾಹಿತ್ಯ ಸಾಮ್ರಾಜ್ಯ ಮಂಡಳಿಯನ್ನು ಹದಿನೇಳು ವರ್ಷಕಾಲ ಮುನ್ನಡೆಸಿ ಮಾತಿನ ವಸಂತಸೇನಾ(1941), ಸತ್ಯ ಹರಿಶ್ಚಂದ್ರ(1943) ಮತ್ತು ಮಹಾತ್ಮಾ ಕಬೀರ್(1947) ನಿರ್ಮಿಸಿದರು. ಕೇವಲ ಪುರಾಣ, ಇತಿಹಾಸ ಮತ್ತು ಭಕ್ತರ ಕತೆಗಳನ್ನೇ ನೆಚ್ಚಿ ಕುಳಿತಿದ್ದ ಭಾರತೀಯ ಚಲನಚಿತ್ರರಂಗಕ್ಕೆ ಸಾಮಾಜಿಕ ವಸ್ತುವನ್ನು ದೊಡ್ಡ ಮಟ್ಟದಲ್ಲಿ ಪರಿಚಯಿಸಿದ್ದು ಕನ್ನಡ ಚಿತ್ರರಂಗ. 1931ರಲ್ಲಿ ತಯಾರಾದ ‘ಸಂಸಾರ ನೌಕೆ’ ಚಿತ್ರವು ಸಮಕಾಲೀನ ಸಾಂಸಾರಿಕ ವಸ್ತುವನ್ನು ಕುರಿತದ್ದಾಗಿತ್ತು. ಇದೂ ಸಹ ಎಚ್.ಎಲ್.ಎನ್. ಸಿಂಹ ಅವರ ರಂಗಕೃತಿಯನ್ನು ಆಧರಿಸಿತ್ತು.
ಆರಂಭದ ದಿನಗಳಲ್ಲಿ ಕನ್ನಡ ಚಿತ್ರರಂಗವನ್ನು ಉಳಿಸಿ ಬೆಳೆಸಿದ ಕೀರ್ತಿ ನಾಟಕ ಸಂಸ್ಥೆಗಳು ಮತ್ತು ರಂಗಕಲಾವಿದರು, ಸಂಘಟಕರಿಗೆ ಸಲ್ಲುತ್ತದೆ. ಮುಖ್ಯವಾಗಿ ಹೆಸರಿಸಬೇಕಾದ ನಾಟಕ ಸಂಸ್ಥೆ ಮತ್ತು ವ್ಯಕ್ತಿಗಳೆಂದರೆ ಗುಬ್ಬಿ ಕಂಪೆನಿ, ಶ್ರೀ ಸಾಹಿತ್ಯ ಸಾಮ್ರಾಜ್ಯ ಮಂಡಲಿ, ಬಿ.ಆರ್.ಪಂತುಲು ಮತ್ತು ಬಿ.ಎಸ್. ರಂಗಾ ಅವರು. ರಂಗಭೂಮಿಯ ಹಿನ್ನೆಲೆಯಿಲ್ಲದೆ ಬಂದ ಮಹಾತ್ಮಾ ಪಿಕ್ಚರ್ಸ್ ರವರ ಕಾಣಿಕೆ ಅಷ್ಟೇ ಸ್ಮರಣ ಯೋಗ್ಯ. ಗುಬ್ಬಿ ಕರ್ನಾಟಕ ಫಿಲಂಸ್ ಸಂಸ್ಥೆಯನ್ನು ಸ್ಥಾಪಿಸಿ ಚಿತ್ರರಂಗಕ್ಕೆ ಬಂದ ವೀರಣ್ಣನವರು ಸದಾರಮೆ (1935), ಸುಭದ್ರ (1941), ಜೀವನ ನಾಟಕ (1942), ಹೇಮರೆಡ್ಡಿ ಮಲ್ಲಮ್ಮ (1945), ಗುಣಸಾಗರಿ (1953) ಮೊದಲಾದ ಚಿತ್ರಗಳನ್ನು ನಿರ್ಮಿಸಿದರು. ಅವರು ತೆರೆಗೆ ಅಳವಡಿಸಿದ ನಾಟಕ ‘ಬೇಡರ ಕಣ್ಣಪ್ಪ’ (1954) ಕನ್ನಡ ಚಿತ್ರರಂಗದ ಗತಿಯನ್ನೇ ಬದಲಿಸಿತು. ಆ ಚಿತ್ರದ ಮೂಲಕ ರಾಜ್‌ಕುಮಾರ್, ಟಿ.ಆರ್. ನರಸಿಂಹರಾಜು ಚಲನಚಿತ್ರ ರಂಗಕ್ಕೆ ದೊಡ್ಡ ರೀತಿಯಲ್ಲಿ ಪದಾರ್ಪಣೆ ಮಾಡಿದರು. ಜಿ.ವಿ. ಅಯ್ಯರ್, ಹೊನ್ನಪ್ಪ ಭಾಗವತರ್, ಡಿ. ಕೆಂಪರಾಜ ಅರಸ್ ಅಂಥ ಅಪ್ರತಿಮ ನಾಟಕ ಕಲಾವಿದರಿಗೆ ಕನ್ನಡದಲ್ಲಿ ಅವಕಾಶ ಕಲ್ಪಿಸಿದವರು ವೀರಣ್ಣನವರು. ಅಷ್ಟೇ ಅಲ್ಲ, ಉದಯಕುಮಾರ್, ಬಾಲಕೃಷ್ಣ, ಬಿ.ಆರ್. ರಾಘವೇಂದ್ರ ರಾವ್, ಈಶ್ವರಪ್ಪ, ಮಹಾಬಲ ರಾಯರು, ಸಿ.ಬಿ. ಮಲ್ಲಪ್ಪ, ಡಿಕ್ಕಿ ಮಾಧವರಾವ್, ತಮಾಷಾ ಮಾಧವರಾವ್ ಗುಬ್ಬಿ ಕಂಪೆನಿಯ ಉತ್ಪನ್ನಗಳೇ! ಕನ್ನಡಕ್ಕೆ ಮೊಟ್ಟ ಮೊದಲ ಬಾರಿಗೆ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಎಂ.ವಿ. ವಾಸುದೇವರಾವ್ ಗುಬ್ಬಿ ಕಂಪೆನಿಯಲ್ಲಿ ಬಾಲನಟರಾಗಿ ಪ್ರವರ್ಧಮಾನಕ್ಕೆ ಬಂದವರು. ಕಾಡು ಚಿತ್ರದ ಕಿಟ್ಟಿ ಪಾತ್ರಕ್ಕಾಗಿ ಅತ್ಯುತ್ತಮ ಬಾಲನಟ ರಾಜ್ಯ-ರಾಷ್ಟ್ರ ಪ್ರಶಸ್ತಿ ಗಳಿಸಿದ ಮಾಸ್ಟರ್ ನಟರಾಜ್ ವೀರಣ್ಣನವರ ಮೊಮ್ಮಗ. ಪ್ರಥಮ ವಾಕ್ಚಿತ್ರದ ನಾಯಕಿ ತ್ರಿಪುರಾಂಬ, ಕಂಠಶ್ರೀಗೆ ಹೆಸರಾಗಿದ್ದ ಕೆ. ಅಶ್ವಥಮ್ಮ, ಸ್ವರ್ಣಮ್ಮ ಮುಂತಾದವರು ರಂಗಭೂಮಿಯಲ್ಲೂ ರಸಿಕರನ್ನು ರಂಜಿಸಿದವರು. ನಿರ್ಮಾಣ, ವಿತರಣೆ ಮತ್ತು ಪ್ರದರ್ಶನ ಕ್ಷೇತ್ರಗಳಲ್ಲಿ ಚಲನಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ಗುಬ್ಬಿ ವೀರಣ್ಣನವರ ಮೂಲಕವೇ ಶ್ರೀ ಕಂಠೀರವ ಸ್ಟುಡಿಯೊ ಸ್ಥಾಪನೆಯಾದದ್ದು ಮತ್ತೊಂದು ಇತಿಹಾಸ.
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಿರ್ದೇಶಕ ಎಚ್.ಎಲ್.ಎನ್. ಸಿಂಹ, ಸಾಹಿತಿ ಕು.ರಾ.ಸೀತಾರಾಮಶಾಸ್ತ್ರಿ, ಬೆಳ್ಳಾವೆ ನರಹರಿಶಾಸ್ತ್ರಿ, ನಿರ್ಮಾಪಕ-ನಿರ್ದೇಶಕರಾಗಿ ದಕ್ಷಿಣ ಭಾರತದಲ್ಲಿ ದೊಡ್ಡ ಹೆಸರು ಮಾಡಿದ ಬಿ.ಆರ್. ಪಂತುಲು, ಆರ್. ನಾಗೇಂದ್ರರಾಯರು ಹಾಗೂ ಮತ್ತೊಂದು ಸಂಸ್ಥೆಯನ್ನು ಕಟ್ಟಿದ ಎಂ.ವಿ. ಸುಬ್ಬಯ್ಯನಾಯ್ಡು ಅವರೂ ಗುಬ್ಬಿ ಕಂಪೆನಿಯಲ್ಲಿದ್ದವರೇ. ಮುಂದೆ ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ ಪ್ರಯೋಗ ನಡೆಸಿದ ಬಿ.ವಿ. ಕಾರಂತರ ವೃತ್ತಿ ಬದುಕು ಆರಂಭಗೊಂಡಿದ್ದು ಗುಬ್ಬಿ ಕಂಪೆನಿಯಲ್ಲಿ. ಸಾಹಿತಿ ದೇವುಡು ನರಸಿಂಹಶಾಸ್ತ್ರಿಯಂಥವರ ಚಲನಚಿತ್ರಾಸಕ್ತಿಗೆ ವೇದಿಕೆಯೊದಗಿಸಿದ್ದೇ ಗುಬ್ಬಿ ಕಂಪೆನಿ. ರಾಜ್‌ರವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ನಟಿಸಿದ ಏಕೈಕ ಚಿತ್ರ ಗುಬ್ಬಿ ಕಂಪೆನಿಯ ತಯಾರಿಕೆಯೇ ಆಗಿದೆ. ಈಗಲೂ ಗುಬ್ಬಿ ಕಂಪೆನಿಯ ಒಡೆಯರ ವಂಶವೃಕ್ಷವನ್ನು ಅರಸಿ ಹೋದರೆ ಕನ್ನಡ ಚಿತ್ರರಂಗ ಮತ್ತು ಟಿವಿ ರಂಗಗಳಲ್ಲಿ ಅದರ ಶಾಖೋಪಶಾಖೆಗಳು ಹರಡಿ ಹೋಗಿರುವುದು ಅರಿವಾಗುತ್ತದೆ.
ಬುಡುಗೂರು ರಾಮಕೃಷ್ಣ ಪಂತುಲು ಅವರು ಭಾರತೀಯ ರಂಗಭೂಮಿ ಮತ್ತು ಚಲನಚಿತ್ರರಂಗದ ಅಪೂರ್ವ ಪ್ರತಿಭೆ. ನಾಟಕದ ಗೀಳಿನಿಂದಾಗಿ ಶಿಕ್ಷಕ ವೃತ್ತಿ ತೊರೆದು ‘ಸಂಸಾರನೌಕೆ’, ‘ಸದಾರಮೆ’ ಮತ್ತು ‘ಗುಲಾಬ್ ಎ ಬಕಾವಲಿ ಕತೆ’ಯಂಥ ಜನಪ್ರಿಯ ನಾಟಕಗಳಲ್ಲಿ ಅಭಿನಯಿಸಿ, ಅಭಿನಯದ ಮಾದರಿಯೊಂದನ್ನು ರೂಪಿಸಿದರು. ಪಂತುಲು ಅವರು 1955ರಲ್ಲಿ ಸ್ವಂತ ನಿರ್ಮಾಣ ಸಂಸ್ಥೆ ‘ಪದ್ಮಿನಿ ಪಿಕ್ಚರ್ಸ್’ ಆರಂಭಿಸಿ 1972ರವರೆಗೆ ಒಟ್ಟಾರೆ ಇಪ್ಪತ್ತು ಕನ್ನಡ ಚಿತ್ರಗಳನ್ನು ನಿರ್ಮಿಸಿ ಹದಿನೆಂಟು ಚಿತ್ರಗಳನ್ನು ನಿರ್ದೇಶಿಸಿದರು. ಸ್ಕೂಲ್ ಮಾಸ್ಟರ್ ನಂಥ ಅವರ ಅಭಿಜಾತ ಕೃತಿಯನ್ನು; ಕಿತ್ತೂರು ಚನ್ನಮ್ಮ, ಶ್ರೀಕೃಷ್ಣದೇವರಾಯದಂಥ ಅದ್ದೂರಿ ಚಿತ್ರಗಳನ್ನು ನೀಡಿದರು.
ಅರವತ್ತರ ದಶಕದಲ್ಲಿ ಕನ್ನಡ ಚಿತ್ರರಂಗದ ಚಟುವಟಿಕೆಯೇ ಸ್ತಬ್ಧಗೊಂಡಾಗ ಮತ್ತೆ ನಾಟಕಗಳನ್ನು ಆಡುತ್ತಾ ಹಣ ಕೂಡಿಸುತ್ತಾ ‘ಕನ್ನಡ ಕಲಾವಿದರು’ ಲಾಂಛನದಡಿಯಲ್ಲಿ ರಾಜ್‌ಕುಮಾರ್, ನರಸಿಂಹರಾಜು, ಬಾಲಕೃಷ್ಣ ಮತ್ತು ಜಿ.ವಿ. ಅಯ್ಯರ್ ಜೊತೆಗೂಡಿ ರಣಧೀರ ಕಂಠೀರವ ಚಿತ್ರ ನಿರ್ಮಾಣವನ್ನು ಆರಂಭಿಸಿದರು. ಹೀಗೆ ‘ರಣಧೀರ ಕಂಠೀರವ’ ಅನನ್ಯ ಐತಿಹಾಸಿಕ ಚಿತ್ರ ಮಾತ್ರವಲ್ಲದೆ ರಂಗಭೂಮಿ ಚಲನಚಿತ್ರರಂಗದ ಕರುಳಬಳ್ಳಿ ಸಂಬಂಧವನ್ನು ಎತ್ತಿ ತೋರಿಸಿತು.
ಕರ್ನಾಟಕದಾದ್ಯಂತ ಚದುರಿದಂತಿದ್ದ ಅನೇಕ ನಾಟಕ ಕಂಪೆನಿಗಳ ಕಲಾವಿದರೇ ಆರಂಭದಲ್ಲಿ ಚಲನಚಿತ್ರಗಳಲ್ಲಿ ಕಲಾವಿದರ ಕೊರತೆಯನ್ನು ತುಂಬಿದರು. ಮುಖ್ಯವಾಗಿ ಮಹಿಳೆಯರು ಸಿನೆಮಾಗಳಲ್ಲಿ ನಟಿಸಲು ಹಿಂಜರಿಯುತ್ತಿದ್ದ ಆ ಕಾಲದಲ್ಲಿ ನಾಯಕಿಯರು, ಪೋಷಕ ಸ್ತ್ರೀ ಪಾತ್ರಗಳ ಅಭಾವವನ್ನು ನೀಗಿಸಿದವರು. ವೃತ್ತಿ ರಂಗಭೂಮಿಯು ಉಚ್ಛ್ರಾಯದ ಕಾಲದಲ್ಲಿ ಕರ್ನಾಟಕ, ಆಂಧ್ರ, ತಮಿಳುನಾಡಿನ ಜನರಿಂದ ಅತ್ಯುತ್ತಮ ನಟಿಯರೆಂದು ಪ್ರಖ್ಯಾತರಾಗಿದ್ದ ಲಕ್ಷ್ಮೀಬಾಯಿ, ಕಮಲಾಬಾಯಿ, ಮಳವಳ್ಳಿ ಸುಂದರಮ್ಮ, ಅಶ್ವತ್ಥಮ್ಮ, ಬಿ. ಜಯಮ್ಮ, ಗಂಗೂಬಾಯಿ ಗುಳೇದಗುಡ್ಡ, ಮುಂದೆ ಮುಂಬೈ ಚಿತ್ರರಂಗದಲ್ಲಿ ಗಾಯಕಿಯಾಗಿ ಹೆಸರು ಮಾಡಿದ ಅಮೀರ್‌ಬಾಯಿ ಕರ್ನಾಟಕ, ಎಂ.ವಿ. ರಾಜಮ್ಮ, ಎಂ.ಪಂಡರೀಬಾಯಿ, ಬಳ್ಳಾರಿ ಲಲಿತಾ, ಹರಿಣಿ, ಬಳ್ಳಾರಿ ರತ್ನಮಾಲಾ, ಬಿ.ಜಯಶ್ರೀ ಮುಂತಾದ ಹಿರಿಯ ನಟಿಯರೆಲ್ಲ ರಂಗಭೂಮಿಯಿಂದ ತಾಲೀಮು ಪಡೆದವರೇ ಆಗಿದ್ದರು.
ಕನ್ನಡ ಚಿತ್ರರಂಗದ ನವೋದಯ ಕಾಲದ ನಾಯಕರಾದ ಡಾ. ರಾಜ್‌ಕುಮಾರ್, ಉದಯಕುಮಾರ್, ಕಲ್ಯಾಣಕುಮಾರ್, ಕೆ.ಎಸ್. ಅಶ್ವಥ್ ಮೊದಲಾದವರು ನಾಟಕರಂಗದ ಸಮೃದ್ಧ ಅನುಭವದೊಡನೆಯೇ ಆಗಮಿಸಿದವರು. ಕುಮಾರತ್ರಯರು, ಕೆ.ಎಸ್. ಅಶ್ವಥ್, ಬಾಲಕೃಷ್ಣ, ನರಸಿಂಹರಾಜು, ಜಿ.ವಿ. ಅಯ್ಯರ್ ಮೊದಲಾದ ರಂಗ ಪ್ರತಿಭೆಗಳು ಕನ್ನಡ ಚಲನಚಿತ್ರ ರಂಗವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರು.
ಚಲನಚಿತ್ರಗಳ ಅವಿಭಾಜ್ಯ ಅಂಗವೆನಿಸಿದ ಸಾಹಿತ್ಯ (ಸಂಭಾಷಣೆ-ಗೀತೆ) ರಚನೆಯಲ್ಲೂ ರಂಗಭೂಮಿಯಲ್ಲಿ ಪಳಗಿದವರೆ ಅಸ್ತಿಭಾರ ಹಾಕಿದರು. ಬೆಳ್ಳಾವೆ ನರಹರಿಶಾಸ್ತ್ರಿಗಳಲ್ಲದೆ ಮತ್ತೋರ್ವ ನಾಟಕಕಾರ ಬಿ. ಪುಟ್ಟಸ್ವಾಮಯ್ಯನವರು ಸುಭದ್ರಾ, ಜೀವನನಾಟಕ ಮೊದಲಾದ ಚಿತ್ರಗಳಿಗೆ ಸಾಹಿತ್ಯ ಒದಗಿಸಿದರು. ಆರಂಭದಲ್ಲಿ ಚಿತ್ರ ಸಾಹಿತ್ಯ ಒದಗಿಸಿದ ಪ್ರಮುಖರಲ್ಲಿ ಹಿರಿಯ ನಾಟಕಕಾರರಾದ ಹಿರಣ್ಣಯ್ಯ, ಕು.ರಾ.ಸೀ., ಎಂ. ನರೇಂದ್ರಬಾಬು, ಆರ್‌ಎನ್ನಾರ್ ಮೊದಲಾದವರು ತಮ್ಮ ರಂಗಭೂಮಿಯ ಅನುಭವವನ್ನೇ ಧಾರೆ ಎರೆದರು. ಕೃಷ್ಣಲೀಲಾ (1947) ಚಿತ್ರದ ಮೂಲಕ ಚಿತ್ರ ಸಾಹಿತಿಯಾಗುವ ಮುನ್ನ ಹುಣಸೂರು ಕೃಷ್ಣಮೂರ್ತಿ ಅವರು ‘ಗೋಪಿಚಂದ್’, ‘ಎಚ್ಚಮನಾಯಕ’, ‘ದಲ್ಲಾಳಿ’ ಮೊದಲಾದ ನಾಟಕಗಳನ್ನು ಬರೆದಿದ್ದರು. ಹಲವಾರು ಕಂಪೆನಿಗಳಲ್ಲಿ ದುಡಿದಿದ್ದರು. ಅನಂತರ ಐವತ್ತರ ದಶಕದಲ್ಲಿ ಅತಿ ಹೆಚ್ಚು ಚಿತ್ರಗಳಿಗೆ ಸಾಹಿತ್ಯ ಒದಗಿಸಿ ಕ್ರಮೇಣ ನಿರ್ಮಾಣ ಮತ್ತು ನಿರ್ದೇಶನ ಕ್ಷೇತ್ರಕ್ಕೂ ಇಳಿದರು.
ಹೀಗೆ ಕನ್ನಡ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಸಮಾನ ಆಸಕ್ತಿಯಿಂದ ತೊಡಗಿಕೊಂಡಿದ್ದ ಪ್ರತಿಭೆಗಳು ಕನ್ನಡ ಚಿತ್ರರಂಗವನ್ನು ಮುನ್ನಡೆಸಿದವು. ಆದರೆ ಅರವತ್ತರ ದಶಕದಲ್ಲಿ ರಂಗಪ್ರತಿಭೆಗಳು ಚಿತ್ರರಂಗಕ್ಕೆ ಬರುವುದು ಬಹುತೇಕ ಸ್ಥಗಿತಗೊಂಡಿತು. ಇದಕ್ಕೆ ಕಾರಣಗಳು ಹಲವಾರು. ಚಿತ್ರರಂಗದ ಪ್ರಭಾವಕ್ಕೆ ವೃತ್ತಿ ರಂಗಭೂಮಿಗಳು ಕಾಲ್ತೆಗೆಯಬೇಕಾಯಿತು. ಆ ವೇಳೆಗೆ ಸಿನೆಮಾ ಕ್ಷೇತ್ರ ವಿವಿಧ ಕ್ಷೇತ್ರಗಳ ಆಸಕ್ತರನ್ನು ಸೆಳೆಯತೊಡಗಿತ್ತು. ರಂಗಭೂಮಿಯ ಅನುಭವವನ್ನು ದುಡಿಸಿಕೊಳ್ಳುವ ಬಗ್ಗೆ ನಿರ್ದೇಶಕರು ಗಂಭೀರವಾಗಿ ಪರಿಗಣಿಸಲಿಲ್ಲ. ಅಲ್ಲೊಂದು ಇಲ್ಲೊಂದು ರಂಗಪ್ರತಿಭೆಗಳು ಆಗಾಗ್ಗೆ ಚಿತ್ರರಂಗಕ್ಕೆ ಬಂದಿಳಿದರೂ ಹಿಂದಿನ ರಂಗಭೂಮಿಯ ವಲಸೆ ವಿರಳವಾಗಿತ್ತು. ರಾಜೇಶ್, ಶ್ರೀನಾಥ್, ಗಂಗಾಧರ್ ಅವರಂಥ ಹವ್ಯಾಸಿ ರಂಗಭೂಮಿಯ ನಟರು ಮಾತ್ರ ಇದಕ್ಕೆ ಅಪವಾದವೆನಿಸಿದ್ದರು.
ರಂಗಭೂಮಿ ಮತ್ತು ಚಿತ್ರರಂಗದ ತಂತು ಮತ್ತೆ ಕೂಡಿ ನವೀಕರಣಗೊಂಡದ್ದು ಎಪ್ಪತ್ತರ ದಶಕದಲ್ಲಿ. ಈ ಬಾರಿ ಹವ್ಯಾಸಿ ರಂಗಭೂಮಿಯು ಚಲನಚಿತ್ರಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಿತು.
ಹವ್ಯಾಸಿ ರಂಗಭೂಮಿಯ ಪ್ರತಿಭೆಗಳು ಒಟ್ಟುಗೂಡಿ ನಿರ್ಮಿಸಿದ ಅಭಿಜಾತ ಚಿತ್ರವೆಂದರೆ ‘ಸಂಸ್ಕಾರ’. ಬೆಂಗಳೂರಿನ ಹವ್ಯಾಸಿ ರಂಗಭೂಮಿ ಹಾಗೂ ಇಂಗ್ಲಿಷ್ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಗಿರೀಶ್ ಕಾರ್ನಾಡ್, ಪಿ.ಲಂಕೇಶ್, ಸ್ನೇಹಲತಾ ರೆಡ್ಡಿ, ದಾಶರಥಿ ದೀಕ್ಷಿತ್ ಬೆಂಗಳೂರು-ಮದರಾಸಿನ ಹವ್ಯಾಸಿ ತಂಡದ ನಟ-ನಟಿಯರು ‘ಸಂಸ್ಕಾರ’ ಚಿತ್ರದಲ್ಲಿ ನಟಿಸಿದರು. ಸಂಸ್ಕಾರದ ಯಶಸ್ಸು ಹವ್ಯಾಸಿ ರಂಗಭೂಮಿಯ ಬಹುದೊಡ್ಡ ವಲಸೆಯನ್ನು ಉದ್ಘಾಟಿಸಿತು. ಸಂಸ್ಕಾರ ಚಿತ್ರವನ್ನು ಅನುಸರಿಸಿ ನಿರ್ಮಾಣಗೊಂಡ ಸಮಾನಾಂತರ ಚಿತ್ರಗಳಲ್ಲಿ ಬಹಳಷ್ಟು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದವರು ಅಭಿನಯಿಸಿದವರು ಹವ್ಯಾಸ ನಾಟಕ ರಂಗದ ಪ್ರತಿಭೆಗಳೇ ಆಗಿದ್ದರು. ಪುಣೆಯ ರಾಷ್ಟ್ರೀಯ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ನಿರ್ದೇಶನ ಕಲಿತು ಬಂದ ಗಿರೀಶ್ ಕಾಸರವಳ್ಳಿಯವರು ಹಾಗೂ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಮಾತ್ರ ಅದಕ್ಕೆ ಅಪವಾದ. ಮುಂದೆ ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದ ಚಿತ್ರಗಳನ್ನು ರೂಪಿಸಿದ ಗಿರೀಶ್ ಕಾರ್ನಾಡ್, ಬಿ.ವಿ. ಕಾರಂತ, ಟಿ.ಎಸ್. ರಂಗಾ, ಎಂ.ಬಿ.ಎನ್. ಪ್ರಸಾದ್, ಟಿ.ಎಸ್. ನಾಗಾಭರಣ, ಚಂದ್ರಶೇಖರ ಕಂಬಾರ, ಎಂ.ಎಸ್. ಸತ್ಯು, ಸಿ.ಆರ್. ಸಿಂಹ ಹಾಗೂ ಕಲಾವಿದರಾದ ಅನಂತ್‌ನಾಗ್, ವೆಂಕಟರಾವ್ ತಲಗೇರಿ, ಎಲ್.ವಿ. ಶಾರದಾ, ಶಂಕರ್‌ನಾಗ್, ಲೋಕೇಶ್, ವೈಶಾಲಿ ಕಾಸರವಳ್ಳಿ, ಅರುಂಧತಿ ನಾಗ್, ಉಮಾಶ್ರೀ, ಸುರೇಶ್ ಹೆಬ್ಳೀಕರ್, ಟಿ.ಎನ್. ಸೀತಾರಾಂ, ಎಚ್.ಜಿ.ಸೋಮಶೇಖರರಾವ್, ದತ್ತಾತ್ರೇಯ, ಸಿ.ಎಚ್.ಲೋಕನಾಥ್, ಕೋಕಿಲಾ ಮೋಹನ್, ದೇವರಾಜ್, ಸುಂದರ್‌ರಾಜ್, ಕಾಶಿ, ಜಗದೀಶ್ ಮಲ್ನಾಡ್ ಮುಂತಾದವರು ಹವ್ಯಾಸಿ ರಂಗಭೂಮಿಯಿಂದ ಬಂದವರು. ಅಲ್ಲದೆ ತಾಂತ್ರಿಕ ವರ್ಗದಲ್ಲಿ ಸಿ. ಅಶ್ವಥ್ (ಸಂಗೀತ ನಿರ್ದೇಶಕ), ಶಶಿಧರ ಅಡಪ (ಕಲೆ), ರಮೇಶ್ ದೇಸಾಯಿ (ಕಲೆ), ವೈಶಾಲಿ ಕಾಸರವಳ್ಳಿ (ವಸ್ತ್ರ ವಿನ್ಯಾಸ), ಜಯಶ್ರೀ (ಗಾಯಕಿ, ನಟಿ), ಟಿ.ಎನ್. ನರಸಿಂಹನ್ (ನಟ, ನಿರ್ದೇಶಕ) ಮೊದಲಾದವರು ಕನ್ನಡ ಚಲನಚಿತ್ರರಂಗ ಹೆಚ್ಚು ಸೋಪಜ್ಞತೆಯನ್ನು ತಂದಿದ್ದಾರೆ.
ಹೀಗೆ ರಂಗಭೂಮಿಯ ಕಸುವನ್ನು ಹೀರುತ್ತಾ ಕನ್ನಡ ಚಿತ್ರರಂಗ ಬೆಳೆಯುತ್ತಾ ಬಂತು.
ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಾದ್ಯಂತ ರಂಗ ಚಟುವಟಿಕೆಗಳು ಹೆಚ್ಚಿನ ಭರಾಟೆ ಕಂಡುಕೊಂಡಿವೆ. ಉತ್ಸಾಹಿ ಯುವಕರ ದಂಡು ಆ ಕ್ಷೇತ್ರದತ್ತ ಲಗ್ಗೆ ಹಾಕಿದೆ. ಚಲನ ಚಿತ್ರರಂಗ ಮತ್ತು ದೂರದರ್ಶನಗಳೆರಡೂ ಉದ್ಯಮದ ಸ್ಥಾನಕ್ಕೇರಿ ಕುಳಿತಿವೆ. ಕಲೆಯನ್ನು ಪ್ರೀತಿಸಿ ಅದರೊಡನೆ ಅನುಸಂಧಾನ ನಡೆಸಿ ಹೊಸದನ್ನು ಅನ್ವೇಷಿಸುವ ಗೀಳಿಗಿಂತ, ಈ ಕ್ಷೇತ್ರಗಳು ತಂದುಕೊಡುವ ದಿಢೀರ್ ಪ್ರಸಿದ್ಧಿ ಮತ್ತು ಹಣ-ಎರಡೇ ಪ್ರಮುಖ ಆಕರ್ಷಣೆಯ ಅಂಶಗಳಾಗಿವೆ. ಇದು ಎಲ್ಲರಿಗೂ ಅನ್ವಯಿಸುವ ಅಭಿಪ್ರಾಯವಲ್ಲವಾದರೂ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಬಹುತೇಕ ಅನ್ವಯವಾಗುತ್ತದೆ. ದೃಶ್ಯ ಸಂಯೋಜನೆಯ ಗಂಧಗಾಳಿಯೂ ವ್ಯಕ್ತಿಗಳಿಗೆ ಗೊತ್ತಿಲ್ಲದ ಜನರು ಮೆಗಾ ಧಾರಾವಾಹಿಗಳನ್ನು ನಿರ್ದೇಶಿಸುತ್ತಿದ್ದರೆ, ಕಲಾವಿದರ ಅಭಿನಯ ಗಿಳಿಪಾಟ ಒಪ್ಪಿಸುವುದಕ್ಕಷ್ಟೇ ಸೀಮಿತವಾಗಿದೆ. ವೈಚಾರಿಕತೆಯಿಂದ ಮೈಲು ದೂರವಿರುವ ಟಿ.ವಿ. ಧಾರಾವಾಹಿ, ರಿಯಾಲಿಟಿ ಷೋಗಳಲ್ಲಿ ಮಿಂಚಲು ಹಾತೊರೆವ ಸಂಖ್ಯೆಯೇ ಹೆಚ್ಚು. ಇನ್ನು ಚಿತ್ರರಂಗವಂತೂ ರೀಮೇಕ್ ಪಿಡುಗಿನ ಮುಂದೆ ಮಂಡಿಯೂರಿ ಕುಳಿತಿದೆ. ಚಲನಚಿತ್ರ ನಿರ್ಮಾಣದ ಹಿಂದೆ ರಿಯಲ್ ಎಸ್ಟೇಟ್ ಹಣ, ಭೂಗತ ನಂಟಿನ ಹಣಕ್ಕೆ ಕಲಾನ್ವೇಷಣೆಯ ಆಶಯಗಳಿಗಿಂತ ಭಿನ್ನವೇ ಆದ ಪ್ರೇರಣೆಗಳಿವೆ. ಹಾಗಾಗಿ ಅಲ್ಲಿ ಗುಣಮಟ್ಟದ ಬಗ್ಗೆ ಕಾಳಜಿ ಇಲ್ಲ. ಇಂಥ ಸನ್ನಿವೇಶದಲ್ಲಿ ಚಲನಚಿತ್ರರಂಗ ಮತ್ತು ಟಿ.ವಿ. ರಂಗಕ್ಕೆ ಕಲಾವಿದರನ್ನು ತಂತ್ರಜ್ಞರನ್ನು ಸರಬರಾಜು ಮಾಡುವ ಕೇಂದ್ರಗಳಾಗಿ ರಂಗಭೂಮಿಗಳು ಪರಿವರ್ತನೆಯಾಗುತ್ತಿವೆ. ವಿರಳವೆನಿಸಿದರೂ ನಿಜವಾದ ರಂಗಕಾಳಜಿಯುಳ್ಳ ಹವ್ಯಾಸಿ ನಾಟಕ ತಂಡಗಳು ಕ್ರಿಯಾಶೀಲವಾಗಿರುವುದು ಕನ್ನಡಿಗರ ಪುಣ್ಯವೆಂದೇ ಹೇಳಬೇಕು.
ಹೀಗೆ ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದ ನಡುವಣ ಸಂಬಂಧಗಳು ಅಬಾಧಿತವಾಗಿ ಮುಂದುವರಿದಿವೆ.